ಮಡಿಕೇರಿಯಲ್ಲಿ ನಡೆದ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತಗಾಯನ ಕಾರ್ಯಕ್ರಮದಲ್ಲಿ ಕಲಾವಿದ ಬಿ.ಆರ್. ಸತೀಶ್ ಭುವನೇಶ್ವರಿಯ ಚಿತ್ರ ಬಿಡಿಸುವ ಮೂಲಕ ಮೆರುಗು ಹೆಚ್ಚಿಸಿದರು.
- ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
- ಗೀತಗಾಯನ ಕಾರ್ಯಕ್ರಮ
- 53 ಕಲಾವಿದರಿಂದ 33 ಹಾಡುಗಳ ಪ್ರಸ್ತುತಿ
ಭಾರತದಲ್ಲಿರುವವರೆಲ್ಲರೂ ಹೇಗೆ ಭಾರತೀಯರೋ ಹಾಗೇ ಕರ್ನಾಟಕದಲ್ಲಿರುವವರೆಲ್ಲರೂ ಕನ್ನಡಿಗರೇ ಆಗಿದ್ದಾರೆ ಎಂದು ಮುಳಿಯ ಚಿನ್ನಾಭರಣ ಸಂಸ್ಥೆಯ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಹೇಳಿದರು. ಕೊಡಗು ಪತ್ರಕರ್ತರ ಸಂಘ ಮತ್ತು ಮುಳಿಯ ಚಿನ್ನಾಭರಣಗಳ ಸಂಸ್ಥೆ ವತಿಯಿಂದ ಭಾನುವಾರ ಸಂಜೆ ಇಲ್ಲಿ ಆಯೋಜಿಸಲಾಗಿದ್ದ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಬೆಂಗಳೂರಿನAಥ ರಾಜಧಾನಿಯಲ್ಲಿ ಕನ್ನಡ ಉಳಿಸಿ ಎಂಬ ಕೂಗು ಹೆಚ್ಚಾಗುತ್ತಿರುವಾಗ ಮಡಿಕೇರಿಯಂಥ ಪುಟ್ಟ ನಗರಗಳಲ್ಲಿ ಕನ್ನಡದ ಮಹತ್ವ ಸಾರುವ ಕಾರ್ಯಕ್ರಮಗಳಿಗೆ ಅತ್ಯಧಿಕ ಕನ್ನಡ ಪ್ರೇಮಿಗಳು ಸೇರಿರುವುದು ಹೆಮ್ಮೆ ತಂದಿದೆ. ಕೊಡಗಿನ ಹವಾಗುಣ ಹಾಡುಗಾರರಿಗೆ ಕಷ್ಟಸಾಧ್ಯವಾಗಿದ್ದರೂ ಇಲ್ಲಿ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿರುವುದು ಶ್ಲಾಘನೀಯ. ಕನ್ನಡದ ಹಾಡುಗಳಿಗೆ ಉತ್ತಮ ಸಾಹಿತ್ಯ ಮುಖ್ಯ. ಹೀಗಿರುವಾಗ ಕನ್ನಡದ ಹಳೇ, ಅಪೂರ್ವ ಹಾಡುಗಳನ್ನು ಗೀತಗಾಯನದ ಮೂಲಕ ಪ್ರಸ್ತುತಪಡಿಸಿರುವುದು ಹೆಮ್ಮೆಯ ವಿಚಾರ ಎಂದರು.
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಟಿ. ಅನಿಲ್ ಮಾತನಾಡಿ ಬಹುತೇಕರು ಬಾಲ್ಯದಿಂದಲೇ ಕೇಳಿ ಬೆಳೆದ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತೆಯನ್ನು ಹುಯಿಲಗೋಳ ನಾರಾಯಣವ್ ರಚಿಸಿ 100 ವರ್ಷಗಳು ಸಂಪೂರ್ಣವಾದ ಹಿನ್ನಲೆಯಲ್ಲಿ ಈ ಗೀತೆಯ ಮಹತ್ವವನ್ನು ಸ್ಮರಿಸಿಕೊಳ್ಳಲು ಈ ಗೀತಗಾಯನ ಆಯೋಜಿಸಲಾಗಿದೆ ಎಂದು ಹೇಳಿದರು.
