ಒಣಗುತ್ತಿರುವ ಕಾಫಿ ಗಿಡಗಳನ್ನು ಉಳಿಸಿಕೊಳ್ಳಲು ಕೃತಕ ನೀರಾವರಿ ಮೊರೆ ಹೋಗಿರುವ ರೈತರು 
ಕೊಡಗು

ಕಾಫಿನಾಡು ಕೊಡಗಿಗೆ ವರುಣನ ಮುನಿಸು

ಮಡಿಕೇರಿ:
ಮುಂಗಾರು ಪೂರ್ವ ಮಳೆ ಕೈಕೊಟ್ಟಿರುವುದರಿಂದ ಈ ಬಾರಿ ಕೊಡಗಿನಲ್ಲೂ ಸಾಮಾನ್ಯಕ್ಕಿಂತಲೂ ಕಡಿಮೆ ಮಳೆ ಆಗಿದೆ. ಏಪ್ರಿಲ್ ತನಕದ ಅವಧಿಯಲ್ಲಿ ಸುಮಾರು ಶೇ.40ರಿಂದ 54ರಷ್ಟು ಪ್ರಮಾಣದಲ್ಲಿ ಮಳೆಯ ಕೊರತೆ ಆಗಿದೆ. ಇದರ ಪರಿಣಾಮವಾಗಿ ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ನೀರಿನ ಸಂಗ್ರಹದಲ್ಲಿ ಕುಸಿತ ಕಂಡುಬರುತ್ತಿದೆ.
ಕೊಡಗಿನಲ್ಲಿ ಸಾಮಾನ್ಯವಾಗಿ ಬೇಸಿಗೆ ಮಳೆ ಮತ್ತು ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿಯುವ ಮೂಲಕ ಆಹ್ಲಾದಕರ ವಾತಾವರಣ ನಿರ್ಮಾಣಕ್ಕೆ ಕಾರಣವಾಗುತ್ತಿತ್ತು. ಕಳೆದ ವರ್ಷವೂ ಜನವರಿಯಿಂದಲೇ ಆಗಾಗ್ಗೆ ಮಳೆ ಬರುತ್ತಿದ್ದ ಕಾರಣ ಬೇಸಿಗೆಯ ಅನುಭವ ಈ ವರ್ಷದಷ್ಟು ದೊಡ್ಡ ಮಟ್ಟದಲ್ಲಿ ಆಗಿರಲಿಲ್ಲ. ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಬಂದಿದ್ದ ಮುಂಗಾರು ಪೂರ್ವ ಮಳೆ ನದಿಗಳಲ್ಲಿ ನೀರಿನ ಹರಿವಿನ ಪ್ರಮಾಣ ಉತ್ತಮ ಮಟ್ಟದಲ್ಲಿ ಇರುವಂತೆ ಕಾಪಾಡಿಕೊಳ್ಳಲು ಸಹಕಾರಿ ಆಗಿತ್ತು. ವಾತಾವರಣವೂ ಉತ್ತಮವಾಗಿಯೇ ಇತ್ತು.
ಆದರೆ ಈ ವರ್ಷ ಪರಿಸ್ಥಿತಿ ಉಲ್ಟಾ ಆಗಿದೆ. ಬೇಸಿಗೆ ಮಳೆ ಮತ್ತು ಮುಂಗಾರು ಪೂರ್ವ ಮಳೆಯ ತೀವ್ರ ಕೊರತೆ ಕಂಡು ಬರುತ್ತಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮತ್ತು ಹವಾಮಾನ ಇಲಾಖೆ ಮಾಹಿತಿಗಳ ಪ್ರಕಾರ ಈ ವರ್ಷ ಕೊಡಗಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಜ. 1ರಿಂದ ಮೇ 12ರ ನಡುವಿನ ಅವಧಿಯಲ್ಲಿ ವಾಡಿಕೆಯ 158.2 ಮಿಮೀ ಮಳೆಯಾಗಬೇಕಿದ್ದಲ್ಲಿ 120.5 ಮಿಮೀ ಮಳೆಯಾಗುವ ಮೂಲಕ ಶೇ.24ರಷ್ಟು ಮಳೆಯ ಕೊರತೆ ದಾಖಲಾಗಿದೆ.
ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ಜಿಲ್ಲೆಯಾದ್ಯಂತ ಅತ್ಯಂತ ಕಡಿಮೆ ಮಳೆಯಾಗಿದ್ದು, ಹವಾಮಾನವು ಬಹುತೇಕ ಶುಷ್ಕವಾಗಿತ್ತು. ಕೆಲವು ಭಾಗಗಳಲ್ಲಿ ತುಂತುರು ಮಳೆ ದಾಖಲಾಗಿತ್ತು. ಮಾರ್ಚ್ ಮತ್ತು ಏಪ್ರಿಲ್‌ನ ಮುಂಗಾರು ಪೂರ್ವ ಅವಧಿಯಲ್ಲಿ ತೀವ್ರ ಮಳೆಯ ಕೊರತೆ ಕಂಡುಬAದಿದೆ. ಸುಮಾರು ಶೇ. 40 ರಿಂದ 54 ರಷ್ಟು ಕಡಿಮೆ ಮಳೆ ದಾಖಲಾಗಿದೆ. ಕಾಫಿ ಬೆಳೆಗೆ ಅವಶ್ಯಕವಾದ ಹೂಮಳೆಯೂ ಹಲವು ಭಾಗಗಳಲ್ಲಿ ವಿಳಂಬವಾಗಿತ್ತು. ಮೇ ತಿಂಗಳ ಆರಂಭದಲ್ಲಿ ಮಳೆ ಸ್ವಲ್ಪ ಚುರುಕಾಗಿದೆ. ಮೇ 12 ರಂದು ಒಂದೇ ದಿನ ಜಿಲ್ಲೆಯಲ್ಲಿ ಸರಾಸರಿ 6.4 ಮಿಮೀ ಮಳೆಯಾಗಿದೆ.
ಪೊನ್ನಂಪೇಟೆ ತಾಲೂಕಿನಲ್ಲಿ ಅತೀ ಹೆಚ್ಚು ಎಂದರೆ ಶೇ. 56ರಷ್ಟು ಮಳೆಯ ಕೊರತೆ ಕಂಡು ಬಂದಿದ್ದರೆ, ಕುಶಾಲನಗರ ತಾಲೂಕಿನಲ್ಲಿ ಶೇ. 26, ಸೋಮವಾರಪೇಟೆ ಶೇ.25, ವಿರಾಜಪೇಟೆ ಶೇ. 15 ಹಾಗೂ ಮಡಿಕೇರಿ ತಾಲೂಕಿನಲ್ಲಿ ಶೇ. 9ರಷ್ಟು ಮಳೆಯ ಕೊರತೆ ದಾಖಲಾಗಿದೆ. ಬಾಳೆಲೆ ಹೋಬಳಿ ಜಿಲ್ಲೆಯಲ್ಲೇ ಅತಿ ಹೆಚ್ಚು ಮಳೆ ಕೊರತೆ ಎದುರಿಸುತ್ತಿರುವ ಪ್ರದೇಶವಾಗಿ ಮಾರ್ಚ್-ಏಪ್ರಿಲ್ ಅವಧಿಯಲ್ಲಿ ದಾಖಲಾಗಿದೆ.
ಜಿಲ್ಲೆಯಲ್ಲಿ ಈ ವರ್ಷದ ಆರಂಭಿಕ ತಿಂಗಳುಗಳಲ್ಲಿ ಕಂಡುಬAದ ಮಳೆ ಕೊರತೆಯಿಂದ ಸಾಕಷ್ಟು ಪರಿಣಾಮಗಳು ಆಗಿವೆ. ಕೊಡಗಿನ ಜೀವನಾಡಿ ಎನಿಸಿರುವ ಕಾಫಿ ಬೆಳೆ ಈ ಬಾರಿ ಮಳೆ ಕೊರತೆಯಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಕಾಫಿ ಗಿಡಗಳು ಹೂ ಬಿಡಲು ಫೆಬ್ರವರಿ ಅಥವಾ ಮಾರ್ಚ್ನಲ್ಲಿ ನಿರ್ದಿಷ್ಟ ಪ್ರಮಾಣದ ಮಳೆಯ ಅಗತ್ಯವಿರುತ್ತದೆ. ಆದರೆ ಸಕಾಲದಲ್ಲಿ ಮಳೆಯಾಗದ ಕಾರಣ ಕಾಫಿ ಕಾಯಿ ಕಟ್ಟುವ ಪ್ರಕ್ರಿಯೆಗೆ ಹಿನ್ನಡೆಯಾಗಿದ್ದು, ಮುಂದಿನ ಹಂಗಾಮಿನಲ್ಲಿ ಇಳುವರಿ ಗಣನೀಯವಾಗಿ ಕಡಿಮೆಯಾಗುವ ಆತಂಕವಿದೆ. ಮಳೆಯಿಲ್ಲದೆ ಉಷ್ಣಾಂಶ ಹೆಚ್ಚಾದ ಕಾರಣ, ಹಬ್ಬಿರುವ ಕಾಳುಮೆಣಸಿನ ಬಳ್ಳಿಗಳು ಬಾಡಿ ಒಣಗುತ್ತಿವೆ.
