ಸೋಮವಾರಪೇಟೆ ಬಿಟಿಸಿಜಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಹರ್ಷ ಉದ್ಘಾಟಿಸಿದರು. ಮುತ್ತಣ್ಣ, ಜಗದೀಶ್, ಮಿಲ್‌ಡ್ರೆಡ್ ಗೋನ್ಸಾಲ್ವೆಸ್ ಇದ್ದರು. 
ಕೊಡಗು

ಜ್ಞಾನ, ಕೌಶಲ್ಯ ಇಲ್ಲದೆ ಮುನ್ನಡೆಯಿಲ್ಲ

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳಿಗೆ ಪ್ರಾಂಶುಪಾಲ ಡಾ. ಹರ್ಷ ಕಿವಿ ಮಾತು
ಸೋಮವಾರಪೇಟೆ: ಇಂದು ಕೃತಕ ಬುದ್ಧಿಮತ್ತೆ ಯುಗವಾಗಿದ್ದು, ಸ್ಪರ್ಧಾತ್ಮಕ ಜಗತ್ತಿನಲ್ಲಿ ಜ್ಞಾನ, ಕೌಶಲ್ಯ ಮತ್ತು ಸೃಜನಾತ್ಮಕತೆ ಇಲ್ಲದೆ ವಿದ್ಯಾರ್ಥಿಗಳು ಮುನ್ನಡೆಯಲು ಸಾಧ್ಯವಿಲ್ಲ ಎಂದು ಯಡೂರು ಗ್ರಾಮದ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಹರ್ಷ ಹೇಳಿದರು.
ಒಕ್ಕಲಿಗರ ಸಂಘದ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಬಿಟಿಸಿಜಿ ಪಿಯು ಕಾಲೇಜಿನಲ್ಲಿ ಶನಿವಾರ ನಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗು ಪ್ರೇರಣಾತ್ಮಕ ಭಾಷಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಉನ್ನತ ಶಿಕ್ಷಣ ಅತ್ಯಂತ ಮಹತ್ವದ್ದಾಗಿದೆ. ಗ್ರಾಮೀಣ ಮಕ್ಕಳಿಗೆ ಕಷ್ಟಗಳಿವೆ. ಜೀವನದಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ಓದುವುದನ್ನು ಎಂದಿಗೂ ನಿಲ್ಲಿಸಬಾರದು. ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೆ ಶಿಕ್ಷಣ ಮುಂದುವರಿಸಬೇಕು. ಓದಿನ ಜತೆಗೆ ಸೃಜನಶೀಲತೆ ಬೆಳೆಸಿಕೊಳ್ಳುವುದು ಇಂದಿನ ಕಾಲದಲ್ಲಿ ಅಗತ್ಯವಾಗಿದೆ ಎಂದು ತಿಳಿಸಿದರು.
ಓದೋ ಮಕ್ಕಳಿಗೆ ಬಡತನ ಎಂದಿಗೂ ಅಡ್ಡಿಯಾಗುವುದಿಲ್ಲ. ಇತಿಹಾಸದಲ್ಲೇ ನೋಡಿದರೂ ಜೀವನದಲ್ಲಿ ದೊಡ್ಡ ಸಾಧನೆ ಮಾಡಿದವರಲ್ಲಿ ಹೆಚ್ಚಿನವರು ಬಡ ಕುಟುಂಬಗಳಿಂದ ಬಂದವರೇ ಆಗಿದ್ದಾರೆ. ಕೆಲವೊಮ್ಮೆ ಬಡತನವೇ ಓದಿಗೆ ಪ್ರೇರಣೆಯಾಗಿ, ಸಾಧನೆಯ ಮೆಟ್ಟಿಲಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ನಿಮಗೆ ನೀವೇ ರೋಲ್ ಮಾಡೆಲ್‌ಗಳು. ಅವಕಾಶಗಳು ಇಂದು ಸಾಕಷ್ಟಿವೆ. ಆದರೆ ಕಲಿಕೆಯ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದರೆ, ಮುಂದೆ ಬರುವ ಅನೇಕ ಅವಕಾಶಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ವಿಶೇಷವಾಗಿ ಪರೀಕ್ಷೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಒಂದು ತಿಂಗಳು ಅತ್ಯಂತ ಶ್ರದ್ಧೆಯಿಂದ, ಗುರಿ ಸಾಧನೆಗಾಗಿ ಓದಲೇಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಮಾತನಾಡಿ, ಶಿಕ್ಷಣವೇ ಸಮಾಜದ ಬೆಳವಣಿಗೆಗೆ ಅಡಿಪಾಯವಾಗಿದ್ದು, ವಿದ್ಯಾರ್ಥಿಗಳು ಶಿಸ್ತಿನೊಂದಿಗೆ ಅಧ್ಯಯನ ಮಾಡಿ ಉತ್ತಮ ನಾಗರಿಕರಾಗಬೇಕು ಎಂದು ಹೇಳಿದರು.
ಸಂಸ್ಥೆಯ ಭಾತ್ಮಿದಾರ ಕೆ.ಎಂ. ಜಗದೀಶ್ ಅವರು ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಂಘದ ಪ್ರಮುಖ ಉದ್ದೇಶವಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಮಿಲ್‌ಡ್ರೆಡ್ ಗೊನ್ಸಾಲ್ವೆಸ್ ಮಾತನಾಡಿ, ಆತ್ಮವಿಶ್ವಾಸ, ನಿರಂತರ ಪರಿಶ್ರಮ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಾವುದೇ ಗುರಿಯನ್ನು ಸಾಧಿಸಬಹುದು ಎಂದು ತಿಳಿಸಿದರು.
ಉತ್ತಮ ಕ್ರೀಡಾಪಟು ಪ್ರಶಸ್ತಿಯನ್ನು ವಿಜ್ಞಾನ ವಿಭಾಗದಲ್ಲಿ ಎಚ್.ಆರ್.ಜೀವಿತ, ಭಗತ್, ವಾಣಿಜ್ಯ ವಿಭಾಗದಲ್ಲಿ ಸಿ.ಇ.ಆಶಿತ್, ಕೆ.ಎಸ್.ಮೊನಿಷಾ, ಅತೀ ಹೆಚ್ಚು ಅಂಕಪಡೆದವರ ಪ್ರಶಸ್ತಿಯನ್ನು ವಿಜ್ಞಾನ ವಿಭಾಗದಲ್ಲಿ ಇಬ್ಬನಿ, ಪವನ್, ವಾಣಿಜ್ಯ ವಿಭಾಗದಲ್ಲಿ ಮೊನಿಷಾ ಜಿ.ಜಿ. ಭುವನೇಶ್ ಪಡೆದುಕೊಂಡರು. ಆಲ್‌ರೌಂಡರ್ ಪ್ರಶಸ್ತಿಯನ್ನು ವಾಣಿಜ್ಯ ವಿಭಾಗದ ಹನಿ ಪಡೆದುಕೊಂಡರು. ಕ್ರೀಡಾಕ್ಷೇತ್ರದಲ್ಲಿ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿನಿಯರಾದ ಬಿ.ಜಿ.ವೈಭವಿ, ಅಸೀನಾ, ಎಚ್.ಆರ್.ದಿಶಿತಾ, ಸಿ.ಎಚ್.ಭೂಮಿಕಾ, ಉಪನ್ಯಾಸಕಿಯರಾದ ಅಪಾಡಂಡ ಮೌನ, ಸೌಮ್ಯ ಇದ್ದರು.