ಪ್ರಮುಖ ಮುಖ್ಯಾಂಶಗಳು
ಕೊಡಗು ಶ್ರೀಮಂತ ಜಿಲ್ಲೆ. ಕಾಫಿ ನಾಡು, ಸಾವಿರಾರು ಕೋಟಿ ಆದಾಯವಿರುವ ಜಿಲ್ಲೆ. ಪ್ರಕೃತಿ ಸೌಂದರ್ಯವೂ ಇದೆ. ಇಲ್ಲಿನ ಪ್ರತಿಭೆಗಳು ಹೊರ ಜಿಲ್ಲೆ, ರಾಜ್ಯಗಳಿಗೆ ನೌಕರಿ ಹುಡುಕಿ ಹೋಗಬೇಕಾದ ಸ್ಥಿತಿ ಇದೆ. ಹಾಗಾಗಿ ಐಟಿ ಬಿಟಿ ಸ್ಥಾಪನೆಯಾಗಬೇಕು. ಒಂದಷ್ಟು ಕೈಗಾರಿಕೆಗಳು ಪ್ರಾರಂಭ ಆಗಬೇಕು.
ಮಲೆನಾಡು ಜಿಲ್ಲೆ ಕೊಡಗು ಕೈಗಾರಿಕೆಯಲ್ಲಿ ತೀರಾ ಹಿಂದುಳಿದಿದೆ. ಕಾಫಿ ಮತ್ತು ಪ್ರವಾಸೋದ್ಯಮದಿಂದ ಎಷ್ಟೇ ಆದಾಯ ಬಂದರೂ ಯುವ ಜನಾಂಗ ವೃತ್ತಿಪರ ವಿದ್ಯಾಭ್ಯಾಸ ಮಾಡಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಹಿಂದೇಟು ಹಾಕಿ ತಾಂತ್ರಿಕ ಉದ್ಯೋಗ ಪಡೆಯಲು ಪರ ಊರುಗಳಿಗೆ ತೆರಳುತ್ತಾರೆ. ಜಿಲ್ಲೆಯಲ್ಲಿ ಕೈಗಾರಿಕಾ ಕೇಂದ್ರ ತೆರೆಯಲು ಎಲ್ಲಾ ಸೌಲಭ್ಯ ಇದ್ದರೂ ಸಹ ಈ ಬಗ್ಗೆ ಚಿಂತನೆ ಇನ್ನು ನಡೆಸದಿರುವುದು ದುರಂತ.
ಕೊಡಗು ಪುಟ್ಟ ಜಿಲ್ಲೆಯಾದರೂ ವೈವಿಧ್ಯಮಯ ಸಂಸ್ಕೃತಿ ಆಚಾರ ವಿಚಾರ ಪದ್ಧತಿ ಪರಂಪರೆಗಳಲ್ಲಿ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಇಲ್ಲಿಯ ಭೌಗೋಳಿಕ ಪರಿಸರ, ಪ್ರಾಕೃತಿಕ ಸೌಂದರ್ಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಇಲ್ಲಿ ಕೃಷಿ, ತೋಟಗಾರಿಕೆ, ವಿದ್ಯಾಭ್ಯಾಸ, ಆರೋಗ್ಯ ಸೇವೆ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳು ಸರಿಯಾಗಿವೆ. ವಿದ್ಯಾವಂತ ಯುವ ಜನತೆಗೆ ಇಲ್ಲಿ ಕೈಗಾರಿಕೆ ಅಭಿವೃದ್ಧಿಯಾಗಿಲ್ಲ. ಆದ್ದರಿಂದ ವೃತ್ತಿಪರ ಉದ್ಯೋಗಕ್ಕಾಗಿ ಪರ ಊರುಗಳನ್ನು ಅವಲಂಬಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕೊಡಗಿನಲ್ಲಿ ಕೈಗಾರಿಕೋದ್ಯಮ ಅಭಿವೃದ್ಧಿಯಾದಲ್ಲಿ ಪುಟ್ಟ ಜಿಲ್ಲೆ ಕೊಡಗು ಎಲ್ಲಾ ಕ್ಷೇತ್ರದಲ್ಲೂ ಪರಿಪೂರ್ಣತೆ ಕಾಣುವುದು.
