ಕುಶಾಲನಗರ ತಾಲೂಕು ಗೊಂದಿಬಸವನಹಳ್ಳಿ ಗ್ರಾಮದಲ್ಲಿನ ರೊಂಡೆಕೆರೆಯ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ. ಮಂತರ್ ಗೌಡ ಚಾಲನೆ ನೀಡಿದರು. ವಿ.ಪಿ. ಶಶಿಧರ್, ಗೋವಿಂದಪ್ಪ, ಪ್ರಕಾಶ್, ಕೆ.ಪಿ. ಚಂದ್ರಕಲಾ, ಮಂಜುನಾಥ ಗುಂಡೂರಾವ್ ಮತ್ತಿತರರು ಇದ್ದರು.
ಗ್ರಾಮೀಣ ಪ್ರದೇಶಗಳಲ್ಲಿರುವ ಕೆರೆಗಳ ಅಭಿವೃದ್ಧಿಯಿಂದ ರೈತರ ಕೃಷಿ ಚಟುವಟಿಕೆಗೆ ಅನುಕೂಲವಾಗಲಿದ್ದು, ಅವರ ಬದುಕು ಹಸನಾಗಲು ಕಾರಣವಾಗಲಿದೆ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು. 1.60 ಕೋಟಿ ರೂ. ಅನುದಾನದಲ್ಲಿ ಕುಶಾಲನಗರ ತಾಲೂಕು ಗೊಂದಿಬಸವನಹಳ್ಳಿ ಗ್ರಾಮದ ರೊಂಡೆಕೆರೆಯ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಪ್ರತಿ ವರ್ಷ ಮಳೆಗಾಲದಲ್ಲಿ ರೊಂಡೆಕೆರೆ ತುಂಬಿ ಕೆರೆಯ ತಡೆಗೋಡೆ ಒಡೆದು ರೈತರ ಜಮೀನು ಹಾಗೂ ವಿವಿಧ ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿ ತೊಂದರೆ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ರೈತರು ಮತ್ತು ಗ್ರಾಮದ ಜನರ ಬೇಡಿಕೆಯನ್ನು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸ್ ರಾಜ್ ಅವರಿಗೆ ತಿಳಿಸಿ ಮನವಿ ಮಾಡಿದ ಮೇರೆಗೆ ಕೆರೆ ಅಭಿವೃದ್ಧಿಗೆ ಅನುದಾನ ಒದಗಿಸಿದ್ದಾರೆ. ಕೆರೆಗಳನ್ನು ಅಭಿವೃದ್ಧಿ ಪಡಿಸಿ ರೈತರ ಜಮೀನುಗಳಿಗೆ ನೀರು ಒದಗಿಸುವುದರ ಜತೆಗೆ ಜನ ಜಾನುವಾರು, ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲಾಗುತ್ತದೆ. ರೊಂಡೆಕೆರೆಗೆ ಮಳೆಗಾಲದಲ್ಲಿ ಅತ್ಯಧಿಕ ಮಳೆಯ ನೀರು ಹರಿದ ಸಂದರ್ಭ ಕೆರೆಯ ಏರಿ ಒಡೆದು ನೀರೆಲ್ಲಾ ಪೋಲಾಗಿತ್ತು. ಮೀನು ಸಾಕಣೆಗೂ ಅಡಚಣೆಯಾಗಿತ್ತು. 1.60 ಕೋಟಿ ರೂ. ಅನುದಾನ ತಂದು ಕೆರೆಯ ಏರಿ, ತೂಬು ಹಾಗೂ ರಸ್ತೆಯ ಅಭಿವೃದ್ದಿಗೆ ಯೋಜನೆ ರೂಪಿಸಲಾಗಿದೆ. ಈಗಾಗಲೇ ಒತ್ತುವರಿಯಾಗಿರುವ ಕೆರೆಯ ಜಾಗವನ್ನು ಸರ್ವೆ ಕಾರ್ಯವನ್ನು ಮಾಡಿ ಒತ್ತುವರಿ ತೆರವುಗೊಳಿಸಬೇಕು. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು.
ಕುಶಾಲನಗರದ ತಾವರೆಕೆರೆಯನ್ನು 3 ಕೋಟಿ ರೂ. ವೆಚ್ಚದಲ್ಲಿ ಸಮಗ್ರವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದ್ದು ಸದ್ಯದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು. ಮಾಜಿ ಮುಖ್ಯಮಂತ್ರಿ ದಿ.ಆರ್.ಗುಂಡೂರಾವ್ ಅವರ ಪ್ರತಿಮೆಯನ್ನು ಪುರಸಭೆ ಮುಂಭಾಗದಲ್ಲಿ ಹಾಗೂ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪ್ರತಿಮೆಯನ್ನು ಗಣಪತಿ ದೇವಾಲಯ ಸರ್ಕಲ್‌ನಲ್ಲಿ ಅಳವಡಿಸುವ ಮೂಲಕ ಮಹಾನ್ ವ್ಯಕ್ತಿಗಳಿಗೆ ಗೌರವ ಸಲ್ಲಿಸಲಾಗುತ್ತದೆ.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಜತೆಗೆ ಮಡಿಕೇರಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸುತ್ತಿದೆ ಎಂದರು.
ಈ ಸಂದರ್ಭ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಗೋವಿಂದಪ್ಪ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಕುಡಾ ಮಾಜಿ ಅಧ್ಯಕ್ಷ ಬಿ.ಜಿ. ಮಂಜುನಾಥ್ ಗುಂಡೂರಾವ್, ಮಹಿಳಾ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷೆ ಜಿ.ಆರ್. ಪುಷ್ಪಲತಾ, ಪುರಸಭೆ ನಾಮನಿರ್ದೇಶನ ಸದಸ್ಯರಾದ ಗೊಂದಿಬಸವನಹಳ್ಳಿ ಪ್ರಕಾಶ್, ಜಗದೀಶ್, ತಹಸೀಲ್ದಾರ್ ಕಿರಣ್ ಗೌರಯ್ಯ, ಪುರಸಭೆ ಮುಖ್ಯಾಧಿಕಾರಿ ಗಿರೀಶ್ ಕುಮಾರ್, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕುಮಾರಸ್ವಾಮಿ, ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಇದೇ ವೇಳೆ ಪುರಸಭೆ ಮಾಜಿ ಸದಸ್ಯ ಎಂ.ಎA. ಪ್ರಕಾಶ್ ಹಾಗೂ ಗ್ರಾಮಸ್ಥರು ಶಾಸಕ ಮಂತರ್ ಗೌಡ ಅವರನ್ನು ಸನ್ಮಾನಿಸಿ ಗೌರವಿಸಿದರು.