ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಮಹೋತ್ಸವದ ವಿಶೇಷ ಪೂಜೆ.  
ಕೊಡಗು

ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಪ್ರತಿಷ್ಠಾ ವರ್ಧಂತಿ ವಿಜೃಂಭಣೆ

ಪ್ರಮುಖ ಮುಖ್ಯಾಂಶಗಳು

  • ಬೇಟೋಳಿ ಗ್ರಾಮದ ದೇಗುಲ
  • ಶ್ರದ್ಧಾಭಕ್ತಿಯಿಂದ ಜರುಗಿದ ಮಹೋತ್ಸವ
ವಿರಾಜಪೇಟೆ: ಸಮೀಪದ ಬೇಟೋಳಿ ಗ್ರಾಮದ ರಾಮನಗರದ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಶ್ರದ್ಧಾಭಕ್ತಿಯಿಂದ ಇತ್ತೀಚೆಗೆ ಜರುಗಿತು.
ಪ್ರತಿಷ್ಠಾ ಮಹೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ಶ್ರೀ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಮಹಾ ಚಂಡಿಕಾ ಹೋಮ ನೆರವೇರಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ವಿಶ್ವನಾಥ್ ಭಟ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾದವು. ಮೊದಲಿಗೆ ದೇವಸ್ಥಾನದ ಆವರಣದಲ್ಲಿರುವ ಶ್ರೀ ಗಣಪತಿ, ಶ್ರೀ ಅಯ್ಯಪ್ಪ ಸ್ವಾಮಿ, ಶ್ರೀನಾಗ ಹಾಗೂ ಶ್ರೀ ವನದುರ್ಗೆ ದೇವರಿಗೆ ವಿಶೇಷ ಪೂಜೆಯನ್ನು ಅರ್ಚಕರು ಸಲ್ಲಿಸಿದರು.
ನಂತರ ಮಹಾ ಗಣಪತಿ ಹೋಮವನ್ನು ನೆರವೇರಿಸಲಾಯಿತು. ಹೂವಿನ ಅಲಂಕೃತ ಮಂಟಪದಲ್ಲಿ ಶ್ರೀ ಸತ್ಯನಾರಾಯಣ ಸ್ವಾಮಿ ಫೋಟೋ ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಲಾಯಿತು. ಜತೆಗೆ ಮಹಾ ಚಂಡಿಕಾ ಹೋಮದ ಆಚರಣೆಯ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು.
ಅರ್ಚಕರು ಸತ್ಯನಾರಾಯಣ ಸ್ವಾಮಿಗೆ ಸಂಕಲ್ಪ ಪೂಜೆ, ಅಲಂಕಾರ ಪೂಜೆ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಸೇವೆ ನಡೆಸಿದರು. ಮಹಾ ಚಂಡಿಕಾ ಹೋಮವನ್ನು ಸಂಕಲ್ಪ, ಪ್ರಾರ್ಥನೆ, ಪಾರಾಯಣ, ಶ್ರೀ ದೇವಿ ಶ್ಲೋಕ ಪಠಣ, ಪುಷ್ಪಾರ್ಚನೆ, ಕುಂಕುಮಾರ್ಚನೆ, ಅಭಿಷೇಕ ಮೊದಲಾದ ಸೇವೆಗಳಿಂದ ನೆರವೇರಿಸಲಾಯಿತು. ದಕ್ಷಿಣ ಕನ್ನಡದ ಭರತನಾಟ್ಯ ಕಲಾವಿದೆ ಸುಷ್ಮಾ ಎಸ್ ನಾಯಕ್ ಅವರಿಂದ ಅಷ್ಟಾವಧಾನ ಸೇವೆಯ ನೃತ್ಯ ನೆರವೇರಿತು.
ಶ್ರೀ ವಿನಾಯಕ ಮಹಿಳಾ ಭಜನಾ ಮಂಡಳಿ ವತಿಯಿಂದ ಭಜನೆ, ರುದ್ರಂ ಚಂಡೆ ಬಳಗದವರಿಂದ ಚಂಡೆ ಸೇವೆ ಹಾಗೂ ವೈದಿಕ ಶಿಬಿರದ ವಟುಗಳಿಂದ ಶ್ಲೋಕ ಪಠಣ ನಡೆಯಿತು. ಶ್ರೀ ಸತ್ಯನಾರಾಯಣ ಸ್ವಾಮಿಗೆ ಮೊದಲಿಗೆ ಮಹಾ ಮಂಗಳಾರತಿ ಸೇವೆ ನೆರವೇರಿಸಲಾಯಿತು. ನಂತರ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿಗೆ ಮಹಾ ಮಂಗಳಾರತಿಯನ್ನು ಅರ್ಚಕರು ನೆರವೇರಿಸಿದರು. ಬಳಿಕ ಮಹಾ ಚಂಡಿಕಾ ಹೋಮದ ಪೂರ್ಣಾಹುತಿ, ಮಹಾ ಮಂಗಳಾರತಿ ಸೇವೆಯು ಜರುಗಿತು. ತದನಂತರ ಬ್ರಹ್ಮಾರ್ಪಣ ಹಾಗೂ ಪ್ರಸಾದ ವಿತರಣೆಯು ಜರುಗಿತು.
ದೇವಾಲಯಕ್ಕೆ ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆ ಸೇವೆಯನ್ನು ಏರ್ಪಡಿಸಲಾಗಿತ್ತು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಬಿ.ಪಿ.ಸಂತೋಷ್, ಉಪಾಧ್ಯಕ್ಷ ಬಿ.ಜಿ.ನಂದ, ಶೈಲೇಶ್ ಕಾಮತ್, ಕಾರ್ಯದರ್ಶಿ ಬಿ.ಎನ್.ಶಾಂತಿಭೂಷಣ್, ಖಜಾಂಚಿ ಜ್ಯೋತಿ ಇತರರು ಇದ್ದರು.