ಹಾರಂಗಿಯಲ್ಲಿ ಇರುವ ಮೀನುಗಾರಿಕೆ ಇಲಾಖೆಯ ಮೀನು ಮರಿ ಉತ್ಪಾದನಾ ಕೇಂದ್ರ
ಕುಶಾಲನಗರ ತಾಲೂಕು ಹಾರಂಗಿ ಜಲಾಶಯ ಆವರಣದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದ್ದ ಆತ್ಯಾಧುನಿಕ ಮತ್ಸಾö್ಯಲಯ ಯೋಜನೆ ನೆನೆಗುದಿಗೆ ಬಿದ್ದಿದೆ. ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಆಸಕ್ತಿಯ ಫಲವಾಗಿ ಚಿಗುರೊಡೆದಿದ್ದ ಈ ಕನಸು ಮುಖ್ಯಮಂತ್ರಿ ಕಚೇರಿಯಲ್ಲಿ ಪರಿಶೀಲನೆಯ ಹಂತದಲ್ಲೇ ಉಳಿದುಕೊಂಡುಬಿಟ್ಟಿದೆ. ಮೀನುಗಾರಿಕೆ ಇಲಾಖೆ ಮೂಲಕ ನಿರ್ಮಾಣ ಆಗಬೇಕಿದ್ದ ಸುಮಾರು 10 ಕೋಟಿ ರೂ. ವೆಚ್ಚದ ಈ ಅಕ್ವೇರಿಯನಿಂದ ಕೊಡಗಿನ ಪ್ರವಾಸೋದ್ಯಮ ಕ್ಷೇತ್ರಕ್ಕೆ ಮತ್ತಷ್ಟು ಹೊಳಪಿನ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು.
ಗಡಿಯಲ್ಲಿ ಕಾವೇರಿ ನದಿಯಿಂದ ಆಚೆಗೆ ಬೈಲಕುಪ್ಪೆಯ ಗೋಲ್ಡನ್ ಟೆಂಪಲ್, ಸುತ್ತಮುತ್ತಲ ಕೆಲವೇ ಕಿಮೀಗಳ ಅಂತರದಲ್ಲಿ ಹಾರಂಗಿ ಜಲಾಶಯ, ಸಂಗೀತ ಕಾರಂಜಿ, ಹಾರಂಗಿ ಸಾಕಾನೆ ಶಿಬಿರ, ಕಾವೇರಿ ನಿಸರ್ಗಧಾಮ, ಚಿಕ್ಲಿಹೊಳೆ ಜಲಾಶಯ, ದುಬಾರೆ ಸಾಕಾನೆ ಶಿಬಿರ, ವೈಟ್ ಮತ್ತು ಸ್ಟಿಲ್ ವಾಟರ್ ರಿವರ್ ರ‍್ಯಾಫ್ಟಿಂಗ್, ಐಷಾರಾಮಿ ರೆಸಾರ್ಟ್ಗಳು, ಹೋಮ್‌ಸ್ಟೇಗಳು... ಹೀಗೆ ಕೊಡಗಿನ ಪ್ರವಾಸೋದ್ಯಮ ಹಬ್ ಆಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಕುಶಾಲನಗರದ ಹಿರಿಮೆಗೆ ಗರಿ ಎನ್ನುವಂತೆ ಸಮೀಪದ ಹಾರಂಗಿಯಲ್ಲಿ ಮತ್ತೊಂದು ಪ್ರವಾಸಿ ತಾಣವಾಗಿ ಅತ್ಯಾಧುನಿಕ ಶೈಲಿಯ ಅಕ್ವೇರಿಯಂ ನಿರ್ಮಾಣಕ್ಕೆ ÀಸಂಬAಧಿಸಿದAತೆ 2023-24ರಲ್ಲಿ ಭರದ ಚಟುವಟಿಕೆಗಳು ನಡೆದಿದ್ದವು.
