ಸೋಮವಾರಪೇಟೆ ಸಮೀಪದ ಐಗೂರು ಸರ್ಕಾರಿ ಪ್ರೌಢಶಾಲೆಗೆ ಕೂಡಿಗೆ ಡಯಟ್‌ನ ಹಿರಿಯ ಉಪನ್ಯಾಸಕರ ತಂಡ ಭೇಟಿ ನೀಡಿದ್ದರು. ಪುಷ್ಪಾ, ಗಾಯಿತ್ರಿ, ಯಶವಂತ್, ರಂಜಿನಿ ಇದ್ದರು.
ಸೋಮವಾರಪೇಟೆ: ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಿಂದ ಜಿಲ್ಲೆಯಲ್ಲಿ 2025-26ನೇ ಸಾಲಿನಲ್ಲಿ ಆಯ್ದ ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯ ಸೌಲಭ್ಯ ಅನುಷ್ಠಾನಗೊಂಡಿದ್ದು, ಪರಿಶೀಲಿಸಲು ಕೂಡಿಗೆ ಡಯಟ್‌ನ ಹಿರಿಯ ಉಪನ್ಯಾಸಕರ ತಂಡ ಐಗೂರು ಸರ್ಕಾರಿ ಪ್ರೌಢಶಾಲೆಗೆ ಬುಧವಾರ ಭೇಟಿ ನೀಡಿತ್ತು.
ಶಾಲಾ ಮಕ್ಕಳಿಂದ ವಿಜ್ಞಾನ ಪ್ರಯೋಗ ಪ್ರಾತ್ಯಕ್ಷಿಕೆ ಮತ್ತು ವಿಜ್ಞಾನ ಪ್ರಯೋಗಾಲಯವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಹಿರಿಯ ಉಪನ್ಯಾಸಕಿ ಬಿ.ಎನ್.ಪುಷ್ಪಾ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ, ಉತ್ತಮ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ ಸೇರಿದಂತೆ ಅತ್ಯುತ್ತಮ ಸೌಲಭ್ಯಗಳು ದೊರೆಯುತ್ತಿವೆ. ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ವಿಜ್ಞಾನ ಪ್ರಯೋಗಾಲಯಗಳು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವ ನೀಡುತ್ತವೆ ಎಂದರು.
ಡಯಟ್‌ನ ಕಾರ್ಯಾನುಭವ ಉಪನ್ಯಾಸಕಿ ಪಿ.ಪಿ.ಗಾಯತ್ರಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಸ್.ಎಸ್.ಶಿವಕುಮಾರ್ ಪರಿಶೀಲನಾ ತಂಡದಲ್ಲಿದ್ದರು. ಮುಖ್ಯ ಶಿಕ್ಷಕ ಎಂ.ಎಂ.ಯಶ್ವಂತ್ ಕುಮಾರ್, ವಿಜ್ಞಾನ ಶಿಕ್ಷಕ ಎಸ್.ಎಸ್.ರಂಜಿನಿ ಇದ್ದರು.