ವಿರಾಜಪೇಟೆ ಪಟ್ಟಣದ ಸೇಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಪ್ರಯುಕ್ತ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು. 
ಕೊಡಗು

ಆರೋಗ್ಯವಂತ ಸಮಾಜಕ್ಕೆ ಸ್ವಯಂ ಸೇವಕರ ಪಾತ್ರ ಅಪಾರ

ಪ್ರಮುಖ ಮುಖ್ಯಾಂಶಗಳು

  • ಸೇಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಅಭಿಪ್ರಾಯ
ವಿರಾಜಪೇಟೆ: ಪಟ್ಟಣದ ಸೇಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಯುವ ರೆಡ್‌ಕ್ರಾಸ್ ಘಟಕದ ವತಿಯಿಂದ ಇತ್ತೀಚೆಗೆ ವಿಶ್ವ ರೆಡ್ ಕ್ರಾಸ್ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಬಾರಿಯ ಮಾನವೀಯತೆಯಲ್ಲಿ ಏಕತೆ ಎಂಬ ವಿಚಾರ ಕುರಿತು ಕಾಲೇಜಿನ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸೇಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಮಾನವೀಯ ಮೌಲ್ಯಗಳನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಆರೋಗ್ಯ ಜಾಗೃತಿ ಮೂಡಿಸುವುದು ರೆಡ್‌ಕ್ರಾಸ್‌ನ ಪ್ರಮುಖ ಉದ್ದೇಶವಾಗಿದ್ದು, ಆರೋಗ್ಯವಂತ ಸಮಾಜ ನಿರ್ಮಿಸಲು ಸ್ವಯಂ ಸೇವಕರ ಪಾತ್ರ ಅಪಾರವಾಗಿದೆ ಎಂದರು. ತುರ್ತು ಸಂದರ್ಭದಲ್ಲಿ ದೇಶಾದ್ಯಂತ ರೆಡ್ ಕ್ರಾಸ್ ಘಟಕದ ಸ್ವಯಂ ಸೇವಕರ ಸಾಮಾಜಿಕ ಕೊಡುಗೆಗಳನ್ನು ಸ್ಮರಿಸಿದರು.
ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ ಅಧಿಕಾರಿ ವಿಲೀನ ಗೋನ್ಸಾಲ್ವೆಸ್ ಮಾತನಾಡಿ, ರೆಡ್‌ಕ್ರಾಸ್ ಘಟಕದ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಆರೋಗ್ಯ ಜಾಗೃತಿ ಮೂಡಿಸಿ ಅವರಿಂದ ಸಮಾಜಕ್ಕೂ ಅರಿವು ಮೂಡಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಹೇಮ ಬಿ ಡಿ, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಶ್ವ ರೆಡ್‌ಕ್ರಾಸ್ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾದ ಚಿತ್ರಕಲಾ ಸ್ಪರ್ಧೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ದ್ವಿತೀಯ ಬಿಸಿಎ ವಿದ್ಯಾರ್ಥಿ ಆರ್.ಯು.ಅಂಜಿತಾ ಪ್ರಥಮ ಸ್ಥಾನ, ಪ್ರಥಮ ಬಿಸಿಎ ವಿದ್ಯಾರ್ಥಿ ಕೆ.ಬಿ.ಅನ್ಫಾಸ್ ದ್ವಿತೀಯ ಸ್ಥಾನ ಹಾಗೂ ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ವೈಶಾಲಿ ತೃತೀಯ ಸ್ಥಾನ ಪಡೆದುಕೊಂಡರು.