ಜಿಲ್ಲೆಯಲ್ಲಿ ಜೀವನದಿ ಕಾವೇರಿ ಸೇರಿದಂತೆ ಪ್ರಮುಖ ಜಲಮೂಲಗಳಲ್ಲಿ ನೀರಿನ ಹರಿವು ಕ್ಷೀಣಿಸಿದೆ. ಭಾಗಮಂಡಲ ಮತ್ತು ಇತರ ಪ್ರದೇಶಗಳಲ್ಲಿ ನದಿಯಲ್ಲಿ ನೀರಿನ ಮಟ್ಟ ಕುಸಿದಿದೆ. ಅಂತರ್ಜಲ ಮಟ್ಟವೂ ಕೆಳಕ್ಕೆ ಇಳಿದಿದೆ. ಮಳೆ ಕೊರತೆಯಿಂದ ಅರಣ್ಯದ ಒಳಗಿರುವ ಕೆರೆಗಳು ಬತ್ತಿ ಹೋಗಿವೆ.
ಆನೆಗಳು ಮತ್ತು ಇತರ ಪ್ರಾಣಿಗಳು ನೀರು ಮತ್ತು ಆಹಾರಕ್ಕಾಗಿ ಕಾಫಿ ತೋಟಗಳಿಗೆ ಹಾಗೂ ಜನವಸತಿ ಪ್ರದೇಶಗಳಿಗೆ ದಾಳಿ ಇಡುತ್ತಿವೆ. ಇದರಿಂದಾಗಿ ರೈತರ ಆಸ್ತಿಪಾಸ್ತಿ ಹಾನಿಯಾಗುವುದರ ಜತೆಗೆ ಪ್ರಾಣಹಾನಿಯ ಅಪಾಯವೂ ಹೆಚ್ಚಾಗಿದೆ.
ಸಾಮಾನ್ಯವಾಗಿ ತಂಪಾಗಿರುವ ಮಡಿಕೇರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಬಾರಿ ಗರಿಷ್ಠ ತಾಪಮಾನ ದಾಖಲಾಗಿದೆ. ಕೊಡಗಿನ ಉಷ್ಣಾಂಶ ಈ ಬಾರಿ ಕೆಲವು 32 ಡಿಗ್ರಿ ಸೆಲ್ಸಿಯಸ್‌ನಿಂದ 35 ಡಿಗ್ರಿ ಸೆಲ್ಸಿಯಸ್ ತನಕ ತಲುಪಿದ್ದು, ಮಲೆನಾಡಿನ ಜನತೆಗೆ ಬಯಲು ಸೀಮೆಯ ಅನುಭವವಾಗುತ್ತಿದೆ. ಇದು ಪರಿಸರ ಪ್ರೇಮಿಗಳಲ್ಲೂ ಆತಂಕಕ್ಕೆ ಕಾರಣವಾಗಿದೆ. ಕಳೆದ ವರ್ಷಗಳಲ್ಲಿ ಮಳೆ ಚೆನ್ನಾಗಿ ಸುರಿದಿದ್ದರೂ, ಈ ವರ್ಷದ ಆರಂಭದ ಸತತ ಬರಗಾಲದಂತಹ ಸ್ಥಿತಿಯಿಂದಾಗಿ ಬೋರ್‌ವೆಲ್‌ಗಳಲ್ಲಿ ನೀರು ಕಡಿಮೆಯಾಗಿದೆ.
ಮಳೆ ಕೊರತೆಯಿಂದಾಗಿ ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನೀರಿನ ಸಂಗ್ರಹ ಪ್ರಮಾಣ ಕಡಿಮೆ ಇದೆ. ಬುಧವಾರದ (ಮೇ 13) ಮಾಹಿತಿ ಪ್ರಕಾರ 2,859 ಅಡಿ ಎತ್ತರದ ಅಣೆಕಟ್ಟೆಯಲ್ಲಿ 2,824.37 ಅಡಿ ನೀರಿದೆ. ಕಳೆದ ವರ್ಷ ಇದೇ ದಿನ 2,831.60 ಅಡಿಗಳಷ್ಟು ನೀರು ಇತ್ತು. 8.5 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 2.300 ಟಿಎಂಸಿ ಬಳಕೆಯೋಗ್ಯ ನೀರಿದೆ. ಕಳೆದ ವರ್ಷ ಇದೇ ದಿನ 2.669 ಟಿಎಂಸಿಗಳಷ್ಟು ನೀರಿನ ಸಂಗ್ರಹ ಇತ್ತು. 90 ಕ್ಯೂಸೆಕ್ ನೀರಿನ ಒಳಹರಿವು ಇದ್ದು, ನದಿಗೆ 500 ಕ್ಯೂಸೆಕ್ ನೀರು ಕುಡಿಯುವ ಉದ್ದೇಶಕ್ಕಾಗಿ ಹರಿಸಲಾಗುತ್ತಿದೆ. ಕಳೆದ ವರ್ಷ 115 ಕ್ಯೂಸೆಕ್ ನೀರಿನ ಒಳಹರಿವು ಇದ್ದರೆ, ನದಿಗೆ 115 ಕ್ಯೂಸೆಕ್ ನೀರು ಬಿಡಲಾಗುತ್ತಿತ್ತು.
"

