ಸೋಮವಾರಪೇಟೆಯ ಕೊಡವ ಸಮಾಜದ ಸಭಾಂಗಣದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ 6ನೇ ಪುಸ್ತಕ ಪತ್ತಾಯವನ್ನು ಉದ್ಘಾಟನಾ ಸಮಾರಂಭದಲ್ಲಿ ಬರಹಗಾರ್ತಿ ಶಶಿ ಸುಬ್ರಮಣಿ ಅವರು ರಚಿಸಿದ ಪುಸ್ತಕವನ್ನು ಗಣ್ಯರು ಬಿಡುಗಡೆಗೊಳಿಸಿದರು. ನಾಚಪ್ಪ, ಅಭಿಮನ್ಯುಕುಮಾರ್, ಫ್ಯಾನ್ಸಿ, ಶಶಿ ಇದ್ದರು.
ಸೋಮವಾರಪೇಟೆ: ಪ್ರತಿಯೊಬ್ಬರ ಮನೆ ಮತ್ತು ಮನದಲ್ಲಿ ಸಾಹಿತ್ಯವನ್ನು ಉಣಬಡಿಸುವುದೇ ಪುಸ್ತಕ ಪತ್ತಾಯ ಯೋಜನೆಯ ಮೂಲ ಉದ್ದೇಶವಾಗಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಹೇಳಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಸೋಮವಾರಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ಅಕಾಡೆಮಿಯ ವಿನೂತನ ಯೋಜನೆಯಾದ 6ನೇ ಪುಸ್ತಕ ಪತ್ತಾಯವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಪತ್ತಾಯ ಅಂದರೆ ಸಂಗ್ರಹ ಅಥವಾ ಶೇಖರಣೆಯಾಗಿದ್ದು, ಜಿಲ್ಲೆಯ ಉದಯೋನ್ಮುಖ ಬರಹಗಾರರಿಗೆ ಸಾಹಿತ್ಯಾಸಕ್ತರಿಗೆ, ಓದುಗರಿಗೆ ಈ ಯೋಜನೆ ವರದಾನವಾಗುವುದರೊಂದಿಗೆ ಪುಸ್ತಕ ಜ್ಞಾನವನ್ನು ಹೆಚ್ಚಿಸಲು ಸಹಕಾರಿಯಾಗಿದೆ.
ಪ್ರತಿಯೊಂದು ಕೊಡವ ಸಮಾಜಗಳು ಹಾಗೂ ಐನ್‌ಮನೆಗಳಲ್ಲಿ ಕೊಡವ ಪುಸ್ತಕ ಪತ್ತಾಯವನ್ನು ತೆರೆಯುವುದರ ಮೂಲಕ ಸಾಹಿತ್ಯ ಪರ ಚಿಂತನೆಗಳನ್ನು ಬೆಳೆಸಬೇಕಾಗಿದೆ. ನಡಿಕೇರಿಯಂಡ ಚಿಣ್ಣಪ್ಪ ಅವರು ಬರೆದ ದಕ್ಷಿಣ ಭಾರತದಲ್ಲಿಯೇ ಮಹಾನ್ ಗ್ರಂಥ ಎಂದು ಕರೆಯಲ್ಪಡುವ ಪಟ್ಟೋಲೆ ಪಳಮೆ ಪುಸ್ತಕವು ಕೊಡವರ ಕಲೆ, ಸಂಸ್ಕೃತಿ, ಭಾಷೆ ಸಾಹಿತ್ಯವನ್ನು ಒಳಗೊಂಡಿದ್ದು ಇಂದಿಗೂ ಮರು ಮುದ್ರಣಗೊಳ್ಳುವ ಮೂಲಕ ದಾಖಲೆ ನಿರ್ಮಿಸಿದ್ದು, ಪ್ರತಿಯೊಬ್ಬ ಕೊಡವರ ಮನೆಯಲ್ಲಿ ಪುಸ್ತಕ ಇರಬೇಕಾಗಿದ್ದು, ಇಂದಿನ ಮಕ್ಕಳು ಈ ಗ್ರಂಥವನ್ನು ಓದಲೇಬೇಕಾಗಿದೆ ಎಂದರು.
