ಬಸವೇಶ್ವರ ದೇವಾಲಯದ ವಿಗ್ರಹದ ಮರು ಪ್ರತಿಷ್ಠಾಪನೆ ಹಾಗೂ ದೇವಾಲಯದ ಉದ್ಘಾಟನೆ ಸಮಾರಂಭವನ್ನು ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಉದ್ಘಾಟಿಸಿದರು. ಸಿಡಿಗಳಲೆ ಮಠದ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಜಿಲ್ಲಾ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಶಾಂಬಶಿವಯ್ಯ ಇತರರಿದ್ದರು.
- ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ ಅಭಿಮತ
- ಶ್ರೀ ಬಸವೇಶ್ವರ ದೇವಾಲಯದ ವಿಗ್ರಹದ ಮರು ಪ್ರತಿಷ್ಠಾಪನೆ
ಶನಿವಾರಸಂತೆ : ಕೊಡ್ಲಿಪೇಟೆ ಹೋಬಳಿ ಕೋರಗಲ್ಲು ಗ್ರಾಮದ ಶ್ರೀ ಬಸವೇಶ್ವರ ದೇವಾಲಯದ ವಿಗ್ರಹದ ಮರು ಪ್ರತಿಷ್ಠಾಪನೆ ಹಾಗೂ ದೇವಾಲಯದ ಉದ್ಘಾಟನೆ ಶುಕ್ರವಾರ ನಡೆಯಿತು.
ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿ, ದೇವಾಲಯಗಳು ಭಾರತೀಯ ನಾಗರಿಕತೆಯ ಸಾಂಸ್ಕೃತಿಕವಾದ ಕುರುಹುಗಳು. ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತದಲ್ಲಿ ಸರ್ವರ ಸಹಭಾಗಿತ್ವ ಶ್ಲಾಘನೀಯವಾದುದು ಎಂದರು.
ಮನುಷ್ಯನಿಂದಾಗಿರುವ ಪರಿಸರದ ಕಲುಷಿತ ವಾತಾವರಣವೇ ಇಂದಿನ ಹವಾಮಾನಗಳ ವೈರುಧ್ಯಗಳಿಗೆ ಕಾರಣವಾಗಿದೆ. ಹಾಗಾಗಿ ಇನ್ನಾದರೂ ಪರಿಸರ ಸಂರಕ್ಷಿಸುವ ಪಣ ತೊಡಬೇಕಿದೆ ಎಂದು ಶ್ರೀಗಳು ಕರೆಕೊಟ್ಟರು.
ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಇತ್ತೀಚೆಗೆ ಹಳ್ಳಿಗಳು ನಗರಗಳಾಗುತ್ತಿದ್ದು, ಮೂಲ ಸಂಸ್ಕೃತಿ ಹಾಗೂ ಸಂಸ್ಕಾರಗಳು ನಾಶವಾಗದಂತೆ ನೋಡಿಕೊಳ್ಳಬೇಕಿದೆ. ಮಕ್ಕಳಿಗೆ ಇಂದು ಸಂಸ್ಕಾರ ತುಂಬಿದ ಶಿಕ್ಷಣ ತುಂಬ ಅಗತ್ಯವಿದೆ. ತಾಯಂದಿರು ಮನೆಗಳಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರಗಳನ್ನು ಕಲಿಸಲು ಕರೆಕೊಟ್ಟರು.
ಸಿಡಿಗಳಲೆ ಮಠದ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಮೂರ್ತಿ, ಜಿಲ್ಲಾ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಶಾಂಬಶಿವಯ್ಯ, ಗ್ರಾಮದ ದೇವಾಲಯ ಸಮಿತಿ ಅಧ್ಯಕ್ಷ ಕೆ.ಪಿ.ಮಲ್ಲಿಕಾರ್ಜುನ, ಉಪಾಧ್ಯಕ್ಷ ಧರ್ಮಪ್ಪ, ಗುರುರಾಜ್, ಕೌಶಿಕ್, ಚಂದ್ರಶೇಖರ್ ಇದ್ದರು.
ಬೆಳಗ್ಗೆಯಿಂದ ದೇವಾಲಯದಲ್ಲಿ ರುದ್ರಾಭಿಷೇಕ, ಕಳಸಾರೋಹಣ, ಬಿಲ್ವಾರ್ಚನೆ, ಪೂರ್ಣಾಹುತಿ, ಪುಷ್ಪಾರ್ಚನೆ, ಮಹಾಮಂಗಳಾರತಿ ನೆರವೇರಿತು.
ಗುರುವಾರ ಸಂಜೆ ಗಂಗಾಪೂಜೆಯೊಂದಿಗೆ ಹಸು ಕರು ಹಾಗೂ ಪೂರ್ಣಕುಂಭ ಮೆರವಣಿಗೆ ನಡೆಯಿತು. ಊದ್ದೂರಿನ ರವಿಕುಮಾರ್ ತಂಡದಿಂದ ವೀರಗಾಸೆ ಭಕ್ತರ ಆಕರ್ಷಣೆಯಾಗಿತ್ತು. ಕೊಡ್ಲಿಪೇಟೆಯ ಸೋಮಶೇಖರ ಶಾಸ್ತ್ರಿ ಪೂಜಾವಿಧಿಗಳನ್ನು ನೆರವೇರಿಸಿದರು.