ಕೆದಮುಳ್ಳೂರು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಚಾಮುಂಡಿ ದೇವಾಲಯದ ಹೊರನೋಟ.  
ಕೊಡಗು

ಭಕ್ತರ ಇಷ್ಟಾರ್ಥ ಕರುಣಿವ ದೇವಿ

ಕೆದಮುಳ್ಳೂರಿನಲ್ಲಿದೆ 800 ವರ್ಷ ಇತಿಹಾಸದ ಸನ್ನಿಧಿ

ಸುನಿಲ್ ಕುಮಾರ್ ವಿರಾಜಪೇಟೆ

ಭಕ್ತರ ಇಷ್ಟಾರ್ಥಗಳನ್ನು ಕರುಣಿಸುವ ದೇವಿ ಸನ್ನಿಧಿಯು ವಿರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮದಲ್ಲಿದೆ. ಕೇರಳದಿಂದ ಆಗಮಿಸಿದ ಚಾಮುಂಡಿ ದೇವಿಯು ಕೊಡಗನ್ನೆಲ್ಲ ಸುತ್ತಿ ಕೊನೆಗೆ ಕೆದಮುಳ್ಳೂರು ಸನ್ನಿಧಿಯಲ್ಲಿ ನೆಲೆ ನಿಂತಳು ಎಂಬುದು ಪ್ರಾಚೀನ ಕಥೆ.

ಗ್ರಾಮದ ಮುಖಂಡರಾಗಿದ್ದ ಮಾಳೇಟಿರ ಮೇಚಜ್ಜ ಎನ್ನುವರಲ್ಲಿ ದೇವಿ ನೆಲೆ ಬೇಡಿದಳಂತೆ. ಆಗ ಮೇಚಜ್ಜ ನನ್ನೊಬ್ಬನಿಂದ ಇದು ಸಾಧ್ಯವಿಲ್ಲ. ಗ್ರಾಮಸ್ಥರೆಲ್ಲರ ಸಹಕಾರದಿಂದ ನೆರವೇರಿಸುವೆ ಎಂದರಂತೆ. ಗ್ರಾಮಸ್ಥರ ಸಹಕಾರ ಪಡೆದು ಕೆದಮುಳ್ಳೂರಿನಲ್ಲಿ ಚಾಮುಂಡಿಗೆ ನೆಲೆ ಅವರು ಕಲ್ಪಿಸಿದರು. ದೇವಿ ಸನ್ನಿಧಿಯಲ್ಲಿ ಅಂದಿನಿಂದ ಪೂಜೆ ಉತ್ಸವಾದಿಗಳು ಆರಂಭಗೊಂಡವು. 800 ವರ್ಷದಿಂದ ಈ ಪರಂಪರೆ ಮುಂದುವರಿದಿದೆ. ಕೊಡಗಿನ ಪ್ರಸಿದ್ಧ ಹಾಗೂ ಪ್ರಾಚೀನ ದೇವಾಲಯಗಳಲ್ಲಿ ಇದೂ ಒಂದಾಗಿದೆ.

ದೇವಿ ಸನ್ನಿಧಿ ಆರಂಭದಲ್ಲಿ ಚಿಕ್ಕ ಗುಡಿಯಾಗಿತ್ತು. ಕುರುಬ ಸಮುದಾಯದವರ ನೆರವಿನೊಂದಿಗೆ ಉತ್ಸವ ಹಾಗೂ ಇತರ ಕಾರ್ಯಗಳು ನೆರವೇರುತ್ತಿದ್ದವು. ನಂತರ ಸನ್ನಿಧಿಗೆ ಹುಲ್ಲಿನ ಹೊದಿಕೆ ಹಾಕಿ, ಮಣ್ಣಿನ ಗೋಡೆಗಳನ್ನು ನಿರ್ಮಿಸಲಾಯಿತು. ಗ್ರಾಮಸ್ಥರ ಸಹಕಾರ, ಸರ್ಕಾರ ಹಾಗೂ ದಾನಿಗಳ ನೆರವಿನಿಂದ 2000 ರಲ್ಲಿ ದೇವಾಲಯ ಮರುನಿರ್ಮಾಣ ಮಾಡಲಾಯಿತು. ಸುಸಜ್ಜಿತ ಪೌಳಿ ನಿರ್ಮಾಣ ಮಾಡಿದ್ದರಿಂದ ವಾರ್ಷಿಕ ಮಹೋತ್ಸವಗಳನ್ನು ನಡೆಸಲು ಸ್ಥಳಾವಕಾಶ ದೊರಕಿತು. ಹರಕೆ ಸೇವೆಗಳನ್ನು ಭಕ್ತರು ಸಮರ್ಪಣೆ ಮಾಡುವ ಸಂದರ್ಭದಲ್ಲಿ ಮಾಳೇಟಿರ ಕುಟುಂಬಸ್ಥರು ಹಾಗೂ ಕುರುಬ ಸಮುದಾಯದವರು ಇಂದಿಗೂ ಸಹಾಯಹಸ್ತ ನೀಡುವುದು ವಿಶೇಷ.

