ಪ್ರಮುಖ ಮುಖ್ಯಾಂಶಗಳು
ಕೊಡಗು ಪ್ರವಾಸಿಗರ ಪಾಲಿಗೆ ಇತ್ತೀಚಿನ ವರ್ಷಗಳಲ್ಲಿ ಕಸದ ತೊಟ್ಟಿಯಂತಾಗಿದೆ. ಅಗತ್ಯಕ್ಕಿಂತ ಹೆಚ್ಚು ಪ್ರವಾಸಿಗರ ಆಗಮನದಿಂದ ಕೊಡಗಿನ ಶುದ್ದ ಪರಿಸರ, ನೆಲ, ಜಲ, ಗಾಳಿಯ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತಿದೆ. ಜತೆಗೆ ಹೋಂ ಸ್ಟೇ, ರೆಸಾರ್ಟ್ಗಳ ನಿರ್ಮಾಣ ಹಾಗೂ ಸ್ಥಳೀಯರು ಹಾಗೂ ಪ್ರವಾಸಿಗರ ವಾಹನಗಳ ಸಂದಣಿ ಜಾಸ್ತಿ ಆಗುತ್ತಿರುವ ಪರಿಣಾಮ ಪರಿಸರ ಕಲುಷಿತಗೊಳ್ಳುತ್ತಿದೆ.
ಅರಣ್ಯ ನಾಶ ನಿಲ್ಲದಿದ್ದರೆ ಕೊಡಗಿನ ಶುದ್ಧ ಗಾಳಿ ಮುಂದಿನ ಪೀಳಿಗೆಗೆ ಕಥೆಯಾಗಿ ಉಳಿಯಬಹುದು. ಕೊಡಗು ಪ್ರವಾಸಿತಾಣವಾಗಿರುವುದರಿಂದ ಪ್ರತಿದಿನವೂ ಹಲವು ವಾಹನಗಳು, ಕಟ್ಟಡ ನಿರ್ಮಾಣ, ಅನಿಯಂತ್ರಿತ ವಾಣಿಜ್ಯ ಚಟುವಟಿಕೆಗಳು ವೇಗವಾಗಿ ಹೆಚ್ಚಾಗುತ್ತಿವೆ. ಇದಕ್ಕೆ ಹೆಚ್ಚುವರಿಯಾಗಿ ಕಾಡು ನಾಶ, ಹಸಿರು ಪ್ರದೇಶಗಳ ಕುಗ್ಗುವಿಕೆ, ಕಸ ನಿರ್ವಹಣೆಯ ಕೊರತೆ... ಇವೆಲ್ಲಾ ಒಂದಲ್ಲಾ ಒಂದು ರೀತಿಯಲ್ಲಿ ಇಲ್ಲಿನ ಗಾಳಿಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ.
ಕರ್ನಾಟಕದ ಕಾಶ್ಮೀರ ಎಂಬ ಹೆಗ್ಗಳಿಕೆಗೆ ಕೊಡಗು ಪಾತ್ರವಾಗಿರುವುದೇ ತನ್ನ ನಿಸರ್ಗದತ್ತ ಪ್ರಕೃತಿ ಸೌಂದರ್ಯದಿAದಾಗಿ. ಇಂದು ಜಾಗತಿಕ ವಿದ್ಯಮಾನಗಳಿಂದ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳಿಗೆ ಸಿಲುಕದೆ ಶುದ್ಧಗಾಳಿ ಇರುವ ಸ್ಥಳಗಳಲ್ಲಿ ನಮ್ಮ ಕೊಡಗಿನ ಮಡಿಕೇರಿ ಮುಂಚೂಣಿಯಲ್ಲಿದ್ದುದ್ದು ಸಮಾಧಾನಕರ ಸಂಗತಿಯಾಗಿತ್ತು. ಆದರೆ ಒಂದೇ ವರ್ಷದಲ್ಲಿ ಮೂರನೇ ಸ್ಥಾನಕ್ಕೆ ಇಳಿದಿರುವುದು ಬಹುಶಃ ಅಪಾಯದ ಸುಳಿಯಿಂದ ತಪ್ಪಿಸಿಕೊಳ್ಳಲು ಕಷ್ಟ ಸಾಧ್ಯ ಎಂಬುದರ ಮುನ್ಸೂಚನೆ ಆಗಿದೆ. ಸ್ವಚ್ಛ ಕೊಡಗು ಅಭಿಯಾನ ನಡೆದಂತೆಯೇ ಪರಿಸರ ಶುದ್ಧವಾಗಿರಿಸಿಕೊಳ್ಳುವ ಬಗ್ಗೆ ಕೊಡಗಿನ ನಾಗರಿಕರು, ಜಿಲ್ಲಾಡಳಿತದ ಸಹಕಾರದೊಂದಿಗೆ ಸಂಘ ಸಂಸ್ಥೆಗಳ ಜತೆಗೆ ಕೈ ಜೋಡಿಸಿ ಗಂಭೀರವಾಗಿ ಶ್ರಮ ವಹಿಸಬೇಕಾಗಿದೆ.
ದೇಶದಲ್ಲಿ ಶುದ್ಧ ಗಾಳಿ ಇರುವ ಸ್ಥಳಗಳಲ್ಲಿ ಮೊದಲನೇ ಸ್ಥಾನದಲ್ಲಿದ್ದ ನಮ್ಮ ಮಡಿಕೇರಿ ಈ ವರ್ಷ 3ನೇ ಸ್ಥಾನಕ್ಕೆ ಕುಸಿದಿರುವುದು ಬಹಳ ಬೇಸರದ ವಿಷಯ. ಬೆಟ್ಟ ಗುಡ್ಡದಲ್ಲಿದ್ದ ಮರಗಿಡ ಕಡಿದು ರೆಸಾರ್ಟ್ಗಳನ್ನು ನಿರ್ಮಿಸುವುದು, ಕಟ್ಟಡ ಕಟ್ಟುವುದು, ನಮ್ಮ ಮಡಿಕೇರಿಯಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯೇ ಇದಕ್ಕೆ ಕಾರಣ. ಮರ ಕಡಿಯದಂತೆ ಮತ್ತು ಹಳೆಯ ವಾಹನಗಳನ್ನು ಬಳಸದಂತೆ ಕಡಿವಾಣ ಹಾಕುವುದು ಅವಶ್ಯಕವಾಗಿದೆ. ಇಲ್ಲದಿದ್ದರೆ ಮುಂದಿನ ಸಾಲಿಗೆ ಇನ್ನೂ ಕೆಳ ಸ್ಥಾನಕ್ಕೆ ಕುಸಿಯುವ ಸಾಧ್ಯತೆ ಹೆಚ್ಚು.