ನಗರದ ರೆಡ್ ಕ್ರಾಸ್ ಭವನಕ್ಕೆ ರೆಡ್ ಕ್ರಾಸ್ ರಾಜ್ಯ ಉಪಾಧ್ಯಕ್ಷ ಬಿ.ಭಾಸ್ಕರರಾವ್ ಭಾನುವಾರ ಭೇಟಿ ನೀಡಿದರು.
- ಮಾನವೀಯ ಧರ್ಮ ಸಂರಕ್ಷಣೆಯಲ್ಲಿ ರೆಡ್ ಕ್ರಾಸ್ ಮುಖ್ಯಪಾತ್ರ
- ರೆಡ್ ಕ್ರಾಸ್ ಭವನಕ್ಕೆ ಭೇಟಿ ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷ ಬಿ.ಭಾಸ್ಕರರಾವ್
ಮಡಿಕೇರಿ: ರೆಡ್ ಕ್ರಾಸ್ ಸಂಸ್ಥೆಯು ವಿಶ್ವದಲ್ಲಿ ಮಾನವೀಯ ಧರ್ಮವನ್ನು ಪ್ರಚುರಪಡಿಸುವ ಮೂಲಕ ವಿಶ್ವಶಾಂತಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಲಕ್ಷಾಂತರ ಮಂದಿಗೆ ರೆಡ್ ಕ್ರಾಸ್ ನೆರವನ್ನು ವಿಶ್ವವ್ಯಾಪಿ ಒದಗಿಸುತ್ತಾ ಬಂದಿದ್ದು ಕೊಡಗಿನಲ್ಲಿಯೂ ರೆಡ್ ಕ್ರಾಸ್‌ಗೆ ಹೆಚ್ಚಿನ ಸದಸ್ಯರು ಸೇರ್ಪಡೆಯಾಗಬೇಕೆಂದು ರೆಡ್ ಕ್ರಾಸ್ ರಾಜ್ಯ ಉಪಾಧ್ಯಕ್ಷ ಬಿ.ಭಾಸ್ಕರರಾವ್ ಕರೆ ನೀಡಿದರು.
ನಗರದ ರೆಡ್ ಕ್ರಾಸ್ ಭವನಕ್ಕೆ ಭಾನುವಾರ ಭೇಟಿ ನೀಡಿದ ಭಾಸ್ಕರರಾವ್ ಅವರು ಮಾತನಾಡಿ, ಯಾವುದೇ ದೇಶಗಳ ನಡುವೆ ಅಶಾಂತಿಯುತ ವಾತಾವರಣ ಪರಿಸ್ಥಿತಿ ಉದ್ಬವಿಸಿದಾಗ ರೆಡ್ ಕ್ರಾಸ್ ಪ್ರಮುಖರು ಅಂಥ ದೇಶಗಳ ನಡುವೆ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಸಕ್ರಿಯರಾಗುತ್ತಾರೆ. ವಿಶ್ವದಲ್ಲಿ ಶಾಂತಿ ಕಾಪಾಡುವುದೇ ರೆಡ್ ಕ್ರಾಸ್‌ನ ಪ್ರಮುಖ ಉದ್ದೇಶವಾಗಿದೆ ಎಂದರು.
ಸಾಕಷ್ಟು ಅನುದಾನ ರೆಡ್ ಕ್ರಾಸ್‌ನಲ್ಲಿ ಜನೋಪಯೋಗಿ ಕಾರ್ಯಗಳಿಗೆ ಲಭಿಸುತ್ತಿದ್ದು, ಇದನ್ನು ಕೊಡಗಿನಲ್ಲಿ ಪ್ರಕತ್ತಿ ವಿಕೋಪದಂಥ ಪ್ರತಿಕೂಲ ದಿನಗಳಲ್ಲಿ ಸದುಪಯೋಗ ಮಾಡಬೇಕು. ಕೊಡಗಿನ ಸ್ಥಳೀಯ ಸಂಸ್ಥೆಗಳಿಂದ ರೆಡ್ ಕ್ರಾಸ್‌ಗೆ ಲಭಿಸಬೇಕಾದ ವಾರ್ಷಿಕ ಚಂದಾ ಹಣವನ್ನು ವಿಳಂಭರಹಿತವಾಗಿ ಪಡೆಯುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಸಂಚಾರ ಜಾಗತಿ ಶಿಬಿರಗಳ ಜತೆಗೇ ವಿನೂತನ ಯೋಜನೆಗಳನ್ನು ರೆಡ್ ಕ್ರಾಸ್ ಹಮ್ಮಿಕೊಳ್ಳಬೇಕು. ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಪೊಲೀಸ್ ಸಿಬ್ಬಂದಿಗಳಿಗೂ ಅಗತ್ಯ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಕೋರಿದರು.
