- ನಾಗಬನದಿಂದ ಸಂಕಷ್ಟ ಪರಿಹಾರ
- ಸುಳುಗಳಲೆ ಕಾಲನಿ
ಶನಿವಾರಸಂತೆ: ಭಕ್ತರು ಭಕ್ತಿಯಿಂದ ಪೂಜೆ ಸಲ್ಲಿಸಿದರೆ, ಇಷ್ಟಾರ್ಥ ಈಡೇರಿಸುವಂತೆ ಕೋರಿಕೆ ಸಲ್ಲಿಸಿದರೆ ಅಸ್ತು ಎನ್ನುವ ಮೂಲಕ ನಾಗಬನದಿಂದ ಸಂಕಷ್ಟ ಪರಿಹಾರ ನಿಚ್ಚಳ ಎಂಬಿಕೆ ಭಕ್ತರದ್ದು.
ಇಲ್ಲಿನ ಬಸ್ ನಿಲ್ದಾಣದಿಂದ ಸ್ವಲ್ಪ ಮುಂದೆ ಸಾಗಿದರೆ ಸುಳುಗಳಲೆ ಕಾಲನಿ ಇದ್ದು, ಅಲ್ಲಿಂದ ರಸ್ತೆ ಮೂಲಕ ಕ್ರಮಿಸಿದರೆ ದೇವರ ಬನ ಸಿಗಲಿದೆ. ಇಲ್ಲಿನ ಬಸ್ ನಿಲ್ದಾಣದಿಂದ ಸ್ವಲ್ಪ ಮುಂದೆ ಸಾಗಿದರೆ ಸುಳುಗಳಲೆ ಕಾಲನಿ ಇದ್ದು, ಅಲ್ಲಿಂದ ರಸ್ತೆ ಮೂಲಕ ಕ್ರಮಿಸಿದರೆ ಬನ ಸಿಗುತ್ತದೆ. ಪ್ರಶಾಂತ ವಾತವರಣದಲ್ಲಿರುವ ತೆರೆದ ಗುಡಿಗೆ ದೂರದೂರು ಸೇರಿದಂತೆ ಸುತ್ತಮುತ್ತಲ ಭಕ್ತರು ಆಗಮಿಸಿ ಪೂಜಿ ಸಲ್ಲಿಸಿ ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ಭಕ್ತಿಪೂರ್ವಕವಾಗಿ ಬೇಡಿಕೊಂಡರೆ ಕಷ್ಟಗಳು ಈಡೇರುತ್ತವೆ ಎಂಬುದು ಭಕ್ತರ ಬಲವಾದ ನಂಬಿಕೆ.
ಕೃಷಿ, ವ್ಯಾಪಾರ, ವಿವಾಹ, ಸಂತಾನಭಾಗ್ಯ, ಉದ್ಯೋಗ, ಜಾಗದ ವಿವಾದ, ಹಣಕಾಸು ವಿವಾದ, ವಾಹನ ಖರೀದಿಯಲ್ಲಿ ಹಿನ್ನಡೆಯಾಗಿದ್ದರೆ ಇಲ್ಲಿ ಬಂದು ಭಕ್ತಿಯಿಂದ ಬೇಡಿಕೊಳ್ಳುತ್ತಾರೆ. ಭಕ್ತಿಯಿಂದ ಬೇಡಿಕೊಂಡಾಗ ದೇವರ ಹೂ ಬೀಳುತ್ತದೆ ಎಂಬ ನಂಬಿಕೆ ಭಕ್ತರದ್ದು. ಕೆಲಸವಾದ ಬಳಿಕ ಹರಕೆ ರೀತಿಯಲ್ಲಿ ಹೂ ಅಲಂಕಾರ, ಎಳನೀರು ಅಭಿಷೇಕ, ತ್ರಿಶೂಲ, ಕಡ್ತಾಳೆ (ದೇವರ ಕತ್ತಿ), ಗಂಟೆ ಅರ್ಪಿಸುವುದು ವಾಡಿಕೆ.
