ಕೊಡ್ಲಿಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ದುಂಬಿತಾ ಉದ್ಘಾಟಿಸಿದರು. ಮಹಮ್ಮದ್ ಹನೀಫ್, ಸಂಧ್ಯಾ, ಶಾಲಿನಿ, ಫಾತಿಮಾ, ರಾಣಿ, ಜ್ಯೋತಿ ಇತರರಿದ್ದರು.
- ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹಮ್ಮದ್ ಹನೀಫ್ ಹೇಳಿಕೆ
ಶನಿವಾರಸಂತೆ: ದುಶ್ಚಟಗಳು ಸಮಾಜದ ಸ್ವಾಸ್ಥ್ಯವನ್ನು ಕದಡುತ್ತವೆ ಎಂದು ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹಮ್ಮದ್ ಹನೀಫ್ ಅಭಿಪ್ರಾಯಪಟ್ಟರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್, ಕೊಡಗು ಜನ ಜಾಗೃತಿ ವೇದಿಕೆ ಮತ್ತು ಕೊಡ್ಲಿಪೇಟೆ ಸರ್ಕಾರಿ ಪ್ರೌಢಶಾಲೆ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದರು. ದುಶ್ಚಟಗಳಿಂದಾಗಿ ಪ್ರಸ್ತುತ ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗುತ್ತಿದೆ. ಹಾಗಾಗಿ ವಿದ್ಯಾರ್ಥಿ ದಿಸೆಯಿಂದಲೇ ದುಶ್ಚಟಗಳ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ವಿದ್ಯಾರ್ಥಿಗಳು ಮಾದಕ ವಸ್ತುಗಳ ಸೇವನೆ ಸೇರಿದಂತೆ ಇತರ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಮತ್ತು ಇಂತಹವರಿಂದ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವುದು ಬೇಸರದ ವಿಷಯ ಎಂದು ವಿಷಾದಿಸಿದರು.
ಕೊಡ್ಲಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಣಾಧಿಕಾರಿ ದುಂಬಿತಾ ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯ ಮತ್ತು ತನ್ನ ವೈಯಕ್ತಿಕ ಜೀವನ ಹಾಳಾಗುತ್ತದೆ. ದುಶ್ಚಟಗಳಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಹಾಗಾಗಿ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ದುಶ್ಚಟಗಳ ಕುರಿತು ಅರಿವು ಮೂಡಿಸಬೇಕಾಗಿದೆ ಎಂದರು.
ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸಂಧ್ಯಾ ಮಾತನಾಡಿ, ಇಂಥ ಜಾಗೃತಿ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳು ಮತ್ತು ಸಮಾಜಕ್ಕೆ ಒಳಿತಾಗುತ್ತಿದೆ. ಈ ನಿಟ್ಟಿನಲ್ಲಿ ಧರ್ಮಸ್ಥಳ ಸಂಸ್ಥೆ ಸಮಾಜಮುಖಿ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕಿ ಶಾಲಿನಿ, ಸೇವಾ ಪ್ರತಿನಿಧಿಗಳಾದ ಫಾತಿಮಾ, ರಾಣಿ, ಎಸ್‌ಡಿಎಂಸಿ ಅಧ್ಯಕ್ಷೆ ಜ್ಯೋತಿ, ಆಶಾ ಕಾರ್ಯಕರ್ತೆ ತ್ರಿವೇಣಿ, ಚೇತನಾ, ಶಿಕ್ಷಕರಾದ ಉಷಾ, ಲಾವಣ್ಯಾ, ಚೂಡಾಮಣಿ, ಸುಧೀರ್, ಪ್ರದೀಪ್ ಇತರರಿದ್ದರು.