ಗಣಪತಿ ಪಾರ್ವತಿ ಚಂದ್ರ ಮೌಳೇಶ್ವರ ದೇವಾಲಯ.
ಶನಿವಾರಸಂತೆ ಪಟ್ಟಣದ ಮಧ್ಯಪೇಟೆಯಲ್ಲಿರುವ ಶ್ರೀಗಣಪತಿ ಸನ್ನಿಧಿಯು ನೊಂದ ಭಕ್ತರ ಸಂಕಷ್ಟ ಪರಿಹರಿಸುವ ಕ್ಷೇತ್ರವಾಗಿದೆ. ಶ್ರೀ ಗಣಪತಿ, ಪಾರ್ವತಿ, ಚಂದ್ರಮೌಳೇಶ್ವರ ದೇವಸ್ಥಾನವೆಂದೇ ಪ್ರಸಿದ್ಧವಾಗಿರುವ ದೇವಾಲಯವು 1976 ರಲ್ಲಿ ಸ್ಥಾಪನೆಯಾಯಿತು. ಎಳನೀರುಗುಂಡಿ ಚಂದ್ರಶೇಖರ ನೇತೃತ್ವದಲ್ಲಿ ಸ್ಥಾಪನೆಯಾದ ವಿನಾಯಕ ಯುವಜನ ಸಂಘವೇ ಈ ದೇಗುಲ ನಿರ್ಮಾಣಕ್ಕೆ ಪ್ರೇರಣೆ ನೀಡಿತು.
ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮದ ಯುವಕರು ಈ ಸಂಘದಲ್ಲಿ ಸಕ್ರಿಯವಾಗಿದ್ದರು. ಸಂಘಕ್ಕಾಗಿ ಚಿಕ್ಕದಾದ ಕಟ್ಟಡವೊಂದನ್ನು ನಿರ್ಮಿಸಿದರು. ಪ್ರತಿವರ್ಷ ಗೌರಿ-ಗಣೇಶನ ಹಬ್ಬದ ಪ್ರಯುಕ್ತ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಿದ್ದರು. ಯುವಕ ಸಂಘದ ಪುಟ್ಟ ಕಟ್ಟಡವಾಗಿದ್ದ ಹಿನ್ನೆಲೆಯಲ್ಲಿ ಸಂಘದ ಕಚೇರಿ ಮುಂಭಾಗದಲ್ಲಿ ಹುಲ್ಲು ಹಾಸಿನ ಪೆಂಡಾಲ್ ಮಾಡಿಕೊಂಡು ಅದರೊಳಗೆ ಗಣೇಶ ಉತ್ಸವ ಒಂದು ತಿಂಗಳ ಕಾಲ ನಡೆಸುತ್ತಿದ್ದರು. ಮೂರ್ತಿ ವಿಸರ್ಜನೆ ದಿನದಂದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆಯೂ ನಡೆಯುತ್ತಿತ್ತು. ಗಣೇಶ ಉತ್ಸವದ ಒಂದು ತಿಂಗಳ ಪರ್ಯಂತ ಪ್ರತಿದಿನ ರಾತ್ರಿ ಪಟ್ಟಣದ ಒಂದೊಂದು ಮನೆಯವರು ವಿಶೇಷ ಪೂಜೆ ಮಾಡಿಸುತ್ತಿದ್ದರು. ದಿನವೂ ರಾತ್ರಿ ಯುವಜನರು ವಿವಿಧ ಸಾಂಸ್ಕೃತಿಕ, ಮನರಂಜನೆ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಯುವಜನ ಸಂಘದ ವತಿಯಿಂದ 1983ರಲ್ಲಿ ಗಣಪತಿ ದೇವಸ್ಥಾನವನ್ನು ನಿರ್ಮಿಸಿದರು.
