ವಿ ಬಾಡಗದಲ್ಲಿ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಗಣ್ಯರು ಚಾಲನೆ ನೀಡಿದರು. ಬಾಳೆಯಡ ಕಾಳಯ್ಯ ಸುಬ್ರಮಣಿ , ಸುಜಾ ಕುಶಾಲಪ್ಪ, ಅಮ್ಮುಣಿಚಂಡ ರಂಜು ಪೂಣಚ್ಚ, ಪಳಂಗಂಡ ಲವಕುಮಾರ್, ಕೊಲ್ಲೀರ ಬೋಪಣ್ಣ ಇತರರು ಇದ್ದರು. 
ಕೊಡಗು

ಕೊಡಗಿನ ಖ್ಯಾತಿಗೆ ಕ್ರೀಡಾಪಟುಗಳ ಕೊಡುಗೆ ಅಪಾರ

ಪ್ರಮುಖ ಮುಖ್ಯಾಂಶಗಳು

  • ಎಂಎಲ್ಸಿ ಸುಜಾ ಕುಶಾಲಪ್ಪ ಅಭಿಮತ
ಪೊನ್ನಂಪೇಟೆ : ಇಡೀ ರಾಜ್ಯದಲ್ಲೇ ಅತಿ ಚಿಕ್ಕ ಜಿಲ್ಲೆಯಾಗಿರುವ ಕೊಡಗು ರಾಷ್ಟ್ರ ಮಟ್ಟದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದೆ. ಎಲ್ಲ ಕ್ಷೇತ್ರಗಳಲ್ಲೂ ಕೊಡಗು ಜಿಲ್ಲೆಗೆ ತನ್ನದೇ ಆದ ಹೆಸರಿದೆ. ಕೊಡಗಿನ ಖ್ಯಾತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಜಿಲ್ಲೆಯ ಕ್ರೀಡಾಪಟುಗಳ ಕೊಡುಗೆ ಅಪಾರ ಎಂದು ವಿಧಾನ ಪರಿಷತ್ ಸದಸ್ಯರಾದ ಮಂಡೇಪಂಡ ಪಿ. ಸುಜಾ ಕುಶಾಲಪ್ಪ ಹೇಳಿದರು.
ಬಿಟ್ಟಂಗಾಲ ಸಮೀಪದ ವಿ. ಬಾಡಗದ ಹೈ ಪ್ಲೈಯರ್ಸ್ ತಂಡದ ವತಿಯಿಂದ ವಿಯೋಮನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅವರ ಸಹ ಪ್ರಾಯೋಜಕತ್ವದಲ್ಲಿ ವಿ. ಬಾಡಗದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ 4ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಹೈಪ್ಲೈಯರ್ಸ್ ಕಪ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಗುಡ್ಡಗಾಡು ಪ್ರದೇಶವಾಗಿರುವ ಕೊಡಗು ಜಿಲ್ಲೆ ದೇಶದ ಕ್ರೀಡಾ ಕ್ಷೇತ್ರದ ಬೆಳವಣಿಗೆಯಲ್ಲಿ ಗಣನೀಯ ಪಾತ್ರ ವಹಿಸಿದೆ. ದೇಶದ ಕ್ರೀಡಾ ಇತಿಹಾಸದಿಂದ ಕೊಡಗು ಜಿಲ್ಲೆಯ ಕ್ರೀಡಾ ಸಾಧನೆಯನ್ನು ಹೊರತುಪಡಿಸಲು ಎಂದಿಗೂ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಪಾಂಡಂಡ ಕುಟ್ಟಪ್ಪ ಅವರು 1997ರಲ್ಲಿ ಹುಟ್ಟು ಹಾಕಿದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಪರಿಕಲ್ಪನೆ ಇಂದು ಕೊಡವರಲ್ಲಿ ಹೆಮ್ಮರವಾಗಿ ಬೆಳೆದಿದೆ. ಈ ಕೌಟುಂಬಿಕ ಪಂದ್ಯಾವಳಿಗಳು ಇಂದು ಕೇವಲ ಹಾಕಿ ಕ್ರೀಡೆಗೆ ಮಾತ್ರ ಸೀಮಿತವಾಗದೆ ಎಲ್ಲ ಕ್ರೀಡೆಗಳಿಗೂ ವ್ಯಾಪಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಿದ ಕೊಡವರು ಇಂದು ಜನಸಂಖ್ಯೆಯಲ್ಲಿ ಕ್ಷೀಣಿಸುತ್ತಿದ್ದಾರೆ. ಕೊಡವ ಸಮುದಾಯಕ್ಕೆ ಜನಸಂಖ್ಯೆ ಕೊರತೆ ಎದುರಾದರೆ ಭವಿಷ್ಯದಲ್ಲಿ ಕೊಡವರ ಅಸ್ತಿತ್ವಕ್ಕೆ ಮಾರಕವಾಗಲಿದೆ. ಆದ್ದರಿಂದ ಕೊಡವರು ೀ ಬಗ್ಗೆ ಚಿಂತಿಸಬೇಕು ಎಂದರು.
ವಿ. ಬಾಡಗ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮೈದಾನದ ಅಭಿವೃದ್ಧಿಗಾಗಿ ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ 3 ಲಕ್ಷ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಭಾರತ ಹಾಕಿ ತಂಡದ ಮಾಜಿ ಆಟಗಾರ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಬಾಳೆಯಡ ಕಾಳಯ್ಯ ಸುಬ್ರಮಣಿ ಮಾತನಾಡಿ, ದೇಶಸೇವೆ, ಕೃಷಿ ಮತ್ತು ಕ್ರೀಡೆಯನ್ನು ಹಿಂದಿನಿಂದಲೂ ತಮ್ಮ ರಕ್ತಗತವಾಗಿ ಮೈಗೂಡಿಸಿಕೊಂಡಿರುವ ಕೊಡವರು, ಈ ಮೂರು ಕ್ಷೇತ್ರಗಳ ಬೆಳವಣಿಗೆಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಅದರಲ್ಲೂ ದೇಶಸೇವೆ ಮತ್ತು ಕ್ರೀಡೆಯ ಅಭಿವೃದ್ಧಿಯಲ್ಲಿ ಕೊಡಗು ಜಿಲ್ಲೆ ನಿರ್ವಹಿಸಿದ ಪಾತ್ರವನ್ನು ರಾಜ್ಯದ ಬೇರೆ ಯಾವುದೇ ಜಿಲ್ಲೆ ನಿರ್ವಹಿಸಿಲ್ಲ. ಇದನ್ನು ಸರ್ಕಾರ ಪ್ರತ್ಯೇಕವಾಗಿ ಗುರುತಿಸುವಂತಾಗಬೇಕು ಎಂದರು.
ಹಾಕಿ ಕೂರ್ಗ್ ಅಧ್ಯಕ್ಷರಾದ ಪಳಂಗಂಡ ಲವ ಕುಮಾರ್ ಮಾತನಾಡಿ, ಶಾಲಾ ವಿದ್ಯಾರ್ಥಿಗಳನ್ನು ಕ್ರೀಡೆಯಲ್ಲಿ ಉತ್ತೇಜಿಸುವ ಕೆಲಸ ಕೊಡಗಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. ಅದರಲ್ಲೂ ವಿಶೇಷವಾಗಿ ಹಾಕಿ ಕ್ರೀಡೆಯಲ್ಲಿ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಬೇಕು. ವಿದ್ಯಾರ್ಥಿಗಳನ್ನು ಪ್ರಾಥಮಿಕ ಹಂತದಿಂದಲೇ ಕ್ರೀಡಾ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗುವಂತೆ ಮಾಡಿದಲ್ಲಿ ಶ್ರೇಷ್ಠ ಕ್ರೀಡಾಪಟು ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ವಿ. ಬಾಡಗ ಜಿಎಂಪಿ ಶಾಲಾ ಮುಖ್ಯ ಶಿಕ್ಷಕಿ ಕೆ.ಸಿ. ಗೀತಾಂಜಲಿ, ಹೈಪ್ಲೈಯರ್ಸ್ ಸಂಸ್ಥೆಯ ಸಲಹಾ ಸಮಿತಿ ಅಧ್ಯಕ್ಷರಾದ ಮಳವಂಡ ಗಿರೀಶ್ ಮುದ್ದಯ್ಯ, ಬಿ.ಶೆಟ್ಟಿಗೇರಿ ಗ್ರಾ. ಪಂ. ಅಧ್ಯಕ್ಷ ಕೊಲ್ಲಿರ ಬೋಪಣ್ಣ, ಗ್ರಾಮದ ಪ್ರಮುಖರಾದ ಕಂಜಿತಂಡ ಗಿಣಿ ಮೊಣ್ಣಪ್ಪ, ಪಂದ್ಯಾವಳಿಯ ನಿರ್ದೇಶಕರಾದ ಕುಪ್ಪಂಡ ದಿಲನ್ ಬೋಪಣ್ಣ ಮೊದಲಾದವರು ಉಪಸ್ಥಿತರಿದ್ದರು.
ಪ್ರಥಮಾರ್ಧದ ಬಿಡುವಿನಲ್ಲಿ ಕುತ್ತುನಾಡು ಮಹಿಳಾ ಕೂಟದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಉಳುವಂಗಡ ಲೋಹಿತ್ ಭೀಮಯ್ಯ ಪ್ರಾರ್ಥಿಸಿದರು. ಹೈಪ್ಲೈಯರ್ಸ್ ಸಂಸ್ಥೆಯ ಅಧ್ಯಕ್ಷ ಅಮ್ಮಣಿಚಂಡ ರಂಜು ಪೂಣಚ್ಚ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ವೀಕ್ಷಕ ವಿವರಣೆಗಾರರಾದ ಮಾಳೇಟಿರ ಶ್ರೀನಿವಾಸ್ ಕಾರ್ಯಕ್ರಮ ನಿರ್ವಹಿಸಿದರು.

ಗ್ರಾಮಾಂತರ ಪ್ರದೇಶದಲ್ಲಿ ಕ್ರೀಡಾಕೂಟಗಳು ಜರುಗುತ್ತಿರುವುದು ಕ್ರೀಡೆಗೆ ದೊರೆಯುವ ಉತ್ತೇಜನವಾಗಿದೆ. ಇದನ್ನು ಮುಂದುವರಿಸಬೇಕು. ವಿ. ಬಾಡಗದ ಜಿಎಂಪಿ ಶಾಲಾ ಮೈದಾನಕ್ಕೆ ಪೆವಿಲಿಯನ್ ನಿರ್ಮಿಸಲು ಬೇಡಿಕೆ ಬಂದಿದೆ. ಈ ಕುರಿತು ಅಗತ್ಯ ಪ್ರಸ್ತಾವನೆ ಸಲ್ಲಿಸಿದರೆ, ಮುಂದಿನ ವರ್ಷದೊಳಗಾಗಿ ಮೈದಾನಕ್ಕೆ ಪೆವಿಲಿಯನ್ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು.