ದೇವರಕೊಲ್ಲಿಯ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಉದ್ದೇಶಿತ ಶ್ರೀ ಚಾಮುಂಡೇಶ್ವರಿ ಕಲಾಮಂದಿರಕ್ಕೆ ಭೂಮಿಪೂಜೆ ಸಮಾರಂಭವನ್ನು ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಹೆಚ್.ಟಿ. ಅನಿಲ್ ಉದ್ಘಾಟಿಸಿದರು. ಚೆರಿಯಮನೆ ನರೇಶ್, ಬಿ.ಜೆ. ಯಶೋಧರ, ವಿಮಲ, ಕೆ.ಆರ್. ರಾಜು ಇದ್ದರು.
ಪ್ರಾಚೀನ ಕಾಲದಿಂದಲೂ ನಮ್ಮ ಕಲೆ, ಸಂಸ್ಕೃತಿ ಸಂರಕ್ಷಣೆಯಲ್ಲಿ ದೇವಾಲಯಗಳು ಪ್ರಮುಖ ಪಾತ್ರ ವಹಿಸಿದ್ದರಿಂದ ಭಾರತದಲ್ಲಿ ಆಲಯಗಳು ಕಲೋಪಾಸನ ಕೇಂದ್ರಗಳಾಗಿಯೂ ಕಂಗೊಳಿಸಿವೆ ಎಂದು ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಹೆಚ್.ಟಿ. ಅನಿಲ್ ಹೇಳಿದರು. ಮಡಿಕೇರಿ ಸಮೀಪದ ದೇವರಕೊಲ್ಲಿಯ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಉದ್ದೇಶಿತ ಶ್ರೀ ಚಾಮುಂಡೇಶ್ವರಿ ಕಲಾಮಂದಿರಕ್ಕೆ ಭೂಮಿಪೂಜೆ ಸಮಾರಂಭದಲ್ಲಿ ಪಾಲ್ಗೊಂಡು ಬುಧವಾರ ಮಾತನಾಡಿದರು.
ವಿದೇಶಗಳಲ್ಲಿ ನೆಲಸಿರುವ ಭಾರತೀಯರು ತಮ್ಮ ದೇಶದ ಸಂಸ್ಕೃತಿ, ಆಚಾರ ವಿಚಾರಗಳನ್ನು ಮಕ್ಕಳಿಗೆ ಕಲಿಸುವಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಾರೆ. ವಿದೇಶದ ನೆಲದಲ್ಲಿ ಇರುವವರಿಗೆ ಭಾರತದ ಸಂಸ್ಕೃತಿಯ ಮಹತ್ವದ ಅರಿವಾಗುತ್ತದೆ. ಭಾರತದಲ್ಲಿ ಭಜನೆ, ಹಾಡು, ನೃತ್ಯ, ಯೋಗ, ಧ್ಯಾನಗಳ ಮೂಲಕ ಸಾಂಸ್ಕೃತಿಕ ಕೇಂದ್ರಗಳಾಗಿಯೂ ದೈವಿಕ ಕೇಂದ್ರಗಳು ರೂಪುಗೊಂಡಿವೆ. ಮಕ್ಕಳಿಗೆ ಧಾರ್ಮಿಕ ಶಿಕ್ಷಣ ಕಲಿಸುವಲ್ಲಿ ದೇವಾಲಯಗಳ ಕಲಾಮಂದಿರಗಳು ಪ್ರಮುಖ ಪಾತ್ರ ವಹಿಸಬೇಕಿದೆ. ಶ್ರೀ ಚಾಮುಂಡೇಶ್ವರಿ ದೇವಿಯೇ ತನಗೆ ಬೇಕಾದ ದೇವಾಲಯಕ್ಕಾಗಿನ ಭೂಮಿಯನ್ನು ಪ್ರಾಮೃತಿಕವಾಗಿ ಪಡೆದುಕೊಂಡ ಪವಾಡ ಹೊಂದಿರುವ 850 ವರ್ಷಗಳ ಇತಿಹಾಸವುಳ್ಳ ದೇವಾಲಯದ ಕಲಾಮಂದಿರ ವಿಳಂಬರಹಿತವಾಗಿ ನಿರ್ಮಾಣವಾಗಲಿ ಎಂದು ಆಶಿಸಿದರು.
ಮೈಸೂರಿನ ಉದ್ಯಮಿ ಚೆರಿಯಮನೆ ನರೇಶ್ ಮಾತನಾಡಿ, ಪ್ರತಿಯೊಂದನ್ನೂ ಸಂಭ್ರಮದಿAದ ಆಚರಿಸುವ ಮಹತ್ವದ ಗುಣ ಭಾರತೀಯರಲ್ಲಿದೆ. ಹೀಗಾಗಿಯೇ ಸಂಕ್ರಾAತಿ ಸೇರಿದಂತೆ ಭಾರತದ ಹಬ್ಬಗಳೆಲ್ಲವೂ ಮನೆಮಂದಿಯ ಸಂಭ್ರಮವನ್ನು ಒಳಗೊಂಡಿರುತ್ತದೆ. ಸ್ಥಳೀಯರನ್ನು ಒಗ್ಗೂಡಿಸುವ ಗುಣ ಹಬ್ಬಗಳಿಗಿದೆ. ಶ್ರೀ ಚಾಮುಂಡೇಶ್ವರಿ ಕಲಾಮಂದಿರ ಸಾಂಸ್ಕೃತಿಕ ಮಾತ್ರವಲ್ಲದೇ ಸ್ಥಳೀಯ ಜನಪದವನ್ನೂ ಪ್ರೋತ್ಸಾಹಿಸಲು ವೇದಿಕೆ ನೀಡಲಿ ಮತ್ತು ಪ್ರಕೃತಿಗೂ ಗೌರವ ನೀಡುವ ಕೇಂದ್ರವಾಗಲಿ ಎಂದರು.
ಶ್ರೀ ಚಾಮುಂಡೇಶ್ವರಿ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಬಿ.ಜೆ. ಯಶೋಧರ ಮಾತನಾಡಿ ಪ್ರಕೃತಿ ಸೌಂದರ್ಯದ ನಡುವಿರುವ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ 80 ಲಕ್ಷ ರೂ. ವೆಚ್ಚದಲ್ಲಿ ಕಲಾಮಂದಿರ ನಿರ್ಮಾಣವನ್ನು 1 ವರ್ಷದೊಳಗೆ ಮುಕ್ತಾಯಗೊಳಿಸಲಾಗುತ್ತದೆ. ಈ ಮೂಲಕ ಭಜನೆ, ಯೋಗ, ಪ್ರಾಣಾಯಾಮ, ಬಾಲಸಂಸ್ಕಾರ, ಧಾರ್ಮಿಕ ಪ್ರವಚನಗಳಿಗೆ ಈ ಕೇಂದ್ರದಲ್ಲಿ ಅವಕಾಶ ನೀಡಲಾಗುತ್ತದೆ ಎಂದು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಡಿಕೇರಿ ತಾಲೂಕಿನ ಜ್ಞಾನ ವಿಕಾಸ ಸಮನ್ವಯಾಧಿಕಾರಿ ವಿಮಲ, ದೇವಾಲಯ ಆಡಳಿತ ಮಂಡಳಿ ಉಪಾಧ್ಯಕ್ಷ ಕೆ.ಆರ್. ರಾಜು, ವಿಠಲ ಇದ್ದರು.
ಮಕರಸಂಕ್ರಾAತಿ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ನಡೆಯಿತು. ಈ ವ್ಯಾಪ್ತಿಯ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.