ನಾಪೋಕ್ಲು ಕೊಡವ ಸಮಾಜದ ಮೊಮ್ಮಕ್ಕಡ ಪರಿಷತ್ ವತಿಯಿಂದ ಭಾನುವಾರ ಕೊಡವ ಸಮಾಜದಿಂದ ಆಯೋಜಿಸಿದ್ದ ಪೊಮ್ಮಕ್ಕಳ ನಾಳ್ ಕಾರ್ಯಕ್ರಮ ಆಯೋಜಿಸಲಾಗಿತ್ತು.  
ಕೊಡಗು

ಸಮಾಜ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅಪಾರ

ಪ್ರಮುಖ ಮುಖ್ಯಾಂಶಗಳು

  • ಮುಂಡಂಡ ಮೈನಾ ಮುತ್ತಮ್ಮ ಅಭಿಮತ
  • ಪೊಮ್ಮಕ್ಕಳ ನಾಳ್ ಕಾರ್ಯಕ್ರಮ
ನಾಪೋಕ್ಲು: ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾದದು ಎಂದು ಮೈಸೂರಿನ ಪ್ರಾದೇಶಿಕ ಭವಿಷ್ಯ ನಿಧಿ ಕಾರ್ಯಾಲಯದ ಮುಂಡಂಡ ಮೈನಾ ಮುತ್ತಮ್ಮ ಹೇಳಿದರು.
ಇಲ್ಲಿನ ಕೊಡವ ಸಮಾಜದ ಮೊಮ್ಮಕ್ಕಡ ಪರಿಷತ್ ವತಿಯಿಂದ ಭಾನುವಾರ ಕೊಡವ ಸಮಾಜದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೊಮ್ಮಕ್ಕಳ ನಾಳ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರು ಮಕ್ಕಳಿಗೆ ಸಂಸ್ಕೃತಿಯನ್ನು ಕಲಿಸಿ ಯುವಸಮೂಹವನ್ನು ಎಚ್ಚರಿಕೆಯಿಂದ ಬೆಳೆಸಬೇಕು. ಮಕ್ಕಳಿಗೆ ಉತ್ತಮ ಕೌಶಲಗಳನ್ನು ಕಲಿಸಲು ಮಹಿಳೆಯರು ಮುಂದಾಗಬೇಕು ಎಂದರು.
ಹೆಣ್ಣು ಮಕ್ಕಳು ಹೆಚ್ಚು ಓದುತ್ತಾರೆ. ಅವರ ಓದಿನ ಬಗ್ಗೆ ಗಮನ ಹರಿಸಬೇಕು. ಗಂಡು ಮಕ್ಕಳು ಶಿಕ್ಷಣದತ್ತಲೂ ಗಮನಹರಿಸಬೇಕಾಗಿದೆ. ಇಂದು ಉದ್ಯೋಗ ಅನಿವಾರ್ಯವಾಗಿದ್ದು ಉತ್ತಮ ಶಿಕ್ಷಣದಿಂದ ಮಾತ್ರ ಉದ್ಯೋಗಾವಕಾಶವನ್ನು ಪಡೆದುಕೊಳ್ಳಲು ಸಾಧ್ಯ ಎಂದರು. ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಸಮಾಜದಲ್ಲಿ ಮಹಿಳೆಯರ ಸ್ಥಾನಮಾನದ ಸುಧಾರಣೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದರು.
ಆದರ್ಶ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಹತ್ತು ಹಲವು ಕಟ್ಟುಪಾಡುಗಳನ್ನು ಮೀರಿ ಸಮಾಜ ಸುಧಾರಣೆಗೆ ಪ್ರಯತ್ನಿಸಿದ್ದರು. ಮಹಿಳೆಯರು ಜಾಗೃತರಾಗಿ ಸಮಾಜ ಸುಧಾರಣೆಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಬೇಕು ಎಂದರು.
