ಸೋಮವಾರಪೇಟೆ ತಾಲೂಕಿನ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಳ್ಳಿ ಜಲಪಾತ.
- ಪ್ರವಾಸಿಗರ ಜೀವ ರಕ್ಷಣಾ ವ್ಯವಸ್ಥೆ ಕೊರತೆ
- ಅಪಾಯ ನಿರ್ವಹಣೆ, ಸುರಕ್ಷತಾ ಕ್ರಮಗಳಿಗಿಲ್ಲ ಆದ್ಯತೆ
ಸೋಮವಾರಪೇಟೆ: ಪ್ರಕೃತಿಯ ಸೌಂದರ್ಯದಿಂದ ಪ್ರವಾಸಿಗರನ್ನು ಸೆಳೆಯುತ್ತಿರುವ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿಯ ಮಲ್ಲಳ್ಳಿ ಜಲಪಾತದಲ್ಲಿ ಭದ್ರತಾ ವ್ಯವಸ್ಥೆಗಳ ಕೊರತೆ ಆತಂಕಕ್ಕೆ ಕಾರಣವಾಗಿದೆ.
ಮಳೆಗಾಲ ಆರಂಭವಾಗುತ್ತಿದ್ದಂತೆ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದರೂ ಅಪಾಯ ನಿರ್ವಹಣೆ ಮತ್ತು ಸುರಕ್ಷತಾ ಕ್ರಮಗಳ ಕೊರತೆಯಿಂದ ಈ ಪ್ರಸಿದ್ಧ ಪ್ರವಾಸಿ ತಾಣದಲ್ಲಿ ಪ್ರವಾಸಿಗರ ಜೀವ ಭದ್ರತೆ ಪ್ರಶ್ನಾರ್ಥಕವಾಗಿದೆ.
ತಾಲೂಕಿನಲ್ಲೇ ಹೆಚ್ಚು ಮಳೆ ಬೀಳುವ ಶಾಂತಳ್ಳಿ ಹೋಬಳಿಯ ಪುಷ್ಪಗಿರಿ ತಪ್ಪಲಿನಲ್ಲಿ ಹುಟ್ಟುವ ಕುಮಾರಧಾರ ನದಿ, ಮಳೆಗಾಲದಲ್ಲಿ ಅಪಾರ ನೀರಿನ ಹರಿವಿನಿಂದ ಮಲ್ಲಳ್ಳಿ ಜಲಪಾತವನ್ನು ಮತ್ತಷ್ಟು ಆಕರ್ಷಕವಾಗಿಸುತ್ತದೆ. ಇದೇ ಕಾರಣದಿಂದ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಸುಮಾರು 390 ಅಡಿ ಎತ್ತರದಿಂದ ಹಂತ ಹಂತವಾಗಿ ಧುಮ್ಮಿಕ್ಕುವ ಜಲಧಾರೆ ಮಲ್ಲಳ್ಳಿಯ ಪ್ರಮುಖ ಆಕರ್ಷಣೆ. ಮೊದಲ ಹಂತದಲ್ಲಿ ಸುಮಾರು 200 ಅಡಿ ಎತ್ತರದಿಂದ ಬೀಳುವ ನೀರು ನಂತರದ ಹಂತಗಳಲ್ಲಿ ಮತ್ತೆ ಕೆಳಕ್ಕೆ ಹರಿದು ಪ್ರಕೃತಿಯ ಅದ್ಭುತ ದೃಶ್ಯವನ್ನು ಸೃಷ್ಟಿಸುತ್ತದೆ. ಜಲಪಾತದ ಸದ್ದು, ಮಂಜಿನ ವಾತಾವರಣ ಮತ್ತು ಸುತ್ತಲಿನ ಹಸಿರು ಪರಿಸರ ಪ್ರವಾಸಿಗರನ್ನು ಸೆಳೆಯುತ್ತವೆ.
ಸೋಮವಾರಪೇಟೆಯಿಂದ ಸುಮಾರು 25 ಕಿಲೋ ಮೀಟರ್ ದೂರದಲ್ಲಿರುವ ಈ ಜಲಪಾತಕ್ಕೆ ಯಡೂರು, ಶಾಂತಳ್ಳಿ, ಕುಮಾರಳ್ಳಿ ಮಾರ್ಗವಾಗಿ ಹಂಚಿನಳ್ಳಿ ಗ್ರಾಮ ತಲುಪಿ ಮುಂದೆ ವಾಹನಗಳಲ್ಲಿ ತೆರಳಬಹುದಾಗಿದೆ. ರಸ್ತೆ ಸಂಪರ್ಕ ಹಾಗೂ ಪ್ರವೇಶ ವ್ಯವಸ್ಥೆ ಇರುವುದರಿಂದ ಕುಟುಂಬ ಸಮೇತ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ.
