ಕಾವೇರಿ ನದಿಗೆ ರಾಸಾಯನಿಕಯುಕ್ತ ನೀರು ಸೇರಿದ ಕಾರಣ ನದಿಯಲ್ಲಿ ನೊರೆ ಕಾಣಿಸಿಕೊಂಡಿರುವುದು. 
ಕೊಡಗು

ಅಪಾಯದಲ್ಲಿದೆ ಜೀವನದಿ ಕಾವೇರಿ

ಪ್ರಮುಖ ಮುಖ್ಯಾಂಶಗಳು

  • ಉಗಮಸ್ಥಾನದಲ್ಲೇ ಕಾವೇರಿ ಮಲೀನ
  • ನೇರವಾಗಿ ಕುಡಿಯಲಾಗದ ಸ್ಥಿತಿ
  • ಎಚೆತ್ತುಕೊಳ್ಳದಿದ್ದರೆ ಪರಿಸ್ಥಿತಿ ಗಂಭೀರ
ಮಡಿಕೇರಿ:
ನದಿ ದಂಡೆ ಅತಿಕ್ರಮಣ, ಮಾಲಿನ್ಯಯುಕ್ತ ನೀರು ಸೇರ್ಪಡೆ, ಅವೈಜ್ಞಾನಿಕ ನೀರಾವರಿ ಮತ್ತಿತರ ಕಾರಣಗಳಿಂದ ಜೀವನದಿ ಕಾವೇರಿ ಅಪಾಯದಲ್ಲಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಗುರುತಿಸಿರುವ ಕುಡಿಯಲು ಯೋಗ್ಯವಲ್ಲದ ನೀರು ಹೊಂದಿರುವ ರಾಜ್ಯದ 12 ನದಿಗಳ ಪೈಕಿ ಕಾವೇರಿಯೂ ಒಂದಾಗಿದ್ದು, ಜನರು ಎಚ್ಚೆತ್ತುಕೊಳ್ಳಲೇಬೇಕಾದ ಅನಿವಾರ್ಯತೆ ನಿರ್ಮಾಣ ಆಗಿದೆ. ಮುಂದೆ ಬೇಸಿಗೆಯಲ್ಲಿ ಪರಿಸ್ಥಿತಿ ಕೈಮೀರುವ ಎಲ್ಲಾ ಲಕ್ಷಣಗಳೂ ಕಂಡುಬರುತ್ತಿದೆ.
ಇತ್ತೀಚೆಗೆ ಬಿಡುಗಡೆ ಆಗಿರುವ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿ ಪ್ರಕಾರ ಕಾವೇರಿ ಸೇರಿದಂತೆ ರಾಜ್ಯದ 12 ಪ್ರಮುಖ ನದಿಗಳ ನೀರು ನೇರವಾಗಿ ಕುಡಿಯಲು ಯೋಗ್ಯವಾಗಿಲ್ಲ ಎನ್ನುವುದು ಬಹಿರಂಗವಾಗಿದೆ. ಜೀವನದಿ ಕಾವೇರಿಯ ತವರು ಜಿಲ್ಲೆ ಕೊಡಗಿನಲ್ಲೇ ನದಿ ಮಾಲಿನ್ಯಕ್ಕೆ ಒಳಗಾಗುತ್ತಿದೆ. ಜಿಲ್ಲೆಯ ಗಡಿ ಭಾಗ ಶಿರಂಗಾಲ ದಾಟಿ ಮುಂದಕ್ಕೆ ಹೋಗುವಾಗ ನೀರಿನ ಗುಣಮಟ್ಟ ಸಿ ದರ್ಜೆ ತಲುಪಿರುತ್ತದೆ.
ನದಿಯ ಉಗಮಸ್ಥಾನದಿಂದ ಕೇವಲ 8 ಕಿಮೀ ದೂರದ ಭಾಗಮಂಡಲದಲ್ಲೇ ಕಾವೇರಿ ನದಿಯ ನೀರು ನೇರವಾಗಿ ಕುಡಿಯುವ ಸ್ಥಿತಿಯಲ್ಲಿ ಇಲ್ಲ. ಬೇಸಿಗೆ ಅವಧಿಯಲ್ಲಿ ನೀರಿನ ಗುಣಮಟ್ಟ ಸಿ (ಮೀನುಗಾರಿಕೆ ಮತ್ತು ಇತರ ಚಟುವಟಿಕೆಗಳಿಗೆ ಸೂಕ್ತ) ವರ್ಗಕ್ಕೆ ತಲುಪಿರುತ್ತದೆ. ಮಳೆಗಾಲದಲ್ಲಿ ಬಿ (ಸಂಸ್ಕರಿಸಿದ ನಂತರವಷ್ಟೇ ಗೃಹಬಳಕೆಗೆ ಯೋಗ್ಯ) ವರ್ಗದಲ್ಲಿ ಇರುತ್ತದೆ. ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರತಿ ತಿಂಗಳು ನದಿ ನೀರನ್ನು ಪರೀಕ್ಷೆಗೆ ಒಳಪಡಿಸುವ ವೇಳೆ ಈ ಅಂಶ ತಿಳಿದುಬಂದಿದೆ.
