ಸೋಮವಾರಪೇಟೆಯಲ್ಲಿ ಆಯೋಜಿಸಿದ್ದ ಗಾನಕೋಗಿಲೆ ಎಸ್.ಜಾನಕಿ ಅವರ ಗಾಯನನುಡಿ ನಮನ ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಸುಂದರ್ ಹಾಗೂ ಅತಿಥಿಗಳು ಪುಷ್ಪನಮನ ಸಲ್ಲಿಸಿದರು. 
ಕೊಡಗು

ಪ್ರೇಕ್ಷಕರ ಮನಸೆಳೆದ ಜಾನಕಿ ಹಾಡಿನ ಮೋಡಿ

ಸೋಮವಾರಪೇಟೆ: ಕನ್ನಡ ಸಿರಿ ಸ್ನೇಹ ಬಳಗದ ತಾಲೂಕು ಘಟಕದ ವತಿಯಿಂದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಗಾನಕೋಗಿಲೆ ಎಸ್.ಜಾನಕಿ ಅವರ ಸಂಗೀತಯಾನ ಗಾಯನನುಡಿ ನಮನ ಕಾರ್ಯಕ್ರಮದಲ್ಲಿ ಸಂಗೀತದ ಅಲೆ ಹರಡಿ, ಭಾವನೆಗಳ ಹೊನಲಾಗಿ ಮೂಡಿಬಂತು.
ದಶಕಗಳ ಕಾಲ ಸುಮಧುರ ಕಂಠದಿಂದ ಕೋಟ್ಯಂತರ ಸಂಗೀತಾಸಕ್ತರ ಮನ ಗೆದ್ದ ಎಸ್.ಜಾನಕಿ ಅವರ ಅಮರ ಗೀತೆಗಳು ಸಭಾಂಗಣದಲ್ಲಿ ಮತ್ತೊಮ್ಮೆ ಮೊಳಗಿದಾಗ, ನೆರೆದಿದ್ದವರು ಭಾವಪರವಶರಾದರು.
ಗಾಯಕ-ಗಾಯಕಿಯರು ಜಾನಕಿ ಅವರ ಜನಪ್ರಿಯ ಗೀತೆಗಳನ್ನು ಮನಮಿಡಿಯುವಂತೆ ಪ್ರಸ್ತುತಪಡಿಸಿ, ಅವರ ಸಂಗೀತಸಾಧನೆಗೆ ಅಪೂರ್ವ ಗೌರವ ಸಲ್ಲಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೋಟರಿ ಅಧ್ಯಕ್ಷ ಬಿ.ಎಸ್.ಸುಂದರ್, ಎಸ್.ಜಾನಕಿ ಅವರು ಭಾರತೀಯ ಸಂಗೀತ ಲೋಕದ ಅಮೂಲ್ಯ ಸಂಪತ್ತು. ಅವರ ಧ್ವನಿ ಎಂದೆಂದಿಗೂ ಸಂಗೀತ ಪ್ರಿಯರ ಹೃದಯದಲ್ಲಿ ಅಮರ ಎಂದು ಅಭಿಪ್ರಾಯಪಟ್ಟರು.
ಬಳಗದ ಜಿಲ್ಲಾ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಮಾತನಾಡಿ, ಜಾನಕಿ ಅವರ ಗಾಯನ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಶ್ರೀಮಂತಿಕೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಇಂತಹ ಮಹಾನ್ ಕಲಾವಿದರನ್ನು ಸ್ಮರಿಸುವ ಕಾರ್ಯಕ್ರಮಗಳು ಗಾಯಕ-ಗಾಯಕರಿಗೆ ಪ್ರೇರಣೆಯಾಗಬೇಕು ಎಂದು ಹೇಳಿದರು.
ಬಳಗದ ತಾಲೂಕು ಅಧ್ಯಕ್ಷ ಎಚ್.ಜೆ.ಜವರಪ್ಪ, ಕೊಡಗು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎಸ್.ಎ. ಮುರಳೀಧರ್, ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಮಲ್ಲಪ್ಪ ಪುಷ್ಪನಮನ ಸಲ್ಲಿಸಿದರು. ಶಿಕ್ಷಕಿಯರಾದ ಎಲ್.ಎಂ.ಪ್ರೇಮ ಮತ್ತು ಆಶಾ ಪುಟ್ಟರಾಜು ಕಾರ್ಯಕ್ರಮವನ್ನು ನಿರ್ವಹಿಸಿದರು.