ಸೋಮವಾರಪೇಟೆಯಲ್ಲಿ ಮೇ 7ರಿಂದ ನಡೆಯುವ ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿಯ ಟೈಸ್ ಅನ್ನು ಅಪ್ಪಚ್ಚು ರಂಜನ್ ಬಿಡುಗಡೆಗೊಳಿಸಿದರು. ಶ್ರೀನಿಧಿ, ಹರ್ಷಿತ್, ಸಜನ್, ಮೋಹಿತ್ ಇದ್ದರು.
- ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅಭಿಮತ
- ಹಾಕಿ ಪಂದ್ಯಾವಳಿಯ ಟೈಸ್ ಬಿಡುಗಡೆ
ಸೋಮವಾರಪೇಟೆ: ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ಇದೇ ಪ್ರಥಮ ಬಾರಿಗೆ ಸೋಮವಾರಪೇಟೆಯ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ಮೇ.7ರಿಂದ 10ರವರೆಗೆ ಆಯೋಜಿಸಿರುವ ರಾಜ್ಯಮಟ್ಟದ ಯಿಫಾ ಹಾಕಿ ಚಾಂಪಿಯನ್ಸ್ ಟ್ರೋಫಿ ಕ್ರೀಡಾಕೂಟದ ಟೈಸ್ ಅನ್ನು ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಭಾನುವಾರ ಬಿಡುಗಡೆಗೊಳಿಸಿದರು.
ತಾಲೂಕಿನ ಕುಂಬೂರು ಗ್ರಾಮದ ತಮ್ಮ ಗೃಹ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಟೈಸ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕೊಡಗಿನ ಹಾಕಿ ಪಟುಗಳಿಗೆ ಹೆಚ್ಚಿನ ಸೌಕರ್ಯ ಒದಗಿಸಬೇಕೆಂಬ ನಿಟ್ಟಿನಲ್ಲಿ ತಾನು ಕ್ರೀಡಾ ಸಚಿವನಾಗಿದ್ದ ವೇಳೆ ಜಿಲ್ಲೆಯ ಸೋಮವಾರಪೇಟೆ, ಕೂಡಿಗೆ, ಪೊನ್ನಂಪೇಟೆಗೆ ಆಸ್ಟ್ರೋ ಟರ್ಫ್ ಹಾಕಿ ಮೈದಾನಕ್ಕೆ ಅನುದಾನ ಒದಗಿಸಿದ್ದು, ಮೂರು ಕಡೆಗಳಲ್ಲಿಯೂ ಸುಸಜ್ಜಿತ ಮೈದಾನ ನಿರ್ಮಾಣವಾಗಿ ರಾಜ್ಯಮಟ್ಟದ ಪಂದ್ಯಾವಳಿ ಆಯೋಜಿಸುತ್ತಿರುವುದು ಸಂತಸದ ವಿಚಾರ ಎಂದರು.
ಕೊಡಗಿನ ಮಣ್ಣಿನಲ್ಲಿ ಕ್ರೀಡೆ ಅಡಗಿದೆ. ಈ ಭೂಮಿ ನಿಸರ್ಗದ ಸೃಷ್ಟಿಯ ಸೊಬಗು. ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಕೊಡಗಿನಂತಹ ವಾತಾವರಣ ಸಿಗುವುದಿಲ್ಲ. ಈ ಹಿನ್ನೆಲೆ ಕೊಡಗಿನಲ್ಲಿ ಕೃಷಿ ಭೂಮಿ ಹೊಂದಿರುವವರು ಎಂತಹ ಸಂದರ್ಭದಲ್ಲಿಯಾದರೂ ಭೂಮಿಯನ್ನು ಬೇರೆಯವರಿಗೆ ಮಾರಾಟ ಮಾಡಬಾರದು ಎಂದು ಮನವಿ ಮಾಡಿದರು.
ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ಸಂಘಟನೆಯು ಹಲವು ಸಮಾಜಮುಖಿ ಕಾರ್ಯಗಳನ್ನು ನಡೆಸಿರುವುದನ್ನು ಸಮಾಜ ಗಮನಿಸಿದೆ. ಇದೇ ಪ್ರಥಮ ಬಾರಿಗೆ ಹಾಕಿ ಕ್ರೀಡಾಕೂಟ ಆಯೋಜಿಸುವ ಮೂಲಕ ಹಾಕಿ ಕ್ರೀಡೆಗೆ ಪ್ರೋತ್ಸಾಹ ತುಂಬಲು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ ಮಾತನಾಡಿ, ಇದೇ ಪ್ರಥಮ ಬಾರಿಗೆ ಕೊಡಗಿನಲ್ಲಿ 25 ವರ್ಷಗಳ ನಂತರ ರಾಜ್ಯಮಟ್ಟದ ಹಾಕಿ ಪಂದ್ಯಾವಳಿ ಆಯೋಜಿಸಲಾಗಿದೆ. ಕ್ರೀಡಾಕೂಟದಲ್ಲಿ ರಾಜ್ಯಮಟ್ಟದ ಪ್ರತಿಷ್ಠಿತ ತಂಡಗಳಾದ ಕೆನರಾ ಬ್ಯಾಂಕ್, ಕರ್ನಾಟಕ ಸ್ಟೇಟ್ ಪೊಲೀಸ್, ಎಜಿಓಆರ್.ಸಿ., ಸೌತ್ ವೆಸ್ಟರ್ನ್ ರೈಲ್ವೇಸ್, ಕಸ್ಟಮ್ಸ್, ಡಿವೈಇಎಸ್, ಸೌತರ್ನ್ ಕಮಾಂಡ್ ಹಾಗೂ ಆತಿಥೇಯ ಯಿಫಾ ತಂಡಗಳು ಭಾಗವಹಿಸುತ್ತಿವೆ ಎಂದು ಹೇಳಿದರು.
ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವ ತಂಡಕ್ಕೆ 2 ಲಕ್ಷ ರೂ.ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ 1 ಲಕ್ಷ ರೂ. ಹಾಗೂ ಟ್ರೋಫಿ, ತೃತೀಯ ಸ್ಥಾನ ಪಡೆಯುವ ತಂಡಕ್ಕೆ 50 ಸಾವಿರ ರೂ. ಹಾಗೂ ಟ್ರೋಫಿ ನೀಡಲಾಗುವುದು. ಇದರೊಂದಿಗೆ ವೈಯುಕ್ತಿಕ ವಿಭಾಗದಲ್ಲಿಯೂ ಪ್ರಶಸ್ತಿಗಳನ್ನು ವಿತರಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಯಿಫಾ ಸಂಘಟನೆಯ ಉಪಾಧ್ಯಕ್ಷ ಹರ್ಷಿತ್ ಶಿವಪ್ಪ, ಕಾರ್ಯದರ್ಶಿ ಸಜನ್ ಮಂದಣ್ಣ, ಖಜಾಂಚಿ ಮೋಹಿತ್ ತಿಮ್ಮಯ್ಯ ಸೇರಿದಂತೆ ಪದಾಧಿಕಾರಿಗಳು, ಮಹಿಳಾ ಘಟಕದ ಸದಸ್ಯರು ಇದ್ದರು.
ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿದ್ದು, ಎ. ಗುಂಪಿನಲ್ಲಿ ಕೆನರಾ ಬ್ಯಾಂಕ್, ಡಿವೈಇಎಸ್, ಕಸ್ಟಮ್ಸ್ ಅಂಡ್ ಸೆಂಟ್ರಲ್ ಎಕ್ಸೈಜ್, ಎ.ಜಿ.ಒ.ಆರ್.ಸಿ. ತಂಡಗಳು ಹಾಗೂ ಬಿ. ಗುಂಪಿನಲ್ಲಿ ಸೌತ್ ವೆಸ್ಟ್ರನ್ ರೈಲ್ವೇಸ್, ಸೌತರ್ನ್ ಕಮಾಂಡ್, ಯಿಫಾ ಹಾಗೂ ಕರ್ನಾಟಕ ಸ್ಟೇಟ್ ಪೊಲೀಸ್ ತಂಡಗಳು ಸೆಣಸಲಿವೆ.