ಕುಶಾಲನಗರ ಬಳಿ ಮಿನಿ ವಿಮಾನ ನಿಲ್ದಾಣಕ್ಕೆ ಗುರುತಿಸಲಾಗಿರುವ ಜಾಗ 
ಕೊಡಗು

ಹೊಸ ವರ್ಷದಲ್ಲಿ ನಿರೀಕ್ಷೆಗಳು ಹತ್ತು ಹಲವು

ಪ್ರಮುಖ ಮುಖ್ಯಾಂಶಗಳು

  • 2025ಕ್ಕೆ ಬೀಳ್ಕೊಡುಗೆ
  • 2026ಕ್ಕೆ ಸ್ವಾಗತ
  • ಹೊಸ ವರ್ಷಕ್ಕೆ ಹಲವು ನಿರೀಕ್ಷೆಗಳು
ಮಡಿಕೇರಿ:
ಗೋಡೆಗಳ ಮೇಲೆ ಹೊಸ ಕ್ಯಾಲೆಂಡರ್ ಬಂದಿದೆ. ವಿಭಿನ್ನ ಅನುಭವಗಳ ನೆನಪುಗಳೊಂದಿದೆ 2025ರ ವರ್ಷವನ್ನು ಬೀಳ್ಕೊಟ್ಟು 2026ರ ಹೊಸ ವರ್ಷವನ್ನು ಈಗಾಗಲೇ ಬರಮಾಡಿಕೊಳ್ಳಲಾಗಿದೆ. ಹಿಂದಿನ ವರ್ಷದ ಅತಿಯಾದ ಮಳೆಗಾಲ, ಮತ್ತೆ ಮತ್ತೆ ಕಾಡಿದ ವನ್ಯಜೀವಿ-ಮಾನವ ಸಂಘರ್ಷ, ಅಪಘಾತಗಳ ಕಹಿ ನೆನಪು, ವಿವಿಧ ಕ್ಷೇತ್ರದಗಳಲ್ಲಿ ಜಿಲ್ಲೆಯ ಪ್ರತಿಭಾವಂತರ ಸಾಧನೆ...ಹೀಗೆ ಒಳಿತು ಕೆಡಕುಗಳ ಮೆಲುಕಿನ ಮಧ್ಯೆ ಹೊಸ ವರ್ಷ ಸಂಭ್ರಮದಿAದ ಕೂಡಿರುವಂತಾಗಲಿ ಎನ್ನುವ ಹಾರೈಕೆ ಎಲ್ಲರದ್ದು. ಹಾಗಾಗಿ 2026ರ ಹೊಸ ವರ್ಷದ ಬಗ್ಗೆ ಜಿಲ್ಲೆಯ ಜನತೆಯಲ್ಲಿ ಕೆಲವೊಂದಿಷ್ಟು ನಿರೀಕ್ಷೆಗಳೂ ಮನೆ ಮಾಡಿವೆ.
ಕೊಡಗಿನ ತಲಕಾವೇರಿಯಲ್ಲಿ ಉಗಮವಾಗುವ ಕಾವೇರಿ ನದಿ ದಕ್ಷಿಣ ಭಾರತಕ್ಕೆ ಜೀವನದಿಯಾಗಿದ್ದಾಳೆ. ಆದರೆ ಇತ್ತೀಚಿನ ವರ್ಷಗಳಲ್ಲಿ ನದಿಯ ಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಕೆಲವೇ ವರ್ಷಗಳ ಹಿಂದೆ ಬೊಗಸೆಯಲ್ಲಿ ತೆಗೆದು ಕುಡಿಯಬಹುದಾಗಿದ್ದ ಕಾವೇರಿ ನದಿಯ ನೀರು ತವರು ಜಿಲ್ಲೆಯಲ್ಲೇ ಈಗ ನೇರವಾಗಿ ಉಪಯೋಗಿಸಲು ಸಾಧ್ಯವಾಗದ ಸ್ಥಿತಿ ಬಂದಿದೆ. ಎಂದೂ ಬರಿದಾಗದೇ ವರ್ಷಪೂರ್ತಿ ಹರಿಯುತ್ತಿದ್ದ ಕಾವೇರಿ ಬೇಸಿಗೆಯಲ್ಲಿ ಕ್ಷೀಣವಾಗಿ ಕೆಲವು ಕಡೆ ಬತ್ತಿಹೋಗುವಂತಾಗಿದೆ. ನದಿಗಳು ನಾಗರೀಕತೆಯ ಜೀವಾಳ. ಹಾಗಾಗಿ ಕಾವೇರಿ ಸೇರಿದಂತೆ ಜಿಲ್ಲೆಯ ನದಿಗಳನ್ನು ಉಳಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ನದಿ ಸಂರಕ್ಷಣೆಗೆ ಸಂಬAಧಿಸಿದAತೆ ಯೋಜನೆಗಳು ರೂಪುಗೊಳ್ಳುವಂತಾಗಲಿ ಎನ್ನುವುದು ಸ್ಥಳೀಯರ ನಿರೀಕ್ಷೆ.