ಹಿರಿಯ ಕಲಾವಿದ ಜಿ. ಚಿದ್ವಿಲಾಸ್ ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲೆಯಲ್ಲಿ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹದ ಕೊರತೆ ಇದೆ ಎನ್ನುವುದನ್ನು ಈ ಕಾರ್ಯಕ್ರಮ ಸುಳ್ಳು ಮಾಡಿದೆ. ಗೀತ ಗಾಯನ ಕಾರ್ಯಕ್ರಮಕ್ಕೆ ಜಿಲ್ಲೆಯಾದ್ಯಂತದಿAದ ಬಂದ ಕನ್ನಡಾಭಿಮಾನಿಗಳ ಅಭಿಮಾನ ಅಭಿನಾಂದನಾರ್ಹ ಎಂದರು.
ಕೊಡಗು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ಸಂಘದ ನಿರ್ದೇಶಕ ರಂಜಿತ್ ಕವಲಪಾರ, ಗಾಯತ್ರಿ ಚೆರಿಯಮನೆ ಸಂಘದ ಸಲಹೆಗಾರರಾದ ಟಿ.ಪಿ. ರಮೇಶ್, ಬಿ.ಜಿ. ಅನಂತಶಯನ, ಖಜಾಂಚಿ ಟಿ.ಕೆ. ಸಂತೋಷ್, ಕ್ಷೇಮಾಭಿವೃದ್ದಿ ಸಮಿತಿ ಅಧ್ಯಕ್ಷ ಜಿ.ವಿ. ರವಿಕುಮಾರ್, ಕುಶಾಲನಗರ ತಾಲೂಕು ಸಂಘದ ಅಧ್ಯಕ್ಷ ವಿಘ್ನೇಶ್ ಭೂತನಕಾಡು, ವಿರಾಜಪೇಟೆ ತಾಲೂಕು ಸಂಘದ ಅಧ್ಯಕ್ಷ ಮುದೋಷ್ ಪೂವಯ್ಯ ಮತ್ತಿತರರು ಇದ್ದರು.
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ 53 ಕಲಾವಿದರು 33 ಹಾಡುಗಳನ್ನು ಸುಮಾರು 4 ಗಂಟೆಗಳ ಕಾಲ ಪ್ರಸ್ತುತಪಡಿಸಿದರು. ಕನ್ನಡ ಹಾಡುಗಳು ಕಲಾಪ್ರೇಮಿಗಳ ಮನಸೂರೆಗೊಂಡವು. ಮೇಘಾ ಭಟ್ ನಿರ್ದೇಶನದಲ್ಲಿ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ಶಿಕ್ಷಕಿಯರ ತಂಡದಿAದ ಪ್ರಾರಂಭಿಕ ಗೀತೆಯಾಗಿ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಮೂಡಿಬಂದಾಗ ಕಲಾಪ್ರೇಮಿಗಳು ಎದ್ದು ನಿಂತು ಶತಮಾನದ ಹಾಡಿಗೆ ಗೌರವ ಸೂಚಿಸಿದರು. ವೇದಿಕೆಯಲ್ಲಿ ಹೆಸರಾಂತ ಕಲಾವಿದ ಬಿ.ಆರ್. ಸತೀಶ್ ಭುವನೇಶ್ವರಿಯ ಚಿತ್ರ ಬಿಡಿಸುವ ಮೂಲಕ ಮೆರುಗು ಹೆಚ್ಚಿಸಿದರು. ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆಯ ಕಲಾವಿದರು ಸೇರಿದಂತೆ ಹಲವು ಕಲಾವಿದರು ತಮ್ಮ ಪ್ರತಿಭೆಯನ್ನು ಇಲ್ಲಿ ಪ್ರದರ್ಶಿಸಿದರು.