ಕೊಡಗು ಐರಿ ಸಮಾಜದ ಅಪ್ಪಚ್ಚಂಡ ಉತ್ತಪ್ಪ ಸಭಾಂಗಣ ಐರಿ ಸಮಾಜ ಸಮುದಾಯ ಭವನದ ಭೂಮಿಪೂಜೆಯನ್ನು ಶಾಸಕ ಎ. ಎಸ್.ಪೊನ್ನಣ್ಣ ನೆರವೇರಿಸಿದರು. ಅಕ್ಕಚ್ಚಿರ ಮುದ್ದಪ್ಪ, ಐರಿ ಸಮಾಜದ ಮಾಜಿ ಅಧ್ಯಕ್ಷ ಮೇಲತ್ತಂಡ ಗೋಪಾಲ, ತಟ್ಟಂಡ ಪೂಣಚ್ಚ, ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಪೊನ್ನೀರ ಗಗನ್ ಇದ್ದರು.
ವಿರಾಜಪೇಟೆ: ಐರಿ ಸಮಾಜದ ನೂತನ ಸಮುದಾಯ ಭವನದ ನಿರ್ಮಾಣದ ಭೂಮಿಪೂಜೆಯನ್ನು ಅರಮೇರಿಯಲ್ಲಿ ಮಂಗಳವಾರ ಶಾಸಕ ಎ.ಎಸ್.ಪೊನ್ನಣ್ಣ ನೆರವೇರಿಸಿದರು.
ಬಳಿಕ ಮಾತನಾಡಿದ ಶಾಸಕರು, ಈಗಾಗಲೇ ಸರ್ಕಾರ ಹಾಗೂ ಶಾಸಕರ ಅನುದಾನದ 25 ಲಕ್ಷ ರೂ.ಗಳಲ್ಲಿ ಈ ಕಾಮಗಾರಿ ನಡೆಯಲಿದೆ. ಐರಿ ಸಮಾಜದ ಭವ್ಯ ಸಮುದಾಯ ಭವನ ನಿರ್ಮಾಣವಾಗಿ ಇದರ ಸದ್ಬಳಕೆ ಮಾಡುವುದರೊಂದಿಗೆ ಸುಂದರವಾದ ಪ್ರಕೃತಿಯ ತಾಣದಲ್ಲಿ ಉತ್ತಮವಾದ ಸಮುದಾಯ ಭವನವನ್ನು ನಿರ್ಮಿಸಿ ಇದರ ಉಪಯೋಗ ಸಮುದಾಯದ ಎಲ್ಲರಿಗೂ ದೊರಕುವಂತಾಗಲಿ. ಸಮಾಜದ ಹಿರಿಯರ ಕಲ್ಪನೆಯಂತೆ ಸಂಘ ನಿರ್ಮಾಣವಾಗಿ ಆಚಾರ, ವಿಚಾರ, ಸಂಸ್ಕೃತಿ ಉಳಿಸಿ ಮುಂದಿನ ತಲೆಮಾರಿಗೆ ಕಲಿಸುವುದರೊಂದಿಗೆ ಎಲ್ಲರನ್ನೂ ಒಳಗೊಂಡ ಸಮ ಸಮಾಜ ನಿರ್ಮಾಣ ಆಗುವುದರೊಂದಿಗೆ ನಿರ್ಮಾಣವಾಗಲಿರುವ ಭವನವು ಸಮಾಜಕ್ಕೆ ಮಾದರಿ ಎಂಬಂತೆ ನಿರ್ಮಿಸಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮೇಲತ್ತಂಡ ರಮೇಶ್, 1945ರಲ್ಲಿ ಕೊಡಗು ಐರೀರ ವಿದ್ಯಾ ಅಭಿವೃದ್ಧಿ ಸಂಘವನ್ನು ಐರಿರ ಪೊನ್ನಣ್ಣಅವರು ಸ್ಥಾಪಿಸಿ ಐರಿ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸಿದರು. ತದ ನಂತರ 1985ರಲ್ಲಿ ಅಪ್ಪಚ್ಚಂಡ ಉತ್ತಪ್ಪ ಮೂರ್ನಾಡುವಿನಲ್ಲಿ ಸಂಘಕ್ಕಾಗಿ 10 ಸೆಂಟ್ ಜಾಗವನ್ನು ದಾನ ನೀಡಿದರು. ಈ ಸ್ಥಳದಲ್ಲಿ ಸಮುದಾಯ ಭವನ ನಿರ್ಮಿಸಲು ಸಾಧ್ಯವಾಗದ ಕಾರಣ ಆ ಜಾಗವನ್ನು ಮಾರಿ ಬಂದ ಹಣದಲ್ಲಿ ಹಾಗೂ ಐರಿ ಸಮಾಜದ ಬಾಂಧವರಿಂದ ಸಂಗ್ರಹವಾದ ದೇಣಿಗೆಯಲ್ಲಿ ಅರಮೇರಿ ಗ್ರಾಮದಲ್ಲಿ ಒಂದೂವರೆ ಏಕರೆ ಜಾಗವನ್ನು ಖರೀದಿಸಲಾಗಿದೆ. ಇದೀಗ ಶಾಸಕರ ನೇತೃತ್ವದಲ್ಲಿ ಭೂಮಿಪೂಜೆಯನ್ನು ನೆರವೇರಿಸಿದ್ದು ಮುಂದಿನ ದಿನಗಳಲ್ಲಿ ಶಾಸಕರ ಅನುದಾನದಲ್ಲಿ ಅಚ್ಚಪಂಡ ಉತ್ತಪ್ಪ ಸಭಾಂಗಣ, ಐರಿ ಸಮಾಜ ಸಮುದಾಯ ಭವನ ಕಟ್ಟಡವನ್ನು ನಿರ್ಮಿಸಲಾಗುವುದು. ಇದಕ್ಕೆ ಸಮಾಜದ ಎಲ್ಲರ ಸಹಕಾರ ಅತ್ಯಂತ ಅಗತ್ಯ ಎಂದರು.
ಅಕ್ಕಚ್ಚಿರ ಮುದ್ದಪ್ಪ, ಐರಿ ಸಮಾಜದ ಮಾಜಿ ಅಧ್ಯಕ್ಷ ಮೇಲತ್ತಂಡ ಗೋಪಾಲ, ತಟ್ಟಂಡ ಪೂಣಚ್ಚ, ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಪೊನ್ನೀರ ಗಗನ್, ಕೊಡಗು ಐರಿ ಸಮಾಜದ ಆಡಳಿತ ಮಂಡಳಿ ಹಾಗೂ ಐರಿ ಸಮಾಜದವರು ಉಪಸ್ಥಿತರಿದ್ದರು.