ದೇವಾಲಯ ಇತಿಹಾಸ: ದೇವರ ಬನಕ್ಕೆ ಸುಮಾರು 600 ವರ್ಷಗಳ ಇತಿಹಾಸವಿದೆ ಎನ್ನಲಾಗಿದೆ. ಅನೇಕ ವರ್ಷಗಳವರೆಗೆ ದೊಡ್ಡ ಮರದ ಬುಡದ ಕೆಳಗೆ ಈ ಗುಡಿಯಿದ್ದು, ಕೆರೆ ಚೌಡಮ್ಮ ದೇವಿ, ಗುಳಿಗ, ಪಂಜುರ್ಲಿ ದೈವಕ್ಕೆ ಪೂಜೆ ಸಲ್ಲಿಸಲಾಗುತ್ತಿತ್ತು. ಆರು ವರ್ಷದ ಹಿಂದೆ ಮಂಗಳೂರು ಭಾಗದ ಅರ್ಚಕರು ಬಂದು ಆರೂಢ ಪ್ರಶ್ನೆ (ವೀಳ್ಯದೆಲೆಯಲ್ಲಿ) ಹಾಕಿ ಕೇಳಿದಾಗ ಪ್ರತ್ಯೇಕ ಗುಡಿ ನಿರ್ಮಿಸಿ ಪೂಜೆ ಸಲ್ಲಿಸಬೇಕೆಂಬ ಉತ್ತರ ಬಂತು. ಆ ಬಳಿಕ ಗುಡಿ ನಿರ್ಮಾಣಕ್ಕೆ ಕೆಲವರು ಹೆಚ್ಚು ಆಸಕ್ತಿವಹಿಸಿ 2024ರಲ್ಲಿ ಗುಡಿ ನಿರ್ಮಾಣ ಮಾಡಲು ಮುಂದಾದರು. ಅದರಂತೆ ಕೆಲವೇ ತಿಂಗಳಲ್ಲಿ ತೆರೆದ ಬನದ ಮಾದರಿಯಲ್ಲಿ ಗುಡಿಯನ್ನು ಮರು ಪ್ರತಿಷ್ಠಾಪನೆ ಮಾಡಲಾಯಿತು.
ನಂತರ 2025ರ ಏಪ್ರಿಲ್ ಮೊದಲ ವಾರದಲ್ಲಿ ಇದಕ್ಕೆ ಹೆಚ್ಚು ಶಕ್ತಿ ತುಂಬುವ ಕೆಲಸವನ್ನು ಮಂಗಳೂರಿನ ಪಂಜದ ಅರ್ಚಕರಾದ ಲಕ್ಷ್ಮಣ್, ಗಂಗಾಧರ್, ಸ್ಥಳೀಯ ಅರ್ಚಕರಾದ ಮಂಜುನಾಥ್ ಶರ್ಮ ಸೇರಿದಂತೆ 6 ಅರ್ಚಕರು ಬಂದು ನಿರಂತರವಾಗಿ ಚಂಡಿಕಾ ಯಾಗ, ಹೋಮ, ತಂಬಿಲಾ ಸೇವೆ, ಬ್ರಹ್ಮಕಲಸೋತ್ಸವ ಮೂಲಕ ಮಂಟಪ ನಿರ್ಮಾಣ ಮಾಡಿ ಪೀಠದಲ್ಲಿ ಚೌಡಮ್ಮ, ಗುಳಿಗ, ಪಂಜುರ್ಲಿ ಹಾಗೂ ನಾಗ ದೈವವನ್ನು ಪ್ರತಿಷ್ಠಾಪನೆ ಮಾಡಿ ಬನಕ್ಕೆ ಹೆಚ್ಚು ಶಕ್ತಿ ತುಂಬಲಾಯಿತು.