ಒಂದೊಮ್ಮೆ ಭತ್ತದ ಕಣಜ ಎಂದು ಗುರುತಿಸಿಕೊಂಡಿದ್ದ ಕೊಡಗಿನಲ್ಲಿ ಈಗ ಭತ್ತದ ಕೃಷಿ ಅಪರೂಪವಾಗಿದೆ. ಭತ್ತದ ಗದ್ದೆಗಳು ಅಡಕೆ, ಕಾಫಿ ತೋಟಗಳಾಗಿ ಬದಲಾಗಿದೆ. ಇನ್ನೂ ಆತಂಕಕಾರಿ ವಿಷಯ ಎಂದರೆ ಭತ್ತದ ಗದ್ದೆಗಳನ್ನು ದೊಡ್ಡ ದೊಡ್ಡ ಲೇ ಔಟ್‌ಗಳಾಗಿ ಪರಿವರ್ತಿಸಲಾಗುತ್ತಿದೆ. ಇದರ ಜತೆಗೆ ಕಾಫಿ ತೋಟಗಳು, ಅರಣ್ಯ ಪ್ರದೇಶಗಳು ಕೂಡ ವಾಣಿಜ್ಯ ಉದ್ದೇಶಕ್ಕಾಗಿ ಭೂಪರಿವರ್ತನೆಯಾಗಿ ಪಶ್ಚಿಮಘಟ್ಟದ ಸೂಕ್ಷö್ಮ ಪರಿಸರದ ಮೇಲೆ ದೊಡ್ಡ ಹೊಡೆತ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಭೂ ಪರಿವರ್ತನೆಗೆ ಸಾಕಷ್ಟು ನಿಬಂಧನೆಗಳಿದ್ದರೂ ಎಲ್ಲವನ್ನೂ ಗಾಳಿಗೆ ತೂರಿ ಭೂ ಪರಿವರ್ತನೆಗೆ ಅವಕಾಶ ಕೊಡಲಾಗುತ್ತಿದೆ. ಇದರ ಪರಿಣಾಮ ಪರಿಸರದ ಮೇಲೆ ಈಗಾಗಲೇ ಕಾಣಿಸಿಕೊಳ್ಳಲಾರಂಭಿಸಿದ್ದು ಕೊಡಗನ್ನು ಮಲೆನಾಡಿನ ಕೊಡಗಾಗಿಯೇ ಉಳಿಸಿಕೊಳ್ಳದಿದ್ದರೆ ಭವಿಷ್ಯದಲ್ಲಿ ಅಪಾಯ ತಪ್ಪಿದ್ದಲ್ಲ ಎನ್ನುವ ಆತಂಕ ಪರಿಸರವಾದಿಗಳದ್ದಾಗಿದೆ. ಅನಿಯಮಿತವಾಗಿ ನಡೆಯುತ್ತಿರುವ ಭೂ ಪರಿವರ್ತನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರದ ಸಕರಾತ್ಮಕ ಕ್ರಮದ ನಿರೀಕ್ಷೆಯಲ್ಲಿ ಪರಿಸರ ಪ್ರೇಮಿಗಳು ಇದ್ದಾರೆ.
