ಸರ್ಕಾರಿ ವಸತಿ ಯೋಜನೆ ಒಂದರ ಅಡಿಯಲ್ಲಿ ನಿರ್ಮಾಣ ಹಂತದಲ್ಲಿ ಇರುವ ಮನೆ
ಸ್ವಂತದ್ದೊ0ದು ಮನೆ ಅಥವಾ ನಿವೇಶನ ಇರಬೇಕು ಎನ್ನುವುದು ಸಾಮಾನ್ಯವಾಗಿ ಪ್ರತಿಯೊಬ್ಬರ ಕನಸಾಗಿರುತ್ತದೆ. ಇದಕ್ಕೆ ಪೂರಕವಾಗಿ ರಾಜಕಾರಣಿಗಳು ಕೂಡ ಎಲ್ಲರಿಗೂ ಮನೆ, ನಿವೇಶನ ರಹಿತರಿಗೆ ನಿವೇಶನ ಎನ್ನುವ ಜನಪ್ರಿಯ ಆಶ್ವಾಸನೆಯನ್ನು ಜಾರಿಯಲ್ಲಿಟ್ಟಿದ್ದಾರೆ. ಆದರೆ ಇವು ಆಶ್ವಾಸನೆಗಳಾಗಿಯೇ ಉಳಿದಿದ್ದು ಸರ್ಕಾರ ಈಗಿನ ವೇಗದಲ್ಲಿ ಮನೆ ಅಥವಾ ನಿವೇಶನ ಹಂಚಿಕೆ ಮಾಡಿದರೆ ಬಹುತೇಕರ ಕನಸನು ಕನಸಾಗಿಯೇ ಉಳಿಯುವ ಸಾಧ್ಯತೆಯೇ ಹೆಚ್ಚಾಗಿದೆ.
ವಸತಿ ರಹಿತರಿಗೆ ಮನೆಗಳನ್ನು ಕಟ್ಟಿಸಿಕೊಡುವ ಸಲುವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಜನಸಾಮಾನ್ಯರು ಕೂಡ ಇಂಥ ಯೋಜನೆಗಳ ಮೂಲಕ ಮನೆಗಳನ್ನು ಪಡೆದುಕೊಳ್ಳಲು ಪ್ರಯತ್ನ ನಡೆಸುತ್ತಲೇ ಇರುತ್ತಾರೆ. ಕಚೇರಿಯಿಂದ ಕಚೇರಿಗೆ ಅಲೆದಾಡಿ ದಾಖಲೆಗಳನ್ನು ಹೊಂದಿಸಿಕೊAಡು ಸ್ವ.ಂತ ಮನೆಯ ಕನಸಿಗಾಗಿ ಸತತ ಹೋರಾಟ ನಡೆಸುವುದೂ ಸಾಮಾನ್ಯವಾಗಿದೆ.
ರಾಜ್ಯದ ಗ್ರಾಮೀಣದ ಪ್ರದೇಶಗಳಲ್ಲಿ ವಸತಿ ಮತ್ತು ನಿವೇಶನ ರಹಿತರ ಬಗ್ಗೆ 2018ರಲ್ಲಿ ನಡೆದ ಸಮೀಕ್ಷೆ ಪ್ರಕಾರ ಕೊಡಗಿನ ಗ್ರಾಮೀಣ ಪ್ರದೇಶಗಳಲ್ಲಿ 8,490 ಮಂದಿ ವಸತಿ ರಹಿತರು ಇದ್ದು, 16,210 ನಿವೇಶನ ರಹಿತರನ್ನು ಗುರುತು ಮಾಡಲಾಗಿದೆ. ನಗರಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ಮನೆಗಳ ಬೇಡಿಕೆ ಕುರಿತು 2016-17 ಮತ್ತು 2017-18ರಲ್ಲಿ ಸಮೀಕ್ಷೆ ನಡೆಸಿದ ಸಂದರ್ಭ 1,180 ವಸತಿ ರಹಿತರು ಮತ್ತು 3,120 ನಿವೇಶನ ರಹಿತರು ಇರುವುದು ಕಂಡುಬAದಿದೆ. ಈ ಮೂಲಕ 8 ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಒಟ್ಟು 9,670 ವಸತಿ ರಹಿತರು ಮತ್ತು 19,330 ನಿವೇಶನ ರಹಿತರು ಇರುವ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿದೆ. ಈಗ ಸಮೀಕ್ಷೆ ನಡೆಸಿದರೆ ಈ ಸಂಖ್ಯೆ ಇದಕ್ಕಿಂತ ಶೇ.20-ಶೇ.30ರಷ್ಟು ಹೆಚ್ಚಾಗಿರಬಹುದು ಎನ್ನುತ್ತಾರೆ ಅಧಿಕಾರಿಗಳು.