ಪ್ರತಿ ತಿಂಗಳ ಸಂಕ್ರಮಣ ದಿನದಂದು ಗುಡಿಯಲ್ಲಿ ವಿಶೇಷ ಪೂಜೆ ನೆರವೇರುತ್ತದೆ. ಇನ್ನುಳಿದಂತೆ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೆ ಸಲ್ಲಿಸುತ್ತಾರೆ. ಪ್ರಾರಂಭದಲ್ಲಿ ಈ ಗುಡಿ ಕೆಲವರಿಗೆ ಮಾತ್ರ ಸೀಮಿತವಾಗಿತ್ತು. ಇದೀಗ ಈ ಗುಡಿ ಗ್ರಾಮದ ಗುಡಿಯಾಗಿದ್ದು, ನಿತ್ಯ ಪ್ರಾರ್ಥನೆ ಸಲ್ಲಿಸುವವರ ಸಂಖ್ಯೆ ಹೆಚ್ಚುತ್ತಿದೆ. ಪ್ರತಿ ಮನೆಯಲ್ಲಿ ನಡೆಯುವ ಯಾವುದೇ ಶುಭ ಸಮಾರಂಭದ ಮುನ್ನ ಗುಡಿಗೆ ಬಂದು ಪೂಜೆ ಸಲ್ಲಿಸಿ ಮುಂದುವರಿಯುವುದು ವಿಶೇಷ. ಇದರಿಂದ ಶುಭ ಸಮಾರಂಭಕ್ಕೆ ಯಾವುದೇ ವಿಘ್ನ ಎದುರಾಗುವುದಿಲ್ಲ ಎಂಬ ನಂಬಿಕೆ ಭಕ್ತರದ್ದು.
ಪ್ರತಿ ವರ್ಷ ಏಪ್ರಿಲ್‌ನಲ್ಲಿ ವಾರ್ಷಿಕ ವಿಶೇಷ ಪೂಜೆ, ಅಲಂಕಾರ, ಅಭಿಷೇಕ ಹಾಗೂ ಬಲಿಪೂಜೆ ನೆರವೇರಲಿದೆ. ಗೌರಿ ಗಣೇಶ, ಶಿವರಾತ್ರಿ, ದೀಪಾವಳಿ, ಸಂಕ್ರಾಂತಿ, ಯುಗಾದಿಯಂದು ವಿಶೇಷ ಪೂಜೆ ನೆರವೇರಲಿದೆ ಇದರೊಂದಿಗೆ ಪ್ರತಿ ತಿಂಗಳ ಸಂಕ್ರಮಣ ದಿನದಂದು ಬೆಳಗ್ಗೆಯಿಂದ ಮಧ್ಯಾಹ್ನಾದವರೆಗೆ ಗುಡಿಯ ಮೇಲೆ ನಿಂತು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ಪೂಜೆ ಮಾಡುವ ವಿಧಾನ: ಪಂಜುರ್ಲಿ, ಗುಳಿಗ, ನಾಗ ದೈವ ಹಾಗೂ ಚೌಡಮ್ಮ ದೈವವನ್ನು ಹೂವುಗಳಿಂದ ಅಲಂಕರಿಸಿ ಹಣ್ಣುಕಾಯಿ, ಎಳನೀರು, ಅವಲಕ್ಕಿ ನೈವೇದ್ಯ ಅರ್ಪಿಸಿ ಮಂಗಳಾರತಿ ಮಾಡಲಾಗುತ್ತದೆ. ಸಂಕ್ರಮಣ ಹಾಗೂ ಇತರ ದಿನಗಳಲ್ಲಿ ತೀರ್ಥ ಪ್ರಸಾದ ವಿತರಿಸಲಾಗುತ್ತದೆ. ಕೆಲ ಸಂಕ್ರಮಣ ದಿನದಂದು ಹರಕೆ ಹೊತ್ತವರು ಅನ್ನದಾನ ಮಾಡುತ್ತಾರೆ. ಏಪ್ರಿಲ್‌ನಲ್ಲಿ ನಡೆಯುವ ವಾರ್ಷಿಕ ಪೂಜೆಯಂದು ಅನ್ನಸಂತರ್ಪಣೆ ನೆರವೇರಲಿದೆ. ಕೊಡಗು, ಹಾಸನ, ಬೆಂಗಳೂರು, ಮೈಸೂರು, ಮಂಗಳೂರು ಮುಂತಾದ ಭಾಗಗಳಿಂದ ಭಕ್ತರು ಹಾಗೂ ಈ ಗ್ರಾಮದಿಂದ ಬೇರೆಡೆಗೆ ವಿವಾಹವಾಗಿರುವ ಯುವತಿಯರು ತಪ್ಪದೆ ವಿಶೇಷ ಪೂಜಾ ದಿನಗಳಂದು ಆಗಮಿಸುತ್ತಾರೆ.