ಬೆಂಗಳೂರು-ಮೈಸೂರು ರಸ್ತೆ ಮೇಲ್ದರ್ಜೆಗೆ ಏರಿದ ನಂತರ ಕೊಡಗಿನ ಕಡೆಗೆ ಬರುವ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ವಾರಾಂತ್ಯ ಮತ್ತು ರಜಾ ದಿನಗಳಲ್ಲಿ ಕುಶಾಲನಗರ-ಮಡಿಕೇರಿ ಮತ್ತು ಹುಣಸೂರು-ಗೋಣಿಕೊಪ್ಪಲು ಮಾರ್ಗದಲ್ಲಿ ವಾಹನ ದಟ್ಟಣೆ ಮಿತಿ ಮೀರುತ್ತದೆ. ಇದರಿಂದಾಗಿ ಅಪಘಾತಗಳ ಸಂಖ್ಯೆಯೂ ಏರುಗತಿಯಲ್ಲಿದೆ. ಈ ನಡುವೆ ಮಡಿಕೇರಿ ಚತುಷ್ಪಥ ರಸ್ತೆಯ ಭಾಗವಾಗಿರುವ ಮೈಸೂರು-ಕುಶಾಲನಗರ ನಡುವಿನ ರಸ್ತೆ ಕಾಮಗಾರಿ ಈಗಾಗಲೇ ಶುರುವಾಗಿದ್ದು, ಬಿರುಸಿನಿಂದ ನಡೆಯುತ್ತಿದೆ. 2027ಕ್ಕೆ ಈ ಹೆದ್ದಾರಿ ಸಾರ್ವಜನಿಕರ ಬಳಕೆಗೆ ಲಭ್ಯವಾಗುವ ನಿರೀಕ್ಷೆ ಇದೆ. ನಂತರ ಕೊಡಗಿನ ಕಡೆಗೆ ವಾಹನಗಳ ಪ್ರವಾಹ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದ್ದು, ಇದಕ್ಕೆ ಪರ್ಯಾಯ ವ್ಯವಸ್ಥೆಗಳನ್ನು ರೂಪಿಸಲು ಇದು ಸಕಾಲವಾಗಿದೆ. ಈ ನಿಟ್ಟಿನಲ್ಲಿ ಸೂಕ್ತ ಯೋಜನೆ ಸಿದ್ಧವಾಗಲಿದೆ ಎನ್ನುವ ನಿರೀಕ್ಷೆಯನ್ನು ಸ್ಥಳೀಯರು ಇಟ್ಟುಕೊಂಡಿದ್ದಾರೆ.
ಪ್ರವಾಸಿ ಜಿಲ್ಲೆಯಾಗಿ ಗುರುತಿಸಿಕೊಂಡಿರುವ ಕೊಡಗು ರೈಲ್ವೆ ಮಾರ್ಗ ಇಲ್ಲದ ದೇಶದ ಏಕೈಕ ಜಿಲ್ಲೆಯೂ ಆಗಿದೆ. ಜಗತ್ತಿನೊಂದಿಗೆ ಶೀಘ್ರ ಸಂಪರ್ಕಕ್ಕೆ ಸಹಾಯವಾಗಬಲ್ಲ ವಾಯು ಮಾರ್ಗದ ಅನುಕೂಲವೂ ಕೊಡಗಿನಿಂದ ದೂರ ಉಳಿದಿದೆ. ಈ ಎರಡೂ ಯೋಜನೆಗಳ ಬಗ್ಗೆ ಆಗಾಗ್ಗೆ ಪ್ರಸ್ತಾಪಗಳು ಆದರೂ ಮಾಧ್ಯಮಗಳಲ್ಲಷ್ಟೇ ಸುದ್ದಿ ಆಗಿ ನಂತರ ಮರೆಯಾಗುತ್ತದೆಯೇ ಹೊರತೂ ನಂತರದ ಯಾವುದೇ ಬೆಳವಣಿಗೆ ಕಂಡುಬರುತ್ತಿಲ್ಲ. ರೈಲ್ವೇ ಮಾರ್ಗದ ಸರ್ವೇಗಷ್ಟೇ ಯೋಜನೆ ಇದು ಸೀಮಿತವಾದಂತಿದೆ. ಕೊಡಗು ಸೇರಿದಂತೆ ಮೂರು ಕಡೆಗಳಲ್ಲಿ ಏರ್‌ಸ್ಟಿçಪ್ ನಿರ್ಮಾಣದ ಬಗ್ಗೆ ರಾಜ್ಯ ಸರ್ಕಾರ ಘೋಷಣೆ ಮಾಡಿತ್ತಾದರೂ ನಂತರ ಯಾವುದೇ ಬೆಳವಣಿಗೆ ಆಗಿಲ್ಲ. ಈ ವರ್ಷದಲ್ಲಾದರೂ ಈ ವಿಷಯದಲ್ಲಿ ಶುಭ ಸುದ್ದಿ ಬರಲಿ ಎನ್ನುವುದು ಸ್ಥಳೀಯರ ಆಶಯ.
