ಎರಡು ವರ್ಷಗಳಿಗೊಮ್ಮೆ ನಡೆಯುವ ಮೂರು ಗ್ರಾಮಗಳ ಗ್ರಾಮ ದೇವತೆ ಶ್ರೀ ಭದ್ರಕಾಳಿಯ ಬೋಡ್ ನಮ್ಮೆ ಊರು ಹಬ್ಬಕ್ಕೆ ಮೂರು ಊರುಗಳ ದೇವತಕ್ಕರು, ಗ್ರಾಮಸ್ಥರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.  
ಕೊಡಗು

ಶ್ರೀಭದ್ರಕಾಳಿಯ ಬೋಡ್ ನಮ್ಮೆ ಊರು ಹಬ್ಬ ಆರಂಭ

ಪ್ರಮುಖ ಮುಖ್ಯಾಂಶಗಳು

  • ದೇವಕಟ್ಟು ಹಾಕುವ ಮೂಲಕ ಚಾಲನೆ
  • ಎರಡು ವರ್ಷಗಳಿಗೊಮ್ಮೆ ಜರುಗುವ ಮೂರು ಗ್ರಾಮಗಳ ಗ್ರಾಮದೇವತೆ ಹಬ್ಬ
ವಿರಾಜಪೇಟೆ: ಎರಡು ವರ್ಷಗಳಿಗೊಮ್ಮೆ ನಡೆಯುವ ಮೂರು ಗ್ರಾಮಗಳ ಗ್ರಾಮ ದೇವತೆ ಶ್ರೀ ಭದ್ರಕಾಳಿಯ ಬೋಡ್ ನಮ್ಮೆ ಊರು ಹಬ್ಬಕ್ಕೆ ದೇವಕಟ್ಟು ಹಾಕುವ ಮೂಲಕ ಶುಕ್ರವಾರ ಅಧಿಕೃತ ಚಾಲನೆ ನೀಡಿಲಾಯಿತು.
ವಿರಾಜಪೇಟೆ ತಾಲೂಕು ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಮಂಗಲ, ಮಗ್ಗುಲ ಮತ್ತು ವೈಪಡ ಗ್ರಾಮಗಳ ಗ್ರಾಮ ದೇವತೆ ಐಮಂಗಲ ಗ್ರಾಮದ ಶ್ರೀ ಭದ್ರಕಾಳಿ ದೇವಾಲಯದ ಆವರಣದಲ್ಲಿ ಮೂರು ಗ್ರಾಮಗಳ ದೇವತಕ್ಕರು, ಗ್ರಾಮಗಳ ಅಧ್ಯಕ್ಷರು, ಗ್ರಾಮಸ್ಥರ ಸಮ್ಮುಖದಲ್ಲಿ ಶುಭಾರಂಭ ಮಾಡಲಾಯಿತು.
ಕೊಟ್ಟಿಯಂಡ ಜೀವನ್ ಮಾತನಾಡಿ, ಮೇ 16,17,18ರಂದು ಮೂರು ದಿನಗಳ ಕಾಲ ಸಂಜೆ ವೇಳೆಯಲ್ಲಿ 1101 ಸುತ್ತು ಪೀಲಿ ಆಟ್ ಮತ್ತು ತಾಲಿಪಾಟ್ ಕಾರ್ಯಕ್ರಮ ನಡೆಯಲಿದೆ. 