ಕಟ್ಟಡ ನಿರ್ಮಾಣ ಸಾಮಗ್ರಿಗಳ ತ್ಯಾಜ್ಯ ಒಳಗೊಂಡ ಜಡ ತ್ಯಾಜ್ಯ ನಿರ್ವಹಣೆ ಸ್ಥಳೀಯ ಆಡಳಿತಗಳ ಪಾಲಿಗೆ ದೊಡ್ಡ ಸಮಸ್ಯೆ ಆಗಿದೆ.
ಸ್ವಚ್ಛ ಕೊಡಗು ಸುಂದರ ಕೊಡಗು ಘೋಷಣೆ ಕೇಳುವುದಕ್ಕೆ ಚೆನ್ನಾಗಿದ್ದರೂ ಇಲ್ಲಿಯ ವಸ್ತು ಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ತ್ಯಾಜ್ಯ ಉತ್ಪತ್ತಿ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಬಹುತೇಕ ಕಡೆಗಳಲ್ಲಿ ಸರಿಯಾದ ಸಂಸ್ಕರಣೆ ಇಲ್ಲದ ಕಾರಣ ಸಮಸ್ಯೆ ಆತಂಕಕಾರಿಯಾಗಿದೆ. ಹಸಿ, ಒಣ ಹಾಗೂ ಜಡ ತ್ಯಾಜ್ಯ ಸೇರಿದಂತೆ ಜಿಲ್ಲೆಯಲ್ಲಿ ಪ್ರತಿದಿನ ಸುಮಾರು 80 ಟನ್‌ಗಳಷ್ಟು ತ್ಯಾಜ್ಯ ಸಂಗ್ರಹ ಆಗುತ್ತಿದ್ದು ಇದರ ಅರ್ಧದಷ್ಟು ಪ್ರಮಾಣದ ತ್ಯಾಜ್ಯ ಮಾತ್ರ ಸಂಸ್ಕರಣೆಗೆ ಒಳಗಾಗುತ್ತಿದೆ.
ಪ್ರಮುಖ ಪ್ರವಾಸಿ ತಾಣವೂ ಆಗಿರುವ ಹಸಿರು ಹೊದ್ದಿರುವ ಪುಟ್ಟ ಜಿಲ್ಲೆ ಕೊಡಗಿನಲ್ಲಿ ಸಮರ್ಪಕ ಕಸ ನಿರ್ವಹಣೆಯೇ ದೊಡ್ಡ ಸಮಸ್ಯೆ ಆಗಿದೆ. ಮಡಿಕೇರಿ ಸ್ಟೋನ್ ಹಿಲ್ ಇದಕ್ಕೆ ಅತ್ಯುತ್ತಮ ಸಾಕ್ಷಿ ಆಗಿದ್ದು, 2 ದಶಕಗಳಿಗಿಂತಲೂ ಹೆಚ್ಚಿನ ಕಾಲದಿಂದ ಇಲ್ಲಿ ಅವೈಜ್ಞಾನಿಕವಾಗಿ ಸಂಗ್ರಹಿಸಿರುವ ತ್ಯಾಜ್ಯದ ವಿಲೇವಾರಿ ಕಷ್ಟಸಾಧ್ಯವಾಗಿ ಪರಿಣಮಿಸಿದೆ. ಇಲ್ಲಿ ಸಂಗ್ರಹ ಆಗಿರುವ ಪಾರಂಪರಿಕ ಕಸ ತೆರವು ಕಾರ್ಯಕ್ಕೆ ಚಾಲನೆ ಸಿಕ್ಕಿ ಸುಮಾರು 1 ವರ್ಷ ಆಗುತ್ತಾ ಬಂದರೂ ಹೆಚ್ಚಿನ ಪ್ರಗತಿ ಕಾಣದಿರುವುದು ಸಮಸ್ಯೆಯ ಗಂಭೀರತೆಯನ್ನು ಹೇಳುತ್ತಿದೆ.