ನದಿ ಪಾತ್ರದಲ್ಲಿ ಮಿತಿ ಮೀರಿದ ಮಾನವ ಹಸ್ತಕ್ಷೇಪದಿಂದಾಗಿ ಕಾವೇರಿ ಕೂಡ ಇನ್ನೊಂದು ಲP್ಷÀ್ತçö್ಮಣತೀರ್ಥ ಅಥವಾ ವÊಷಭಾವತಿ ಆಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ. ಕಾವೇರಿ ಉಗಮ ಸ್ಥಾನ ತಲಕಾವೇರಿಯಿಂದ ಕೊಡಗಿನ ಗಡಿಭಾಗ ಶಿರಂಗಾಲದ ತನಕ ಒಟ್ಟು 23 ಗ್ರಾಮ ಪಂಚಾಯಿತಿಗಳು ಮತ್ತು ಒಂದು ಪುರಸಭೆ ಕಾವೇರಿ ನದಿ ದಂಡೆಯಲ್ಲಿದೆ. ಇಷ್ಟೂ ಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯ ನೀರು ಯಾವುದೇ ಸಂಸ್ಕರಣೆ ಇಲ್ಲದೆ ನೇರವಾಗಿ ನದಿ ಸೇರುತ್ತಿರುವುದು ಕಾವೇರಿಯ ಪಾಲಿಗೆ ಮರಣ ಶಾಸನ ಬರೆದಂತಿದೆ.
2011ರ ಜನಗಣತಿ ಪ್ರಕಾರ 15,326 ಜನಸಂಖ್ಯೆ ಹೊಂದಿರುವ ಕುಶಾಲನಗರ ಪುರಸಭೆಯ ತ್ಯಾಜ್ಯ ನೀರು ಕೂಡ ಇದೇ ನದಿಗೆ ಸೀದಾ ಬಂದು ಸೇರುತ್ತದೆ. ನಗರ ನೀರು ಸರಬರಾಜು ಮತ್ತು ಒಳಚರಿಂಡಿ ಮಂಡಳಿಯಿAದ ಪಟ್ಟಣದಲ್ಲಿ ಒಳಚರಂಡಿ ಯೋಜನೆ ಕಾಮಗಾರಿ ಕಳೆದ 10 ವರ್ಷದಿಂದ ನಡೆಯುತ್ತಲೇ ಇದ್ದು, ಕಾಮಗಾರಿ ಅಪೂರ್ಣವಾಗಿರುವುದರಿಂದ ಸ್ವಲ್ಪ ಮಟ್ಟಿಗೆ ಮಾತ್ರ ಸಂಸ್ಕರಿತ ನೀರು ನದಿಗೆ ಸೇರ್ಪಡೆ ಆಗುತ್ತದೆ. ಬಹುತೇಕ ಕಾಫಿ ಸಂಸ್ಕರಣಾ ಘಟಕಗಳೇ ಇರುವ ಜಿಲ್ಲೆಯ ಏಕೈಕ ಕೈಗಾರಿಕಾ ಪ್ರದೇಶ ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲೂ ನದಿಯ ಪರಿಸ್ಥಿತಿ ಹೀಗೆಯೇ ಇದೆ.