*

ವಾರ್ಷಿಕ ಮಹೋತ್ಸವ ಆಚರಣೆ: ದೇವಾಲಯದಲ್ಲಿ ದೈನಂದಿನ ಪೂಜೆ, ವಾರದ ಪೂಜೆ ಇತ್ಯಾದಿಗಳ ಪಟ್ಟಿ ಇಲ್ಲಿಲ್ಲ. ಪ್ರತಿದಿನ ಭಕ್ತರು ತಮ್ಮ ಇಚ್ಛೆಯಂತೆ ದೇವಾಲಯಕ್ಕೆ ಬಂದು ದೇವರಿಗೆ ಭಕ್ತಿ ಸಮರ್ಪಿಸಲು ಹೂಗಳನ್ನು ಅರ್ಪಿಸಿ ದೀಪ ಬೆಳಗುತ್ತಾರೆ. ಪ್ರತಿ ವರ್ಷ ಮಾರ್ಚ್ 29 ರಿಂದ ಏ. 4 ರ ವರೆಗೆ ವಾರ್ಷಿಕಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಸಂದರ್ಭ 12 ಕೋಲಗಳು ರಾತ್ರಿ ವೇಳೆ ನೆರವೇರುತ್ತವೆ. ಉದ್ದ ಮುಡಿ ಸೇವೆ ಸಲ್ಲಿಸುವ ಭಕ್ತರು ದೇವಿ ಬನಕ್ಕೆ ಹೋಗುವುದರೊಂದಿಗೆ ವಾರ್ಷಿಕೋತ್ಸವಕ್ಕೆ ತೆರೆ ಎಳೆಯಲಾಗುತ್ತದೆ. ಜಿಲ್ಲೆಯ ವಿವಿಧ ಕಡೆಗಳಿಂದ ಆಗಮಿಸುವ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಗುತ್ತದೆ.

*

ಭಕ್ತರ ಕಷ್ಟ ಪರಿಹರಿಸುವ ತಾಯಿ. ಚಾಮುಂಡಿ ತಾಯಿಯು ಭಕ್ತರ ಸಮಸ್ಯೆಗಳನ್ನು ನಿವಾರಿಸುವ ಮಾತೆಯಾಗಿದ್ದಾಳೆ. ಬೇಡಿದವರಿಗೆ ಶಾಂತಿ, ಸುಖ ದಯಪಾಲಿಸುವ ಈಕೆ ಕಲ್ಯಾಣಭಾಗ್ಯ ದಾಯಿನಿ. ಸಂತಾನವಾಗಲಿ ಎಂದು ಹಲವರು ದೇವಿಯಲ್ಲಿ ಮೊರೆ ಇಡುತ್ತಾರೆ. ವಿವಾಹ ವಿಳಂಬವಾದರೆ, ಆರೋಗ್ಯ ಸಮಸ್ಯೆಯಾದರೆ, ಪ್ರಾಣಿಗಳ ಆರೋಗ್ಯ ಏರುಪೇರಾದರೆ, ಆಸ್ತಿ ಇನ್ನಿತರ ವ್ಯಾಜ್ಯಗಳು ಎದುರಾದರೆ ದೇವಿಯ ಸನ್ನಿಧಿಗೆ ಬಂದು ಹರಕೆ ಕಟ್ಟಿಕೊಳ್ಳುತ್ತಾರೆ. ಊರಿಗೆ ಮಳೆಯಾಗಬೇಕಾದರೆ ಗ್ರಾಮಸ್ಥರು ದೇವಿಗೆ ಹರಕೆ ಕಟ್ಟುತ್ತಾರೆ. ಹರಕೆ ಫಲಿಸಿದ ನಂತರ ದೇವರಿಗೆ ಕಾಣಿಕೆ, ಕಡ್ತಲೆ (ದೈವದ ಖಡ್ಗ ), ತ್ರಿಶೂಲ ಮತ್ತು ಚಿನ್ನಾಭರಣ ಸಮರ್ಪಣೆ ಮಾಡುವ ಪದ್ಧತಿ ಇದೆ.

