ಕೋಲ್‌ಮಂದ್ ಜಾಗದಲ್ಲಿ ಆಲದ ಗಿಡವನ್ನು ಶಾಸಕದ್ವಯರು ಹಾಗೂ ಸಂಸದರು ನೆಟ್ಟರು. ಯದುವೀರ್, ಎ.ಎಸ್.ಪೊನ್ನಣ್ಣ, ಡಾ.ಮಂತರ್ ಗೌಡ ಇತರರಿದ್ದರು. 
ಕೊಡಗು

ಜಿಲ್ಲೆಯ ಮಂದ್‌ಗಳನ್ನು ಸಂರಕ್ಷಿಸುವಂತಾಗಬೇಕು

ಆದರ್ಶ್. ಎಂ.ಕೆ.

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯ ಮಂದ್‌ಗಳನ್ನು ಸಂರಕ್ಷಿಸುವಂತಾಗಬೇಕು
  • ಆಲದ ಗಿಡ ನೆಡುವ ಕಾರ್ಯಕ್ರಮದಲ್ಲಿ ಎ.ಎಸ್.ಪೊನ್ನಣ್ಣ
ಮಡಿಕೇರಿ: ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದ ಬಳಿಯ ಕೋಲ್‌ಮಂದ್ ಜಾಗದಲ್ಲಿ ಮಡಿಕೇರಿ ಕೊಡವ ಸಮಾಜ ವತಿಯಿಂದ ಏರ್ಪಡಿಸಲಾಗಿದ್ದ ಆಲದ ಗಿಡ ನೆಡುವ ಕಾರ್ಯಕ್ರಮದಲ್ಲಿ ಆಲದ ಗಿಡ ನೆಡುವ ಮೂಲಕ ಶಾಸಕದ್ವಯರು ಹಾಗೂ ಸಂಸದರು ಶುಕ್ರವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ, ಮಡಿಕೇರಿ ಕೋಲ್ ಮಂದ್ ಜಾಗಕ್ಕೆ ೨೫೦ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದ್ದು, ಹುತ್ತರಿ ಹಬ್ಬದ ಸಂದರ್ಭದಲ್ಲಿ ಕೊಡವ ಸಂಸ್ಕೃತಿ, ಕಲೆಗಳನ್ನು ಕೋಲ್ ಮಂದ್ ಸ್ಥಳದಲ್ಲಿ ಪ್ರದರ್ಶನ ನಡೆಯುತ್ತಿದ್ದು ವಿಶೇಷವಾಗಿದೆ. ಈ ವರ್ಷದ ಮಳೆಗಾಲದಲ್ಲಿ ಬೃಹತ್ ಆಲದ ಮರ ಉರುಳಿ ಬಿದ್ದ ಪರಿಣಾಮವಾಗಿ ನೂತನವಾಗಿ ಆಲದ ಗಿಡವನ್ನು ನೆಟ್ಟು ಬೆಳೆಸುತ್ತಿರುವುದು ಗಮನಾರ್ಹವಾಗಿದೆ. ಕೊಡವ ಕೋಲ್ ಮಂದ್ ಜಾಗಕ್ಕೆ ಪೂಜ್ಯನೀಯ ಸ್ಥಾನವಿದ್ದು, ಜಿಲ್ಲೆಯ ಮಂದ್‌ಗಳನ್ನು ಸಂರಕ್ಷಿಸುವಂತಾಗಬೇಕು ಎಂದು ಎ.ಎಸ್.ಪೊನ್ನಣ್ಣ ಕರೆ ನೀಡಿದರು.
ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವ ಮೂಲಕ ಆಲದ ಗಿಡ ನೆಡಲಾಗಿದ್ದು, ಪೋಷಣೆ ಮಾಡಬೇಕಿದೆ ಎಂದು ಎ.ಎಸ್.ಪೊನ್ನಣ್ಣ ನುಡಿದರು.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಪ್ರತೀ ಊರಿನಲ್ಲಿಯೂ ಸಹ ಆಲದ ಮರ ಅಥವಾ ಅರಳಿ ಮರ ಇರುವುದನ್ನು ಇಂದಿಗೂ ಸಹ ಕಾಣುತ್ತೇವೆ. ಅದೇ ರೀತಿ ಕೋಲ್ ಮಂದ್ ಸ್ಥಳದಲ್ಲಿ ಕೊಡವ ಸಂಸ್ಕೃತಿ ಮತ್ತು ಕಲೆಗಳನ್ನು ಪ್ರದರ್ಶನ ಮಾಡುವುದು ವಿಶಿಷ್ಟವೇ ಸರಿ ಎಂದ ಅವರು, ಈ ಜಾಗದ ಅಭಿವೃದ್ಧಿಗೆ ಕೊಡವ ಸಮಾಜದವರು ಮನವಿ ಮಾಡಿದ್ದಲ್ಲಿ ವೈಯಕ್ತಿಕವಾಗಿ ಅಥವಾ ಸರ್ಕಾರದಿಂದ ಅನುದಾನ ಒದಗಿಸಲಾಗುವುದು ಎಂದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಭಾರತೀಯ ಸಂಸ್ಕೃತಿ, ಪರಂಪರೆಯಲ್ಲಿ ಅಶ್ವತ್ಥ ಮರಕ್ಕೆ ಹಿಂದಿನಿಂದಲೂ ವಿಶಿಷ್ಟ ಸ್ಥಾನವಿದ್ದು, ಕೋಲ್ ಮಂದ್ ಜಾಗದಲ್ಲಿ ಹೊಸ ಗಿಡವನ್ನು ನೆಟ್ಟು ಬೆಳೆಸುತ್ತಿರುವುದು ಕೊಡವ ಸಂಸ್ಕೃತಿ ಆಚರಣೆ ಉಳಿಸಿಕೊಂಡು ಹೋಗಲು ಸಹಕಾರಿಯಾಗಿದೆ. ಕೋಲ್ ಮಂದ್ ಜಾಗವು ಕೊಡವ ಸಂಸ್ಕೃತಿಯ ಭಾಗವಾಗಿದ್ದು, ಇದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಸಂಸದರು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಕೋಲ್ ಮಂದ್ ಜಾಗವು ಕೊಡವ ಸಂಸ್ಕೃತಿಯ ವಿಶೇಷ ಭಾಗವಾಗಿದೆ. ಕೊಡವ ಸಂಸ್ಕೃತಿ ಕಲೆಗಳ ಪ್ರದರ್ಶನದಲ್ಲಿ ಈ ಜಾಗ ಪ್ರಮುಖವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಪಪ್ಪ, ಕೊಡವ ಸಮಾಜದ ಮಾಜಿ ಅಧ್ಯಕ್ಷ ಕೊಂಗಾಂಡ ಎಸ್.ದೇವಯ್ಯ, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ, ಉಪಾಧ್ಯಕ್ಷ ಕೆ.ಎ.ದೇವಯ್ಯ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ರಾಣಿ ಮಾಚಯ್ಯ, ಇತರರು ಇದ್ದರು.