ಪರಿಸರಕ್ಕೆ ಪೂರಕ ಪ್ರವಾಸೋದ್ಯಮದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಕೊಡಗಿನಲ್ಲಿ ಮೀನುಗಾರಿಕೆ ಇಲಾಖೆ ಮುಖಾಂತರ ಅಕ್ವೇರಿಯಂ ಆರಂಭಿಸಬೇಕು ಎನ್ನುವ ಕನಸು ಇಟ್ಟುಕೊಂಡಿದ್ದರು. ಇದಕ್ಕೆ ಪೂರಕವಾಗಿ 2023ರ ಅಕ್ಟೋಬರ್‌ನಲ್ಲಿ ಮೀನುಗಾರಿಕೆ ಸಚಿವ ಮಂಕಾಳ ಎಸ್. ವೈದ್ಯ ಹಾರಂಗಿಗೆ ಬಂದಿದ್ದ ಸಂದರ್ಭ ಈ ವಿಷಯವನ್ನು ಸಚಿವರ ಗಮನ ತಂದಿದ್ದರು. ಸಚಿವರು ಕೂಡ ಈ ಪ್ರಸ್ತಾವನೆಯನ್ನು ಮೆಚ್ಚಿಕೊಂಡು ಅಕ್ವೇರಿಯಂ ನಿರ್ಮಾಣಕ್ಕೆ ಉತ್ಸುಕತೆ ತೋರಿಸಿದಲ್ಲದೆ ಸರ್ಕಾರದ ಸಂಪೂರ್ಣ ಅನುದಾನದಲ್ಲಿ ಅಕ್ವೇರಿಯಂ ನಿರ್ಮಾಣ ಮತ್ತು ನಿರ್ವಹಣೆ ಸದ್ಯದ ಪರಿಸ್ಥಿತಿಯಲ್ಲಿ ಕಷ್ಟಸಾಧ್ಯವಾಗಿರುವುದರಿಂದ ಪಿಪಿಪಿ ಮಾದರಿಯಲ್ಲಿ ಅನುಷ್ಠಾನಕ್ಕೆ ತರುವ ಚಿಂತನೆ ಹಂಚಿಕೊAಡಿದ್ದರು.
ನಂತರ ನಿರಂತರವಾಗಿ ಈ ಬಗ್ಗೆ ಮೀನುಗಾರಿಕೆ ಇಲಾಖೆ ಜತೆ ಸಂಪರ್ಕ ಇಟ್ಟುಕೊಂಡಿದ್ದ ಮಂತರ್ ಗೌಡ, ಅಕ್ವೇರಿಯಂ ಸ್ಥಾಪನೆ ಬಗ್ಗೆ ಮೀನುಗಾರಿಕೆ ಇಲಾಖೆ ಮೂಲಕವೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಆಗುವಂತೆ ನೋಡಿಕೊಂಡಿದ್ದರು. ನಂತರ ಸರ್ಕಾರ ಈ ಯೋಜನೆಗೆ ಆರಂಭಿಕ ಅನುಮೋದನೆ ಕೊಟ್ಟಿತ್ತು. 2024-25ನೇ ಸಾಲಿಗೆ ಮೀನುಗಾರಿಕೆ ನಿರ್ದೇಶನಾಲಯದ ಮೂಲಕ ಆರ್‌ಐಡಿಎಫ್ ಟ್ರಾಂಚ್-30ರ ಅಡಿಯಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸುವ ಬಗ್ಗೆ ಯೋಜನೆ ರೂಪಿಸಲಾಗಿತ್ತು. ನಂತರ ಇದಕ್ಕೆ ಸಂಬAಧಿಸಿದ ಕಡತ ಎಲ್ಲಾ ಕಡೆಗಳಲ್ಲೂ ಅನುಮೋದನೆ ಪಡೆದುಕೊಂಡು ಬಂದು ಕಳೆದ ಒಂದು ವರ್ಷದಿಂದ ಮುಖ್ಯಮಂತ್ರಿ ಕಚೇರಿಯಲ್ಲಿ ಪರಿಶೀಲನಾ ಹಂತದಲ್ಲೇ ಉಳಿದುಕೊಂಡಿರುವ ಮಾಹಿತಿ ಸಿಕ್ಕಿದೆ.