ಒಂದು ನಗರ ಸಭೆ, 2 ಪುರಸಭೆ, 2 ಪಟ್ಟಣ ಪಂಚಾಯಿತಿ ಹಾಗೂ 104 ಗ್ರಾಮ ಪಂಚಾಯಿತಿಗಳನ್ನು ಹೊಂದಿರುವ ಕೊಡಗಿನಲ್ಲಿ ದಿನಂಪ್ರತಿ ಸಂಗ್ರಹ ಆಗುತ್ತಿರುವ ತ್ಯಾಜ್ಯದ ವಿಲೇವಾರಿ ಸಮಸ್ಯೆಯಾಗಿ ಕಾಡುತ್ತಿದೆ. ಶೇ.50ರಷ್ಟು ಗ್ರಾಮ ಪಂಚಾಯಿತಿಗಳು ಈ ನಿಟ್ಟಿನಲ್ಲಿ ಮಾದರಿ ಕೆಲಸ ಮಾಡಿದ್ದರೂ ಉಳಿದ ಗ್ರಾಮ ಪಂಚಾಯಿತಿಗಳಲ್ಲಿ ಇಂದಿಗೂ ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಸಾಧ್ಯವೇ ಆಗುತ್ತಿಲ್ಲ. ಸಾರ್ವಜನಿಕರ ಅಸಹಕಾರ, ಸ್ಥಳೀಯವಾಗಿ ಜಾಗದ ಕೊರತೆ, ಜಾಗ ಇದ್ದರೂ ಬೇರೆ ಬೇರೆ ಇಲಾಖೆಗಳಿಂದ ಅಡ್ಡಿ ಮತ್ತಿತರ ಕಾರಣಗಳಿಂದ ಸಮರ್ಪಕ ತ್ಯಾಜ್ಯ ವಿಲೇವಾರಿಗೆ ಸಮಸ್ಯೆ ಆಗುತ್ತಿದೆ.
ಸಂಬAಧಿಸಿದ ಇಲಾಖೆಗಳ ಮಾಹಿತಿ ಪ್ರಕಾರ ಜಿಲ್ಲಾ ಕೇಂದ್ರ ಮಡಿಕೇರಿ ನಗರಸಭೆ ವ್ಯಾಪ್ತಿಯ 23 ವಾರ್ಡ್ಗಳಿಂದ ಹಸಿತ್ಯಾಜ್ಯ 12.10 ಟನ್, ಒಣತ್ಯಾಜ್ಯ 8 ಟನ್ ಹಾಗೂ ಜಡ ತ್ಯಾಜ್ಯ 2.5 ಟನ್ ಸೇರಿದಂತೆ ಪ್ರತಿ ದಿನ ಒಟ್ಟು 22.5 ಟನ್ ತ್ಯಾಜ್ಯ ಸಂಗ್ರಹ ಆಗುತ್ತಿದ್ದು ಇದರಲ್ಲಿ 18.5 ಟನ್ ತ್ಯಾಜ್ಯ ಸಂಸ್ಕರಣೆ ಆಗುತ್ತಿದೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಪಟ್ಟಣಗಳಲ್ಲಿ ಒಂದಾಗಿರುವ ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ದಿನಕ್ಕೆ 5.89 ಟನ್ ಹಸಿ ತ್ಯಾಜ್ಯ, 4.81 ಟನ್ ಒಣ ತ್ಯಾಜ್ಯ ಹಾಗೂ 0.81 ಟನ್‌ಗಳಷ್ಟು ಜಡ ತ್ಯಾಜ್ಯ ಸೇರಿದಂತೆ ಒಟ್ಟು 11.51 ಟನ್ ತ್ಯಾಜ್ಯ ಸಂಗ್ರಹ ಆಗುತ್ತಿದೆ. ಇದರಲ್ಲಿ 9.81 ತ್ಯಾಜ್ಯದ ಸಂಸ್ಕರಣಾ ಕಾರ್ಯ ನಡೆಯುತ್ತಿದೆ.
ವಿರಾಜಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಪ್ರತಿದಿನ 4.13 ಟನ್ ಹಸಿ ಕಸ, 3.4 ಟನ್ ಒಣ ಕಸ ಹಾಗೂ 1.44 ಟನ್ ಜಡ ಕಸ ಸೇರಿದಂತೆ 8.97 ಟನ್ ತ್ಯಾಜ್ಯ ಸಂಗ್ರಹ ಆಗುತ್ತಿದೆ. ಈ ಪೈಕಿ 5.94 ಟನ್ ತ್ಯಾಜ್ಯ ಸಂಸ್ಕರಿಸಲಾಗುತ್ತಿದೆ. ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2.2 ಟನ್ ಹಸಿ ಕಸ, 1.4 ಟನ್ ಒಣಕಸ ಹಾಗೂ 0.4 ಟನ್ ಜಡ ಕಸ ಸೇರಿದಂತೆ ಒಟ್ಟಿ 4 ಟನ್ ತ್ಯಾಜ್ಯ ಸಂಗ್ರಹ ಆಗುತ್ತಿದ್ದು, 3.5 ಟನ್‌ಗಳಷ್ಟು ತ್ಯಾಜ್ಯ ಸಂಸ್ಕರಣೆ ಆಗುತ್ತಿದೆ. ನೂತನವಾಗಿ ರಚನೆ ಆಗಿರುವ ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 1.79 ಟನ್ ಹಸಿ ತ್ಯಾಜ್ಯ, 1.14 ಟನ್ ಒಣತ್ಯಾಜ್ಯ ಹಾಗೂ 0.32 ಟನ್ ಗಷ್ಟು ಜಡ ತ್ಯಾಜ್ಯ ಸೇರಿದಂತೆ 3.25 ಟನ್ ತ್ಯಾಜ್ಯ ಸಂಗ್ರಹ ಆಗುತ್ತಿದ್ದರೂ ಇಲ್ಲಿ ತ್ಯಾಜ್ಯ ಸಂಸ್ಕರಣೆ ವ್ಯವಸ್ಥೆ ಆಗಿಲ್ಲ.
ಜಿಲ್ಲೆಯ ನಗರ ಪ್ರದೇಶಗಳಿಂದ ಪ್ರತಿದಿನ ಒಟ್ಟಾರೆಯಾಗಿ ಸುಮಾರು 51 ಟನ್‌ಗಳಷ್ಟು ತ್ಯಾಜ್ಯ ಉತ್ಪಾದನೆ ಆಗುತ್ತಿದೆ. ಅಂದಾಜು 38 ಟನ್‌ಗಳಷ್ಟು ತ್ಯಾಜ್ಯ ಮಾತ್ರ ಸಂಸ್ಕರಣಗೆ ಒಳಗಾಗುತ್ತಿದೆ. ಉಳಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 28 ಟನ್‌ಗಳಷ್ಟು ತ್ಯಾಜ್ಯ ಗ್ರಾಮ ಪಂಚಾಯಿತಿಗಳ ಮೂಲಕ ಸಂಗ್ರಹ ಆಗುತ್ತಿದೆ.
ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ತ್ಯಾಜ್ಯ ವಿಲೇವಾರಿಗೆ ಮಾದರಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ಶೇ. 50ಕ್ಕಿಂತಲೂ ಹೆಚ್ಚು ಪಂಚಾಯಿತಿಗಳಲ್ಲಿ ಈಗಾಗಲೇ ಸುಸಜ್ಜಿತ ಸ್ವಚ್ಛ ಸಂಕೀರ್ಣಗಳು ಕಾರ್ಯ ನಿರ್ವಹಿಸುತ್ತಿದೆ. ಬಹುತೇಕ ಕಡೆಗಳಲ್ಲಿ ಒಣ ಮತ್ತು ಹಸಿ ಕಸ ಮೂಲದಿಂದಲೇ ವಿಂಗಡಣೆಯಾಗಿ ಬರುವುದರಿಂದ ಸ್ವಚ್ಛ ಸಂಕೀರ್ಣಗಳ ಕಾರ್ಯನಿರ್ವಹಣೆ ಸುಲಭವಾಗಿದೆ. ಹಸಿ ಕಸದಿಂದ ಗೊಬ್ಬರ ಮತ್ತು ಒಣಕಸವನ್ನು ಮರು ಬಳಕೆಗೆ ಕಳಿಸುವ ಮುಖಾಂತರ ಆದಾಯದ ಮೂಲವನ್ನೂ ಕೆಲವು ಪಂಚಾಯಿತಿಗಳಲ್ಲಿ ಕಂಡುಕೊಳ್ಳಲಾಗಿದೆ.
