ಚೆಟ್ಟಳ್ಳಿಯಲ್ಲಿ ವಿರಾಟ್ ಹಿಂದೂ ಸಂಗಮ ಆಯೋಜನಾ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿರಾಟ್ ಹಿಂದೂ ಸಂಗಮ ಹಾಗೂ ಬೃಹತ್ ಶೋಭಾಯಾತ್ರೆ ಅದ್ಧೂರಿಯಾಗಿ ಸಾಗಿತು. 
ಕೊಡಗು

ಚೆಟ್ಟಳ್ಳಿಯಲ್ಲಿ ಮೊಳಗಿದ ಹಿಂದೂ ಸಂಗಮ ಕಹಳೆ

ಪ್ರಮುಖ ಮುಖ್ಯಾಂಶಗಳು

  • ಚೆಟ್ಟಳ್ಳಿಯಲ್ಲಿ ಮೊಳಗಿದ ಹಿಂದೂ ಸಂಗಮ ಕಹಳೆ
  • ಹಿಂದೂ ಸಮಾಜದ ರಕ್ಷಣೆಗೆ ಪಣ: ಪಟ್ಟಣದ ಉದ್ದಕ್ಕೂ ಕೇಸರಿಮಯ ವಾತಾವರಣ
ಮಡಿಕೇರಿ: ಧರ್ಮದ ಉಳಿವಿಗಾಗಿ, ರಾಷ್ಟ್ರದ ರಕ್ಷಣೆಗಾಗಿ ಎಂಬ ಉದಾತ್ತ ಧ್ಯೇಯವಾಕ್ಯದೊಂದಿಗೆ ಭಾನುವಾರ ಚೆಟ್ಟಳ್ಳಿಯಲ್ಲಿ ವಿರಾಟ್ ಹಿಂದೂ ಸಂಗಮ ಆಯೋಜನಾ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿರಾಟ್ ಹಿಂದೂ ಸಂಗಮ ಹಾಗೂ ಬೃಹತ್ ಶೋಭಾಯಾತ್ರೆ ಕಾರ್ಯಕ್ರಮ ಅಪಾರ ಜನಬೆಂಬಲದೊಂದಿಗೆ ಅತ್ಯಂತ ಅದ್ಧೂರಿಯಾಗಿ ಹಾಗೂ ಶಾಂತಿಯುತವಾಗಿ ನೆರವೇರಿತು.
ಚೇರಳ, ಶ್ರೀಮಂಗಲ, ಕೂಡ್ಲೂರು ಚೆಟ್ಟಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ ೧೫೦೦ಕ್ಕೂ ಅಧಿಕ ಹಿಂದೂ ಬಾಂಧವರು ಈ ಭವ್ಯ ಶೋಭಾಯಾತ್ರೆ ಮತ್ತು ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಬಲ ನೀಡಿದರು. ಶೋಭಾಯಾತ್ರೆಯು ವ್ಯಾಲಿ ಪ್ಲೇ ಶಾಲೆಯ ಮುಂಭಾಗದಿಂದ ಆರಂಭಗೊಂಡು ವಿವಿಧ ಸಾಂಸ್ಕೃತಿಕ ಪ್ರದರ್ಶನದೊಂದಿಗೆ ಚೆಟ್ಟಳ್ಳಿ ಪ್ರೌಢಶಾಲಾ ಆಟದ ಮೈದಾನದವರೆಗೆ ಸಾಗಿದ್ದು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕೇಸರಿ ಧ್ವಜಗಳ ಹಾರಾಟ, ಧಾರ್ಮಿಕ ಘೋಷಣೆಗಳನ್ನು ಮೊಳಗಿಸುತ್ತ ಶಿಸ್ತುಬದ್ಧವಾಗಿ ಸಾಗಿದ ಮೆರವಣಿಗೆ ಸಾರ್ವಜನಿಕರ ಗಮನ ಸೆಳೆಯಿತು. ಇದರಿಂದ ಪಟ್ಟಣದೂದ್ದಕ್ಕೂ ಕೇಸರಿಮಯ ವಾತಾವರಣ ನಿರ್ಮಾಣ ವಾಗಿ, ಚೆಟ್ಟಳ್ಳಿ ಸಂಪೂರ್ಣವಾಗಿ ಹಬ್ಬದ ಸೌರಭದಲ್ಲಿ ಮುಳುಗಿತು.