ಕೊಡಗಿನಲ್ಲಿ ಪೊಲೀಸ್ ವರಿಷ್ಟಾಧಿಕಾರಿಯಾಗಿ ಕರ್ತವ್ಯ ಸಲ್ಲಿಸಿದ ದಿನಗಳು ತನ್ನ ಜೀವನದಲ್ಲಿಯೇ ಸ್ಮರಣೀಯವಾಗಿದೆ ಎಂದು ಹೆಮ್ಮೆಯಿಂದ ಹೇಳಿದ ಭಾಸ್ಕರರಾವ್, ಜಿಲ್ಲಾಕೇಂದ್ರ ಮಡಿಕೇರಿಯಲ್ಲಿ ಸಂಚಾರ ನಿಯಂತ್ರಣ ಸಂಬಂಧಿತ ಈಗಲೇ ಎಚ್ಚೆತ್ತುಕೊಂಡು ಸೂಕ್ತ ಪರಿಹಾರೋಪಾಯ ಕಂಡುಹುಡುಕದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಸಂಚಾರ ಸಮಸ್ಯೆಯ ಜತೆಗೇ ಪ್ರವಾಸಿಗರೂ ಮಡಿಕೇರಿಯಿಂದ ದೂರವಾಗುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಕಿವಿಮಾತು ಹೇಳಿದರು.
ಕೊಡಗು ಪೊಲೀಸ್ ವರಿಷ್ಟಾಧಿಕಾರಿ ಬಿಂದುಮಣಿ ಮಾತನಾಡಿ, ಕೊಡಗಿನಲ್ಲಿ ಮಾದಕ ವ್ಯಸನಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ. ರೆಡ್ ಕ್ರಾಸ್ ಮೂಲಕ ಮಾದಕ ವ್ಯಸನಪೀಡಿತರನ್ನು ಚಟಮುಕ್ತ ಮಾಡುವಂಥ ಕಾರ್ಯಕ್ರಮ ಆಯೋಜಿಸಬೇಕೆಂದು ಸಲಹೆ ನೀಡಿದ ಅವರು, ಕಳೆದ ೨೦ ದಿನಗಳಿಂದ ಕೊಡಗಿನ ಪ್ರತೀ ಪೊಲೀಸ್ ಠಾಣೆಗಳಿಗೂ ಭೇಟಿ ನೀಡಿ ಆಯಾ ಗ್ರಾಮ ವ್ಯಾಪ್ತಿಯಲ್ಲಿನ ಕಾನೂನು ಸಮಸ್ಯೆಗಳನ್ನು ತಳಿದುಕೊಂಡು ಸೂಕ್ತ ಪರಿಹಾರೋಪಾಯ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದೇನೆ ಎಂದು ನುಡಿದರು.
ರೆಡ್ ಕ್ರಾಸ್ ಕೊಡಗು ಘಟಕದ ಸಭಾಧ್ಯಕ್ಷ ಬಿ.ಕೆ.ರವೀಂದ್ರ ರೈ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ ರೆಡ್ ಕ್ರಾಸ್‌ನಲ್ಲಿ ೩೫೦ ಸದಸ್ಯರಿದ್ದು ಮುಂದಿನ ದಿನಗಳಲ್ಲಿ ಸೋಮವಾರಪೇಟೆ, ವೀರಾಜಪೇಟೆಯಲ್ಲಿಯೂ ಘಟಕ ಪ್ರಾರಂಭಿಸಿ ಸದಸ್ಯತ್ವವನ್ನು ಹೆಚ್ಚಿಸಲಾಗುತ್ತದೆ. ಮಹಿಳೆಯರಿಗಾಗಿ ಕ್ಯಾನ್ಸರ್ ತಪಾಸಣಾ ಶಿಬಿರವನ್ನೂ ಶೀಘ್ರದಲ್ಲಿಯೇ ಆಯೋಜಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ರೆಡ್ ಕ್ರಾಸ್ ಕೊಡಗು ಘಟಕದ ಉಪಾಧ್ಯಕ್ಷ ಹೆಚ್.ಟಿ.ಅನಿಲ್, ನಿರೂಪಿಸಿದ ಕಾರ್ಯಕ್ರಮದಲ್ಲಿ ಖಜಾಂಜಿ ಪ್ರಸಾದ್ ಗೌಡ ವೇದಿಕೆಯಲ್ಲಿದ್ದರು. ರೆಡ್ ಕ್ರಾಸ್ ಪ್ರಮುಖರಾದ ಎಸ್.ಸಿ.ಸತೀಶ್, ಮಧುಕರ್, ಉತ್ತಯ್ಯ, ಸತೀಶ್ ರೈ, ವಿಜಯ್ ರೈ, ವಸಂತ್, ಪ್ರಭಾಕರ್, ಲೋಕೇಶ್ ಹಾಜರಿದ್ದರು.