ಸಾಹಿತಿ ಕಟ್ರತನ ಲಲಿತಾ ಅಯ್ಯಣ್ಣ ಅವರಿಗೆ ಪುಸ್ತಕ ಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಡಾ.ಸುನಂದಮ್ಮ, ಡಾ.ಎಂ.ಬಿ.ಕಾವೇರಿಯಪ್ಪ, ವಿಜಯ ವಿಷ್ಣು ಭಟ್ ಇತರರು ಇದ್ದರು. 
ಕೊಡಗು

ವ್ಯಕ್ತಿತ್ವ ರೂಪಿಸುವಲ್ಲಿ ಸಾಹಿತ್ಯದ ಪಾತ್ರ ಅಪಾರ

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಸುನಂದಮ್ಮ ಅಭಿಮತ

ಪೊನ್ನಂಪೇಟೆ: ಇಲ್ಲಿನ ಕಾವೇರಿ ಕಾಲೇಜಿನ ಸೆಮಿನಾರ್ ಹಾಲ್ನಲ್ಲಿ ಗುರುವಾರ ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಶಾಖೆ ಮತ್ತು ಕಾಲೇಜಿನ ಕನ್ನಡ ವಿಭಾಗದಿಂದ ಆಯೋಜಿಸಿದ್ದ ಪುಸ್ತಕ ಶ್ರೀ ಪ್ರಶಸ್ತಿ ಪ್ರದಾನ, ಪುಸ್ತಕ ವಿಮರ್ಶೆ ಹಾಗೂ ಗೀತ ಗಾಯನ ಕಾರ್ಯಕ್ರಮದಲ್ಲಿ ಕವಲುಗಳು ಕಲೆತಾಗ ಕೃತಿಗಾಗಿ, ಸಾಹಿತಿ ಕಟ್ರತನ ಲಲಿತಾ ಅಯ್ಯಣ್ಣ ಅವರಿಗೆ ಪುಸ್ತಕ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಸುನಂದಮ್ಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವ್ಯಕ್ತಿತ್ವ ವಿಕಸನದಲ್ಲಿ ಸಾಹಿತ್ಯದ ಪಾತ್ರ ಮಹತ್ವದ್ದಾಗಿದ್ದು, ಸಾಹಿತ್ಯದ ಓದು ಕೇವಲ ಮನರಂಜನೆಯಲ್ಲ. ಅದು ವ್ಯಕ್ತಿತ್ವ ವಿಕಸನ, ಆತ್ಮವಿಶ್ವಾಸ ಹಾಗೂ ಸೃಜನಶೀಲತೆ ಬೆಳೆಸುವ ಶಕ್ತಿಯಾಗಿದೆ ಎಂದರು.

ವಿದ್ಯಾರ್ಥಿಗಳು ರಜೆ ಸಮಯದಲ್ಲಿ ಟಿವಿ, ಮೊಬೈಲ್ ಮತ್ತು ರೀಲ್ಸ್‌ಗಳಿಗೆ ಹೆಚ್ಚು ಸಮಯ ನೀಡುವ ಬದಲು ಸಾಹಿತ್ಯ ಕೃತಿಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯಂತಹ ಕೃತಿಗಳು ಪ್ರಕೃತಿ ಮತ್ತು ಜೀವನವನ್ನು ನೋಡುವ ದೃಷ್ಟಿಕೋನವನ್ನು ವಿಸ್ತರಿಸುತ್ತವೆ ಎಂದು ಹೇಳಿದರು.

ಕಳೆದೆರಡು ದಶಕಗಳಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ, ವಿಶೇಷವಾಗಿ ಮಹಿಳಾ ಬರಹಗಾರ್ತಿಯರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಕವಿತೆ, ಕಥೆ, ಕಾದಂಬರಿ, ಲಲಿತ ಪ್ರಬಂಧ ಸೇರಿ ವಿವಿಧ ಪ್ರಕಾರಗಳಲ್ಲಿ ಮಹಿಳೆಯರು ಬರೆಯುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ತಮ್ಮೊಳಗಿನ ಸೃಜನಶೀಲತೆ ಗುರುತಿಸಿ, ತಾವು ಬರೆದ ಕವಿತೆಗಳನ್ನು ಮುಚ್ಚಿಡದೆ ಶಿಕ್ಷಕರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಬೇಕು. ಕನ್ನಡ ಶಿಕ್ಷಕರ ಮಾರ್ಗದರ್ಶನ ಪಡೆದು ಬರವಣಿಗೆಯಲ್ಲಿನ ತಪ್ಪುಗಳನ್ನು ತಿದ್ದಿಕೊಳ್ಳಬೇಕು. ಬಾಲ್ಯದಲ್ಲಿಯೇ ಬರವಣಿಗೆಯ ಆಸಕ್ತಿ ಬೆಳೆಸಿಕೊಂಡರೆ ಭವಿಷ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೃಜನಶೀಲತೆ ವಿಕಸನಗೊಳಿಸಿಕೊಳ್ಳಲು ಸಾಧ್ಯ ಎಂದು ಡಾ.ಸುನಂದಮ್ಮ ಅಭಿಪ್ರಾಯಪಟ್ಟರು.

ಬದುಕಿನ ಆಯಾಮಗಳು ಅನಾವರಣ: ಕಾವೇರಿ ಕಾಲೇಜು ಪ್ರಾಂಶುಪಾಲ ಡಾ.ಎಂ.ಬಿ.ಕಾವೇರಿಯಪ್ಪ ಮಾತನಾಡಿ, ಸಾಹಿತ್ಯವು ಬದುಕಿನ ವಿವಿಧ ಆಯಾಮಗಳನ್ನು ಅನಾವರಣಗೊಳಿಸುತ್ತದೆ. ಸಾಹಿತ್ಯ ಒಂದೇ ಆಗಿದ್ದರೂ ಕಥೆ, ಕವನ, ಕಾದಂಬರಿ, ಸಣ್ಣಕಥೆ ಹಾಗೂ ಹರಟೆ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಅಭಿವ್ಯಕ್ತಿಗೊಳ್ಳುತ್ತದೆ. ಏಕಂ ಸತ್ ವಿಪ್ರಾ ಬಹುದಾ ವದಂತಿ ಎಂಬ ಸಂಸ್ಕೃತ ವಾಕ್ಯದಂತೆ ಸತ್ಯ ಒಂದೇ ಆಗಿದ್ದರೂ ಪ್ರಾಜ್ಞರು ಅದನ್ನು ವಿಭಿನ್ನ ರೀತಿಯಲ್ಲಿ ಗುರುತಿಸುತ್ತಾರೆ. ಅದೇ ರೀತಿ ಸಾಹಿತ್ಯವೂ ಒಂದೇ ಆಶಯವನ್ನು ವಿಭಿನ್ನ ರೂಪಗಳಲ್ಲಿ ವ್ಯಕ್ತಪಡಿಸುತ್ತದೆ ಎಂದು ಹೇಳಿದರು.

ಸಾಹಿತ್ಯದ ವಿದ್ಯಾರ್ಥಿಗಳು ಯಾವುದೇ ಸಂದರ್ಭದಲ್ಲಿಯೂ ತಮ್ಮ ವಿಚಾರಗಳನ್ನು ನಿರರ್ಗಳವಾಗಿ ಅಭಿವ್ಯಕ್ತಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಸಾಹಿತ್ಯದ ಬೆಳವಣಿಗೆಗೆ ಕರ್ನಾಟಕ ಲೇಖಕಿಯರ ಸಂಘ ಹಾಗೂ ಜಿಲ್ಲಾ ಲೇಖಕಿಯರ ಸಂಘ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಿಕ್ಕ ಅವಕಾಶ ಬಳಸಿಕೊಳ್ಳುವುದು ಅಗತ್ಯ: ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಟ್ರತನ ಲಲಿತಾ ಅಯ್ಯಣ್ಣ, ಪ್ರತಿಯೊಬ್ಬರಲ್ಲಿಯೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಬೆಳೆಸಲು ಸೂಕ್ತ ವೇದಿಕೆ ಮತ್ತು ಅವಕಾಶಗಳು ಅಗತ್ಯ. ಆದರೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅವಕಾಶಗಳಿಗಾಗಿ ಕಾಯುವ ಬದಲು, ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಜಾಣ್ಮೆ ಬೆಳೆಸಿಕೊಳ್ಳಬೇಕು. ಎಲ್ಲರೂ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗದಿದ್ದರೂ, ಓದುವ ಹವ್ಯಾಸ ಬೆಳೆಸಿಕೊಳ್ಳಬಹುದು. ಪುಸ್ತಕಗಳು ನಮ್ಮನ್ನು ಬೆಳೆಸುವ ಶಕ್ತಿ ಹೊಂದಿವೆ. ಆದ್ದರಿಂದ ಪ್ರತಿಯೊಬ್ಬರೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಮನಸು ಅರಳಿಸುವ ಶಕ್ತಿ ಲೇಖನಿಗಿದೆ: ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ವಿಜಯ ವಿಷ್ಣು ಭಟ್ ಮಾತನಾಡಿ, ಸಾಹಿತ್ಯವು ಸಮಾಜ ನಿರ್ಮಾಣ ಮಾಡುವ ಪ್ರಬಲ ಸಾಧನವಾಗಿದೆ. ಆಯುಧವು ಕೆಲವರನ್ನು ಮಾತ್ರ ಸೋಲಿಸಬಹುದು. ಆದರೆ ಲೇಖನಿಯು ಸಾವಿರಾರು ಮನಸ್ಸುಗಳನ್ನು ಅರಳಿಸುವ ಶಕ್ತಿಯನ್ನು ಹೊಂದಿದೆ. ಸಾಹಿತ್ಯದ ಬೆಳವಣಿಗೆಯೊಂದಿಗೆ ಅದು ಜನರ ಮನಸ್ಸುಗಳನ್ನು ತಲುಪಬೇಕು. ಇದರಿಂದ ವ್ಯಕ್ತಿಯ ಚಿಂತನೆ ವಿಕಸನಗೊಂಡು, ತನ್ನೊಳಗಿನ ಸಾಮರ್ಥ್ಯ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ವಿದ್ಯಾರ್ಥಿಗಳು ದೇಶದ ಭವಿಷ್ಯದ ಪ್ರಜೆಗಳಾಗಿದ್ದು, ಸಾಹಿತ್ಯದ ಮೂಲಕ ಜ್ಞಾನ, ನೈತಿಕ ಮೌಲ್ಯಗಳು, ಸಾಂಸ್ಕೃತಿಕ ಅರಿವು ಹಾಗೂ ವೈಚಾರಿಕ ಪ್ರಬುದ್ಧತೆ ಬೆಳೆಸಿಕೊಳ್ಳಬೇಕು. ಇಂತಹ ಗುಣಗಳು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವುದರೊಂದಿಗೆ, ಉತ್ತಮ ಸಮಾಜ ನಿರ್ಮಾಣಕ್ಕೂ ನೆರವಾಗುತ್ತವೆ. ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿ ಬೆಳೆಸಲು ಕಾಲೇಜುಗಳ ಕನ್ನಡ ವಿಭಾಗ ಹಾಗೂ ಕನ್ನಡ ಸಂಘಗಳು ತಿಂಗಳಿಗೊಮ್ಮೆಯಾದರೂ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಶಿಕ್ಷಕರು ನಿರಂತರವಾಗಿ ಮಾರ್ಗದರ್ಶನ ನೀಡಿದಾಗ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸಾಹಿತ್ಯದ ಆಸಕ್ತಿ ಗಟ್ಟಿಯಾಗಲು ಸಾಧ್ಯ ಎಂದರು.

