ಪ್ರಮುಖ ಮುಖ್ಯಾಂಶಗಳು
ನಾವು ಹೋಟೆಲ್ ಉದ್ಯಮದಲ್ಲಿ ಇರುವುದರಿಂದ ಹೆಚ್ಚಿನ ಮಂದಿ ಗ್ರಾಹಕರ ರೂಪದಲ್ಲಿ ಬಂದರೆ ಒಳ್ಳೆಯದೇ. ಪ್ರವಾಸಿಗರು ಈಗ ದುಪ್ಪಟ್ಟಾಗಿರುವುದು ಸಂತೋಷದ ವಿಷಯವಾದರೂ ಮುಖ್ಯವಾಗಿರುವ ಒಂದು ಸಮಸ್ಯೆ ಎಂದರೆ ಪಾರ್ಕಿಂಗ್ ವ್ಯವಸ್ಥೆ. ಇತರ ನಗರಗಳಲ್ಲಿ 'ಡೆಡಿಕೇಟೆಡ್ ಪಾರ್ಕಿಂಗ್ ಏರಿಯಾ' ಇರುತ್ತದೆ. ಕುಶಾಲನಗರದಲ್ಲೂ ವಾಹನಗಳು ಪಾರ್ಕಿಂಗ್ ಮಾಡಲು ಅಂತಹ ಒಂದು ವ್ಯವಸ್ಥೆ ಬಂದರೆ ಒಳಿತು.
ಜಿಲ್ಲೆಗೆ ಸದ್ಯದ ಮಟ್ಟಿಗೆ ನೋಡುವುದಾದರೆ ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚುತ್ತಿದೆ. ಇದರೊಂದಿಗೆ ಇದೀಗ ವರ್ಷಾಂತ್ಯಕ್ಕೆ ಕೊಡಗಿಗೆ ಹೆಚ್ಚಿನ ಪ್ರವಾಸಿಗರ ದಂಡು ಬರುತ್ತಿರುವುದು ವಾಹನ ದಟ್ಟಣೆ ಹೆಚ್ಚಿಸುವುದರೊಂದಿಗೆ ವಾಯುಮಾಲಿನ್ಯದ ಪ್ರಮಾಣ ಜಾಸ್ತಿ ಮಾಡುತ್ತಿದೆ. ಇದರೊಂದಿಗೆ ಜಿಲ್ಲೆಯ ವಿವಿಧ ಕಡೆಗೆ ಭೇಟಿ ನೀಡಿ ಅವರು ಎಸೆಯುವಂಥ ತ್ಯಾಜ್ಯಗಳಿಂದಲೂ ಮಾಲಿನ್ಯದ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಬಹಳ ಇದೆ.
ಹೆಚ್ಚು ಪ್ರವಾಸಿಗರು ಕೊಡಗಿಗೆ ಬಂದರೆ ಟ್ರಾಫಿಕ್ ತೊಂದರೆಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕೊಡಗಿನ ಪ್ರಮುಖ ಪಟ್ಟಣಗಳಾದ ಗೋಣಿಕೊಪ್ಪಲು ಹಾಗೂ ಪೊನ್ನಂಪೇಟೆ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ಅಧಿಕ ಇರುವುದರಿಂದ ವರ್ಷಾಂತ್ಯಕ್ಕೆ ಇನ್ನೂ ಹೆಚ್ಚಾಗಿ ಸ್ಥಳೀಯರಿಗೆ ತುಂಬಾ ತೊಂದರೆ ಆಗಬಹುದು. ಚಳಿಗಾಲ ಆಗಿರುವುದರಿಂದ ವಾಯುಮಾಲಿನ್ಯದಿಂದ ಅಸ್ತಮಾ ರೋಗಿಗಳಿಗೆ ಸಮಸ್ಯೆ ಆಗಬಹುದು. ಪ್ರವಾಸಿಗರು ಹೆಚ್ಚಾದರೆ ಸುಂದರ ಕೊಡಗು ಮಲೀನವಾಗುವುದರಲ್ಲಿ ಸಂಶಯವಿಲ್ಲ. ಎಲ್ಲೆಂದರಲ್ಲಿ ಕಸ ಬಿಸಾಡುವುದರಿಂದ ಪೌರಕಾರ್ಮಿಕರಿಗೂ ಸಮಸ್ಯೆ ಆಗುತ್ತದೆ.