ರಾಷ್ಟ್ರ ಪ್ರಶಸ್ತಿ ವಿಜೇತೆ ಕೊಟ್ಟು ಕತ್ತಿರ ಯಶೋಧ ಪ್ರಕಾಶ್ ಮಾತನಾಡಿ, ಸಮಾಜದಲ್ಲಿ ಮಹಿಳೆಯರು ವಿವಿಧ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅಂತಹ ಸವಾಲುಗಳನ್ನು ಮೆಟ್ಟಿನಿಂತು ಮಹಿಳೆಯರು ಸಾಧನೆ ಮಾಡಬೇಕಾಗಿದೆ. ಸಂಸಾರವನ್ನು ಸಮತೋಲನದಲ್ಲಿ ಸಾಗಿಸುವ ಜವಾಬ್ದಾರಿ ಮಹಿಳೆಯರದ್ದಾಗಿದೆ. ಸಮಾಜದಲ್ಲಿ ಹತ್ತು ಹಲವು ಸವಾಲುಗಳನ್ನು ಎದುರಿಸುತ್ತಿರುವ ಮಹಿಳೆಯರು ಅವುಗಳನ್ನು ಧನಾತ್ಮಕ ಮನೋಭಾವದಿಂದ ಸ್ವೀಕರಿಸಿ ಮುನ್ನಡೆಯಬೇಕು. ಮಕ್ಕಳ ಪಾಲನೆ, ಪೋಷಣೆ, ಜತೆಗೆ ಉತ್ತಮ ಸಂಸ್ಕೃತಿಯನ್ನು ಕಲಿಸುವ ಜವಾಬ್ದಾರಿ ಮಹಿಳೆಯರದ್ದಾಗಿದೆ. ಉದ್ಯೋಗದಲ್ಲಿರುವ ಮಹಿಳೆಯರು ಔದ್ಯೋಗಿಕ ರಂಗದಲ್ಲಿ ಮಾತ್ರವಲ್ಲದೆ ಸಾಂಸಾರಿಕವಾಗಿ ಜವಾಬ್ದಾರಿಯನ್ನು ಹೊತ್ತು ಸಮಾಜದ ಬೆಳವಣಿಗೆಗೆ ಕಾರಣರಾಗಬೇಕು ಎಂದರು.
ನಿವೃತ್ತ ಬ್ಯಾಂಕ್ ಉದ್ಯೋಗಿ ಮೂವೇರ ಮೀನಾ ಕಾರ್ಯಪ ಮಾತನಾಡಿ, ಮಹಿಳೆಯರು ಸ್ವಂತ ವ್ಯಕ್ತಿತ್ವವನ್ನು ಬಳಸಿಕೊಳ್ಳಬೇಕು. ಮಹಿಳೆ ತಾನು ತನ್ನ ಕುಟುಂಬದ ನಿರ್ವಹಣೆಯನ್ನು ಸರಿಯಾಗಿ ಮಾಡಿದರೆ ಸಮಾಜದ ಸುಧಾರಣೆ ಮಾಡಿದಂತೆ. ಕುಟುಂಬ ನಿರ್ವಹಣೆಯ ಜತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಸಂಸ್ಕಾರ ಸಂಸ್ಕೃತಿಯನ್ನು ನೀಡುವ ಜವಾಬ್ದಾರಿ ಮಹಿಳೆಯರದ್ದು ಎಂದರು.
ನಾಫೋಕ್ಲು ಕೊಡವ ಸಮಾಜ ಪೊಮ್ಮಕಡ ಪರಿಷತ್ ಅಧ್ಯಕ್ಷೆ ಬಾಳೆಯಡ ನಿಶಾ ಮೇದಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಕೊಟ್ಟು ಕತ್ತಿರ ಯಶೋಧ ಪ್ರಕಾಶ್ ಸನ್ಮಾನಿಸಿ ಗೌರವಿಸಲಾಯಿತು.
ಮುಕ್ಕಾಟಿರ ರೇಷ್ಮಾ ಮೋಹನ್, ಬಿದ್ದಾಟಂಡ ಮಮತಾ ಚಿಣ್ಣಪ್ಪ, ಕದ್ದನಿಯಂಡ ವಂದನಾ ಚಿನ್ನಪ್ಪ, ಕಲಿಯಂಡ ಗೀತಾ ಗಿರೀಶ್ ಇತರರು ಇದ್ದರು..