ಚಿತ್ರ 9ಎಸ್ ಎಸ್ 1 ಸಂಪಾಜೆ ಸಣ್ಣಯ್ಯ ಪಟೇಲ್ ಮತ್ತು ದಿವಂಗತ ವಿ.ಎಸ್ ರಾಮಕೃಷ್ಣ ದತ್ತಿ ಉಪನ್ಯಾಸ ಕಾರ್ಯಕ್ರಮ ಎನ್. ವೈ. ಧರ್ಮಪ್ಪ ಉದ್ಘಾಟಿಸಿದರು. ಕೇಶವ ಕಾಮತ್, ಮುನೀರ್ ಅಹಮ್ಮದ್ ಮುಂತಾದವರು ಇದ್ದಾರೆ. 
ಕೊಡಗು

ಜನಪದ ಜಗತ್ತೇ ಒಂದು ಅದ್ಭುತ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ, ಎಸ್.ಐ ಮುನೀರ್ ಅಹ್ಮದ್ ಅಭಿಮತ
ಶನಿವಾರಸಂತೆ: ಜನಪದ ಜಗತ್ತು ಎನ್ನುವುದು ಒಂದು ಅದ್ಭುತ, ವೈಶಿಷ್ಟ್ಯಮಯ, ಸುಂದರ ಜಗತ್ತು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ, ಎಸ್.ಐ ಮುನೀರ್ ಅಹ್ಮದ್ ನುಡಿದರು.
ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಬೆಸೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಸಂಪಾಜೆ ಸಣ್ಣಯ್ಯ ಪಟೇಲ್ ಮತ್ತು ದಿವಂಗತ ವಿ.ಎಸ್ ರಾಮಕೃಷ್ಣ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿರಿಯರು ಪಾಠಶಾಲೆಯಲ್ಲಿ ಓದಿದವರಲ್ಲ ಆದರೆ ಬದುಕಿನ ಜೀವನೋತ್ಸಾಹದಲ್ಲಿ ಎಲ್ಲ ಅನುಭವದ ಪಾಠವನ್ನು ಪಡೆದವರು. ಜನಪದದ ಅನುಭವ ಮತ್ತು ಸಹಜ ಸ್ಫೂರ್ತಿಯಿಂದ ಹೊರಹೊಮ್ಮಿದ ಅನೇಕ ನುಡಿಮುತ್ತುಗಳು, ಗಾದೆ, ಹಾಡು, ಒಗಟು, ಕಥೆ, ಆಚರಣೆ ಇವೆಲ್ಲವೂ ನಮ್ಮ ಹಿಂದಿನ ಜನರ ಜೀವಕೋಶದ ಭಾಗ ಎಂದರು.
ಇಂದು ಹಿರಿಯ ಸಾಹಿತಿಗಳಾದ ಜಿ.ಎಸ್ ಶಿವರುದ್ರಪ್ಪ ಅವರ ನೂರನೇ ಜನ್ಮದಿನವಾಗಿದ್ದು ಅವರ ಸಾಹಿತ್ಯ ಸೇವೆಯನ್ನು ವಿವರಿಸಿ, ಅವರಿಗೆ ನುಡಿ ನಮನ ಸಲ್ಲಿಸಲಾಯಿತು.
ದಿವಂಗತ ವಿ.ಎಸ್.ರಾಮಕೃಷ್ಣ ಅವರ ದತ್ತಿ ಆಶಯದಂತೆ ಕನ್ನಡ ಸಾಹಿತ್ಯದ ಬೆಳವಣಿಗೆ ಕುರಿತು ಶನಿವಾರಸಂತೆಯ ಸಾಹಿತಿಗಳಾದ ಲಾವಣ್ಯ ಮೋಹನ್ ಮಾತನಾಡಿ, ಸಾಹಿತ್ಯದ ಹಲವು ಪ್ರಕಾರಗಳ ಬಗ್ಗೆ ಉದಾಹರಣೆ ಸಹಿತ ವಿವರಿಸಿದ ಅವರು ಹಳೆಗನ್ನಡದಿಂದ ಇಂದಿನ ನವ್ಯ ಕನ್ನಡದವರೆಗಿನ ವಿಚಾರಗಳನ್ನು ವಿವರಿಸಿದ್ದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮಾತನಾಡಿ, ಹಳ್ಳಿ ಶಾಲೆಯ ವಿದ್ಯಾರ್ಥಿಗಳು ಕನ್ನಡ ಸಾಹಿತ್ಯದ ಬೇರುಗಳಂತೆ ಅವರಿಗೆ ಕನ್ನಡ,ನಾಡು,ನುಡಿ,ಆಚಾರ, ವಿಚಾರ, ಸಾಹಿತ್ಯ, ಸಂಸ್ಕೃತಿ ತಿಳಿಯಪಡಿಸಬೇಕಿದೆ. ಆ ಕಾರ್ಯವನ್ನು ಸಾಹಿತ್ಯ ಪರಿಷತ್ ಮಾಡುತ್ತಿದೆ ಎಂದರು.
ಶ್ರೀ ಬಾಲ ತ್ರಿಪುರ ಸುಂದರಿ ದೇವಾಲಯದ ಅಧ್ಯಕ್ಷ ಎನ್. ವೈ. ಧರ್ಮಪ್ಪ, ಕೊಡ್ಲಿಪೇಟೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿಪಿ ಶಾಂತಮಲ್ಲಪ್ಪ, ಶಾಲಾ ಅಭಿವೃದ್ಧಿ ಸಮಿತಿಯ ಗೌರವ ಅಧ್ಯಕ್ಷ ಧರ್ಮಪ್ಪ , ಕೊಡ್ಲಿಪೇಟೆಯ ಶಿಕ್ಷಕ ಕಿರಣ್ ಕುಮಾರ್, ನ್ಯಾಯದ ಹಳ್ಳ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಮಂಜುಳಾಮಣಿ ಇದ್ದರು.