*

ತಲುಪುವ ಮಾರ್ಗ : ಚಾಮುಂಡಿ ದೇವಾಲಯವು ವಿರಾಜಪೇಟೆ ನಗರದಿಂದ ಸುಮಾರು 10 ಕಿ.ಮೀ ದೂರವಿದೆ. ಬೆಳಗ್ಗೆ ಹಾಗೂ ಸಂಜೆ ವಿರಾಜಪೇಟೆ ನಾಪೋಕ್ಲು ಮಾರ್ಗವಾಗಿ ಸಂಚರಿಸುವ ಬಸ್ ಮೂಲಕ ದೇಗುಲ ತಲುಪಬಹುದು. ಉಳಿದಂತೆ ವಿರಾಜಪೇಟೆಯಿಂದ ಆಟೋ ರಿಕ್ಷಾ ಅಥವಾ ಖಾಸಗಿ ವಾಹನದ ಸೌಕರ್ಯವಿದೆ.

**

ದೇವಿಯು ಭಕ್ತರ ಕಾರ್ಪಣ್ಯಗಳನ್ನು ದೂರಮಾಡುತ್ತಾಳೆ. ಮದುವೆ ಭಾಗ್ಯ, ಸಂತಾನ ಮತ್ತು ಆರೋಗ್ಯವನ್ನು ಕರುಣಿಸುವ ಮಾತೆಯಾಗಿದ್ದಾಳೆ ಎಂದು ಭಕ್ತರು ನಂಬಿದ್ದಾರೆ. ಸಮಸ್ಯೆಗಳಿಗೆ ಪರಿಹಾರ ದೊರೆತ ನಂತರ ಭಕ್ತರು ಚಿನ್ನ, ಬೆಳ್ಳಿ ಆಭರಣ, ತ್ರಿಶೂಲ, ದೀಪಗಳನ್ನು ಹರಕೆ ಸಮರ್ಪಣೆ ರೂಪದಲ್ಲಿ ನೀಡುತ್ತಾರೆ. ಕೆಲವರು ಅನ್ನದಾನವನ್ನೂ ಮಾಡುತ್ತಾರೆ.

ಮಾಳೇಟಿರ ಗಣೇಶ್ ಕಾರ್ಯಪ್ಪ

ಅಧ್ಯಕ್ಷ, ಚಾಮುಂಡಿ ದೇವಾಲಯ

*

ದೇವಾಲಯದ ವಾರ್ಷಿಕ ಮಹೋತ್ಸವ ಪ್ರತಿವರ್ಷ ಏಪ್ರಿಲ್ ಮೊದಲ ವಾರದಲ್ಲಿ ಸಂಪನ್ನಗೊಳ್ಳುತ್ತದೆ. ಈ ಸಂದರ್ಭ 12 ತೆರೆಯ ವಿಷ್ಣು ಮೂರ್ತಿ ದೇವರ ಅಗ್ನಿಕೊಂಡವನ್ನು 101 ಬಾರಿ ಹಾಯುವ ಸೇವೆಯನ್ನು ಭಕ್ತರು ಮಾಡುತ್ತಾರೆ. ಜಿಲ್ಲೆಯ ವಿವಿಧ ಕಡೆಗಳಿಂದ ಭಕ್ತರು ಆಗಮಿಸಿ ದೇವಿಗೆ ಸೇವೆ ಸಮರ್ಪಿಸಿ ಕೃಪೆಗೆ ಪಾತ್ರರಾಗುತ್ತಿದ್ದಾರೆ ಎಮಬುದು ಧನ್ಯತೆಯ ಪ್ರತೀಕವಾಗಿದೆ.

ಚೆನಿಯಪಂಡ ಅಪ್ಪಯ್ಯ

ಕಾರ್ಯದರ್ಶಿ, ಚಾಮುಂಡಿ ದೇವಾಲಯ ಸಮಿತಿ