ಮಾಲಂಬಿಯಲ್ಲಿ ಗ್ರಾಮ ದೇವತಾ ಮರು ಪ್ರತಿಷ್ಠಾಪನಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಕೃಷ್ಣರಾಜ್, ರಾಮಣ್ಣ, ಉ .ರಾ.ನಾಗೇಶ್ ಅವರನ್ನು ಸನ್ಮಾನಿಸಲಾಯಿತು. ರಮೇಶ್, ಸುರೇಶ್, ವೆಂಕಟೇಶ್, ಶಶಿಧರ್, ಪ್ರಸನ್ನಕುಮಾರ್, ರಾಜಪ್ಪ ಇದ್ದರು.
ಶನಿವಾರಸಂತೆ: ಸಮೀಪದ ಮಾಲಂಬಿಯಲ್ಲಿ ಗ್ರಾಮ ದೇವತಾ ಮರು ಪ್ರತಿಷ್ಠಾಪನಾ ಕಾರ್ಯಕ್ರಮದ ಸಮಾರೋಪ ಸಮಾರಂಭ ದೇವಾಲಯದ ಆವರಣದಲ್ಲಿ ಇತ್ತೀಚೆಗೆ ನಡೆಯಿತು.
ಸರ್ಕಲ್ ಇನ್‌ಸ್ಪೆಕ್ಟರ್ ಜಿ.ಕೃಷ್ಣ ರಾಜ್ ಮಾತನಾಡಿ, ಇಂದು ಗ್ರಾಮೀಣ ಭಾಗದಲ್ಲಿ ದೇವಾಲಯಗಳು ತಲೆ ಎತ್ತುತ್ತಿರುವುದರಿಂದ ಜನರಲ್ಲಿ ಒಗ್ಗಟ್ಟು ಕಾಣುತ್ತಿದೆ. ಯಾವುದೇ ಕೆಲಸಕ್ಕೆ ಎಲ್ಲರ ಸಹಕಾರ ಅಗತ್ಯ. ಪೊಲೀಸ್ ಇಲಾಖೆ ಜನಸ್ನೇಹಿಯಾಗಿದ್ದು ಯಾವುದೇ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಎದುರಾದರೂ ತಕ್ಷಣ ಕರೆ ಮಾಡಿದರೆ ಸ್ಪಂದಿಸುತ್ತೇವೆ ಎಂದರು.
ಸಾಹಿತಿ ಉ.ರಾ.ನಾಗೇಶ್ ಮಾತನಾಡಿ, ಕೊಡಗಿನ ಮಣ್ಣು ಅನೇಕರಿಗೆ ಉದ್ಯೋಗ ಒದಗಿಸಿದೆ. ಗ್ರಾಮೀಣ ಭಾಗದ ಪೂರ್ವಜರು ಇಂದಿಗೂ ತಮ್ಮ ಸಂಪ್ರದಾಯಗಳನ್ನು ಉಳಿಸಿಕೊಂಡು ಬಂದಿದ್ದಾರೆ. ಆಧುನಿಕ ಭರಾಟೆಯಲ್ಲಿ ಹಳೆಯ ಸಂಪ್ರದಾಯಗಳನ್ನು ಅನೇಕರು ಮರೆಯುತ್ತಿದ್ದಾರೆ.
ದೇವಾಲಯಗಳಲ್ಲಿ ನಿತ್ಯ ಪೂಜೆ-ಪುನಸ್ಕಾರಗಳು ನಡೆದರೆ ಗ್ರಾಮಗಳಿಗೆ ಒಳಿತು ಎಂದು ಹೇಳಿದರು.
ಸಮಿತಿ ಅಧ್ಯಕ್ಷ ಎಂ.ಈ.ವೆಂಕಟೇಶ್, ಸಮಾಜ ಸೇವಕ ರಾಮಣ್ಣ, ಕಡ್ಯದ ಮಾಚಯ್ಯ, ಹಣಕೋಡು ರಮೇಶ್, ಎಸ್.ಪಿ. ರಾಜಪ್ಪ, ಆಲೂರು ಸಿದ್ದಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಜೆ.ಪ್ರಸನ್ನಕುಮಾರ್, ಮಾಲಂಬಿ ಗ್ರಾಮ ಸಮಿತಿ ಅಧ್ಯಕ್ಷ ಶಶಿಧರ್, ಎಂ.ಡಿ.ಸುರೇಶ್ ಇದ್ದರು. ಸರ್ಕಲ್ ಇನ್‌ಸ್ಪೆಕ್ಟರ್ ಕೃಷ್ಣರಾಜ್, ಕೃಷಿಕ ರಾಮಣ್ಣ, ಉ.ರಾ.ನಾಗೇಶ್ ಅವರನ್ನು ಸನ್ಮಾನಿಸಲಾಯಿತು.