ವನ್ಯಜೀವಿ - ಮಾನವ ಸಂಘರ್ಷ ಕೊಡಗಿನಲ್ಲಿ ಸಾಮಾನ್ಯ ಎಂಬAತಾಗಿದೆ. ಆದರೆ ಇದರಿಂದ ಕೃಷಿಕರು, ಜನಸಾಮಾನ್ಯರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಹುಲಿ, ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಕಾಡುಕೋಣ, ಕಾಡೆಮ್ಮೆ, ಕೋತಿ, ನವಿಲು, ಕರಡಿ, ಚಿರತೆ ಸೇರಿದಂತೆ ಇತರ ವನ್ಯಜೀವಿಗಳ ಕಾಟವೂ ಮನುಷ್ಯರ ತಾಳ್ಮೆ ಪರೀಕ್ಷೆ ಮಾಡುವಂತಿದೆ. ಇದರ ಜತೆಯಲ್ಲಿ ವನ್ಯಜೀವಿ - ಮಾನವ ಸಂಘರ್ಷದಲ್ಲಿ ಆನೆ, ಹುಲಿ ಸೇರಿದಂತೆ ಪ್ರಾಣಿಗಳೂ ವಿವಿಧ ರೀತಿಯಲ್ಲಿ ಜೀವ ಕಳೆದುಕೊಳ್ಳುತ್ತಿದೆ. ಇದಕ್ಕೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ಕಾರ್ಯಪ್ರವೃತ್ತವಾಗಿದೆ. ಆಧುನಿಕ ತಂತ್ರಜ್ಞಾನಗಳನ್ನೂ ಪರಿಚಯಿಸುತ್ತಿದೆ. ಈ ಯೋಜನೆ ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ಬರಲಿ ಎನ್ನುವ ಒತ್ತಾಸೆ ಸ್ಥಳೀಯರದ್ದು.
ಕ್ರೀಡಾ ಜಿಲ್ಲೆಯಾಗಿ ಗುರುತಿಸಿಕೊಂಡಿರುವ ಕೊಡಗಿನಲ್ಲಿ ಸುಸಜ್ಜಿತ ಕ್ರೀಡಾಂಗಣಗಳ ಕೊರತೆ ಇದೆ. ಕನಿಷ್ಠ ತಾಲೂಕಿಗೆ ಒಂದಾದರೂ ಕ್ರೀಡಾಂಗಣ ಬೇಕು ಎನ್ನುವುದು ಕ್ರೀಡಾಭಿಮಾನಿಗಳ ಬೇಡಿಕೆ. ಈ ನಿಟ್ಟಿನಲ್ಲಿ ವಿರಾಜಪೇಟೆ ಬಳಿ ಈಗಾಗಲೇ ಕ್ರೀಡಾಂಗಣವೊAದರ ಕಾಮಗಾರಿ ಆರಂಭವಾಗಿದೆ. ಎಲ್ಲಾ ತಾಲೂಕುಗಳಲ್ಲೂ ಇಂಥ ಕ್ರೀಡಾಂಗಣಗಳು ನಿರ್ಮಾಣ ಆಗುವ ಮೂಲಕ ಕ್ರೀಡಾಪಟುಗಳ ಪ್ರತಿಭೆ ಬೆಳಗುವಂತಾಗಬೇಕು. ಕೊಡಗಿನಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆ ಆಗಬೇಕು ಎನ್ನುವ ಬೇಡಿಕೆಯೂ ಇದೆ. ಈ ವರ್ಷ ಈ ಬೇಡಿಕೆಗಳು ಈಡೇರುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಕೊಡವರ ವಿಭಿನ್ನ ಸಂಸ್ಕೃತಿ, ಆಚಾರ-ವಿಚಾರ, ಉಡುಗೆ, ಪದ್ಧತಿ-ಪರಂಪರೆ ಸಂರಕ್ಷಣೆಗೋಸ್ಕರ ನಿರ್ಮಿಸಲಾಗುತ್ತಿರುವ ಕೊಡವ ಹೆರಿಟೇಜ್ ಸೆಂಟರ್ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುತ್ತಲೇ ಇಲ್ಲ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಗಳಿಗೋಸ್ಕರ ನಿರ್ಮಾಣ ಮಾಡಲಾಗುತ್ತಿರುವ ಕನ್ನಡ ಸಮುಚ್ಛಯ ಭವನ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು, ಈ ವರ್ಷವಾದರೂ ಇವುಗಳು ಸಾರ್ವಜನಿಕ ಸೇವೆಗೆ ಲಭ್ಯವಾಗಲಿ ಎನ್ನುವ ನಿರೀಕ್ಷೆ ಇದೆ.