ನಗರ ಮತ್ತು ಗ್ರಾಮೀಣ ಪ್ರದೇಶದ ವಸತಿ ರಹಿತರಿಗೆ ಮನೆಗಳನ್ನು ಕೊಡಲು ಸರ್ಕಾರ ಬಸವ ವಸತಿ, ಡಾ. ಅಂಬೇಡ್ಕರ್ ನಿವಾಸ್, ದೇವರಾಜ ಅರಸು ವಸತಿ, ವಾಜಪೇಯಿ ನಗರ ವಸತಿ, ಪ್ರಧಾನಮಂತ್ರಿ ಆವಾಸ್ ಹೀಗೆ ಹಲವು ಯೋಜನೆಗಳನ್ನು ರೂಪಿಸಿದೆ. ವಿವಿಧ ಇಲಾಖೆ, ನಿಗಮ, ಮಂಡಳಿಗಳ ಮೂಲಕ ಈ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದ್ದು, ಸ್ಥಳೀಯ ಆಡಳಿತ ಸಂಸ್ಥೆಗಳ ಮೂಲಕ ಫಲಾನುಭವಿಗಳನ್ನು ಗುರುತಿಸಿ ಪಾರದರ್ಶಕವಾಗಿ ಯೋಜನೆ ಜಾರಿಯ ರೂಪುರೇಷೆ ಸರ್ಕಾರದ ಮಟ್ಟದಲ್ಲಿ ಆಗುತ್ತದೆ.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ 2022-23ನೇ ವರ್ಷದಲ್ಲಿ ಬಸವ ವಸತಿ ಯೋಜನೆ ಅಡಿಯಲ್ಲಿ 1,554 ಮನೆಗಳ ನಿರ್ಮಾಣದ ಗುರಿ ಇಟ್ಟುಕೊಳ್ಳಲಾಗಿದ್ದು 1,058 ಮನೆಗಳನ್ನು ನಿರ್ಮಿಸಲಾಗಿತ್ತು. ದೇವರಾಜ ಅರಸು ವಸತಿ ಯೋಜನೆಯಲ್ಲಿ 4 ಮನೆಗಳ ನಿರ್ಮಾಣದ ಗುರಿ ಇದ್ದರೆ, 5 ಮನೆಗಳನ್ನು ಕಟ್ಟಲಾಗಿತ್ತು. ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆಯಲ್ಲಿ ಇಟ್ಟುಕೊಳ್ಳಲಾಗಿದ್ದ 321 ಗುರಿಗಳ ಪೈಕಿ 160 ಮನೆಗಳ ನಿರ್ಮಾಣ ಕಾರ್ಯ ಮಾತ್ರ ನಡೆದಿತ್ತು. ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ನಿಗದಿಯಾಗಿದ್ದ 117 ಮನೆಗಳ ಗುರಿಯಲ್ಲಿ 19 ಮನೆಗಳಷ್ಟೇ ನಿರ್ಮಾಣ ಆಗಿದ್ದವು.
2023-24ರಲ್ಲಿ ಬಸವ ವಸತಿ ಯೋಜನೆ ಅಡಿಯಲ್ಲಿ 1,554 ಮನೆಗಳ ನಿರ್ಮಾಣದ ಗುರಿ ಇಟ್ಟುಕೊಳ್ಳಲಾಗಿದ್ದು 647 ಮನೆಗಳನ್ನು ನಿರ್ಮಿಸಲಾಗಿತ್ತು. ದೇವರಾಜ ಅರಸು ವಸತಿ ಯೋಜನೆಯಲ್ಲಿ 4 ಮನೆಗಳ ನಿರ್ಮಾಣದ ಗುರಿ ಇದ್ದರೆ, 5 ಮನೆಗಳನ್ನು ಕಟ್ಟಲಾಗಿತ್ತು. ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆಯಲ್ಲಿ ಇಟ್ಟುಕೊಳ್ಳಲಾಗಿದ್ದ 606 ಮನೆಗಳ ಗುರಿಗಳ ಪೈಕಿ 416 ಮನೆಗಳ ನಿರ್ಮಾಣ ಕಾರ್ಯ ನಡೆದಿತ್ತು. ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ 6 ಮನೆಗಳ ಗುರಿ ನಿಗದಿ ಆಗಿದ್ದರೆ 13 ಮನೆಗಳನ್ನು ಕಟ್ಟಲಾಗಿತ್ತು.
