ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮವನ್ನು ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿದರು. ಅರುಣ್, ಮನುಸೋಮಯ್ಯ, ಕೃಷ್ಣಮೂರ್ತಿ ಇದ್ದರು.
ಸೋಮವಾರಪೇಟೆ: ಜನಪ್ರತಿನಿಧಿಗಳು ಹಾಗೂ ಸಮಾಜಮುಖಿ ಸಂಘಟನೆಗಳು ತಾಲೂಕಿನ ಸಮಗ್ರ ಅಭಿವೃದ್ಧಿಗೆ ಜೊತೆಗೂಡಿ ಕೆಲಸ ಮಾಡಬೇಕು ಎಂದು ಶಾಸಕ ಡಾ.ಮಂತರ್ ಗೌಡ ಅಭಿಪ್ರಾಯಪಟ್ಟರು.
ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯಿಂದ ಒಕ್ಕಲಿಗರ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಶಾಸಕರು, ಸರ್ಕಾರಿ ಅಧಿಕಾರಿಗಳು ಹಾಗೂ ಸಾರ್ವಜನಿಕರ ನಡುವಿನ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಿ ಆ್ಯಂಡ್ ಡಿ ಜಾಗ ಹಾಗೂ ಸೆಕ್ಷನ್-4 ಸರ್ವೇ ವಿಚಾರವಾಗಿ ರೈತರಲ್ಲಿ ಆತಂಕ ಉಂಟಾಗಿರುವುದನ್ನು ಉಲ್ಲೇಖಿಸಿದ ಅವರು, ಹಿಂದಿನ ಆಡಳಿತಾತ್ಮಕ ತಪ್ಪುಗಳಿಂದ ಕೃಷಿಕರು ಸಂಕಷ್ಟ ಎದುರಿಸುತ್ತಿದ್ದು, ರೈತರ ಹಿತ ಕಾಪಾಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು. ರೈತರನ್ನು ಒಕ್ಕಲೆಬ್ಬಿಸುವ ಪ್ರಶ್ನೆಯೇ ಇಲ್ಲ ಎಂದು ಭರವಸೆ ನೀಡಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ದಿನೇಶ್, ಜಿಲ್ಲಾ ಉಪಾಧ್ಯಕ್ಷ ಜಿ.ಎಂ.ಹೂವಯ್ಯ ಮಾತನಾಡಿ, ಅರಣ್ಯ ಇಲಾಖೆ ಸರ್ವೇ ಕಾರ್ಯದಿಂದ ರೈತರಲ್ಲಿ ಭಯವಾಗುತ್ತಿದೆ. ಸರ್ಕಾರ ನೇಮಿಸಿರುವ ವಿಶೇಷ ಸಮಿತಿಯ ವರದಿ ಬರುವವರೆಗೆ ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಬಾರದು ಎಂದು ಒತ್ತಾಯಿಸಿದರು. ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೇ ನಡೆಸಿದರೆ ಮಾತ್ರ ರೈತರಿಗೆ ವಿಶ್ವಾಸ ಮೂಡುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ತಹಸೀಲ್ದಾರ್ ಕೃಷ್ಣಮೂರ್ತಿ ಮಾತನಾಡಿ, ರೈತರ ಕಡತಗಳ ವಿಲೇವಾರಿ, ಪೌತಿ ಖಾತೆ ಹಾಗೂ ಖಾತೆ ಬದಲಾವಣೆ ಕಾರ್ಯಗಳು ವೇಗವಾಗಿ ನಡೆಯುತ್ತಿವೆ ಎಂದರು.
ಸಭೆಯಲ್ಲಿ ಪ್ರವಾಸೋದ್ಯಮ, ಹೋಂಸ್ಟೇ ನಿಯಮಗಳ ಸರಳೀಕರಣ, ಪ್ರವಾಸಿತಾಣಗಳ ಅಭಿವೃದ್ಧಿ, ಪೊಲೀಸ್ ಕಾರ್ಯವೈಖರಿ, ಪಟ್ಟಣದ ಟ್ರಾಫಿಕ್ ಸಮಸ್ಯೆ, ರೈತರಿಗೆ ಸಕಾಲದಲ್ಲಿ ಗೊಬ್ಬರ ವಿತರಣೆ, ಗೊಬ್ಬರ ದರ ಅಕ್ರಮ ಹಾಗೂ ಗುಣಮಟ್ಟ ಕುರಿತು ಸಾರ್ವಜನಿಕರು ಅಧಿಕಾರಿಗಳ ಮುಂದೆ ಪ್ರಶ್ನೆಗಳನ್ನು ಮುಂದಿಟ್ಟರು.
ರೈತ ಮುಖಂಡರು ಕಾಡಾನೆ-ಮಾನವ ಸಂಘರ್ಷ, ರೈತರ ಪರಿಹಾರ ಹಾಗೂ ಕಾಡುಪ್ರಾಣಿಗಳ ಹಾನಿ ಕುರಿತು ಗಮನ ಸೆಳೆದರು. ಮಕ್ಕಳ ಹಕ್ಕುಗಳ ಕುರಿತು ವಿಧಾನ ಸಭೆಯಲ್ಲಿ ಚರ್ಚೆ ನಡೆಸುವಂತೆ ಮಕ್ಕಳ ಹಕ್ಕುಗಳ ಕಾರ್ಯಕರ್ತೆ ಸುಮನಾ ಮ್ಯಾಥ್ಯು ಮನವಿ ಮಾಡಿದರು.
ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕೊತ್ನಳ್ಳಿ ಮಾತನಾಡಿ, ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ನೇಮಕ, ಗ್ರಾಮೀಣ ರಸ್ತೆ ಅಭಿವೃದ್ಧಿ, ಸೋಮವಾರಪೇಟೆಯಲ್ಲಿ ಆರ್‌ಟಿಒ ಉಪ ಕಚೇರಿ ಆರಂಭ ಸೇರಿದಂತೆ ಹಲವು ಬೇಡಿಕೆಗಳನ್ನು ಶಾಸಕರ ಮುಂದಿಟ್ಟರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅಧಿಕಾರಿಗಳು, ಶಿಕ್ಷಕರು, ವೈದ್ಯರು, ರೈತ ಮುಖಂಡರು, ಪತ್ರಕರ್ತರು ಹಾಗೂ ಸಮಾಜ ಸೇವಕರನ್ನು ಸನ್ಮಾನಿಸಲಾಯಿತು.