ಶೋಭಾಯಾತ್ರೆಯಲ್ಲಿ ಮಹಿಳೆಯರ ಪೂರ್ಣ ಕುಂಭ ಸ್ವಾಗತ, ನೆಲ್ಲಿಹುದಿಕೇರಿಯಶ್ರೀ ಮೂಕಾಂಬಿಕಾ ಭಜನೆ ಕುಣಿತ ತಂಡ, ಉಡೋತ್ ಮೊಟ್ಟೆ ಭಜನೆ ಕುಣಿತ, ಬೆಳ್ಳಿ ರಥ, ಶ್ರೀ ಶಬರೀಶ್ ಚೆಂಡೆಮೇಳ ತಂಡ(ಚೆಟ್ಟಳ್ಳಿ), ಹುಲಿ ವೇಷ ಹಾಗೂ ಮಂಗಳೂರು ತಂಡದವರಿಂದ ಆಕರ್ಷಕ ಸಾಂಸ್ಕೃತಿಕ ಪ್ರದರ್ಶನ, ಬೆಳ್ತಂಗಡಿಯ ಶ್ರೀ ಶೆಟ್ಟಿ ಆರ್ಟ್ಸ್ ಗೊಂಬೆ ಕುಣಿತ, ಬಾಳೆಗುಂಡಿ ಮತ್ತು ತ್ಯಾಗತ್ತೂರು ತಂಡದಿಂದ ಹಾಡಿ ಕುಣಿತ ನಡೆದವು. ಜೊತೆಗೆ ವಿಷ್ಣುವಿನ ಹಾಗೂ ವೀರಾಂಜನೇಯ ಅಲಂಕ್ರತ ಮಂಟಪ, ಈ ಎಲ್ಲ ಕಾರ್ಯಕ್ರಮಗಳು ಜನಮನ ರಂಜಿಸಿ, ಭಕ್ತಿಭಾವ ಹಾಗೂ ಸಂಭ್ರಮ ವನ್ನು ಮತ್ತಷ್ಟು ಹೆಚ್ಚಿಸಿದವು. ಯುವಕರು, ಮಹಿಳೆಯರು, ಹಿರಿಯ ನಾಗರಿಕರು ಸೇರಿದಂತೆ ಎಲ್ಲಾ ವಯೋಮಾನದವರು ಉತ್ಸಾಹದಿಂದ ಭಾಗವಹಿಸಿದ್ದು ವಿಶೇಷವಾಗಿತ್ತು.
ನಂತರ ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳು ದೀಪಬೆಳಗಿ ಭಾರತಾಂಬೆಗೆ ಪುಪ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಜು ಒಂದೇ ಮಾತರಂ ಗೀತೆಯನ್ನು ಹಾಡಿದರು.
ನಡೆದ ಧಾರ್ಮಿಕ ಸಭೆಯಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಸಂವಿಜ್ಞಾನ ತಜ್ಞರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಮಂಡ್ಯದ ಡಾ.ಸುಧಾಕರ ಹೊಸಳ್ಳಿ ಮಾತನಾಡಿ, ಸರ್ವರ ಏಳಿಗೆಯನ್ನು ರಕ್ಷಿಸುವುದೇ ಹಿಂದೂ ಸಮಾಜ. ಹಿಂದೂ ಸಮಾಜದ ಏಳಿಗೆಗೆ ಕಾಫಿರರು ಅಡ್ಡಿ ಪಡಿಸುತಿರುವುದು ಹಲವೆಡೆ ಕಂಡುಬರುತ್ತಿವುದು ವಿಪರ್ಯಾಸವೆಂದರು.
ದೇಶದ ರಕ್ಷಣೆಗಾಗಿ ದೇವರು ನಿರ್ಮಿಸಿದ ಹಿಂದೂಸ್ತಾನವಿದು. ಹಿಂದುತ್ವ ಉಳಿದರ‌್ಮೆಾತ್ರ ಭಾರತ ಉಳಿಯಲು ಸಾಧ್ಯ. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಹಿಂದೂತ್ವದ ಉಳಿವಿಗಾಗಿಯೇ ಸಂವಿದಾನವನ್ನು ರೂಪಿಸಿದ್ದಾರೆ. ಅಸ್ಪೃಶ್ಯತೆಯ ತೊಡಯುವ ಮೂಲಕ ಸಮಾನತೆಯನ್ನು ಕಾಪಾಡ ಬೇಕಿದೆಂದರು.
