ದುಂಡಳ್ಳಿ ಸಂಜೀವಿನಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಗರ್ಭಿಣಿಯರಿಗೆ ಸೀಮಂತ ಶಾಸ್ತ್ರ ನೆರವೇರಿಸಲಾಯಿತು. ಸರಸ್ವತಿ, ಗುಣವತಿ, ಬಾನುಮತಿ, ಅಶ್ವಿನಿ, ಫಾತಿಮಾ, ಉಷಾ ಜಯೇಶ್ ಇತರರು ಇದ್ದರು.  
ಕೊಡಗು

ತಾಯ್ತನ ಹೆಣ್ಣಿಗೊಲಿದ ಅದೃಷ್ಟ

ಶನಿವಾರಸಂತೆ: ತಾಯ್ತನ ಹೆಣ್ಣಿಗೊಲಿದ ಒಂದು ಅದೃಷ್ಟ. ಈ ಅದೃಷ್ಟವನ್ನು ಸಂಭ್ರಮಿಸುವುದೇ ಸೀಮಂತ ಕಾರ್ಯ. ಸೀಮಂತವೆಂದರೆ ಕೇವಲ ಸಂಭ್ರಮಾಚರಣೆಯಲ್ಲ.ಇದೊಂದು ಸಂಸ್ಕಾರ ಎಂದು ಬಾಲವಿಕಾಸ ಸಮಿತಿ ಅಧ್ಯಕ್ಷೆ ಗುಣವತಿ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸೋಮವಾರಪೇಟೆ ತಾಲೂಕು ಶಿಶು ಅಭಿವೃದ್ಧಿ ಯೋಜನೆ ಹಾಗೂ ದುಂಡಳ್ಳಿ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿಗಳ ಸಂಯುಕ್ತಾಶ್ರಯದಲ್ಲಿ ದುಂಡಳ್ಳಿ ಸಂಜೀವಿನಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪೋಷಣಾ ಅಭಿಯಾನ ಹಾಗೂ ಸೀಮಂತ, ಅಕ್ಷರ ಅಭ್ಯಾಸ, ಅನ್ನ ಪ್ರಾಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗರ್ಭವತಿಯಾದ ಹೆಣ್ಣುಮಗಳು ಮತ್ತು ಆಕೆಯ ಕರುಳ ಕುಡಿಗೆ ಸರ್ವವೂ ಶುಭವಾಗಲಿ ಎಂದು ಹರಸುವ ಸಂಪ್ರದಾಯಬದ್ಧ ಶಾಸ್ತ್ರವಾಗಿದೆ ಸೀಮಂತ ಎಂದು ಹೇಳಿದರು.
ಹಿರಿಯ ಆರೋಗ್ಯ ಅಧಿಕಾರಿ ಸರಸ್ವತಿ ಮಾತನಾಡಿ, ಮಹಿಳೆಯರು ಗರ್ಭ ಧರಿಸಿದ ಮೊದಲ ತಿಂಗಳಲ್ಲಿಯೇ ಆಶಾ ಕಾರ್ಯಕರ್ತೆ ಹಾಗೂ ಅಂಗನವಾಡಿ ಕಾರ್ಯಕರ್ತರ ಮೂಲಕ ತಾಯಿ ಕಾರ್ಡ್ ಮಾಡಿಸಿ ಪ್ರತಿ ತಿಂಗಳು ವೈದ್ಯರ ಸಲಹೆ ಪಡೆದು ತಮ್ಮ ಆರೋಗ್ಯ ಸುಧಾರಣೆಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ಆಶಾ ಕಾರ್ಯಕರ್ತೆ ಉಷಾ ಜಯೇಶ್ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸಿಬಿಇ ಎಂಬ ಕಾರ್ಯಕ್ರಮ ಅಡಿಯಲ್ಲಿ ಸೀಮಂತ, ಅಕ್ಷರಾಭ್ಯಾಸ, ಅನ್ನ ಪ್ರಾಶನವನ್ನು ಗರ್ಭಿಣಿಯರು ಹಾಗೂ ಮಕ್ಕಳಿಗೆ ಏರ್ಪಡಿಸಲಾಗಿದ್ದು, ಈ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಜತೆಗೆ ಅಂಗನವಾಡಿ ಕೇಂದ್ರದಿಂದ ಗರ್ಭಿಣಿಯರಿಗೆ ಪೌಷ್ಟಿಕಾಹಾರ ವಿತರಣೆ ಮಾಡಲಾಗುತ್ತಿದೆ. ಮಹಿಳೆಯರು ಉತ್ತಮ ಗುಣಮಟ್ಟದ ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸುವ ಮೂಲಕ ಮಗುವಿನ ಆರೋಗ್ಯದ ಜತೆಗೆ ನಿಮ್ಮ ಆರೋಗ್ಯದ ಸುಧಾರಣೆಗೂ ಒತ್ತು ನೀಡಬೇಕು ಎಂದರು.
ಅಂಗನವಾಡಿ ಕಾರ್ಯಕರ್ತೆ ಅಶ್ವಿನಿ, ಬಾನುಮತಿ, ಫಾತಿಮಾ ಹಾಗೂ ಸುತ್ತಮುತ್ತಲಿನ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಹಿರಿಯರಾದ ಗುಣವತಿ ಹಾಸೆನಾರ್, ಯಶೋದಾ ಹಾಗೂ ಈ ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. ನಂತರ ಗರ್ಭಿಣಿಯರಿಗೆ ಸೀಮಂತ ಶಾಸ್ತ್ರ ನೆರವೇರಿಸಲಾಯಿತು.