ಆದರೆ, ಪ್ರವಾಸಿಗರ ಸಂಖ್ಯೆಗೆ ತಕ್ಕಂತೆ ಭದ್ರತಾ ವ್ಯವಸ್ಥೆ ಇಲ್ಲ ಎಂಬುದು ಸ್ಥಳೀಯರು ಹಾಗೂ ಪ್ರವಾಸಿಗರ ಆರೋಪವಾಗಿದೆ. ಜಲಪಾತದ ತಳಭಾಗಕ್ಕೆ ತೆರಳಲು 400ಕ್ಕೂ ಅಧಿಕ ಮೆಟ್ಟಿಲುಗಳನ್ನು ನಿರ್ಮಿಸಲಾಗಿದ್ದು, ಕೆಳಕ್ಕೆ ಇಳಿದ ಬಳಿಕ ಪ್ರವಾಸಿಗರ ಚಲನವಲನ ಗಮನಿಸುವ ಸಿಬ್ಬಂದಿ ಇರುವುದಿಲ್ಲ.
ಕೆಲವರು ಜಲಪಾತದ ಸಮೀಪ ಅಳವಡಿಸಿರುವ ರಕ್ಷಣಾತ್ಮಕ ಮೆಷ್‌ಗಳನ್ನು ಏರಿ ಅಪಾಯಕಾರಿ ರೀತಿಯಲ್ಲಿ ಸೆಲ್ಫಿ, ಫೋಟೋ ಹಾಗೂ ವಿಡಿಯೋ ತೆಗೆಯಲು ಮುಂದಾಗುತ್ತಿರುವುದು ಕಂಡು ಬರುತ್ತಿದೆ. ಕೆಲವೆಡೆ ಕಬ್ಬಿಣದ ಸರಳು ಅಳವಡಿಸಿದ್ದರೂ ಅವನ್ನು ದಾಟುವುದು ನಡೆಯುತ್ತಿದೆ. ಆದರೆ, ಇಂತಹ ವರ್ತನೆ ನಿಯಂತ್ರಿಸಲು ಸಿಬ್ಬಂದಿ ಅಥವಾ ಮೇಲ್ವಿಚಾರಣಾ ವ್ಯವಸ್ಥೆ ಇಲ್ಲದಿರುವುದು ಅನಾಹುತದ ಸಾಧ್ಯತೆ ಹೆಚ್ಚಿಸಿದೆ.
ಪ್ರಮುಖವಾಗಿ ಎಚ್ಚರಿಕೆ ಫಲಕಗಳ ಕೊರತೆ ದೊಡ್ಡ ಸಮಸ್ಯೆಯಾಗಿದೆ. ಅಪಾಯಕಾರಿ ಪ್ರದೇಶಗಳು, ಜಾರಿ ಬೀಳುವ ಸ್ಥಳಗಳು, ಅಥವಾ ಮಳೆಗಾಲದ ಎಚ್ಚರಿಕೆ ಕುರಿತು ಸಮರ್ಪಕ ಮಾಹಿತಿ ನೀಡುವ ಫಲಕಗಳು ಇಲ್ಲದಿರುವುದು ಪ್ರವಾಸಿಗರನ್ನು ಅಪಾಯಕ್ಕೆ ದೂಡುತ್ತಿವೆ.
ಸ್ಥಳೀಯರ ಪ್ರಕಾರ ಆಯಕಟ್ಟಿನ ಸ್ಥಳಗಳಲ್ಲಿ ಸಿ.ಸಿ. ಕ್ಯಾಮರಾ ಅಳವಡಿಕೆ, ಪ್ರವಾಸಿಗರ ಹೆಸರು ಮತ್ತು ವಾಹನ ಸಂಖ್ಯೆಗಳ ನೋಂದಣಿ ಹಾಗೂ ಪ್ರವೇಶ ನಿಯಂತ್ರಣ ವ್ಯವಸ್ಥೆ ಅಗತ್ಯವಾಗಿದೆ. ಹಿಂದೆ ಶಾಂತಳ್ಳಿಯಲ್ಲಿ ಉಪ ಪೊಲೀಸ್ ಠಾಣೆ ಅಥವಾ ತಾತ್ಕಾಲಿಕ ಮೇಲ್ವಿಚಾರಣಾ ವ್ಯವಸ್ಥೆ ಆರಂಭಿಸುವ ಚರ್ಚೆ ನಡೆದಿದ್ದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ.