ತಲುಪುವ ಮಾರ್ಗ: ಮೈಸೂರಿನಿಂದ ಬರುವವರು ಕುಶಾಲನಗರ ಮೂಲಕ ಬಾಣವಾರ, ಶನಿವಾರಸಂತೆ ಮೂಲಕ ದೇವಾಲಯ ತಲುಪಬಹುದು. ಇನ್ನು ಹಾಸನದಿಂದ ಬರುವವರು ಅರಕಲಗೂಡು ಮಾರ್ಗವಾಗಿ ಶನಿವಾರಸಂತೆ ತಲುಪಬಹುದು. ಅಂತೆಯೇ ಮಡಿಕೇರಿಯಿಂದ ಸೊಮವಾರಪೇಟೆಯ ಗೌಡಳ್ಳಿ, ಗುಡುಗಳಲೆ ಮೂಲಕ ಕೆರೆ ಚೌಡಮ್ಮ, ಗುಳಿಗ, ಪಂಜುರ್ಲಿ ನಾಗಬನವನ್ನು ತಲುಪಬಹುದು.
ಚೌಡಮ್ಮ, ಗುಳಿಗ, ಪಂಜುರ್ಲಿ, ನಾಗದೈವ ಕೆಲವು ಕಡೆಗಳಲ್ಲಿ ವಿಶೇಷವಾಗಿ ನೆಲೆಸಿದ್ದು, ಭಕ್ತರ ಕಷ್ಟಗಳನ್ನು ಪರಿಹರಿಸುತ್ತಿವೆ. ಭಕ್ತರಿಗೆ ರಕ್ಷಣೆ ನೀಡುವ ಮೂಲಕ ಕ್ಷೇತ್ರದತ್ತ ಸೆಳೆಯುತ್ತಿದೆ. ಜನರು ಶ್ರದ್ಧಾಭಕ್ತಿಯಿಂದ ಬಂದು ಪೂಜೆ ಸಲ್ಲಿಸುವ ಪ್ರತೀತಿ ಇದೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಭಕ್ತರ ಸಮಸ್ಯೆಗಳು ಪರಿಹಾರವಾಗುತ್ತಿರುವುದೇ ಇದಕ್ಕೆ ಕಾರಣ.
ಗಂಗಾಧರ್ ಅರ್ಚಕ, ನಾಗಬನ ದೇವಾಲಯ
ದೇವಾಲಯವನ್ನು ಅಭಿವೃದ್ಧಿಪಡಿಸುವ ಯೋಜನೆ ಇದೆ. ಈಗಾಗಲೇ ಬನದ ಪಕ್ಕದಲ್ಲಿ ನೀರಿನ ಬಾವಿ ಮಾಡಲಾಗಿದೆ. ಊಟದ ಸಭಾಂಗಣ, ಬನದ ಕಚೇರಿ ನಿರ್ಮಾಣ ಮಾಡುವ ಯೋಜನೆ ಇದೆ. ಇಲ್ಲಿಗೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕಷ್ಟಗಳು ಪರಿಹಾರವಾದ ನಂತರ ಹರಕೆ ರೀತಿಯಲ್ಲಿ ಹೂ, ಎಳನೀರನ್ನು ಅರ್ಪಿಸುತ್ತಾರೆ. ಕಳೆದ ತಿಂಗಳು ದೇವರನ್ನು ಪ್ರತಿಷ್ಠಾಪನೆ ಮಾಡಿದ ನಂತರ ನಿತ್ಯ ಬೆಳಗ್ಗೆ-ಸಂಜೆ ಪೂಜೆ ಸಲ್ಲಿಸಲಾಗುತ್ತದೆ. ಸಂಕ್ರಮಣದಂದು ಹರಕೆ ಹೊತ್ತವರು ಬಂದು ಹರಕೆ ಸಲ್ಲಿಸುತ್ತಾರೆ.
ಲಿಂಗಪ್ಪ ಅರ್ಚಕ, ಚೌಡಮ್ಮ, ಗುಳಿಗೆ, ಪಂಜುರ್ಲಿ ಬನ, ಶನಿವರಸಂತೆ