ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಮಹಾರಥೋತ್ಸವ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಎ.ಎಸ್.ಪೊನ್ನಣ್ಣ, ಯದುವೀರ್, ಮಂತರ್‌ಗೌಡ, ಅಪ್ಪಚ್ಚು ರಂಜನ್ ಇತರರು ಭಾಗವಹಿಸಿದ್ದರು.
ಸೋಮವಾರಪೇಟೆ: ತಾಲೂಕಿನ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ 67ನೇ ಮಹಾರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಭೃಂಭಣೆಯಿಂದ ಶುಕ್ರವಾರ ನೆರವೇರಿತು.
ಬೆಳಗ್ಗೆ 12.05ಕ್ಕೆ ದೇವಾಲಯದ ಆವರಣದಿಂದ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದ ನಂತರ ಗ್ರಾಮಸ್ಥರು, ಭಕ್ತರು ಜೈಕಾರ ಹಾಕುತ್ತ ಗ್ರಾಮದ ಬೀದಿಯಲ್ಲಿ ಉತ್ಸವಮೂರ್ತಿಯನ್ನು ಹೊತ್ತ ರಥವನ್ನು ಎಳೆದರು.
ಶಾಸಕರಾದ ಡಾ.ಮಂತರ್‌ಗೌಡ, ಎ.ಎಸ್.ಪೊನ್ನಣ್ಣ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮಾಜಿ ಸಚಿವ ಅಪ್ಪಚ್ಚು ರಂಜನ್, ತಹಸೀಲ್ದಾರ್ ಕೃಷ್ಣಮೂರ್ತಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ದಾನಿಗಳಾದ ಕೊತ್ನಳ್ಳಿ ಅರುಣ್ ಸೇರಿದಂತೆ ಅನೇಕ ಗಣ್ಯರು ರಥವನ್ನು ಎಳೆದರು.
ದಾರಿಯುದ್ದಕ್ಕೂ ಗ್ರಾಮಸ್ಥರು ಮತ್ತು ಭಕ್ತರು ರಥಕ್ಕೆ ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿದರು. ಶಾಂತಳ್ಳಿ ಗ್ರಾಮದವರೊಂದಿಗೆ ಕೊತ್ತನಳ್ಳಿ, ಬೀದಳ್ಳಿ, ಹೆಗ್ಗಡಮನೆ, ಕುಮಾರಳ್ಳಿ, ಬಾಚಳ್ಳಿ, ಕೂತಿನಾಡು, ತೋಳುನಾಡು, ಯಡೂರು, ತಲ್ತಾರೆಶೆಟ್ಟಳ್ಳಿ ಸೇರಿದಂತೆ ಮತ್ತಿತರ ಗ್ರಾಮದವರು ವಿಶೇಷ ಪರಿಶುದ್ಧತೆಯಿಂದ ಸ್ವಾಮಿಗೆ ಫಲ, ತಾಂಬೂಲ, ದವಸ, ಧಾನ್ಯ, ಕಾಣಿಕೆಗಳನ್ನು ನೀಡಿ ಪೂಜೆಯಲ್ಲಿ ಭಾಗಿಯಾದರು.
ಜ.13 ಶುಕ್ರವಾರದಿಂದ ರಿಂದ ಜಾತ್ರೋತ್ಸವ ಪ್ರಾರಂಭವಾಗಿದ್ದು, ಬೆಳ್ಳಿ ಬಂಗಾರ ದಿನ ಹಾಗೂ ಮಕರ ಸಂಕ್ರಮಣ ಕರುವಿನ ಹಬ್ಬವನ್ನು ಆಚರಿಸಲಾಗಿದೆ. ಕುಮಾರಳ್ಳಿ, ಜಕ್ಕನಳ್ಳಿ, ಕೊತ್ತನಳ್ಳಿ ಗ್ರಾಮಸ್ಥರು ಹಾಗೂ ದೇವರ ಒಡೆಕಾರರು 14 ಕಿ.ಮೀ. ಬರಿಗಾಲಿನಲ್ಲಿ ಪುಷ್ಪಗಿರಿ ಬೆಟ್ಟವನ್ನು ಹತ್ತಿ, ಬೆಟ್ಟದ ತುತ್ತತುದಿಯಲ್ಲಿರುವ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ಪಾದುಕೆಗೆ ಪೂಜೆ ಸಲ್ಲಿಸಿ, ಜ್ಯೋತಿ ಬೆಳಗಿಸಿ ಎರಡು ದಿನ ಬೆಟ್ಟದಲ್ಲಿ ವಾಸ್ತವ್ಯ ಹೂಡಿ, ಜ.15ರಂದು ದೇವಾಲಯಕ್ಕೆ ಬಂದು ಅರಸು ಬಲ ಸೇವೆ ಮಾಡಿದರು.
ಮೂರು ದಿನಗಳ ಕಾಲ ಭಕ್ತರಿಗೆ ಅನ್ನದಾನ ನಡೆಯಿತು. ಜಾತ್ರಾ ಆವರಣದಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲಾಗಿದ್ದು, ರೈತರು ಬೆಳೆದ ತರಕಾರಿ ಸೆರಿದಂತೆ ಇತರ ಬೆಳೆಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ವಿಶೇಷವಾಗಿರುವ ವಸ್ತುಗಳಿಗೆ ಬಹುಮಾನ ನೀಡಲಾಯಿತು. ಗ್ರಾಮೀಣ ಭಾಗದಲ್ಲಿ ಉತ್ಪಾದಿಸುವ ಜೇನನ್ನು ಮಾರಾಟ ಮಾಡಲಾಯಿತು. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಯವರು ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ್ದರು.
ಧರ್ಮದರ್ಶಿ ಮಂಡಳಿ ಉಪಾಧ್ಯಕ್ಷ ಕೆ.ಟಿ.ಮಧು ತಮ್ಮಯ್ಯ, ಕಾರ್ಯದರ್ಶಿ ಕೆ.ಕೆ.ಮುತ್ತಣ್ಣ, ಖಜಾಂಚಿ ಉತ್ತಯ್ಯ, ಸಹ ಕಾರ್ಯದ ರ್ಶಿ ಎಚ್.ಎಸ್.ಗಿರೀಶ್ ಇದ್ದರು. ಪ್ರಧಾನ ಅರ್ಚಕ ಎನ್.ಜಿ.ಕೃಷ್ಣಮೂರ್ತಿ ಪೂಜಾ ಕಾರ್ಯಗಳನ್ನು ನಡೆಸಿಕೊಟ್ಟರು.