ಕಾವೇರಿ ನದಿಯಲ್ಲಿ ನೀರಿನ ಹರಿವು ಕಡಿಮೆ ಆಗಿರುವುದು 
ಕೊಡಗು

ಕೊಡಗಿನಲ್ಲೂ ನೆತ್ತಿ ಸುಡುತ್ತಿದೆ ಬಿರುಬಿಸಿಲು

ಮಡಿಕೇರಿ:
ಕೊಡಗಿನಲ್ಲಿ ಬಿರು ಬೇಸಿಗೆಯ ಅನುಭವ ಆಗುತ್ತಿದೆ. ಬೆಳಗ್ಗೆ 10 ಗಂಟೆಯಿAದಲೇ ಹೊರಗೆ ತಿರುಗಾಡಲು ಆಗದಷ್ಟು ಬಿಸಿಲಿನ ಝಳ ನೆತ್ತಿ ಸುಡುತ್ತಿದೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ ವಾರಾಂತ್ಯದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆಯಾದರೂ ಅಲ್ಲಿಯ ತನಕ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ದಾಟುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಮತ್ತೊಂದು ಕಡೆ ಸೂರ್ಯನ ಶಾಖಕ್ಕೆ ಜೀವನದಿ ಕಾವೇರಿ ಸೇರಿದಂತೆ ಜಿಲ್ಲೆಯ ಜಲಮೂಲಗಳಲ್ಲಿ ವೇಗವಾಗಿ ನೀರಿನ ಹರಿವು ಕ್ಷೀಣಿಸುತ್ತಿದೆ.
ಭಾರತದ ಸ್ಕಾಟ್‌ಲ್ಯಾಂಡ್ ಎಂದೇ ಕರೆಯಲಾಗುವ ಕೊಡಗು ಜಿಲ್ಲೆಯಲ್ಲಿ ಬೇಸಿಗೆಯಲ್ಲಿನ ತಂಪು ವಾತಾವರಣ ಅನುಭವಿಸುವುದಕ್ಕಾಗಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮಾರ್ಚ್ನಿಂದ ಮೇ ಒಳಗಿನ ಅವಧಿಯಲ್ಲಿ ಭೇಟಿ ನೀಡುವುದು ಸಾಮಾನ್ಯ ಬೆಳವಣಿಗೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಪರಿಪಾಠ ಬದಲಾಗಿದೆ. ಬೇಸಿಗೆಯಲ್ಲಿ 30-35 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಮತ್ತು 18-21 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡುಬರುತ್ತಿದ್ದ ಜಿಲ್ಲೆಯಲ್ಲಿ ಈಗ ಬಯಲು ಸೀಮೆಯ ಬೇಸಿಗೆಯ ಅನುಭವ ಆಗುತ್ತಿದೆ.
ಕೊಡಗು ಪಶ್ಚಿಮ ಘಟ್ಟಗಳ ಮಲೆನಾಡು ಪ್ರದೇಶದಲ್ಲಿರುವುದರಿಂದ ಇಲ್ಲಿನ ಹವಾಮಾನ ವರ್ಷವಿಡೀ ಹಿತಕರವಾಗಿ ಇರುತ್ತಿತ್ತು. ಕೊಡಗಿನ ಸರಾಸರಿ ಉಷ್ಣಾಂಶ ಸಾಮಾನ್ಯವಾಗಿ 15 ಡಿಗ್ರಿ ಸೆಲ್ಸಿಯಸ್‌ನಿಂದ 28 ಡಿಗ್ರಿ ಸೆಲ್ಸಿಯಸ್ ನಡುವೆ ದಾಖಲಾಗುತ್ತಿತ್ತಾದರೂ ಋತುಮಾನಕ್ಕೆ ಅನುಗುಣವಾಗಿ ಇದರಲ್ಲಿ ಅಲ್ಪ ಸ್ಚಲ್ಪ ಬದಲಾವಣೆಗಳು ಆಗುತ್ತಿದ್ದರೂ ಸಹಿಸಲು ಸಾಧ್ಯವಾಗದ ಪರಿಸ್ಥಿತಿಯೇನೂ ನಿರ್ಮಾಣ ಆಗುತ್ತಿರಲಿಲ್ಲ.