ಪ್ರಸ್ತುತ ವಾಹನಗಳಿಂದ ಪ್ರವೇಶ ಶುಲ್ಕ ಸಂಗ್ರಹಿಸುವ ವ್ಯವಸ್ಥೆ ಇದ್ದರೂ, ಪ್ರವಾಸಿಗರಿಗೆ ಮಾರ್ಗದರ್ಶನ, ಸುರಕ್ಷತಾ ಮಾಹಿತಿ ಅಥವಾ ತುರ್ತು ನೆರವು ನೀಡುವ ವ್ಯವಸ್ಥೆ ಕಾಣಿಸುತ್ತಿಲ್ಲ. ಉಪಾಹಾರದ ವ್ಯವಸ್ಥೆ ಲಭ್ಯವಿದ್ದರೂ ಶೌಚಗೃಹ ಮತ್ತು ಶುಚಿತ್ವ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂಬ ದೂರುಗಳೂ ಕೇಳಿಬರುತ್ತಿವೆ.
ಪ್ರವಾಸೋದ್ಯಮ ಅಭಿವೃದ್ಧಿ ಜತೆಗೆ ಸುರಕ್ಷತೆಯೂ ಸಮಾನ ಆದ್ಯತೆ ಪಡೆಯಬೇಕಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಮಳೆಗಾಲದ ಸಂದರ್ಭದಲ್ಲಿ ಜಲಪಾತ ವೀಕ್ಷಣೆಗೆ ಬರುವವರ ಸಂಖ್ಯೆ ಹೆಚ್ಚಾಗುವ ಕಾರಣ ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಮತ್ತು ಪಂಚಾಯಿತಿ ಸೇರಿ ಮಾರ್ಗದರ್ಶಕರು, ನುರಿತ ಈಜುಗಾರರು, ರಕ್ಷಣಾ ಸಿಬ್ಬಂದಿ ಹಾಗೂ ತುರ್ತು ಸ್ಪಂದನಾ ತಂಡವನ್ನು ನಿಯೋಜಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪ್ರಕೃತಿ ಸೌಂದರ್ಯಕ್ಕಾಗಿ ಹೆಸರು ಮಾಡಿರುವ ಮಲ್ಲಳ್ಳಿ ಜಲಪಾತದಲ್ಲಿ ಅಗತ್ಯ ಭದ್ರತಾ ಕ್ರಮಗಳನ್ನು ತಕ್ಷಣ ಕೈಗೊಂಡರೆ ಮಾತ್ರ ಪ್ರವಾಸೋದ್ಯಮದ ಅಭಿವೃದ್ಧಿಯ ಜತೆಗೆ ಪ್ರವಾಸಿಗರ ಜೀವ ರಕ್ಷಣೆ ಸಾಧ್ಯ ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
ಮಲ್ಲಳ್ಳಿ ಸೇರಿದಂತೆ ಜಿಲ್ಲೆಯ ಕೆಲ ಪ್ರವಾಸಿ ಸ್ಥಳಗಳಿಗೆ ಮೂಲಸೌಲಭ್ಯ ಒದಗಿಸಬೇಕಾಗಿದೆ. ಮುಂದಿನ ಎರಡು ದಿನಗಳಲ್ಲಿ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿ ಅಗತ್ಯವಿರುವ ಸೌಲಭ್ಯಗಳ ಪಟ್ಟಿ ಮಾಡಿ, ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು. ಸುರಕ್ಷಿತ ಕ್ರಮಗಳು, ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ಶಶಿಧರ್ ಉಪ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಮಡಿಕೇರಿ
ಕೊಡಗು ಜಿಲ್ಲೆ ಪ್ರವಾಸೋದ್ಯಮದಲ್ಲಿ ಯಶಸು ಕಾಣಬೇಕಾದರೆ, ಪ್ರವಾಸಿತಾಣಗಳು ಪ್ರವಾಸಿಗರನ್ನು ಆಕರ್ಷಿಸಬೇಕು. ತಾಣಗಳಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಬೇಕು. ಮಲ್ಲಳ್ಳಿ ಜಲಪಾತದಲ್ಲಿ ಪ್ರವಾಸಿಗರ ಭದ್ರತೆಗೆ ಆದ್ಯತೆ ನೀಡಬೇಕು. ಸೂಕ್ತ ಶೌಚಗೃಹ ವ್ಯವಸ್ಥೆ ಮಾಡಬೇಕು.
ವಿ.ಎಂ.ಗೌತಮ್ ಕಾಫಿ ಬೆಳೆಗಾರ, ಕಿರಗಂದೂರು ಗ್ರಾಮ.