ಪಶ್ಚಿಮಘಟ್ಟದ ಸೆರಗಿನಲ್ಲಿ ಇರುವ ಮಲೆನಾಡು ಜಿಲ್ಲೆ ಕೊಡಗು ಪ್ರಾಕೃತಿಕ ಸೌಂದರ್ಯದಿAದಾಗಿ ಈಗಾಗಲೇ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಪ್ರತಿನಿತ್ಯ ಸೆಳೆಯುತ್ತಿದೆ. ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಕಾಲ ಕಾಲಕ್ಕೆ ಸಾಕಷ್ಟು ಸವಲತ್ತುಗಳನ್ನು ಸರ್ಕಾರ ಒದಗಿಸುತ್ತಾ ಬಂದಿದೆ. ಆಧುನಿಕ ಜಮಾನ ಮತ್ತು ಸಮಯಕ್ಕೆ ಸರಿಯಾಗಿ ಬದಲಾಗುತ್ತಿರುವ ಟ್ರೆಂಡ್‌ಗೆ ಅನುಗುಣವಾಗಿ ಪ್ರವಾಸಿಗರನ್ನು ಸೆಳೆಯಲು ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ, ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಒಂದಿಲ್ಲೊAದು ಆಕರ್ಷಣೆಗಳನ್ನು ಒದಗಿಸುತ್ತಾ ಬಂದಿವೆ. ಖಾಸಗಿಯವರೂ ಪ್ರವಾಸಿ ಆಕರ್ಷಣೆಗಳನ್ನು ಅಳವಡಿಸಿಕೊಳ್ಳುತ್ತಿರುತ್ತಾರೆ. ಇದರ ಜತೆಗೆ ಮೀನುಗಾರಿಕೆ ಇಲಾಖೆ ಮುಖಾಂತರವೂ ಪ್ರವಾಸಿಗರನ್ನು ಸೆಳೆಯಲು ಜಿಲ್ಲೆಗೆ ಅತ್ಯಾಧುನಿಕ ಅಕ್ವೇರಿಯಂ ನೀಡುವ ಸರ್ಕಾರ ಯೋಜನೆಗೆ ಮುಖ್ಯಮಂತ್ರಿ ಕಚೇರಿಯಿಂದ ಗ್ರೀನ್ ಸಿಗ್ನಲ್‌ಗಾಗಿ ಇಲಾಖೆ ಕಾಯುತ್ತಿದೆ.
ಮೀನುಗಾರಿಕೆ ಇಲಾಖೆ ಅಡಿಯಲ್ಲಿ ಹಾರಂಗಿ ಜಲಾಶಯದ ಒತ್ತಿನಲ್ಲೇ ಮೀನು ಮರಿ ಉತ್ಪಾದನಾ ಕೇಂದ್ರವೊAದು ಈಗಾಗಲೇ ಕಾರ್ಯಾಚರಿಸುತ್ತಿದೆ. ಅಪರೂಪದ ಮಹಶೀರ್ ಮೀನು ಮರಿಗಳ ಉತ್ಪಾದನೆ ಸೇರಿದಂತೆ ರೈತರಿಗೆ ಸಾಕಲು ಅಗತ್ಯವಿರುವ ವಿವಿಧ ತಳಿಗಳ ಮೀನು ಮರಿಗಳನ್ನು ಈ ಕೇಂದ್ರದಲ್ಲಿ ಉತ್ಪಾದಿಸಿ ಪೂರೈಕೆ ಮಾಡಲಾಗುತ್ತಿದೆ. ಅಲಂಕಾರಿಕಾ ಮೀನುಗಳ ಪ್ರಾಯೋಗಿಕ ಸಾಕಾಣಿಕೆಯೂ ಇಲ್ಲಿ ನಡೆಯುತ್ತಿದೆ. ಇದೇ ಜಾಗದಲ್ಲಿ ಅಕ್ವೇರಿಯಂ ಸ್ಥಾಪಿಸಲು ಶಾಸಕ ಡಾ. ಮಂತರ್ ಗೌಡ ಆಸಕ್ತಿ ತೋರಿಸಿದ್ದರು.
