ಚೇರಂಬಾಣೆಯ ಕಾರುಗುಂದ ಗೌಡ ಸಮಾಜದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಗೌಡ ಮಹಿಳಾ ಒಕ್ಕೂಟದ ಮೊದಲ ವಾರ್ಷಿಕೋತ್ಸವ ಹಾಗೂ ವಿಶ್ವ ಮಹಿಳಾ ದಿನಾಚರಣೆಯನ್ನು ನಿವೃತ್ತ ಪ್ರಾಧ್ಯಾಪಕಿ ಸುಳ್ಯಕೋಡಿ ಶಿವದೇವಿ ಅವನೀಶ್ ಚಂದ್ರ ಉದ್ಘಾಟಿಸಿದರು. ಮಿಲನಾ ಭರತ್, ನೆರವನ ರೇವತಿ ರಮೇಶ್ ಇತರರು ಇದ್ದರು.
ನಾಪೋಕ್ಲು: ಇಂದು ಮಹಿಳೆ ಕುಟುಂಬ ನಿರ್ವಹಣೆ ಜತೆಗೆ ಔದ್ಯೋಗಿಕ ರಂಗದಲ್ಲಿಯೂ ತನ್ನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾಳೆ. ತಾಯಿಯಾಗಿ, ಸಂಸ್ಕೃತಿ ರಕ್ಷಕಿಯಾಗಿ, ಉದ್ಯೋಗಿಯಾಗಿಯೂ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾಳೆ ಎಂದು ಚೆಟ್ಟಿ ಮಾನಿ ಗ್ರಾಮದ ನಿವೃತ್ತ ಪ್ರಾಧ್ಯಾಪಕಿ ಸುಳ್ಯಕೋಡಿ ಶಿವದೇವಿ ಅವನಿಶ್ಚಂದ್ರ ಅಭಿಪ್ರಾಯಪಟ್ಟರು.
ಚೇರಂಬಾಣೆಯ ಕಾರುಗುಂದ ಗೌಡ ಸಮಾಜದಲ್ಲಿ ಭಾನುವಾರ ಆಯೋಜಿಸಿದ್ದ ಗೌಡ ಮಹಿಳಾ ಒಕ್ಕೂಟದ ಮೊದಲ ವಾರ್ಷಿಕೋತ್ಸವ ಹಾಗೂ ವಿಶ್ವ ಮಹಿಳಾ ದಿನಾಚರಣೆಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರ ತ್ಯಾಗಮಯಿ ಜೀವನ ಸ್ಮರಣೀಯ ಎಂದು ತಿಳಿಸಿದರು.
ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನಾ ಭರತ್ ಒಕ್ಕೂಟದ ಲೋಗೋ ಬಿಡುಗಡೆಗೊಳಿಸಿ ಮಾತನಾಡಿ, ಭಾಷೆ ಒಂದು ಜನಾಂಗದ ಅಸ್ತಿತ್ವಕ್ಕೆ ಮೂಲವಾಗಿದೆ. ಭಾಷೆ ಬಿಟ್ಟರೆ ಸಂಸ್ಕೃತಿ ನಾಶವಾದಂತೆ. ಗೌಡ ಸಮಾಜ ಅರೆಭಾಷೆ ಮತ್ತು ಸಂಸ್ಕೃತಿಯನ್ನು ಕಾಪಾಡಿಕೊಂಡು ಬರುತ್ತಿದೆ ಎಂದು ತಿಳಿಸಿದರು.
ಕೊಡಗು ದಕ್ಷಿಣ ಕನ್ನಡ ಒಕ್ಕಲಿಗ ಗೌಡ ಮಹಿಳಾ ಒಕ್ಕೂಟದ ಸ್ಥಾಪಕ ಅಧ್ಯಕ್ಷೆ ಪುದಿಯ ನೆರವನ ರೇವತಿ ರಮೇಶ್ ಮಾತನಾಡಿ, ಮಗಳಾಗಿ, ಅಮ್ಮನಾಗಿ, ಗುರುವಾಗಿ ಎಲ್ಲ ರಂಗದಲ್ಲೂ ಮಹಿಳೆ ಅಪ್ರತಿಮ ಸೇವೆ ಸಲ್ಲಿಸುತ್ತಿದ್ದಾಳೆ. ಮೂಢನಂಬಿಕೆ ಹಾಗೂ ಗೊಡ್ಡು ಸಂಪ್ರದಾಯವನ್ನು ಮೆಟ್ಟಿನಿಂತು ಸಮಾಜದ ಉನ್ನತಿಗೆ ಎಲ್ಲರೂ ಕೈಜೋಡಿಸಬೇಕಿದೆ ಎಂದು ತಿಳಿಸಿದರು.
ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಡ್ಲೆರ ತುಳಸಿ ಮೋಹನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಂದು ವರ್ಷದ ಅವಧಿಯಲ್ಲಿ ಸಂಘದಿಂದ ಸುಮಾರು 42 ವಿವಿಧ ಕಾರ್ಯಕ್ರಮಗಳನ್ನು ಪೂರೈಸಿದ್ದೇವೆ. ಈ ಶ್ರೇಯಸಿಗೆ ಎಲ್ಲರ ಪ್ರೋತ್ಸಾಹ ಸಹಕಾರವೇ ಮುಖ್ಯ ಕಾರಣ ಎಂದು ತಿಳಿಸಿದರು.
ಕರಕುಶಲ ವಸ್ತು ಪ್ರದರ್ಶನವನ್ನು ಕುಶಲನಗರದ ಗೌಡ ಮಹಿಳಾ ಸ್ವ ಸಹಾಯ ಸಂಘದ ಅಧ್ಯಕ್ಷೆ ಕಲಾ ಆನಂದ್ ಕರಂದ್ಲಾಜೆ ಉದ್ಘಾಟಿಸಿದರು. ಮಾರಾಟ ಮಳಿಗೆಗಳನ್ನು ಗೌಡ ಮಹಿಳಾ ಒಕ್ಕೂಟದ ಉಪಾಧ್ಯಕ್ಷೆ ಲತಾ ಮೊಣ್ಣಪ್ಪ ಉದ್ಘಾಟಿಸಿದರು. ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆಯನ್ನು ಕಾರುಗುಂದ ಗೌಡ ಸಮಾಜದ ನಿರ್ದೇಶಕಿ ಹೇಮಲತಾ ತಾರೇಂದ್ರ ಉದ್ಘಾಟಿಸಿದರು. ಈ ಸಂದರ್ಭ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಗೌಡ ಮಹಿಳಾ ಒಕ್ಕೂಟದ ಉಪಾಧ್ಯಕ್ಷರಾದ ಹೊಸೊಕ್ಲು ಲತಾ ಮೊಣ್ಣಪ್ಪ, ಕೂರನ ಸುಶೀಲಾ ಅಪ್ಪಾಜಿ, ಬೆಂಗಳೂರಿನ ಗೌಡ ಯುವ ವೇದಿಕೆಯ ಅಧ್ಯಕ್ಷೆ ತಳೂರು ಮಮತಾ ಹಿತೇಶ್ ಇತರರು ಇದ್ದರು.