ಕೊಡಗು ಜಿಲ್ಲೆಯಲ್ಲಿ ಹಲವಾರು ಜನ ತಾಂತ್ರಿಕ ಶಿಕ್ಷಣ ಪಡೆದಿದ್ದರೂ ಸಮರ್ಪಕವಾದ ಉದ್ಯೋಗವಕಾಶ ದೊರಕದೆ ಅನಿವಾರ್ಯವಾಗಿ ತಮ್ಮ ಓದಿಗೆ ಸಮಾನವಾದ ಕೆಲಸ ಅರಸುತ್ತ ಹೊರ ಜಿಲ್ಲೆ, ಹೊರ ರಾಜ್ಯಗಳಿಗೆ ತಮ್ಮ ಕುಟುಂಬ ತೊರೆದು ಹೊಗುವ ಪರಿಸ್ಥಿತಿ ಇದೆ. ಕೊಡಗಿನಲ್ಲಿ ತಾಂತ್ರಿಕ ಕೈಗಾರಿಕೆ ಆರಂಭವಾದರೆ ಹೆಚ್ಚು ಉದ್ಯೋಗ ಸೃಷ್ಟಿಯೊಂದಿಗೆ ಇತರ ಉದ್ಯಮಗಳಿಗೂ ಆದಾಯದ ಮೂಲವಾಗುತ್ತದೆ.
ಕೈಗಾರಿಕೆಗಳು ಪ್ರಾರಂಭವಾದರೆ ಕೊಡಗಿಗೆ ಉಪಯೋಗವೂ ಆಗಬಹುದು ಹಾಗೆಯೇ ಮಾರಕವೂ ಆಗಬಹುದು. ದಕ್ಷಿಣ ಕೊಡಗಿನ ಪೊನ್ನಂಪೇಟೆಯಲ್ಲಿ ಕೆಲವು ವರ್ಷಗಳ ಹಿಂದೆ ಬಿಹೆಚ್‌ಇಎಲ್ ಎಂಬ ಕೈಗಾರಿಕಾ ಸಂಸ್ಥೆ ಇತ್ತು. ಆ ಸಮಯದಲ್ಲಿ ತುಂಬಾ ಮಹಿಳೆಯರಿಗೆ ಉದ್ಯೋಗಾವಕಾಶ ಅಲ್ಲಿ ದೊರಕಿತ್ತು. ಆ ಸಂಸ್ಥೆ ಮುಚ್ಚಿದ ನಂತರ ನಿರುದ್ಯೋಗ ಸಮಸ್ಯೆ ಹೆಚ್ಚಾಗಿ ಈ ಭಾಗದಲ್ಲಿ ಕಾಡಿದೆ. ಕೊಡಗಿನಲ್ಲಿ ಕೈಗಾರಿಕಾ ಉದ್ಯಮ ಪ್ರಾರಂಭವಾದರೆ ನಿರುದ್ಯೋಗ ಸಮಸ್ಯೆ ಸ್ವಲ್ಪಮಟ್ಟಿಗೆ ಕಡಿಮೆಯಾಗಬಹುದು. ಹಾಗೆಯೇ ಕಾರ್ಖಾನೆಗಳ ವಿಷಯುಕ್ತ ತ್ಯಾಜ್ಯಗಳು ಪರಿಸರಕ್ಕೆ ಹಾನಿಮಾಡುವ ಸಾಧ್ಯತೆ ಕೂಡ ಇದೆ.
ಕೊಡಗು ಕೃಷಿ ಪ್ರಧಾನ ಜಿಲ್ಲೆ. ಶೇಕಡಾ 60 ಆರ್ಥಿಕ ಬೆಳೆಗಳಾದರೆ, ಶೇ. 40ರಷ್ಟು ಆಹಾರ ಬೆಳೆಗಳು. ಸ್ವಾಭಾವಿಕವಾಗಿಯೇ ಇಲ್ಲಿನ ಭೌಗೋಳಿಕ ಸ್ಥಿತಿಯಿಂದಾಗಿ ಯಾವುದೇ ರೀತಿಯ ದೊಡ್ಡ ಕೈಗಾರಿಕೆಗಳು ರೂಪುಗೊಳ್ಳಲು ಸಾಧ್ಯವಾಗಿಲ್ಲ. ಈ ಪುಟ್ಟ ಜಿಲ್ಲೆಯ ಹಸಿರ ಸಮನ್ವಯತೆಗೆ ಇದು ಒಂದು ದೃಷ್ಟಿಯಲ್ಲಿ ವರವೂ ಹೌದು. ಬಹುಶಃ ಇದರಿಂದಲೇ ಹೊರದೇಶ, ನಗರಗಳಲ್ಲಿ ಜ್ಞಾನಾರ್ಜನೆ ಮಾಡಿ ಬಂದ ಇಲ್ಲಿಯವರಿಗೆ ತಮ್ಮ ಅರ್ಹತೆಗೆ ತಕ್ಕ ಅವಕಾಶಗಳು ದೊರಕದಾಗ ಅವಕಾಶ ಅರಸಿ ಜಿಲ್ಲೆಯಿಂದ ಹೊರ ಹೋಗುವುದು ಅನಿವಾರ್ಯವೇ ಹೊರತೂ ಕೇವಲ ನಗರಗಳ ಆಕರ್ಷಣೆ ಎನ್ನಲಾಗುವುದಿಲ್ಲ.