ಅಕ್ಟೋಬರ್‌ನಿಂದ ಫೆಬ್ರವರಿ ಮಧ್ಯೆ ಚಳಿಗಾಲದಲ್ಲಿ ಗರಿಷ್ಠ ಉಷ್ಣತೆ 24ಡಿಗ್ರಿ ಸೆಲ್ಸಿಯಸ್‌ನಿಂದ 28 ಡಿ.ಸೆ. ತನಕ ಮತ್ತು ಕನಿಷ್ಠ ತಾಪಮಾನ 11 ಡಿ.ಸೆ.ನಿಂದ 15 ಡಿ.ಸೆ. ತನಕ ಇದ್ದರೆ, ಜೂನ್ - ಸೆಪ್ಟೆಂಬರ್ ಮಳೆಗಾಲದ ಅವಧಿಯಲ್ಲಿ ಗರಿಷ್ಠ 22-26 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 17-20 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡುಬರುತ್ತಿತ್ತು. ಮಾರ್ಚ್-ಮೇ ನಡುವಿನ ಬೇಸಿಗೆ ಅವಧಿಯಲ್ಲಿ ಗರಿಷ್ಠ 30-35 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 18-21 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುತ್ತಿತ್ತು.
ಆದರೆ ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯ ತಾಪಮಾನದಲ್ಲಿ ಏರಿಕೆ ಕಂಡು ಬರುತ್ತಿದೆ. ಈ ವರ್ಷವಂತೂ ಇದು ಮತ್ತಷ್ಟು ಹೆಚ್ಚಾಗಿರುವುದರ ಅನುಭವ ನೇರವಾಗಿಯೇ ಆಗುತ್ತಿದೆ. ಕೊಡಗಿನಲ್ಲಿ ಭಾಗಮಂಡಲ, ತಲಕಾವೇರಿ, ಮಡಿಕೇರಿಯಂಥ ಪ್ರದೇಶದಲ್ಲೇ ವಿಪರೀತ ಸೆಖೆ ಇದೆ. ಬಯಲು ಸೀಮೆಗೆ ಹೊಂದಿಕೊAಡಿರುವ ಕುಶಾಲನಗರ, ಸೋಮವಾರಪೇಟೆ ಭಾಗದಲ್ಲಿ ಧಗೆಯ ಪ್ರಮಾಣ ಇನ್ನೂ ಹೆಚ್ಚು ಇದೆ. ವಿರಾಜಪೇಟೆ, ಪೊನ್ನಂಪೇಟೆ ತಾಲೂಕು ವ್ಯಾಪ್ತಿಯಲ್ಲೂ ಸೂರ್ಯನ ಶಾಖಕ್ಕೆ ಮೈ ಸುಡುತ್ತಿದೆ.
ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಏಪ್ರಿಲ್ 18ರಿಂದ ಏ.22ರ ಅವಧಿಯಲ್ಲಿ 37-38 ಡಿಗ್ರಿ ಸೆಲ್ಸಿಯಸ್ ಸರಾಸರಿ ಗರಿಷ್ಠ ತಾಪಮಾನ ಕೊಡಗಿನಲ್ಲಿ ದಾಖಲಾಗಿದ್ದರೆ. ಸರಾಸರಿ ಕನಿಷ್ಠ ತಾಪಮಾನ 23-24 ಡಿಗ್ರಿ ಸೆಲ್ಸಿಯಸ್ ಇತ್ತು. ಏ.22ರಿಂದ ಏ.26ರ ನಡುವಿನ ಅವಧಿಯಲ್ಲಿ ಸರಾಸರಿ ಗರಿಷ್ಠ ತಾಪಮಾನ 36-37 ಡಿಗ್ರಿ ಸೆಲ್ಸಿಯಸ್ ಮತ್ತು ಸರಾಸರಿ ಕನಿಷ್ಠ ತಾಪಮಾನ 23-24 ಡಿಗ್ರಿ ಸೆಲ್ಸಿಯಸ್ ಮುಂದುವರಿಯಲಿರುವ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ವಾರಾಂತ್ಯದಲ್ಲಿ ಮಳೆ ಬರುವ ಮುನ್ಸೂಚನೆ ಇದ್ದು, ಒಂದು ವೇಳೆ ಮಳೆ ಬಂದರೆ ಕನಿಷ್ಠ ಮತ್ತು ಗರಿಷ್ಠ ಉಷ್ಣಾಂಶದಲ್ಲಿ 2-3 ಡಿಗ್ರಿ ಸೆಲ್ಸಿಯಸ್ ಇಳಿಕೆ ಕಾಣುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ನಾಪೋಕ್ಲು ಸುತ್ತಮುತ್ತಲಿನ ಪ್ರದೇಶದಲ್ಲಿ ಈಗಾಗಲೇ ಬೇಸಿಗೆ ಮಳೆ ಆಗಿದೆ. ಹಾಗಾಗಿ ಈ ವ್ಯಾಪ್ತಿಯಲ್ಲಿ ಸುಡುಬಿಸಿಲು ಇಲ್ಲವಾದರೂ ಸೆಖೆಯ ಕಿರಿಕಿರಿಯಿಂದ ಮುಕ್ತಿ ಸಿಕ್ಕಿಲ್ಲ. ಮಡಿಕೇರಿ ಸೇರಿದಂತೆ ಬಹುತೇಕ ಕಡೆಗಳಲ್ಲಿ ಮಧ್ಯಾಹ್ನ ನಂತರ ಮೋಡ ಕವಿದ ವಾತಾವರಣ ಕಾಣಿಸಿಕೊಳ್ಳುತ್ತಿದ್ದು ಸಂಜೆ ನಂತರ ಮಳೆಯ ನಿರೀಕ್ಷೆ ಹುಸಿ ಆಗುತ್ತಿದೆ. ಏ.22ರಿಂದ ಏ.26ರ ನಡುವಿನ ಹವಾಮಾನ ಮುನ್ಸೂಚನೆ ಪ್ರಕಾರ ತುಂತುರುವಿನಿAದ ಸಾಧಾರಣ ಮಳೆ ಬರುವ ಬಗ್ಗೆಯೂ ಮಾಹಿತಿ ನೀಡಲಾಗಿದೆ.
ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದಂತೆಯೇ ಜಿಲ್ಲೆಯ ಜಲಮೂಲಗಳಲ್ಲಿ ನೀರಿನ ಹರಿವು ವೇಗವಾಗಿ ಕ್ಷೀಣವಾಗುತ್ತಿದೆ. ಕಾವೇರಿ ಸೇರಿದಂತೆ ಪ್ರಮುಖ ನದಿಗಳಲ್ಲಿ ನೀರು ಈಗಾಗಲೇ ತಳ ಸೇರಿದೆ. ಮಡಿಕೇರಿ, ಕುಶಾಲನಗರ, ವಿರಾಜಪೇಟೆ, ಸೋಮವಾರಪೇಟೆ ಪಟ್ಟಣಗಳು ಕುಡಿಯುವ ನೀರಿಗಾಗಿ ಬಹುತೇಕ ನದಿ ನೀರನ್ನೇ ಅವಲಂಬಿಸಿವೆ. ಅದರಲ್ಲೂ ಜಿಲ್ಲೆಯ ದೊಡ್ಡ ಪಟ್ಟಣ ಕುಶಾಲನಗರಕ್ಕೆ ಕಾವೇರಿ ನದಿಯೇ ಪ್ರಮುಖ ನೀರಿನ ಮೂಲ. ಹಾಗಾಗಿ ನದಿಗಳಲ್ಲಿ ನೀರಿನ ಹರಿವು ಕ್ಷೀಣವಾದರೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ನದಿ ದಂಡೆಗಳಲ್ಲಿ ಇರುವ ತೋಟಗಳಲ್ಲಿ ಬಿಸಿಲಿನಿಂದ ಕಾಫಿ ಗಿಡಗಳನ್ನು ಉಳಿಸಿಕೊಳ್ಳಲು ನದಿ ನೀರಿನ ಬಳಕೆ ಸಾಮಾನ್ಯವಾಗಿದ್ದು, ಇದು ಕೂಡ ನದಿಗಳಲ್ಲಿ ನೀರಿನ ಹರಿವು ಕಡಿಮೆ ಆಗಲು ಕಾರಣವಾಗಿದೆ.
ಬಿಸಿಲು ಹೆಚ್ಚಾದರೆ ಕೃಷಿಕರೂ ಸಮಸ್ಯೆ ಎದುರಿಸಬೇಕಾಗುತ್ತದೆ. ಮಳೆಯಿಲ್ಲದ ಕಾರಣ ಮಣ್ಣಿನ ತೇವಾಂಶದ ನಷ್ಟ ಹೆಚ್ಚಾಗುತ್ತದೆ. ನೀರಿನ ಒತ್ತಡ ತಪ್ಪಿಸಲು ಸರಿಯಾದ ಅಂತರದಲ್ಲಿ ನೀರಾವರಿ ಅತ್ಯಗತ್ಯ ಎನ್ನುವ ಸಲಹೆ ಕೊಡುತ್ತಾರೆ ಕೃಷಿ ತಜ್ಞರು. ಸಾವಯವ ವಸ್ತುಗಳೊಂದಿಗೆ ಮಲ್ಚಿಂಗ್ (ಎಲೆಗಳು, ಒಣಹುಲ್ಲು, ಒಣಗಿದ ಹುಲ್ಲು) ಬಳಕೆ ಮಾಡುವುದರಿಂದ ಮಣ್ಣಿನ ತೇವಾಂಶ ಉಳಿಸಿಕೊಳ್ಳಲು ಮತ್ತು ಆವಿಯಾಗುವಿಕೆಯನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಸಮರ್ಥ ನೀರಿನ ನಿರ್ವಹಣೆಗಾಗಿ ಹನಿ ಮತ್ತು ತುಂತುರು ನೀರಾವರಿಯನ್ನು ತಜ್ಞರು ಶಿಫಾರಸ್ಸು ಮಾಡುತ್ತಾರೆ.