ಆದರೆ ಪಟ್ಟಣ ಪ್ರದೇಶಗಳಲ್ಲಿ ಈಗಲೂ ದೊಡ್ಡ ಮಟ್ಟದ ಸಮಸ್ಯೆ ಇದೆ. ಮಡಿಕೇರಿ ಮತ್ತು ಇತರ ಮೂರು ಪ್ರಮುಖ ಪಟ್ಟಣಗಳಲ್ಲಿ ಈಗಲೂ ಘನ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ ಎನ್ನುವ ಆರೋಪ ಇದೆ. ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಘಟಕಗಳು ಇನ್ನೂ ಸ್ಥಾಪನೆ ಅಥವಾ ಪ್ರಾಯೋಗಿಕ ಹಂತದಲ್ಲೇ ಇವೆ. ಮೂಲದಲ್ಲಿ ಕಸ ವಿಂಗಡಣೆಯೂ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಜಿಲ್ಲೆಯ ಸ್ಥಳೀಯ ಆಡಳಿತಗಳಲ್ಲಿ ಸುಮಾರು ಶೇ.24ರಷ್ಟು ವಾರ್ಡ್ಗಳಿಂದ ವಿಂಗಡಣೆ ಇಲ್ಲದೆ ಕಸ ನೇರವಾಗಿಯೇ ಸಂಗ್ರಹಿಸಲಾಗುತ್ತಿದೆ.
ಸ್ಥಳೀಯ ಆಡಳಿತಗಳು ಘನ ತ್ಯಾಜ್ಯ ನಿರ್ವಹಣೆಯಲ್ಲಿ ಹಿನ್ನಡೆ ಸಾಧಿಸಲು ಮೂಲಭೂತ ಸೌಲಭ್ಯಗಳ ಕೊರತೆಯೂ ಬಹುಮುಖ್ಯ ಕಾರಣವಾಗಿದೆ. ಜಿಲ್ಲೆಯ ಯಾವ ಸ್ಥಳೀಯ ಆಡಳಿತದಲ್ಲೂ ಮಂಜೂರಾಗಿರುವಷ್ಟು ಸಂಖ್ಯೆಯಲ್ಲಿ ಪೌರ ಕಾರ್ಮಿಕರು ಇಲ್ಲ. ಶೇ.30 ರಷ್ಟು ಸಂಖ್ಯೆಯಲ್ಲಿ ಪೌರ ಕಾರ್ಮಿಕರ ಕೊರತೆ ಇದೆ. ಪ್ರತ್ಯೇಕ ಕಂಪಾರ್ಟ್ಮೆAಟ್ ಒಳಗೊಂಡಿರುವ ಟ್ರಾಲಿಗಳ ಅಗತ್ಯ ಇದ್ದು, ಇವುಗಳ ಸಂಖ್ಯೆಯೂ ಕಡಿಮೆ ಇದೆ. ಪ್ರತ್ಯೇಕ ಕಂಪಾರ್ಟ್ಮೆAಟ್ ಇರುವ ಕಿರು ವಾಹನಗಳು ಕಡಿಮೆ ಸಂಖ್ಯೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಕಸ ಸಾಗಿಸುವ 14 ಟ್ರಕ್‌ಗಳ ಸಂಖ್ಯೆಯೂ ಅಗತ್ಯಕ್ಕಿಂತ ಕಡಿಮೆ ಇದೆ.