ಕೊಡಗಿನಲ್ಲಿ ಕಾಫಿ ಸಂಸ್ಕರಣೆ ಮತ್ತು ತತ್ಸಂಬAಧಿ ಒಂದು ಬೃಹತ್ ಕೈಗಾರಿಕೆಯನ್ನುಳಿದರೆ ಬೇರೆ ಕೈಗಾರಿಕೆಗಳು ಬೇರೂರಲಿಲ್ಲ. ಇದರ ಹೊರತಾಗಿ ಬೇರೆ ರೀತಿಯ ಕೈಗಾರಿಕೆಗಳನ್ನು ಸ್ಥಾಪಿಸುವ ಕೌಶಲ್ಯ, ಮೂಲ ಬುದ್ಧಿಶಕ್ತಿ ಇದ್ದರೂ ಅಂಥವರು ಉದ್ಯೋಗಾವಕಾಶಗಳನ್ನು ಅರಸಿ ಅಮೆರಿಕ, ಇಂಗ್ಲೆAಡ್, ಜರ್ಮನಿ, ಬೆಂಗಳೂರು, ಮುಂಬೈಯAಥ ದೂರದೂರುಗಳಿಗೆ ತೆರಳಿದವರೇ ಹೆಚ್ಚು. ಕೈಗಾರಿಕೆ ಸ್ಥಾಪಿಸಲು ಇರುವ ಆಡಳಿತಾತ್ಮಕ, ತಾಂತ್ರಿಕ ತೊಡಕುಗಳೂ ಇದಕ್ಕೆ ಕಾರಣ. ಕುಶಾಲನಗರದಲ್ಲಿ ಈಗಾಗಲೇ ಐವತ್ತಕ್ಕೂ ಅಧಿಕ ಕಾಫಿ ಸಂಸ್ಕರಣಾ ಘಟಕಗಳಿದ್ದು, ಕೆಲವೇ ಕೆಲವು ಇತರ ಕೈಗಾರಿಕೆಗಳನ್ನುಳಿದಂತೆ ಅನೇಕ ಶೆಡ್ಡುಗಳು ಖಾಲಿ ಬಿದ್ದಿವೆ.
ಕೊಡಗಿನಲ್ಲೂ ಕೈಗಾರಿಕಾ ಕ್ಷೇತ್ರ ಅಭಿವೃದ್ಧಿ ಆಗಬೇಕಿದೆ. ನಮ್ಮ ರಾಜ್ಯ ಸಮಿತಿಯ ಮಹತ್ವಾಕಾಂಕ್ಷಿ ಬಿಯಾಂಡ್ ಬೆಂಗಳೂರು ಯೋಜನೆಯಡಿ ಮಾಹಿತಿ ಹಾಗೂ ತಂತ್ರಜ್ಞಾನ ಕೇಂದ್ರವನ್ನು ಕೊಡಗಿನಲ್ಲಿ ತೆರೆಯಬೇಕಿದೆ. ಜಿಲ್ಲೆಯಲ್ಲಿ ಮತ್ತೊಂದು ಕೈಗಾರಿಕಾ ಪ್ರದೇಶ ಆರಂಭಿಸುವ ಅಗತ್ಯವಿದೆ. ಈ ಮೂಲಕ ಜಿಲ್ಲೆಯ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವುದು ಮಾತ್ರವಲದೇ ಕೊಡಗಿನ ಆರ್ಥಿಕಾಭಿವೃದ್ಧಿಗೂ ಸಹಾಯಕವಾಗಲಿದೆ.