ಕೊಡಗಿನ ಶ್ರೇಷ್ಠ ಸಹಕಾರಿಗಳಿಗೆ ವಿವಿಧ ಸಹಕಾರ ಪ್ರಶಸ್ತಿಗಳನ್ನು ಪದಾನ ಮಾಡಲಾಯಿತು. ಸುಜಾ ಕುಶಾಲಪ್ಪ, ಕೊಡಂದೇರ ಪಿ.ಗಣಪತಿ, ಪಿ.ಯು.ರಾಬಿನ್ ದೇವಯ್ಯ ಇತರರಿದ್ದರು.
- ದೇಶದ ಆರ್ಥಿಕತೆಗೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರ
- ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಎಂ.ಪಿ.ಸುಜಾ ಕುಶಾಲಪ್ಪ
ಮಡಿಕೇರಿ: ದೇಶದ ಆರ್ಥಿಕತೆಗೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರ. ಸಹಕಾರ ಸಂಸ್ಥೆಗಳು ಎಲ್ಲಾ ವಲಯಗಳನ್ನು ವ್ಯಾಪಿಸಿದ್ದು, ಗ್ರಾಮೀಣ ಪ್ರದೇಶಗಳಲ್ಲಿಯೂ ಸೇವೆ ಒದಗಿಸುತ್ತಾ ಸಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಸಹಕಾರ ಇಲಾಖೆ, ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ಹಾಗೂ ಸ್ಥಳೀಯ ಎಲ್ಲಾ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಗರದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಉನ್ನತಿ ಭವನದ ಪಂದ್ಯಂಡ ಐ.ಬೆಳ್ಯಪ್ಪ ಸ್ಮಾರಕ ಸಭಾಂಗಣದಲ್ಲಿ ನಡೆದ ೭೨ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನಿಂದ ಆಯ್ಕೆಗೊಂಡ ಕೊಡಗಿನ ಶ್ರೇಷ್ಠ ಸಹಕಾರಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು, ಮಾತನಾಡಿದರು.
ಸಹಕಾರ ಎಂದರೆ ಸಮೂಹಿಕ ನಂಬಿಕೆ, ಶ್ರಮ, ನ್ಯಾಯದ ಹಂಚಿಕೆ. ಸಹಕಾರ ಚಳುವಳಿ ದೇಶದ ಆರ್ಥಿಕತೆಗೆ ಮಹತ್ವದ ಪಾತ್ರ ವಹಿಸಿದೆ. ಇದು ದೇಶದ ಆರ್ಥಿಕತೆಗೆ ರೈತರಿಗೆ ಸಾಲ, ಸಣ್ಣ ಕೈಗಾರಿಕೆಗಳಿಗೆ ಬೆಂಬಲ ಮತ್ತು ಕೈಗೆಟುಕುವ ದರದಲ್ಲಿ ವಸತಿ ಒದಗಿಸುವ ಮೂಲಕ ಗಣನೀಯ ಕೊಡುಗೆ ನೀಡಿದೆ. ಆರ್ಥಿಕ ಬೆಳವಣಿಗೆಯಲ್ಲದೆ, ಸಾಮಾಜಿಕ ನ್ಯಾಯ, ಸಬಲೀಕರಣ ಮತ್ತು ಸ್ವಾವಲಂಬನೆಯನ್ನು ಉತ್ತೇಜಿಸುತ್ತದೆ ಮತ್ತು ಕೃಷಿ, ಡೈರಿ, ಮತ್ತು ಹಣಕಾಸು ಕ್ಷೇತ್ರಗಳನ್ನು ಬಲಪಡಿಸುವ ಮೂಲಕ ಆರ್ಥಿಕತೆಯನ್ನು ಬೆಂಬಲಿಸಿದೆ. ದೇಶದ ಕಡು ಬಡವರಿಗೆ, ಕೃಷಿಕರಿಗೆ ಸಹಕಾರಿ ಬ್ಯಾಂಕ್‌ಗಳಲ್ಲಿ ಯಾವುದೇ ಅಡೆತಡೆಗಳಿಲ್ಲದೆ ನೇರವಾಗಿ ಸುಲಭವಾಗಿ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದರು.
