ಜೀರ್ಣೋದ್ಧಾರಗೊಂಡ ಭಾಗಮಂಡಲ ತಾವೂರು ಗ್ರಾಮದ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನದ ನವೀಕೃತ ಪೌಳಿಯನ್ನು ಸತೀಶ್ ಕುಮಾರ್ ಉದ್ಘಾಟಿಸಿದರು. ವೆಂಕಟೇಶ್, ರಾಘವ, ಕುರುಂಜಿ ದೇವಯ್ಯ, ಕುದುಕುಳಿ ಅಶ್ವಥ್ ಇತರರಿದ್ದರು. 
ಕೊಡಗು

ಬದುಕಿಗೆ ಆಶಾಭಾವನೆ ತುಂಬುವ ದೇಗುಲಗಳು

ಗೋಣಿಕೊಪ್ಪ: ಗೊಂದಲಗೊಂಡ ಮನಸ್ಸನ್ನು ನಿರಾಳತೆ, ನಿರ್ಮಲತೆಗೆ ಕೊಂಡೊಯ್ಯಲು ದೇಗುಲಗಳಿಂದ ಸಾಧ್ಯ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಹೊಸೂರು ಸತೀಶ್ ಕುಮಾರ್ ಹೇಳಿದರು.
ಜೀರ್ಣೋದ್ಧಾರಗೊಂಡ ಭಾಗಮಂಡಲ ತಾವೂರು ಗ್ರಾಮದ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನದ ನವೀಕೃತ ಪೌಳಿಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ಮನುಷ್ಯ ತನ್ನ ನೋವುಗಳನ್ನು ಸಂಕೋಚವಿಲ್ಲದೆ ವ್ಯಕ್ತಪಡಿಸಿಕೊಳ್ಳಲು ದೇವಾಲಯಗಳ ಅವಶ್ಯಕತೆ ಇದೆ. ಗರ್ಭಗುಡಿಯಲ್ಲಿ ಸ್ಥಾಪಿಸಿರುವ ದೇವರ ಮೂರ್ತಿಗಳು ಮನುಷ್ಯನ ಬದುಕಿಗೆ ಆಶಾಭಾವನೆ ತುಂಬಬಲ್ಲವು. ಹೀಗಾಗಿ ಪ್ರಾರ್ಥನೆ ಮತ್ತು ಧಾರ್ಮಿಕ ಕಾರ್ಯಗಳು ಪ್ರತಿಯೊಬ್ಬರಿಗೂ ಅಗತ್ಯ ಎಂದು ತಿಳಿಸಿದರು.
ಮನುಷ್ಯನ ಮನದೊಳಗೆ ಅಡಗಿರುವ ರಹಸ್ಯ ವಿಚಾರಗಳನ್ನು ಮತ್ತೊಬ್ಬ ವ್ಯಕ್ತಿಯೊಂದಿಗೆ ಹಂಚಿಕೊಂಡಾಗ ಅದು ಅಪಾಯದ ಸನ್ನಿವೇಶಗಳನ್ನು ತರಬಹುದು. ಆದರೆ, ದೇವಾಲಯದಲ್ಲಿರುವ ಮೂರ್ತಿಯೊಂದಿಗೆ ಮನದ ಮಾತುಕತೆ ನಡೆಸಿದಾಗ ಮನಸ್ಸು ಶಾಂತಿಯುತವಾಗಿರಲು ಸಾಧ್ಯವಾಗಬಲ್ಲದು ಎಂದು ತಿಳಿಸಿದರು.
ಆಡಳಿತ ಮಂಡಳಿ ಅಧ್ಯಕ್ಷ ಕೋಳಿಬೈಲು ವೆಂಕಟೇಶ್ ಮಾತನಾಡಿ, ಗ್ರಾಮೀಣ ಭಾಗದ ಪದ್ಧತಿ, ಪರಂಪರೆ, ಸಂಸ್ಕೃತಿಗಳನ್ನು ಉಳಿಸಿಕೊಳ್ಳಲು ಮತ್ತು ಧಾರ್ಮಿಕತೆಯನ್ನು ಎತ್ತಿ ಹಿಡಿಯಲು ದೇವಾಲಯಗಳು ಮಹತ್ತರ ಪಾತ್ರವಹಿಸುತ್ತವೆ. ಆ ನಿಟ್ಟಿನಲ್ಲಿ ತಾವೂರು ಗ್ರಾಮದಲ್ಲಿ ಸಾವಿರಾರು ವರ್ಷಗಳ ಹಿಂದೆ, ಮಹಿಷಾಸುರ ಮರ್ದಿನಿ ದೇವರು ನೆಲೆಸಿ ಈ ಗ್ರಾಮದ ಜನರ ಬದುಕಿಗೆ ಭಕ್ತಿಯ ಮನಸ್ಥಿತಿಯನ್ನು ಹೊಂದಲು ಅವಕಾಶ ನೀಡಿ, ಸಮೃದ್ಧಿ ಮತ್ತು ಶಾಂತಿಯ ಬದುಕು ನಡೆಸಲು ದೇವರ ಕೃಪೆ ಅಗತ್ಯತೆಯನ್ನು ನೀಡಿದೆ ಎಂದು ಹೇಳಿದರು.
ನಿವೃತ್ತ ಪ್ರಾಂಶುಪಾಲ ಬಾರಿಕೆ ರಾಘವ ಮಾತನಾಡಿದರು. ದೇವಾಲಯದ ತಕ್ಕ ಮುಖ್ಯಸ್ಥ ಕುರುಂಜಿ ದೇವಯ್ಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕುದುಕುಳಿ ಅಶ್ವಥ್, ಮಾಜಿ ಅಧ್ಯಕ್ಷ ಅಮೆ ಬಾಲಕೃಷ್ಣ, ಮಾಜಿ ಕಾರ್ಯದರ್ಶಿ ಬಾರಿಕೆ ವೆಂಕಟರಮಣ, ದೇವಾಲಯದ ಶಿಲ್ಪಿ ಉಮೇಶ್ ಇದ್ದರು.
ದಾನಿಗಳಾದ ಬಾರಿಕೆ ರಾಘವ, ಹೊಸೂರು ಸತೀಶ್ ಕುಮಾರ್, ಬಾರಿಕೆ ನಿರಂಜನ್, ಅಯ್ಯನಿರ ದಿನೇಶ್, ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿ ಹಾಗೂ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿಗಳನ್ನು ಸನ್ಮಾನ ಮಾಡಲಾಯಿತು.