ಕೊಡಗಿನಲ್ಲಿ ಹೆಚ್ಚಾಗಿರುವ ರೆಸಾರ್ಟ್ಗಳು, ಹೋಂ ಸ್ಟೇ, ನಗರೀಕರಣ, ಪ್ರವಾಸೋದ್ಯಮ ಕಾರಣದಿಂದ ನದಿ ನೀರು ಕಲುಷಿತಗೊಳ್ಳುತ್ತಿವೆ ಎಂಬ ಆರೋಪಗಳಿವೆ. ನದಿ ತಟದಲ್ಲಿ ಅಕ್ರಮ ಮತ್ತು ಅವೈಜ್ಞಾನಿಕ ಕಾರ್ಯಚಟುವಟಿಕೆಗಳಿಂದ ನದಿಗೆ ಕಲಷಿತ ನೀರು ನೇರವಾಗಿ ಸೇರುತ್ತಿದೆ. ನದಿ ತಟದಲ್ಲಿ ಹೋಟೆಲ್ ರೆಸಾರ್ಟ್, ಹೋಂ ಸ್ಟೇಗಳಿಂದ ನದಿಗೆ ನೇರವಾಗಿ ಕಲುಷಿತ ನೀರು ಹರಿಸಲಾಗುತ್ತಿದೆ. ಪೂಜೆ, ಶುಭ ಕಾರ್ಯಕ್ಕೆ ಬಳಸಿದ ಪೂಜಾ ಸಾಮಗ್ರಿಗಳು, ದೇವರ ಫೋಟೋಗಳನ್ನು ನದಿಯಲ್ಲಿ ವಿಸರ್ಜಿಸಲಾಗುತ್ತಿದೆ. ಮೀನು, ಮಾಂಸದ ಮಳಿಗೆಗಳ ತ್ಯಾಜ್ಯವನ್ನು ನದಿಗೆ ಎಸೆಯಲಾಗುತ್ತಿದೆ. ಈಚೆಗಷ್ಟೇ ಕುಶಾಲನಗರದಲ್ಲಿ ಕಾವೇರಿ ನದಿಗೆ ರಾಸಾಯನಿಕಯುಕ್ತ ನೀರನ್ನು ಹರಿಸಿದ ಪರಿಣಾಮ ನದಿಯಲ್ಲಿ ದೊಡ್ಡ ಪ್ರಮಾಣದಲ್ಲಿ ನೊರೆ ಕಾಣಿಸಿಕೊಂಡಿತ್ತು.
ಮಾಲಿನ್ಯಕ್ಕೆ ಏನು ಕಾರಣ ?
ಮನೆ, ಹೊಟೇಲ್, ಕೈಗಾರಿಕೆ ತ್ಯಾಜ್ಯ ನೀರು ನೇರವಾಗಿ ನದಿಗೆ ಬಿಡುವುದು, ಕಾಫಿ ಫಲ್ಪಿಂಗ್ ನೀರು ಕಾವೇರಿ ಸೇರ್ಪಡೆ, ನದಿ ದಂಡೆಗಳ ಒತ್ತುವರಿ,
ನದಿ ದಂಡೆಯಲ್ಲಿ ಹೋಂಸ್ಟೇ, ರೆಸಾರ್ಟ್, ಹೊಟೇಲ್‌ಗಳ ನಿರ್ಮಾಣ, ಪರಿಸರಕ್ಕೆ ಪೂರಕವಲ್ಲದ ಚಟುವಟಿಕೆಗಳು, ಅವೈಜ್ಞಾನಿಕ ಮರಳು ಗಣಿಗಾರಿಕೆ. ಹೆಚ್ಚಾಗುತ್ತಿರುವ ಪ್ರವಾಸಿ ತಾಣಗಳು, ಏರುತ್ತಿರುವ ಪ್ರವಾಸಿಗರ ಒತ್ತಡ ಮತ್ತಿತರ ಅಂಶಗಳು ಕಾವೇರಿ ನದಿ ಮಾಲಿನ್ಯಕ್ಕೆ ಕೊಡುಗೆ ನೀಡುತ್ತಿವೆ.
ಪರಿಹಾರ ಏನು ?