ಆದರೆ ಇಲ್ಲಿ ಮತ್ಸಾö್ಯಲಯ ಸ್ಥಾಪನೆಯಾದರೆ ಸ್ಥಳಾವಕಾಶದ ಸಮಸ್ಯೆ ತಲೆದೋರಬಹುದು ಎನ್ನುವ ಆತಂಕವನ್ನು ಅಧಿಕಾರಿಗಳು ಶಾಸಕರ ಗಮನಕ್ಕೆ ತಂದಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದರೆ ವಾಹನ ನಿಲುಗಡೆ ಸೇರಿದಂತೆ ವಿವಿಧ ತೊಂದರೆಗಳು ಎದುರಾಗಬಹುದು. ಮೀನು ಮರಿಗಳ ಉತ್ಪಾದನೆ ಸಂದರ್ಭ ಆರೋಗ್ಯಯುತ ಪರಿಸರದ ಅಗತ್ಯವಿದ್ದು, ಪ್ರವಾಸಿಗರ ಅತ್ಯಧಿಕ ಓಡಾಟದಿಂದ ಇದಕ್ಕೂ ಅಡ್ಡಿ ಆಗಬಹುದು ಎಂದು ಗಮನ ಸೆಳೆಯಲಾಗಿತ್ತು.
ಹಾಗಾಗಿ ಹಾರಂಗಿ ಜಲಾಶಯದ ಒತ್ತಿನಲ್ಲಿ ನಿರ್ಮಾಣ ಆಗಿರುವ ಉದ್ಯಾನದಲ್ಲಿ ಮತ್ಸಾö್ಯಗಾರ ಕಾರ್ಯಾಚರಣೆ ಆರಂಭಿಸಿದರೆ ಎಲ್ಲಾ ರೀತಿಯಿಂದಲೂ ಅನುಕೂಲತೆ ಇದೆ ಎನ್ನುವುದು ಅಧಿಕಾರಿಗಳ ಸಲಹೆ. ಇಲ್ಲಿ ವಾಹನ ನಿಲುಗಡೆಗೆ ವಿಶಾಲ ಜಾಗವಿದೆ. ಉದ್ಯಾನ, ಸಂಗೀತ ಕಾರಂಜಿ ಹಾಗೂ ಪಕ್ಕದಲ್ಲೇ ಸಾಕಾನೆ ಶಿಬಿರ ಇರುವುದರಿಂ ಪ್ರವಾಸಿಗರಿಗೆ ಒಂದೇ ಸ್ಥಳದಲ್ಲಿ ಹೆಚ್ಚಿನ ಪ್ರವಾಸಿ ಆಕರ್ಷಣೆಗಳ ವೀಕ್ಷಣೆಗೆ ಅವಕಾಶ ಆಗುತ್ತದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಜಲಾಶಯದ ಬಳಿಯೇ ಮತ್ಸಾö್ಯಲಯ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ.