2024-25ರಲ್ಲಿ ಬಸವ ವಸತಿ ಯೋಜನೆ ಅಡಿಯಲ್ಲಿ 1,003 ಮನೆಗಳ ನಿರ್ಮಾಣದ ಗುರಿ ಇಟ್ಟುಕೊಳ್ಳಲಾಗಿದ್ದು 516 ಮನೆಗಳನ್ನು ನಿರ್ಮಿಸಲಾಗಿತ್ತು. ದೇವರಾಜ ಅರಸು ವಸತಿ ಯೋಜನೆಯಲ್ಲಿ 2 ಮನೆಗಳ ನಿರ್ಮಾಣದ ಗುರಿ ಇದ್ದು ಒಂದೂ ಮನೆಯನ್ನು ಕಟ್ಟಲಿಲ್ಲ. ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆಯಲ್ಲಿ ಇಟ್ಟುಕೊಳ್ಳಲಾಗಿದ್ದ 452 ಮನೆಗಳ ಗುರಿಗಳ ಪೈಕಿ 240 ಮನೆಗಳ ನಿರ್ಮಾಣ ಕಾರ್ಯ ನಡೆದಿತ್ತು. ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ 26 ಮನೆಗಳ ಗುರಿ ನಿಗದಿ ಆಗಿದ್ದರೆ 40 ಮನೆಗಳನ್ನು ಕಟ್ಟಲಾಗಿತ್ತು. ಪಿಎಂ ಜನ ಮನ ಯೋಜನೆ ಅಡಿಯಲ್ಲಿ 1 ಮನೆಯ ಗುರಿ ಇದ್ದು ಅದು ಈಡೇರಲಿಲ್ಲ.
ಜಿಲ್ಲೆಯ ನಗರ ಪ್ರದೇಶಗಳಲ್ಲಿ 2022-23ನೇ ವರ್ಷದಲ್ಲಿ ಡಾ. ಬಿ. ಆರ್ ಅಂಬೇಡ್ಕರ್ ವಸತಿ ಯೋಜನೆಯಲ್ಲಿ 23 ಮನೆಗಳ ಗುರಿ ಪೈಕಿ 9 ಮನೆಗಳನ್ನಷ್ಟೇ ಕಟ್ಟಲಾಗಿತ್ತು. ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ 36 ಮನೆಗಳ ಗುರಿಯಲ್ಲಿ 31 ಮನೆಗಳ ನಿರ್ಮಾಣ ಕಾರ್ಯ ನಡೆದಿತ್ತು. ವಾಜಪೇಯಿ ನಗರ ವಸತಿ ಯೋಜನೆಯ 101 ಮನೆಗಳ ಗುರಿಯಲ್ಲಿ 15 ಮನೆಗಳು ಮಾತ್ರ ನಿರ್ಮಾಣ ಆಗಿದ್ದವು.
2023-24ನೇ ಸಾಲಿಗೆ ಡಾ. ಬಿ. ಆರ್ ಅಂಬೇಡ್ಕರ್ ವಸತಿ ಯೋಜನೆಯಲ್ಲಿ 23 ಮನೆಗಳ ಗುರಿ ಪೈಕಿ 12 ಮನೆಗಳನ್ನು ಕಟ್ಟಲಾಗಿತ್ತು. ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ 11 ಮನೆಗಳ ಗುರಿಯಲ್ಲಿ 14 ಮನೆಗಳ ನಿರ್ಮಾಣ ಕಾರ್ಯ ನಡೆದಿತ್ತು. ವಾಜಪೇಯಿ ನಗರ ವಸತಿ ಯೋಜನೆಯ 57 ಮನೆಗಳ ಗುರಿಯಲ್ಲಿ 37 ಮನೆಗಳು ಮಾತ್ರ ನಿರ್ಮಾಣ ಆಗಿದ್ದವು.
2024-25ನೇ ಸಾಲಿಗೆ ಡಾ. ಬಿ. ಆರ್ ಅಂಬೇಡ್ಕರ್ ವಸತಿ ಯೋಜನೆಯಲ್ಲಿ 27 ಮನೆಗಳ ಗುರಿ ಪೈಕಿ 23 ಮನೆಗಳನ್ನು ಕಟ್ಟಲಾಗಿತ್ತು. ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ 16 ಮನೆಗಳ ಗುರಿಯಲ್ಲಿ 10 ಮನೆಗಳ ನಿರ್ಮಾಣ ಕಾರ್ಯ ನಡೆದಿತ್ತು. ವಾಜಪೇಯಿ ನಗರ ವಸತಿ ಯೋಜನೆಯ 53 ಮನೆಗಳ ಗುರಿಯಲ್ಲಿ 34 ಮನೆಗಳು ಮಾತ್ರ ನಿರ್ಮಾಣ ಆಗಿದ್ದವು.
ಒಟ್ಟಾರೆಯಾಗಿ ಕಳೆದ 3 ವರ್ಷಗಳಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ 3,119 ಮನೆಗಳು ಮತ್ತು ನಗರ ಪ್ರದೇಶಗಳಲ್ಲಿ 207 ಮನೆಗಳು ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ನಿರ್ಮಾಣ ಆಗಿದೆ. ಬೇಡಿಕೆ ಇರುವ ಮನೆಗಳ ಸಂಖ್ಯೆಗೆ ಹೋಲಿಸಿದರೆ ಜಿಲ್ಲೆಯಲ್ಲಿ ಇರುವ ವಸತಿ ರಹಿತರಿಗೂ ನಿರ್ಮಾಣ ಆಗುತ್ತಿರುವ ಮನೆಗಳ ಸಂಖ್ಯೆಗೂ ಅಜಗಜಾಂತರ ಇದೆ. ಸರ್ಕಾರ ಈ ಬಜೆಟ್‌ನಲ್ಲಾದರೂ ನಿವೇಶನ ರಹಿತರು ಮತ್ತು ವಸತಿ ರಹಿತರ ಕಡೆಗೆ ಗಮನ ಹರಿಸಲಿ ಎನ್ನುವುದು ಸ್ಥಳೀಯರ ನಿರೀಕ್ಷೆ.
ಮಡಿಕೇರಿ ನಗರದ ನಿವೇಶನ ರಹಿತ ನಿವಾಸಿಗಳಿಗೆ ನಿವೇಶನ ಗುರುತಿಸಿ ವಸತಿ ಸೌಲಭ್ಯ ಒದಗಿಸಬೇಕಿದೆ. ಜಿಲ್ಲೆಯ ಜನಪ್ರತಿನಿಧಿಗಳು ಇಲ್ಲಿಯ ವಸತಿ ಸಮಸ್ಯೆ ಬಗ್ಗೆ ಸದನದಲ್ಲಿ ಚರ್ಚಿಸಬೇಕು. ಮಳೆಹಾನಿ ಸಂತ್ರಸ್ತರಿಗೆ ನಿರ್ಮಿಸಿರುವ ಮನೆಗಳು ಪಾಳುಬಿದ್ದಿದ್ದು, ಇದನ್ನು ವಸತಿ ರಹಿತ ಬಡವರಿಗೆ ಹಂಚಿಕೆ ಮಾಡಬೇಕು.
2018ರಲ್ಲಿ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ವಸತಿ ಮತ್ತು ನಿವೇಶನ ರಹಿತರ ಸಮೀಕ್ಷೆ ನಡೆಸಲಾಗಿತ್ತು. 2016-17 ಮತ್ತು 2017-18ನೇ ಸಾಲಿನಲ್ಲಿ ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಬೇಡಿಕೆ ಸಮೀಕ್ಷೆ ಮಾಡಲಾಗಿತ್ತು. 2022-23, 2024-25ನೇ ಸಾಲಿನಲ್ಲಿ 9 ಲಕ್ಷ ಮನೆಗಳನ್ನು ನಿರ್ಮಿಸಲು ಸರ್ಕಾರ ಗುರಿ ಹೊಂದಿತ್ತು. ಗ್ರಾಮೀಣ ಪ್ರದೇಶದಲ್ಲಿ 4,21,445 ಮತ್ತು ನಗರ ಪ್ರದೇಶದಲ್ಲಿ 1,36,723 ಮನೆಗಳು ಒಟ್ಟಾರೆಯಾಗಿ 5,58,168 ಮನೆಗಳನ್ನು ನಿರ್ಮಿಸಲಾಗಿದೆ.