ಹಿರಿಯ ಸಾಹಿತಿಗಳಾದ ಕಲ್ಲೇಂಗಡ ಅಪ್ಪಚ್ಚು, ಹಂಚೆಟ್ಟೀರ ಫ್ಯಾನ್ಸಿ ಮುತ್ತಣ್ಣ, ಕಲಾವಿದರಾದ ನಾಪಂಡ ಚಿಣ್ಣಪ್ಪ ಮಾತನಾಡಿದರು. ‘ಕೊಡವ ಪಾಜೆಲ್ ಪುಸ್ತಕತ್‌ರ ಅವಶ್ಯಕತೆ ಪಿಂಞ ಪ್ರಯೋಜನ’ ಈ ವಿಷಯದ ಕುರಿತು ಅಕಾಡೆಮಿಯ ಮಾಜಿ ಸದಸ್ಯ ತೇಲಪಂಡ ಕವನ್ ಕಾರ್ಯಪ್ಪ ವಿಚಾರ ಮಂಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಕೊಡವ ಸಮಾಜದ ಅಧ್ಯಕ್ಷ ಮಾಳೇಟಿರ ಅಭಿಮನ್ಯುಕುಮಾರ್ ಮಾತನಾಡಿ, ಇಂದು ಜಿಲ್ಲೆಯಲ್ಲಿ ಸಾಹಿತ್ಯಪರ ಚಟುವಟಿಕೆ ಹೆಚ್ಚುತ್ತಿದ್ದು, ಇನ್ನಷ್ಟು ಮೌಲ್ಯಯುತ ಬರಹಗಳನ್ನೊಳಗೊಂಡ, ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಬರವಣಿಗೆಗಳ ಅವಶ್ಯಕತೆ ಇದೆ. ಸೋಮವಾರಪೇಟೆ ಕೊಡವ ಸಮಾಜದಲ್ಲಿ ಪುಸ್ತಕ ಪತ್ತಾಯದ ಯೋಜನೆಯನ್ನು ಇನ್ನಷ್ಟು ಸದಸ್ಯರಿಗೆ ತಲುಪಿಸುವ ಸದುದ್ದೇಶದೊಂದಿಗೆ ಗ್ರಂಥಾಲಯವನ್ನು ತೆರೆಯಲಾಗುವುದು ಎಂದರು.
ಇದೇ ಸಂದರ್ಭ ಬರಹಗಾರ್ತಿ ಕರೋಟಿರ ಶಶಿ ಸುಬ್ರಮಣಿ ಅವರು ರಚಿಸಿದ ನಂಬಿಕೆ ಪುರಾಣತ್‌ರ ನಡುಲ್ ಕೊಡವಡ ಸಾಂಸ್ಕೃತಿಕ ಬದ್‌ಕ್ ಪುಸ್ತಕವನ್ನು ಗಣ್ಯರು ಬಿಡುಗಡೆಗೊಳಿಸಿದರು.
ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷರಾದ ಬಾಚಿನಾಡಂಡ ಇಂದಿರಾ ಚಿಂಗಪ್ಪ, ಸಮಾಜದ ಕಾರ್ಯದರ್ಶಿ ಕೊಚ್ಚೇರ ಅನಿಲ್ ಕುಮಾರ್, ಮಖಜಾಂಚಿ ಪಾಡೆಯಂಡ ಮುತ್ತಣ್ಣ, ನಿರ್ದೆಶಕ ಮಚ್ಚಂಡ ಪ್ರಕಾಶ್ ಇದ್ದರು. ಅಕಾಡೆಮಿ ಸದಸ್ಯರಾದ ಡಾ.ಕಂಬೆಯಂಡ ಡೀನಾ ಬೋಜಣ್ಣ ಕಾರ್ಯಕ್ರಮ ನಿರ್ವಹಿಸಿದರು.