19ರಂದು ಪಟ್ಟಣಿ ಮತ್ತು ಸಂಜೆ 7ರ ನಂತರ ಮೂರು ಗ್ರಾಮಗಳ ದೇವತೆಗಳನ್ನು ದೇಗುಲಕ್ಕೆ ಕರೆತರಲಾಗುತ್ತದೆ. ಬಳಿಕ ರಾತ್ರಿ 11ರ ಸಮಯದಲ್ಲಿ ಕಳಿ(ವಿವಿಧ ವೇಷಭೂಷಣ) ಧಾರಿಗಳು ಮನೆ ಮನೆಗೆ ತೆರಳುವುದು ಮರುದಿನದ ಮಧ್ಯಾಹ್ನದವರೆಗೆ ನಡೆಯಲಿದೆ. ಮೇ 20 ರಂದು ಮಧ್ಯಾಹ್ನ 4 ಗಂಟೆಯ ವೇಳೆಗೆ ವಿವಿಧ ವೇಷಾಧಾರಿಗಳು ಹರಕೆಯೊಂದಿಗೆ ದೇವಾಲಯಕ್ಕೆ ಆಗಮಿಸಿ ಹರಿಕೆ ಸಮರ್ಪಿಸುವುದು, ಮಹಾಪೂಜೆ ನಡೆಯಲಿದೆ. ಮೇ 21ರಂದು ಬೆಳಗ್ಗೆ 11 ಗಂಟೆಗೆ ಕುದುರೆ ಕಟ್ಟುವುದು, ಮಧ್ಯಾಹ್ನ 2 ಗಂಟೆಗೆ ಮೂರು ಗ್ರಾಮಗಳಿಂದ ಹೊರಟ ಕುದುರೆಗಳು ಮಗ್ಗುಲ ಗ್ರಾಮದ ಮಾಚೆಟ್ಟಿಪಾರೆ ಎಂಬಲ್ಲಿ ಕುದುರೆಆಟ್ ನಡೆಯುತ್ತದೆ. ಬಳಿಕ ಸಂಜೆ ದೇಗುಲಕ್ಕೆ ಆಗಮಿಸಲಿದ್ದಾರೆ.
ದೇವಿಗೆ ವಿಶೇಷ ಪೂಜೆ ನಡೆದು ರಾತ್ರಿ ಭದ್ರಕಾಳಿ ತೆರೆ ಹಾಗೂ ಮೇಲೇರಿ ನಡೆಯುತ್ತದೆ. ನಂತರ ಮಧ್ಯರಾತ್ರಿ ತೆರೆಯುವ ದೇವಾಲಯಕ್ಕೆ ಆಗಮನವಾಗಲಿದೆ. ಮೇ 22ರಂದು ಮಧ್ಯಾಹ್ನ ಕುಂದನೂ ಚೂಳೆ ಹೊರಟು ಸಂಜೆ ದೇವಾಲಯ ಪ್ರವೇಶವಾಗುತ್ತದೆ. ಮೇ 23 ರಂದು ಕಳ ಮಡ್‌ಕ್ಕ್ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಐಮಂಗಲ ಗ್ರಾಮದ ದೇವತಕ್ಕರಾದ ಬೊಳ್ಳಚಂಡ ತಮ್ಮಯ್ಯ, ವೈಪಡ ಗ್ರಾಮದ ದೇವತಕ್ಕರಾದ ಪುಲಿಯಂಡ ನವೀನ್ ಮತ್ತು ಶ್ರೀ ಭದ್ರಕಾಳಿ ಸೇವಾ ಸಮಿತಿ ಐಮಂಗಲ ದೇವಾಲಯದ ಅಧಕ್ಷ ಬೊಳ್ಳಚಂಡ ಪ್ರಕಾಶ್, ಉಪಾಧಕ್ಷರಾದ ಬೊಳ್ಳಚಂಡ ಸೋಮಣ್ಣ, ಕಾರ್ಯದರ್ಶಿ ಮೇಕತಂಡ ಟೀಶ ಬೋಪಯ್ಯ, ವಾಟೇರಿರ ಶಂಕರಿ ಪೂವಯ್ಯ, ವಾಟೇರಿರ ಕುಟ್ಟಪ್ಪ, ಪುಲಿಯಂಡ ಜಿಮ್ಮಿ, ಚೋಕಂಡ ರಮೇಶ್, ಕಿರಣ್ ಕುಮಾರ್ ಇತರರು ಇದ್ದರು.