ಸಹಕಾರಿ ಕ್ಷೇತ್ರ ಉತ್ತಮ ಸ್ಥಿತಿಗೆ ಬರಬೇಕಾದರೆ ಅಧ್ಯಕ್ಷರು, ಅಧಿಕಾರಿಗಳು, ಹಾಗೂ ಸಿಬ್ಬಂದಿಗಳ ಪ್ರಮಾಣಿಕ ಕಾರ್ಯ ಮುಖ್ಯ. ಹಲವು ಗಣ್ಯರು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ದುಡಿದಿದ್ದು, ಹಿರಿಯರ ಕೆಲಸವನ್ನು ಗುರುತಿಸಿ, ಗೌರವಿಸಿದರೆ ಮುಂದಿನ ಪೀಳಿಗೆಗೆ ಪ್ರೇರಣೆಯಾಗುತ್ತದೆ. ಮುಂದಿನ ದಿನಗಳಲ್ಲಿಯೂ ಸಹಕಾರಿ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಹೊಂದುವ ಮೂಲಕ ದೇಶಕ್ಕೆ ಮಾದರಿಯಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ.ಗಣಪತಿ, ೨೭ನೇ ಸಹಕಾರ ಸಪ್ತಾಹವನ್ನು ಭಾರತದಲ್ಲಿ ರಾಷ್ಟ್ರೀಯ ಹಬ್ಬದಂತೆ ಆಚರಣೆ ಮಾಡಲಾಗುತ್ತಿದೆ. ಕೊಡಗು ಬೆಳೆಗಾರರ ಸಹಕಾರ ಸಂಘ ಅತೀ ಹೆಚ್ಚು ಸದಸ್ಯತ್ವ ಹೊಂದಿರುವ ಸಂಘ ಎಂದು ಇಡೀ ದೇಶದಲ್ಲಿ ಸಾಧನೆ ಮಾಡಿದ್ದು, ಕೊಡಗಿನ ವಾತಾವರಣಕ್ಕೆ ಸರಿಯಾಗಿ ಬೆಳೆಗಾರರಿಗೆ ಸಹಕಾರ ನೀಡುತ್ತ ಬಂದಿದೆ. ಅಲ್ಲದೇ ಜಿಲ್ಲೆಯ ಸಹಕಾರ ಸಂಘಗಳು ತಮ್ಮದೇ ಆದ ಜಾಗವನ್ನು ಹೊಂದುವ ಮೂಲಕ ಭದ್ರ ಬುನಾದಿ ಹಾಕಿದೆ. ಪ್ರಮಾಣಿಕ, ಪಾರದರ್ಶಕತೆ, ಭ್ರಷ್ಟಚಾರ ಮುಕ್ತವಾಗಿ ಕಾರ್ಯನಿರ್ವಹಿಸುತ್ತಿದ್ದು, ಕೊಡಗಿನ ಸಹಕಾರ ಸಂಘ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷ ಪಿ.ಯು.ರಾಬಿನ್ ದೇವಯ್ಯ, ದೈನಂದಿನ ಚಟುವಟಿಕಳಲ್ಲಿ ಕಾನೂನು ಕಾಯ್ದೆಗಳು ಬದಲಾಗುತ್ತಿದ್ದು, ಅವುಗಳನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ತರಬೇತಿ, ಕಾರ್ಯಾಗಾರಗಳು ಅತೀ ಮುಖ್ಯ. ಆದ್ದರಿಂದ ಸಹಕಾರಿ ಸಂಘದ ಅಧ್ಯಕ್ಷರು, ನಿರ್ದೇಶಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಾಗಾರಗಳಲ್ಲಿ ಪಾಲ್ಗೊಳ್ಳುವ ಮೂಲಕ ಹೊಸ ಕಾಯ್ದೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಉಪಾಧ್ಯಕ್ಷ ಕೆ.ಎಸ್.ಹರೀಶ್ ಪೂವಯ್ಯ, ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ಉಪಾಧ್ಯಕ್ಷ ಹೆಚ್.ಕೆ.ಮಾದಪ್ಪ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ ಉಪನಿರ್ದೇಶಕಿ ಎಂ.ಎನ್.ಹೇಮಾವತಿ, ಸಹಾಯಕ ನಿಬಂಧಕರಾದ ಶೈಲಜಾ, ಸಹಕಾರ ಯೂನಿಯನ್‌ನ ನಿರ್ದೇಶಕರು ಹಾಜರಿದ್ದರು.
ಸಹಕಾರಿಗಳಿಗೆ ಪ್ರಶಸ್ತಿ ಪ್ರದಾನ
ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿಗಳಾದ ಚಿರಿಯಪಂಡ ಕೆ.ಉತ್ತಪ್ಪ ಅವರಿಗೆ ಕೊಡಗು ಸಹಕಾರ ರತ್ನ, ಎಚ್.ಎಸ್.ಮುದ್ದಪ್ಪ, ತಳೂರು ಎ.ಕಿಶೋರ್‌ಕುಮಾರ್ ಶ್ರೇಷ್ಠ ಸಹಕಾರಿ, ದೇವಾಂಬಿಕ ಮಹೇಶ್ ಶ್ರೇಷ್ಠ ಮಹಿಳಾ ಸಹಕಾರಿ ಮತ್ತು ನಿವೃತ್ತ ಸಹಕಾರಿ ಸಿಬ್ಬಂದಿ ಆಲೆಮಾಡ ಎಸ್.ಕಾವೇರಮ್ಮ ಅವರಿಗೆ ಉತ್ತಮ ಸಹಕಾರಿ ಸಿಬ್ಬಂದಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಭಾರತದ ಸಹಕಾರ ಆಂದೋಲನದ ಮೂಲ ಪುರುಷ ಶಿದ್ದನಗೌಡ ಸಂಣರಾಮನ ಗೌಡ ಪಾಟೀಲ ಹಾಗೂ ಕೊಡಗಿನ ಪ್ರಥಮ ಸಹಕಾರಿ ಕುರಾದ ಗೌಡ್ನ ಮನೆ ಪಿ.ದೊಡ್ಡಯ್ಯ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು.