ಸೋಮವಾರಪೇಟೆ ಜೇಸಿ ವೇದಿಕೆಯಲ್ಲಿ ತಹಸೀಲ್ದಾರ್ ಕೃಷ್ಣಮೂರ್ತಿ ಸಂವಿಧಾನ ಪೀಠಿಕೆ ಬೋಧಿಸಿದರು. ಪರಮೇಶ ಕುಮಾರ್, ಕೃಷ್ಣಪ್ಪ, ಮೋಹಿನಿ, ಆದಂ ಇದ್ದರು.
- ಪ್ರಾಂಶುಪಾಲ ಡಾ. ಕೆ.ಗುರುಸ್ವಾಮಿ ಅಭಿಮತ
ಸೋಮವಾರಪೇಟೆ : ತಾಲೂಕು ಆಡಳಿತ ಮತ್ತು ವಿವಿಧ ಸಂಘ, ಸಂಸ್ಥೆಗಳ ವತಿಯಿಂದ ಸಂವಿಧಾನ ದಿನವನ್ನು ಜೇಸಿ ವೇದಿಕೆಯಲ್ಲಿ ಅರ್ಥಪೂರ್ಣವಾಗಿ ಬುಧವಾರ ಆಚರಿಸಲಾಯಿತು.
ಬಾಣಾವರ ರಸ್ತೆಯಲ್ಲಿರುವ ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಗು ವಿವಿಧ ಸಂಘ, ಸಂಸ್ಥೆಗಳ ಪ್ರತಿನಿಧಿಗಳು ಪುಷ್ಪಮಾಲೆ ಅರ್ಪಿಸಿದರು. ಪಟ್ಟಣದ ಎಲ್ಲ ಬೀದಿಗಳಲ್ಲೂ ಮೆರವಣಿಗೆ ಮಾಡಿ ಸಂವಿಧಾನದ ಮಹತ್ವ ಸಾರುವ ಮೂಲಕ ಜಾಗೃತಿ ಮೂಡಿಸಲಾಯಿತು. ಅಂಬೇಡ್ಕರ್ ಅವರ ಗಣವೇಷಧಾರಿ ವಿದ್ಯಾರ್ಥಿಯನ್ನು ತೆರೆದ ಜೀಪಿನಲ್ಲಿ ಕರೆತರಲಾಯಿತು. ಜೇಸಿ ವೇದಿಕೆಯಲ್ಲಿ ಸಂವಿಧಾನ ಪೀಠಿಕೆಯನ್ನು ತಹಸೀಲ್ದಾರ್ ಕೃಷ್ಣಮೂರ್ತಿ ಬೋಧಿಸಿದರು.
ಪ್ರಾಂಶುಪಾಲ ಡಾ. ಕೆ.ಗುರುಸ್ವಾಮಿ ಮಾತನಾಡಿ, ಅಂಬೇಡ್ಕರ್ ಅವರು ಸಮಾನತೆ, ನ್ಯಾಯ, ಸ್ವಾತಂತ್ರ್ಯ ಮತ್ತು ಬ್ರಾತೃತ್ವದ ಮೌಲ್ಯಗಳನ್ನು ರಾಷ್ಟ್ರದ ಮೂಲಸ್ತಂಭಗಳಾಗಿ ರೂಪಿಸಿದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಸಂವಿಧಾನವು ಕೇವಲ ಕಾನೂನು ಪ್ರಬಂಧವಲ್ಲ, ಇದು ಪ್ರಜಾಪ್ರಭುತ್ವದ ನೈತಿಕ ಹೃದಯವೆಂದರು.
ಡಾ.ಅಂಬೇಡ್ಕರ್ ಅವರು ಸಮಾಜದ ಅತ್ಯಂತ ದುರ್ಬಲ ವರ್ಗಕ್ಕೂ ಗೌರವಯುತ ಬದುಕಿನ ಹಕ್ಕನ್ನು ನೀಡುವ ಉದ್ದೇಶದಿಂದಲೇ ಸಂವಿಧಾನವನ್ನು ರೂಪಿಸಿದರು. ವಿದ್ಯಾರ್ಥಿಗಳು ಸಂವಿಧಾನದ ಮೂಲ ತತ್ವಗಳು, ಕರ್ತವ್ಯಗಳು ಮತ್ತು ಹಕ್ಕುಗಳನ್ನು ತಿಳಿದುಕೊಳ್ಳುವುದು ಮತ್ತು ಜವಾಬ್ದಾರಿಯುತ ನಾಗರಿಕರಾಗುವುದು ಅಗತ್ಯವೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಸೀಲ್ದಾರ್ ಕೃಷ್ಣಮೂರ್ತಿ, ಅವರು ಭಾರತದ ಸಂವಿಧಾನದಿಂದ ಎಲ್ಲವನ್ನೂ ಪಡೆದುಕೊಂಡಿದ್ದೇವೆ. ಸಂವಿಧಾನದ ಆಶಯದಂತೆ ಬದುಕುತ್ತಿದ್ದೇವೆ. ಪ್ರತಿಯೊಬ್ಬ ನಾಗರಿಕನೂ ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳಬೇಕು. ಕರ್ತವ್ಯಗಳನ್ನು ಗೌರವಿಸಬೇಕು. ಅಂಬೇಡ್ಕರ್ ಅವರ ಜೀವನವೇ ದುಡಿಮೆಗೆ, ತ್ಯಾಗಕ್ಕೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟಕ್ಕೆ ನಿದರ್ಶನವಾಗಿದೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಹೇಳಿದರು.
ಸಂವಿಧಾನದ ಮೌಲ್ಯಗಳ ಕುರಿತಾದ ಪ್ರಬಂಧ ಸ್ಪರ್ಧೆಯ ವಿಜೇತರಾದ ಸಿ.ಎಚ್.ಭೂಮಿಕಾ, ಎಚ್.ಎನ್.ಪವನ್, ಸುಕನ್ಯಾ, ವಿಶ್ವನಾಥ್, ಸಮೀಕ್ಷಾ ಅವರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಇಒ ಪರಮೇಶ ಕುಮಾರ್, ಬಿಇಒ ಕೃಷ್ಣಪ್ಪ, ಸಿ.ಒ. ಕೃಷ್ಣಪ್ರಸಾದ್, ಇನ್‌ಸ್ಪೆಕ್ಟರ್ ಮುದ್ದುಮಾದೇವ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದೇಗೌಡ, ಸೂಡ ಅಧ್ಯಕ್ಷ ಕೆ.ಎ.ಆದಂ, ಪ್ರಮುಖರಾದ ಎಚ್.ಸಿ.ನಾಗೇಶ್, ಮೋಹಿನಿ, ಜನಾರ್ದನ್ ಹಾಗೂ ವಿವಿಧ ಇಲಾಖಾಧಿಕಾರಿಗಳು ಇದ್ದರು.