ಪೊನ್ನಂಪೇಟೆ ಮಾತಾಯಿ ಪುರುಷ ಸ್ವ-ಸಹಾಯ ಸಂಘದಿಂದ ಶಿವರಾತ್ರಿ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ಪರಹಿತಾನಂದ ಮಹಾರಾಜ್, ಕಂದಾ ಸುಬ್ಬಯ್ಯ, ಕರುಣಾಕರ, ದಯಾ ಚಂಗಪ್ಪ, ವಿನೋದ್, ಮನು ಸೋಮಯ್ಯ, ರವಿಶೆಟ್ಟಿ, ಐನಂಡ ಮಂದಣ್ಣ, ರಂಗಯ್ಯ ಹಾಗೂ ಇತರರಿದ್ದರು.
ಪೊನ್ನಂಪೇಟೆ: ನಮ್ಮ ಜನ್ಮ ಜನ್ಮಾಂತರದ ಪಾಪ ಕಳೆಯಲು ಶಿವರಾತ್ರಿ ದಿನದಂದು ಜಾಗರಣೆ ಮಾಡಲಾಗುತ್ತಿದೆ. ಅಪರೂಪವಾಗಿ ಸಿಕ್ಕಂತಹ ಈ ಮಾನವ ಜನ್ಮ ದೊಡ್ಡದು, ಈ ಜನ್ಮದಲ್ಲಿ ಸಕಲ ಜೀವಿಗಳಿಗೂ ಒಳ್ಳೆಯದನ್ನೇ ಮಾಡುವ ಸಂಕಲ್ಪ ಮಾಡಬೇಕು ಎಂದು ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಸ್ವಾಮಿ ಪರಹಿತಾನಂದ ಮಹಾರಾಜ್ ಹೇಳಿದರು.
ಪೊನ್ನಂಪೇಟೆಯ ಮಾತಾಯಿ ಪುರುಷ ಸ್ವ-ಸಹಾಯ ಸಂಘ ಕಾಟ್ರಕೊಲ್ಲಿ ವತಿಯಿಂದ ಇಲ್ಲಿನ ಬಸ್ ನಿಲ್ದಾಣದಲ್ಲಿ ಭಾನುವಾರ ಆಯೋಜಿಸಿದ್ದ 20ನೇ ವರ್ಷದ ಮಹಾ ಶಿವರಾತ್ರಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಲರಿಗೂ ಈ ಶಿವರಾತ್ರಿ ಒಳಿತು ಮಾಡಲಿ ಎಂದು ಹಾರೈಸಿದರು.
ಸಂತ ಅಂಥೋನಿ ಶಾಲೆಯ ಫಾದರ್ ಮನೋಜ್ ಇಮಾನುವಲ್ ಮಾತನಾಡಿ, 20 ವರ್ಷಗಳಿಂದ ಶಿವರಾತ್ರಿ ಉತ್ಸವವನ್ನು ಬಹಳ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವಂತಹ ಮಹಾತಾಯಿ ಪುರುಷ ಸ್ವಸಹಾಯ ಸಂಘ ಉತ್ಸುಕತೆಯಿಂದ ಇಂತಹ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಸಂತೋಷದ ವಿಷಯ. ಎಲ್ಲ ಧರ್ಮವು ಒಂದೇ, ಆಧ್ಯಾತ್ಮಿಕತೆಯೂ ಒಂದೇ. ನಾವೆಲ್ಲರೂ ಮಾನವೀಯತೆಯಿಂದ ಬದುಕಿದಾಗ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದರು.
ಪೊನ್ನಂಪೇಟೆ ಪ್ಯಾಕ್ಸ್ ಅಧ್ಯಕ್ಷ ಚೀರಂಡ ಕಂದಾಸುಬ್ಬಯ್ಯ ಮಾತನಾಡಿದರು. ಇದಕ್ಕೂ ಮುನ್ನ ಸಂಘದಿಂದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮ: ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಕಾವೇರಿ ಕಲಾಸಿರಿ ತಂಡದಿಂದ ಸಂಗೀತ ರಸಮಂಜರಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪೊನ್ನಂಪೇಟೆಯ ನಿವೃತ್ತ ಸೇನಾಧಿಕಾರಿ ಐನಂಡ ಕೆ.ಮಂದಣ್ಣ, ಕೆಪಿಎಸ್ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ರಂಗಯ್ಯ, ಕಿರುಗೂರಿನ ಪ್ರಗತಿಪರ ಕೃಷಿಕ ರವಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸರ್ಕಾರಿ ಶಾಲೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಪೊನ್ನಂಪೇಟೆ ಭಾಗದ 7, 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು.
ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ಮಾತಾಯಿ ಪುರುಷ ಸ್ವಸಹಾಯ ಸಂಘದ ಅಧ್ಯಕ್ಷ ಕರುಣಾಕರ, ಗೌರವ ಅಧ್ಯಕ್ಷ ಸಿ.ಬಿ.ವಿನೋದ್, ಪೊನ್ನಂಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೀರಂಡ ಕಂದಾ ಸುಬ್ಬಯ್ಯ, ಪೆರುಂಬಾಡಿಯ ಸಂಷುದ್ ಉಲಾಮ ಶಾಲೆಯ ಶಿಕ್ಷಕ ಆಲಿ ಮಾಸ್ಟರ್, ದೇಗುಲ ಆಡಳಿತ ಮಂಡಳಿ ಕಾರ್ಯದರ್ಶಿ ಪಿ. ಕೆ.ಸುದರ್ಶನ್, ಖಜಾಂಚಿ ಎ.ಎಹನೀಫ್, ಸದಸ್ಯರಾದ ವಿ.ಬಿ.ರುದ್ರಪ್ಪ, ವಿ. ವಿ.ಸುರೇಶ್, ಎಂ.ಬಿ.ಅನೀಸ್, ಕೆ.ಬಿ.ವಿನು, ಟಿ.ವಿ.ಮುರಳಿ, ಎಚ್.ಬಿ.ಸುರೇಶ್, ಅಣ್ಣಪ್ಪ, ಕೆ.ಎಚ್.ಉಮ್ಮರ್ ಇತರರು ಇದ್ದರು.