ಶುಚಿತ್ವದ ಬಗ್ಗೆ ಜನರಲ್ಲಿ ಜಾಗÊತಿ ಮತ್ತು ಅರಿವು ಮೂಡಿಸುವುದು, ಪ್ರಮುಖ ಸ್ಥಳಗಳಲ್ಲಿ ನದಿಯ ಎರಡೂ ಬದಿಗಳಲ್ಲಿ ತಡೆಗೋಡೆ ನಿರ್ಮಾಣ,
ನದಿ ತಟದ ಪ್ರವಾಸಿ ಕೇಂದ್ರ, ಊರುಗಳಲ್ಲಿ ಅತ್ಯಾಧುನಿಕ ಶೌಚಗೃಹಗಳ ನಿರ್ಮಾಣ, ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕುವುದು, ನದಿ ಸ್ವಚ್ಛತೆಗೆ ಸ್ಥಳೀಯ ಗ್ರಾಮ ಪಂಚಾಯಿತಿ ಸೇರಿದಂತೆ ಸ್ಥಳೀಯ ಆಡಳಿತದ ಜತೆ ಸಾರ್ವಜನಿಕರ ಸಹಭಾಗಿತ್ವ. ನದಿ ಸ್ವಚ್ಛತೆಗೆ ಸಂಬAಧಿಸಿದAತೆ ವಿಶೇಷ ಗ್ರಾಮ ಸಭೆಗಳನ್ನು ನಡೆಸುವುದು, ನದಿಗಳ ಉಸ್ತುವಾರಿಗೆ ಗ್ರಾಮ ಮಟ್ಟದಲ್ಲಿ ಸಮಿತಿಗಳ ರಚನೆ, ನದಿ ತಟದಲ್ಲಿನ ಮನೆ ಸೇರಿದಂತೆ ಅಕ್ರಮ ನಿರ್ಮಾಣಗಳನ್ನು ತೆರವು ಮಾಡಿ ಅವರಿಗೆ ಪುನರ್ವಸತಿ ಕಲ್ಪಿಸುವುದು, ನಿರ್ಬಂದಿತ ಪ್ರವಾಸೋದ್ಯಮ ನೀತಿ ರೂಪಿಸುವುದು, ನದಿ ತಟವನ್ನು ನಿಷೇಧಿತ ಪ್ರದೇಶ ಎಂದು ಘೋಷಿಸುವುದು, ನದಿ ಸಂರP್ಷÀಣೆಗಾಗಿಯೇ ಕಾನೂನು ರೂಪಿಸುವ ಮೂಲಕ ಸರ್ಕಾರಗಳು ಶಾಶ್ವತ ಯೋಜನೆ ಪ್ರಕಟಿಸುವುದು ಮತ್ತಿತರ ಯೋಜನೆಗಳ ಮೂಲಕ ನದಿ ಮಾಲಿನ್ಯ ತಡೆಗಟ್ಟಬಹುದಾಗಿದೆ ಎಂದು ಪರಿಸರವಾದಿಗಳು ಅಭಿಪ್ರಾಯಪಡುತ್ತಾರೆ.
"

ಜೀವನದಿ ಕಾವೇರಿ ಮಲೀನವಾಗಿರುವುದು ಆತಂಕಕಾರಿ ವಿಷಯ. ಈ ಬಗ್ಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಈಗಾಗಲೇ ನಡೆಸಲಾಗಿದೆ. ಶಾಲಾ-ಕಾಲೇಜು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸಗಳೂ ಆಗಿವೆ. ಸಾರ್ವಜನಿಕರೇ ಸ್ವಯಂ ಪ್ರೇರಿತರಾಗಿ ನದಿ ರಕ್ಷಣೆಗೆ ಮುಂದಾಗಬೇಕು. ಆಗ ಮಾತ್ರ ಜೀವನದಿಯನ್ನು ಉಳಿಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಈಗ ನಾವುಗಳು ಮುಂದಡಿ ಇಡದಿದ್ದರೆ ಕಾವೇರಿ ಉಳಿಸಿಕೊಳ್ಳುವುದು ಕಷ್ಟ.

"

ನದಿಗಳ ಮಾಲಿನ್ಯ ಪ್ರಮಾಣವನ್ನು ಪ್ರತಿ ತಿಂಗಳೂ ಪರಿಶೀಲಿಸಲಾಗುತ್ತಿದೆ. ಮಳೆಗಾಲದಲ್ಲಿ ಮಾಲಿನ್ಯದ ಪ್ರಮಾಣ ಸ್ವಲ್ಪ ಕಡಿಮೆ ಇರುತ್ತದೆ. ನದಿಯಲ್ಲಿ ನೀರು ಕಡಿಮೆ ಆಗುತ್ತಿದ್ದಂತೆಯೇ ಇದು ಏರಿಕೆ ಆಗುತ್ತದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ನದಿಯ ಮಾಲಿನ್ಯ ಹೆಚ್ಚಾಗುತ್ತಿದೆ. ಕಾವೇರಿ ನದಿ ಕೆಲವು ಸಂದರ್ಭಗಳಲ್ಲಿ ಸಿ ದರ್ಜೆ ತಲುಪಿರುತ್ತದೆ. ನದಿಗಳು ಜೀವ ಜಗತ್ತಿನ ಜೀವನಾಡಿ. ಇವುಗಳನ್ನು ಉಳಿಸಿಕೊಳ್ಳುವುದು ಎಲ್ಲರ ಜವಾಬ್ದಾರಿ ಆಗಿದೆ.