ಶ್ರೀ ಆಂಜನೇಯ ದೇವಾಲಯದಲ್ಲಿ ಬಡೆದ ಶ್ರೀ ರಾಮಾಂಜನೇಯ ಭಜನಾ ಮಂಡಳಿಯ 35 ನೇ ವಾರ್ಷಿಕೋತ್ಸವದ ಕಾರ್ಯಕ್ರಮದ ವೇಳೆ 18 ವಿವಿಧ ತಂಡಗಳ ಏಕಾಹ ಭಜನಾ ಕಾರ್ಯಕ್ರಮ ನಡೆಸಿಕೊಟ್ಟವು. 
ಕೊಡಗು

ಸಾಮೂಹಿಕ ಭಜನೆಯಲ್ಲಿದೆ ದೈವತ್ವದ ಶಕ್ತಿ

ಮಡಿಕೇರಿ:
ದೈವತ್ವದ ಶಕ್ತಿಯನ್ನೊಳಗೊಂಡ ಸಾಮೂಹಿಕ ಭಜನೆ ಮನಸ್ಸಿನ ಸಂತೋಷ, ನೆಮ್ಮದಿಗೆ ಕಾರಣವಾಗುತ್ತದೆ ಎಂದು ನಗರದ ಶ್ರೀ ವಿಜಯವಿನಾಯಕ ದೇವಾಲಯದ ಟ್ರಸ್ಟಿ ಜಿ. ಚಿದ್ವಿಲಾಸ್ ಹೇಳಿದರು. ಇಲ್ಲಿನ ಶ್ರೀ ಆಂಜನೇಯ ದೇವಾಲಯದಲ್ಲಿ ಆಯೋಜಿತ ಶ್ರೀರಾಮಾಂಜನೇಯ ಭಜನಾ ಮಂಡಳಿಯ 35 ನೇ ವಾರ್ಷಿಕೋತ್ಸವದ ಸಂದರ್ಭ ನಡೆದ ಏಕಾಹ ಭಜನಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಸಂಜೆ ಮಾತನಾಡಿದರು.
ಭಜನೆಗೆ ಇಹಲೋಕದ ಪರಿವನ್ನು ಮರೆಸುವ ಶಕ್ತಿ ಇದೆ. ಭಜನೆಗೆ ಆರೋಗ್ಯದ ಸಮಸ್ಯೆಯನ್ನು ನಿವಾರಿಸುವ ಶಕ್ತಿಯೂ ಇದೆ. ಆದ್ಮಾತ್ಮಿಕ ಚಿಂತನೆಗೆ ಕಾರಣವಾಗುವ ಸಾಮೂಹಿಕ ಭಜನೆಗೆ ಮನಸ್ಸಿನ ಸಂತೋಷ, ಪರಿಶುದ್ದತೆ ಉಂಟು ಮಾಡುವ ಶಕ್ತಿ ಸಿದ್ದಿಸಿದೆ. ಸಾಮೂಹಿಕ ಭಜನೆ ಎಂಬುದು ಚಿಕಿತ್ಸೆ ಕೂಡ ಆಗಿದೆ. ವೈದ್ಯರಿಂದ ನಿವಾರಿಸಲಾಗದ ಅನೇಕ ಮಾನಸಿಕ ಸಮಸ್ಯೆಗಳಿಗೆ ದೈವತ್ಯದ ಶಕ್ತಿ ಹೊಂದಿರುವ ಭಜನೆ ಪರಿಹಾರವಾಗಿ ಕಂಡಿದೆ. ಸಾಮೂಹಿಕ ಭಜನೆ ಎಂಬುದು ವ್ಯಕ್ತಿಯ ಮನಸ್ಸು, ಮನೆಯ ಸದಸ್ಯರ ನೆಮ್ಮದಿಗೂ ನೆರವಾಗುತ್ತದೆ ಆ ಮೂಲಕ ಸಮಾಜದ ಶಾಂತಿ, ನೆಮ್ಮದಿಗೂ ಭಜನೆ ಕಾರಣವಾಗಿ ಸಂಸ್ಕೃತಿ, ಸಂಪ್ರದಾಯಗಳ ಸಂರಕ್ಷಣೆಗೆ ಕೂಡ ಕಾರಣವಾಗುತ್ತದೆ. ಬಾಲ್ಯದಲ್ಲಿಯೇ ಸಂಸ್ಕಾರವನ್ನು ಕಲಿಸಿ ಭವಿಷ್ಯದ ಭಾರತಕ್ಕೆ ದೇಶಭಕ್ತ ಸತ್ಪ್ರಜೆಗಳನ್ನು ನೀಡುವ ಉದ್ದೇಶ ಹೊಂದಿರುವ ಪೋಷಕರು, ಶಿಕ್ಷಕರ ಕೊಡುಗೆ ಈ ಸಮಾಜಕ್ಕೆ ಮಹತ್ವದ್ದಾಗಿದೆ. ಇಂಥ ಪೋಷಕರು ಇರುವವರೆಗೂ ಭಾರತೀಯತೆ, ಭಾರತೀಯ ಸಂಸ್ಕತಿ ಖಂಡಿತಾ ನಾಶವಾಗಲಾರದು ಎಂದರು.
ಶ್ರೀ ರಾಮಾಂಜನೇಯ ಭಜನಾ ಮಂಡಳಿಯ ಸಂಚಾಲಕ ಕೆ.ಕೆ. ಮಹೇಶ್ ಕುಮಾರ್, ಅನಿತಾ ಸುಧಾಕರ್, ಅಮೃತ್ ರಾಜ್, ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚುಮ್ಮಿದೇವಯ್ಯ, ಡಾ.ಎಂ.ಜಿ. ಪಾಟ್ಕರ್, ನಗರಸಭಾಧ್ಯಕ್ಷೆ ಪಿ. ಕಲಾವತಿ ಇದ್ದರು. 18 ಭಜನಾ ತಂಡಗಳು ಏಕಾಹ ಭಜನೆಯಲ್ಲಿ ಪಾಲ್ಗೊಂಡಿದ್ದವು.