ಧರ್ಮ ಸಂರಕ್ಷಣೆ, ಸಾಮಾಜಿಕ ಸಾಮರಸ್ಯ, ಸಂಸ್ಕೃತಿ ರಕ್ಷಣೆ ಮತ್ತು ರಾಷ್ಟ್ರಭಕ್ತಿ ಕುರಿತಂತೆ ಪ್ರೇರಣಾದಾಯಕ ಭಾಷಣವನ್ನು ನೀಡಿದರು. ಹಿಂದೂ ಸಮಾಜದ ಏಕತೆ, ಶಿಸ್ತು, ಸಂಸ್ಕೃತಿ ಹಾಗೂ ಮೌಲ್ಯಗಳ ಮಹತ್ವವನ್ನು ತಿಳಿಸಲಾಯಿತು.
ಕೊಡಗು ಗೌಡ ಸಮಾಜ ಮಡಿಕೇರಿಯ ನಿಕಟ ಪೂರ್ವ ಅಧ್ಯಕ್ಷ ಪೇರಿಯನ ಪಿ.ಜಯಾನಂದ ಮಾತನಾಡಿ, ಕುಟಂಬದ ಪ್ರತಿಯೊಬ್ಬನಿಗೂ ಹಿಂದುತ್ವದ ಅರಿವನ್ನು ಮೂಡಿಸಬೇಕು. ಕಡಿಮೆಯಾಗುತಿರುವ ಹಿಂದೂಗಳ ಜನಸಂಖ್ಯೆಯನ್ನು ಹೆಚ್ಚಿಸಬೇಕೆಂದರು.
ಕಾಫಿ ಬೆಳೆಗಾರರು ಹಾಗೂ ಅವರ್ಸ್ ಕ್ಲಬ್‌ನ ಕಾರ್ಯದರ್ಶಿ ಕೊಂಗೇಟಿರ ವೀಣಾ ಅಪ್ಪಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತದ ಮಣ್ಣಿನ ಸಂಸ್ಕೃತಿ, ಆಚಾರವಿಚಾರವೇ ಹಿಂದುತ್ವ. ಭಾರತದ ಐಕ್ಯತೆ ರಕ್ಷಣೆ ಧೇಯವಾಗಿದೆ. ಸ್ರೀಯರು ಹಿಂದೂತ್ವದ ರಕ್ಷಣೆಗೆ ಪಣತೊಡಬೇಕು. ಎಲ್ಲಾ ಜಾತಿ ಜನಾಂಗ ಒಂದಾಗಿ ಧರ್ಮವನ್ನು ರಕ್ಷಿಸಿದರೆ ಧರ್ಮವು ನಮ್ಮನ್ನು ರಕ್ಷಿಸುತದೆಂದರು.
ಹಿಂದೂ ಮಲೆಯಾಳಿ ಸಮಾಜದ ಅಧ್ಯಕ್ಷೆ ಪಿ.ಕೆ.ಲೀಲಾ, ವಿರಾಟ್ ಹಿಂದೂ ಸಂಗಮದ ಆಯೋಜನ ಸಮಿತಿಯ ಸಂಯೋಜಕ ಪೇರಿಯನ ಉದಯಕುಮಾರ್, ಕಾಫಿ ಬೆಳೆಗಾರರಾದ ತಿರುಮಲೇಶ್ ಭಟ್ ವೇದಿಕೆಯಲ್ಲಿದ್ದರು. ಸ್ಥಳೀಯ ಸಂಘಟನೆಗಳು, ವಿವಿಧ ಸಂಘ ಸಂಸ್ಥೆಗಳು, ಹಿಂದೂ ಸಂಘ ಪರಿವಾರದ ಕಾರ್ಯಕರ್ತರು ಹಾಗೂ ನೂರಾರು ಸ್ವಯಂಸೇವಕರು ಶ್ರಮಿಸಿದರು.
ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಆಡಳಿತದ ಸಮನ್ವಯ ಸಹಕಾರದಿಂದ ಕಾರ್ಯಕ್ರಮ ಯಾವುದೇ ಅಹಿತಕರ ಘಟನೆಗಳಿಲ್ಲದೆ ಸಂಪೂರ್ಣ ಶಾಂತಿಯುತವಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಶಿಕ್ಷಕಿ ಉಮಾರಾಣಿ ಸ್ವಾಗತಿಸಿದರೆ, ಪೇರಿಯನ ಉದಯ ವಂದಿಸಿ, ಬಲ್ಲಾರಂಡ ಕಂಠಿಕಾರ್ಯಪ್ಪ ನಿರೂಪಿಸಿದರು. ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತ್ತು. ನಂತರ ಸಿಡಿಮದ್ದಿನ ಪ್ರದರ್ಶನ ನಡೆಯಿತು.