ನೆಲಜಿ ದವಸ ಭಂಡಾರದಲ್ಲಿ ಆಯೋಜಿಸಿದ ಶ್ರೀಇಗ್ಗುತ್ತಪ್ಪ ಭಗವತಿ ಆಟ್ ಪಾಟ್ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳೊಂದಿಗೆ ಗಣ್ಯರು.  
ಕೊಡಗು

ಕೊಡವ ಸಂಸ್ಕೃತಿ ರಕ್ಷಣೆ ಯುವ ಪೀಳಿಗೆ ಹೊಣೆ

ಪ್ರಮುಖ ಮುಖ್ಯಾಂಶಗಳು

  • ಮುಂಡಂಡ ಸಿ.ನಾಣಯ್ಯ ಹೇಳಿಕೆ
ನಾಪೋಕ್ಲು: ಕೊಡವ ಜನಾಂಗದ ಆಚಾರ, ವಿಚಾರ, ಸಂಸ್ಕೃತಿ ಪದ್ಧತಿ, ಪರಂಪರೆ ತೀರಾ ವಿಭಿನ್ನ ಹಾಗೂ ವಿಶಿಷ್ಟತೆಯಿಂದ ಕೂಡಿದ್ದು ಅದಕ್ಕೆ ಹೊಂದಿದಂತೆ ಶ್ರೀಮಂತ ಕಲೆಯನ್ನು ಕೊಡವ ಜನಾಂಗ ಸಾವಿರಾರು ವರುಷಗಳಿಂದ ಆಚರಿಸಿ, ಉಳಿಸಿ, ಬೆಳೆಸಿಕೊಂಡು ಬಂದಿದೆ. ಎಂದು ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ, ನೆಲಜಿ ಇಗ್ಗುತ್ತಪ್ಪ ದೇಗುಲ ಆಡಳಿತ ಮಂಡಳಿಯ ಅಧ್ಯಕ್ಷರೂ ಆದ ಮುಂಡಂಡ ಸಿ.ನಾಣಯ್ಯ ಹೇಳಿದರು.
ನೆಲಜಿ ದವಸ ಭಂಡಾರದಲ್ಲಿ ಆಯೋಜಿಸಿದ ಶ್ರೀ ಇಗ್ಗುತ್ತಪ್ಪ ಭಗವತಿ ಆಟ್‌ಪಾಟ್ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಸಾಂಸ್ಕೃತಿಕ ಕಲೆ ಮೈಗೂಡಿಸಿಕೊಂಡು ಹಬ್ಬ ಹರಿದಿನಗಳನ್ನು ಆಚರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಹಿರಿಯ ಜೀವಗಳು ಕಣ್ಮರೆಯಾಗಿದ್ದು, ಇಂದಿನ ಯುವ ಜನತೆ ಆಧುನಿಕತೆಯ ನೆಪದಲ್ಲಿ ಕೊಡವ ಜನಾಂಗದ ಸಿರಿವಂತ ಕಲೆ ರೂಢಿಸಿಕೊಂಡು ಅದನ್ನು ಉಳಿಸಿಕೊಳ್ಳುವಲ್ಲಿ ತೀರಾ ಅಸಡ್ಡ ತೋರುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ತಮ್ಮ ಬೇಸರ ವ್ಯಕ್ತಪಡಿಸಿದರು.
ಇಂದು ಕೊಡವ ಜನಾಂಗದ ಸಂಖ್ಯೆ ಮತ್ತು ಆಚರಣೆಯಲ್ಲಿದ್ದ ಅದ್ಬುತ ಕಲೆ ಮತ್ತು ಸಂಸೃತಿ ಅಳಿವಿನಂಚಿನಲ್ಲಿದೆ. ಜಗತ್ತಿನಲ್ಲಿಯೇ ಗುರುತಿಸಿಕೊಂಡಿರುವ ಕೊಡವ ಜನಾಂಗದ ಸಂಖ್ಯೆ ಯಾವುದೇ ಕಾರಣಕ್ಕೂ ಕಡಿಮೆಯಾಗದಂತೆ ಮತ್ತು ಆಚರಣೆಯಲ್ಲಿದ್ದ ಸಂಸ್ಕೃತಿ, ಪರಂಪರೆ, ಪದ್ಧತಿಗಳು ಅಳಿಸಿ ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಆಯೋಜಕರಲ್ಲಿ ಪ್ರಮುಖರಾದ ಮಣವಟ್ಟಿರ ಅರುಣ್ ಪಳಂಗಪ್ಪ, ಊರ ತಕ್ಕ ಮುಖ್ಯಸ್ಥರಾದ ನಾಪನೇರವ ಒ.ಪೊನ್ನಪ್ಪ , ಬದ್ಧಂಜೆಟ್ಟಿರ ನಾಣಯ್ಯ, ಉತ್ತಯ್ಯ ಮಾತನಾಡಿದರು.
ಶಿಬಿರದ ಪ್ರಮುಖ ತರಬೇತುದರ ನಾಪನೇರವಂಡ ಸೋಮಯ್ಯ ಅವರನ್ನು ಸನ್ಮಾನಿಸಲಾಯಿತು. ಶಿಬಿರಾರ್ಥಿಗಳಿಗೆ ನಗದು ಪ್ರೋತ್ಸಾಹ ಧನದೊಂದಿಗೆ ನೆನಪಿನ ಕಾಣಿಕೆ ನೀಡಿ ಬೀಳ್ಕೊಡಲಾಯಿತು.