ಬಿಸಿಲಿನ ತಾಪ ಹೆಚ್ಚಾಗಿರುವ ಸಂದರ್ಭದಲ್ಲಿ ರೋಗಾಣುಗಳು ಹೆಚ್ಚು ಕ್ರಿಯಾಶೀಲವಾಗಿದ್ದು, ಕಾಯಿಲೆಗಳು ಹರಡುವ ಸಾಧ್ಯತೆ ಹೆಚ್ಚು. ಹಾಗಾಗಿ ಮಕ್ಕಳು, ವಯಸ್ಸಾದವರ ಬಗ್ಗೆ ಜಾಗÊತಿ ಅಗತ್ಯ ಎನ್ನುತ್ತಾರೆ ವೈದ್ಯರು. ಸಾಂಕ್ರಾಮಿಕ ರೋಗಗಳ ಹಾವಳಿಯೂ ಈ ಸಂದರ್ಭದಲ್ಲಿ ಜಾಸ್ತಿ. ಕಾಲರಾ, ಟೈಫಾಯ್ಡ್, ಕಣ್ಣಿನ ತೊಂದರೆಗಳು, ಚಿಕನ್ ಫಾಕ್ಸ್, ಚರ್ಮ ಸಮಸ್ಯೆಗಳು, ವಾಂತಿ ಭೇದಿ, ನಿರ್ಜಲೀಕರಣ ಮತ್ತಿತರ ಸಮಸ್ಯೆಗಳು ಕಂಡುಬರುವುದರಿAದ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಅಗತ್ಯ ಎನ್ನುವ ಸಲಹೆ ನೀಡುತ್ತಾರೆ.
"

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಈ ವಾರದ ಮುನ್ಸೂಚನೆಯಂತೆ ಕೊಡಗು ಜಿಲ್ಲೆಯಲ್ಲಿ ಏ.22ರಿಂದ ಏ.26ರ ನಡುವಿನ ಅವಧಿಯಲ್ಲಿ ಸರಾಸರಿ ಗರಿಷ್ಠ ತಾಪಮಾನ 36-37 ಡಿಗ್ರಿ ಸೆಲ್ಸಿಯಸ್ ಮತ್ತು ಸರಾಸರಿ ಕನಿಷ್ಠ ತಾಪಮಾನ 23-24 ಡಿಗ್ರಿ ಸೆಲ್ಸಿಯಸ್ ಇರಲಿದೆ. ತುಂತುರುವಿನಿAದ ಸಾಧಾರಣ ಮಳೆ ಬರುವ ಸಾಧ್ಯತೆ ಇದೆ. ಬಿಸಿ ಮತ್ತು ಹೆಚ್ಚಾಗಿ ಶುಷ್ಕ ಹವಾಮಾನ ಕಂಡುಬರಲಿದೆ. ಈ ಅವಧಿಯಲ್ಲಿ ಬೆಳೆಗಳಿಗೆ ನೀರುಣಿಸಬೇಕು. ಜಾನುವಾರುಗಳಿಗೆ ನೀರು ಮತ್ತು ನೆರಳು ಖಚಿತಪಡಿಸಿಕೊಳ್ಳಬೇಕು.

"

ಬೇಸಿಗೆ ಈ ಬಾರಿ ಹೆಚ್ಚಿದ್ದು, ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗದಂತೆ ಎಚ್ಚರವಹಿಸಬೇಕು. ಕುಡಿಯುವ ನೀರು ಪೂರೈಕೆಯ ಮೂಲಗಳಲ್ಲಿನ ನೀರಿನ ಲಭ್ಯತೆಯ ಬಗ್ಗೆ ಮಾಹಿತಿ ಹೊಂದಬೇಕು. ಅಗತ್ಯವಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಸಿದ್ಧತೆ ಮಾಡಿಕೊಳ್ಳಬೇಕು. ಜಿಲ್ಲೆಯ 40 ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಮಾಹಿತಿ ಇದ್ದು, ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎಸ್.ಜೆ. ಸೋಮಶೇಖರ್, ಕೊಡಗು ಜಿಲ್ಲಾಧಿಕಾರಿ