ಈ ಬಾರಿ ಕೊಡಗಿನಲ್ಲಿ ಜನವರಿಯಿಂದ ಇಲ್ಲಿಯ ತನಕ ಶೇ.50ಕ್ಕಿಂತಲೂ ಕಡಿಮೆ ಮಳೆ ಆಗಿದೆ. ಆದರೂ ಮಳೆಗಾಲದ ಅವಧಿಯಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಹಾಗಾಗಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಈ ಹಿಂದಿನAತೆಯೇ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಪ್ರವಾಹ ಪೀಡಿತ ಹಾಗೂ ಭೂಕುಸಿತ ಪ್ರದೇಶ ಸೇರಿದಂತೆ ಸೂಕ್ಷ್ಮ ಪ್ರದೇಶಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಅಂತಹ ಪ್ರದೇಶಗಳಲ್ಲಿ ಹೆಚ್ಚಿನ ಎಚ್ಚರವಹಿಸುವಂತೆಯೂ ಸೂಚಿಸಲಾಗಿದೆ.

— ಎಸ್.ಜೆ. ಸೋಮಶೇಖರ್, ಕೊಡಗು ಜಿಲ್ಲಾಧಿಕಾರಿ
"

ಕೊಡಗು ಜಿಲ್ಲೆಯಲ್ಲಿ ಈ ಬಾರಿ ಅತೀ ಕಡಿಮೆ ಮಳೆಯಾಗಿದೆ. ಒಂದು ರೀತಿ ಬಿಸಿಲಿನ ವಾತಾವರಣ ಮುಂದುವರೆದಿದ್ದು, ಒಂದು ಕಡೆ ಅನಾವೃಷ್ಠಿ, ಮುಂದಿನ ದಿನಗಳಲ್ಲಿ ಅತೀವೃಷ್ಠಿಯೂ ಸಂಭವಿಸಬಹುದು. ಹೀಗೆ ಎರಡರ ಬಗ್ಗೆಯೂ ಸಹ ಅವಲೋಕನ ಮಾಡಬೇಕಿದೆ. ತಾಲೂಕು ಮಟ್ಟದಲ್ಲಿ ಶಾಸಕರ ನೇತೃತ್ವದಲ್ಲಿ ಕಾರ್ಯಪಡೆ ಸಮಿತಿ ಸಭೆ ನಡೆಸಿ ಸಲಹೆ, ಮಾರ್ಗದರ್ಶನ ಪಡೆಯುವಂತೆ ಸಂಬAಧಿಸಿದವರಿಗೆ ಸೂಚಿಸಲಾಗಿದೆ.

— ಆನಂದ ಪ್ರಕಾಶ್ ಮೀನಾ, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ
"

ಭಾರತೀಯ ಹವಾಮಾನ ಇಲಾಖೆಯ ಮೇ 13ರಿಂದ ಮೇ 17ರ ತನಕದ ಹವಾಮಾನ ಮುನ್ಸೂಚನೆ ಪ್ರಕಾರ ಕೊಡಗು ಜಿಲ್ಲೆಯಲ್ಲಿ ತುಂತುರು ಮಳೆ ಬರುವ ಸಾಧ್ಯತೆ ಇದೆ. 35-36 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗುವ ನಿರೀಕ್ಷೆ ಇದ್ದು, 22-23 ಡಿಗ್ರಿ ಸೆಲ್ಸಿಯಸ್ ತನಕ ಕನಿಷ್ಠ ಉಷ್ಣಾಂಶ ಇರಲಿದೆ. ಕಡಿಮೆ ಮಳೆ ಮತ್ತು ಹೆಚ್ವಿನ ಆರ್ದ್ರತೆಯೊಂದಿಗೆ ಮೋಡ ಕವಿದ ವಾತಾವರಣ ಕಾಫಿ ಬೆಳೆಯಲ್ಲಿ ರೋಗಗಳಿಗೆ ಅನುಕೂಲಕರವಾಗಿರುವುದು ಆತಂಕಕಾರಿಯಾಗಿದೆ.

— ಡಾ. ಜಿ.ವಿ. ಸುಮಂತ್ ಕುಮಾರ್, ತಾಂತ್ರಿಕ ಅಧಿಕಾರಿ, ಕೃಷಿ ಹವಾಮಾನ ಕ್ಷೇತ್ರ ವಿಭಾಗ, ನಾಗನಹಳ್ಳಿ, ಮೈಸೂರು