ದೇಶ ವಿದೇಶಗಳ ಬಗೆ ಬಗೆಯ ಮೀನುಗಳನ್ನು ಒಂದೇ ಸ್ಥಳದಲ್ಲಿ ವೀಕ್ಷಿಸುವ ಅವಕಾಶವನ್ನು ಪ್ರವಾಸಿಗರಿಗೆ ಕಲ್ಪಿಸುವ ಮಹತ್ವದ ಉದ್ದೇಶ ಅಕ್ವೇರಿಯಂ ನಿರ್ಮಾಣದ ಹಿಂದೆ ಇದೆ. ಇದು ಹಾರಂಗಿ ಮಾತ್ರವಲ್ಲದೆ ಕೊಡಗಿಗೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯಲು ಅನುಕೂಲ ಆಗಬಹುದು ಎನ್ನಲಾಗುತ್ತಿದೆ. ಇದರ ಜತೆಯಲ್ಲಿ ಕಾವೇರಿ ನದಿಯಲ್ಲಿ ಮಾತ್ರ ಹೆಚ್ಚಾಗಿ ಕಂಡು ಬರುವ ಅಪರೂಪದ ಮಹಶೀರ್ ತಳಿಯ ಮೀನುಗಳು ಕಾವೇರಿಯ ಉಪನದಿ ಹಾರಂಗಿಯಲ್ಲಿ ದೊಡ್ಡ ಪ್ರಮಾಣದಲ್ಲಿದೆ. ಈ ಮೀನುಗಳನ್ನು ಸಂರಕ್ಷಿಸುವ ಉದ್ದೇಶದಿಂದ ಹಾರಂಗಿ ಅಣೆಕಟ್ಟೆಯಿಂದ ಕೂಡಿಗೆ ಸೇತುವೆ ತನಕ ಮೀನುಗಾರಿಕೆಗೆ ನಿರ್ಬಂಧ ವಿಧಿಸಲಾಗಿದೆ. ಹಾರಂಗಿ ಸೇತುವೆ ಬಳಿ ಸೋಪಾನ ಕಟ್ಟೆ ಮಾದರಿಯಲ್ಲಿ ನದಿ ಬದಿಯಲ್ಲಿ ಕಟ್ಟೆ ಕಟ್ಟಿ ಇಲ್ಲಿ ಮೀನುಗಳಿಗೆ ಪ್ರವಾಸಿಗರ ಮೂಲಕ ಆಹಾರ ನೀಡುವ ಯೋಜನೆಯೂ ಚಿಂತನೆಯ ಹಂತದಲ್ಲಿದೆ.
"
ಕುಶಾಲನಗರ ತಾಲೂಕು ಹಾರಂಗಿ ಜಲಾಶಯದ ಆವರಣದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಮತ್ಸಾö್ಯಲಯ ನಿರ್ಮಾಣಕ್ಕೆ ಸಂಬAಧಿಸಿದAತೆ ನಮ್ಮ ಇಲಾಖೆ ಕಡೆಯಿಂದ ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಶಾಸಕರು ಕೂಡ ಈ ನಿಟ್ಟಿನಲ್ಲಿ ಪೂರಕ ಸಹಕಾರಗಳನ್ನು ಕೊಟ್ಟಿದ್ದಾರೆ. ಸಂಬAಧಿಸಿದ ಎಲ್ಲಾ ಇಲಾಖೆಗಳಿಂದ ಯೋಜನೆಗೆ ಕ್ಲಿಯರೆನ್ಸ್ ಸಿಕ್ಕಿದೆ. ಸದ್ಯ ಈ ಕಡತ ಮುಖ್ಯಮಂತ್ರಿ ಕಚೇರಿಯಲ್ಲಿ ಪರಿಶೀಲನೆಯ ಹಂತದಲ್ಲಿ ಇದೆ. ಆದಷ್ಟು ಶೀಘ್ರ ಅಲ್ಲಿಯೂ ಒಪ್ಪಿಗೆ ಸಿಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
— ಸಿ.ಎಸ್. ಸಚಿನ್, ಉಪನಿರ್ದೇಶಕ, ಮೀನುಗಾರಿಕೆ ಇಲಾಕೆ, ಕೊಡಗು