ಕೊಡಗಿಗೆ ಪ್ರವಾಸಿಗರು ನಿರೀಕ್ಷೆಗೂ ಮೀರಿ ಬರುತ್ತಿದ್ದಾರೆ. ಇದರಿಂದ ಅಲ್ಲಲಿ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ. ಕೊಡಗು ಪ್ರವಾಸಿ ತಾಣ ನಿಜ. ಆದರೆ ಪ್ರವಾಸಿಗರಿಗೆ ಕೊಡಗು ಪ್ರವೇಶಿಸುವ ದ್ವಾರದ ಬಳಿ ಅರಿವು ಮೂಡಿಸುವ ಕೆಲಸ ಆಗಬೇಕು. ಡಿಸೆಂಬರ್ ಅಂತ್ಯದಲ್ಲಿ ಮತ್ತು ಜನವರಿ ಮೊದಲನೇ ವಾರದಲ್ಲಿ ಪ್ರವಾಸಿಗರು ಹೆಚ್ಚು ಬರುವುದರಿಂದ ಅಲ್ಲಿಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡುವುದು ಸೂಕ್ತ. ದಯವಿಟ್ಟು ಸ್ವಚ್ಛ ಕೊಡಗನ್ನು ಹಾಳು ಮಾಡ ಬೇಡಿ. ಪ್ರಜ್ಞಾವಂತರಾದ ನಾವು ಯಾರೇ ಕಸ ಬಿಸಾಡಿದರೂ ಅವರಿಗೆ ತಿಳುವಳಿಕೆ ಹೇಳಬೇಕು.
ಪ್ರವಾಸಿಗರು ತಂಗುವ ಹೋಂ-ಸ್ಟೇ, ರೆಸಾರ್ಟ್, ಹೋಟೆಲ್-ಲಾಡ್ಜ್ಗಳಲ್ಲಿ ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಬೇಕು. ಪ್ರವಾಸಿಗರ ಜತೆ ಅವರ ಪ್ರವಾಸ ಕುರಿತು ಚರ್ಚಿಸಿ ಸೂಕ್ತ ಮಾರ್ಗದರ್ಶನ ನೀಡಬೇಕು. ಸ್ಥಳೀಯ ಪದ್ಧತಿಗಳು ಮತ್ತು ಕಾನೂನುಗಳ ಬಗ್ಗೆ ತಿಳಿಸಬೇಕು. ಹೊರವಲಯಗಳಲ್ಲಿ ಅಥವಾ ನಿರ್ಜನ ಪ್ರದೇಶಗಳಿಗೆ ಪ್ರವಾಸಿಗರು ತೆರಳದಂತೆ ಎಚ್ಚರಿಕೆ ವಹಿಸಬೇಕು. ಯಾವುದೇ ಅಹಿತಕರ ಘಟನೆ ಅಥವಾ ತಪ್ಪುಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಹಿಸಿ ಸರ್ಕಾರದ ಗಮನಕ್ಕೆ ತರಬೇಕು. ಯಾವುದೇ ಮಾದಕ ವಸ್ತುಗಳು ಹಾಗೂ ಮದ್ಯಪಾನ ಇತ್ಯಾದಿಗಳಿಗೆ ಅವಕಾಶ ನೀಡಬಾರದು ಎಂದು ಮಾಲೀಕರಿಗೆ ಸೂಚಿಸಲಾಗಿದೆ.