ಪಟ್ಟಣದೊಳಗೆ ತ್ಯಾಜ್ಯ ಸಂಗ್ರಹಿಸುವ ಕೇಂದ್ರಗಳ ಅವಶ್ಯಕತೆಯಿದ್ದು, ಇಂಥ ಕೇಂದ್ರಗಳ ಕೊರತೆಯೂ ಜಿಲ್ಲೆಯಲ್ಲಿದೆ. ಹಾಗಾಗಿ ಮನೆಗಳಿಂದ ಸಂಗ್ರಹವಾಗುವ ಕಸ ನೇರವಾಗಿ ಡಂಪಿAಗ್ ಯಾರ್ಡ್ಗಳಿಗೆ ಸಾಗಿಸಲಾಗುತ್ತಿದೆ. ಶೇ. 80ರಷ್ಟು ವಾರ್ಡ್ಗಳಲ್ಲಿ ಮಾತ್ರ ಮನೆ ಮನೆಯಿಂದ ನೇರವಾಗಿ ಕಸ ಸಂಗ್ರಹಿಸುವ ವ್ಯವಸ್ಥೆ ಇದೆ. ಕಟ್ಟಡ ನಿರ್ಮಾಣ ಸಾಮಗ್ರಿಗಳ ತ್ಯಾಜ್ಯ ಒಳಗೊಂಡ ಜಡ ತ್ಯಾಜ್ಯ ನಿರ್ವಹಣೆಯೂ ನಗರ ಪ್ರದೇಶದಲ್ಲಿ ದೊಡ್ಡ ಸಮಸ್ಯೆಯಾಗಿದೆ.
ಮೂಲದಲ್ಲೇ ಕಸ ವಿಂಗಡಣೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯಾದ್ಯಂತ ನಗರ ಸ್ಥಳೀಯ ಸಂಸ್ಥೆಗಳಿಗೆ ಕಮ್ಯುನಿಟಿ ಮೊಬಿಲೈಸರ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಮ್ಯುನಿಟಿ ಮೊಬಿಲೈಸರ್‌ಗಳು ಮನೆ ಮನೆಗಳಿಗೆ ಭೇಟಿ ನೀಡಿ ಎಲ್ಲೆಂದರಲ್ಲಿ ಕಸ ಎಸೆಯುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳುವಳಿಕೆ ನೀಡುತ್ತಿದ್ದಾರೆ. ಮೂಲದಲ್ಲೇ ತ್ಯಾಜ್ಯ ವಿಲೇವಾರಿ ಮಾಡುವುದರಿಂದ ಆಗುವ ಲಾಭಗಳ ಬಗ್ಗೆ ಅರಿವು ಕೂಡ ಮೂಡಿಸಲಾಗುತ್ತಿದೆ.
ಸ್ಟೋನ್ ಹಿಲ್‌ನಲ್ಲಿ ಸಂಗ್ರಹ ಆಗಿರುವ ತ್ಯಾಜ್ಯದ ತೆರವು ಕಾರ್ಯ ಕೆಲಸ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ. ಆದಷ್ಟು ಶೀಘ್ರ ಅಲ್ಲಿಂದ ಕಸ ತೆರವು ಬಗ್ಗೆ ನಗರಸಭೆ ಎಲ್ಲಾ ಕಡೆಯಿಂದಲೂ ಒತ್ತಡ ಹಾಕಬೇಕು. ಈ ವಿಷಯವನ್ನು ಅಧಿಕಾರಿಗಳು ಲಘುವಾಗಿ ತೆಗೆದುಕೊಂಡಿರುವ ಆರೋಪಗಳಿವೆ. ಗುತ್ತಿಗೆದಾರನಿಗೆ ನೊಟೀಸ್ ಕೊಡಬೇಕು.