ಪುಸ್ತಕಗಳ ವಿಮರ್ಶೆ: ಕಾವೇರಿ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥೆ ಡಾ.ಎಂ.ಪಿ.ರೇಖಾ ವಸಂತ್, ಕನ್ನಡ ಸಿರಿ ಸ್ನೇಹಬಳಗದ ಅಧ್ಯಕ್ಷ ಲೋಕೇಶ್ ಸಾಗರ್, ಸಾಹಿತಿ ವೈಲೇಶ್ ಮಾತನಾಡಿದರು. ಎಸ್.ಎಂ.ರಜನಿ ವಿಜಯ ವಿಷ್ಣು ಭಟ್ ಅವರ ಊರ್ಮಿಳ ಪುಸ್ತಕ, ದೀಪಿಕಾ ಸಂದೀಪ್ ಶರ್ಮಿಳಾ ಅವರ ಕಂಪ್ಯೂಟರ್ ಯುಗದಲ್ಲೂ ಮಹಿಳೆಯ ಬಾಳುಗೋಳು ಪುಸ್ತಕ, ಜಯಲಕ್ಷ್ಮೀ.ಎಂ.ಬಿ, ಉಳುವಂಗಡ ಕಾವೇರಿ ಉದಯ ಅವರ ಸಿಪಾಯಿ ಮಾದಪ್ಪ ಪುಸ್ತಕಗಳ ವಿಮರ್ಶೆ ಮಾಡಿದರು.

ಪಂದ್ಯಂಡ ರೇಣುಕಾ ಜಾನಪದ ಗೀತೆ, ಪುಷ್ಪಾ ರೈ ಭಾವಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ಕಾವೇರಿ ಕಾಲೇಜು ಉಪ ಪ್ರಾಂಶುಪಾಲೆ ಪ್ರೊ.ಎಂ.ಎಸ್.ಭಾರತಿ, ಮಣಜೂರು ಮಂಜುನಾಥ್ ಇನ್ನಿತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ಶರ್ಮಿಳಾ ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಲ್ಪಾ, ಪುಷ್ಪಾ, ಶೋಭಾ ರಕ್ಷಿತ್, ಮಾಲಾ ಮೂರ್ತಿ ಕಾರ್ಯಕ್ರಮ ನಿರ್ವಹಿಸಿದರು.