ರಾಜ್ಯದ ಅಂದಿನ ಮುಖ್ಯಮಂತ್ರಿ ಆರ್.ಗುಂಡೂರಾವ್, ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿ ಸಮ್ಮುಖದಲ್ಲಿ ದೇಗುಲ ಸೇವೆಗೆ ಸಮರ್ಪಣೆ ಆಯಿತು. ಅಲ್ಲಿ ಶ್ರೀಪಾರ್ವತಿ ಮತ್ತು ಶ್ರೀಚಂದ್ರಮೌಳೇಶ್ವರ ಸನ್ನಿಧಿಯೂ ಪ್ರತಿಷ್ಠಾಪನೆಯಾಯಿತು. ತ್ರಿಮೂರ್ತಿ ಸನ್ನಿಧಿಯು ಶನಿವಾರಸಂತೆ ಪಟ್ಟಣ ಮಾತ್ರ ಅಲ್ಲದೆ ಸುತ್ತಮುತ್ತಲಿನ ಗ್ರಾಮದವರಿಗೂ ಪ್ರಮುಖ ಶ್ರದ್ಧಾ ಕೇಂದ್ರವಾಯಿತು.
ಯುವಜನ ಸಂಘದ ಅಧ್ಯಕ್ಷರಾಗಿದ್ದ ಎಳನೀರುಗುಂಡಿ ಚಂದ್ರಶೇಖರ ಅವರೇ ಗಣಪತಿ ದೇವಾಲಯ ಸಮಿತಿ ಅಧ್ಯಕ್ಷರೂ ಆಗಿ ಭಾದ್ರಪದ ಮಾಸದಲ್ಲಿ ಗಣೇಶನ ಉತ್ಸವವನ್ನು ಒಂದು ತಿಂಗಳ ಕಾಲ ನಡೆಸುವ ಸಂಪ್ರದಾಯಕ್ಕೆ ಹೊಸ ರಂಗು ನೀಡಿದರು. ಉತ್ಸವದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಸಮುದಾಯದವರೂ ಪಾಲ್ಗೊಳ್ಳುತ್ತಿದ್ದರು. 2002ರಲ್ಲಿ ಗಣಪತಿ ದೇವಸ್ಥಾನವನ್ನು ಮರುನಿರ್ಮಾಣ ಮಾಡಲಾಯಿತು.
ದೇವಸ್ಥಾನ ಪ್ರತಿಷ್ಠಾಪನೆ ದಿನದಿಂದ ಇಂದಿನವರೆಗೂ ಬಾಗೇರಿ ಮಾಲತೇಶ ಮತ್ತು ಸಹೋದರರು ಈ ದೇವಸ್ಥಾನ ಅರ್ಚಕರಾಗಿ ಪೂಜಾ ಕಾರ್ಯ ನೆರವೇರಿಸುತ್ತಾರೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ, ಪ್ರತಿ ಶುಕ್ರವಾರ ಮತ್ತು ಸೋಮವಾರ ವಿಶೇಷ ಪೂಜೆ ಇಲ್ಲಿ ನಡೆಯುತ್ತದೆ. ಕೆಲವರು ಇಲ್ಲೇ ವಿಶೇಷ ಪೂಜೆ, ಹೋಮ ಮತ್ತು ಹವನಾದಿಗಳನ್ನು ಮಾಡಿಸುತ್ತಾರೆ. ಯುಗಾದಿ, ದಸರಾ, ದೀಪಾವಳಿ ಲಕ್ಷ ದೀಪೋತ್ಸವ ಸೇರಿದಂತೆ ಎಲ್ಲ ಹಬ್ಬ-ಹರಿದಿನಗಳನ್ನೂ ಇಲ್ಲಿ ವಿಶೇಷವಾಗಿ ಆಚರಿಸುತ್ತಾರೆ.
ವಿದ್ಯೆ, ವ್ಯಾಪಾರ, ವಿವಾಹ, ಸಂತಾನ ಭಾಗ್ಯ ಮತ್ತಿತರ ವಿಚಾರಗಳಲ್ಲಿ ಸಮಸ್ಯೆ ಇದ್ದವರು ಈ ಕ್ಷೇತ್ರದಲ್ಲಿ ಗಣೇಶನಿಗೆ ಪ್ರಾರ್ಥನೆ ಮಾಡಿ ವಿಶೇಷ ಪೂಜೆ ಸಲ್ಲಿಸುತ್ತಾರೆ, ಹರಕೆ ಹೊತ್ತುಕೊಳ್ಳುತ್ತಾರೆ. ಬೇಡಿಕೊಂಡಿದ್ದು ನೆರವೇರಿದ ನಂತರ ಮತ್ತೆ ಆಗಮಿಸಿ ದೇವರಿಗೆ ಹೂವಿನ ಅಲಂಕಾರ, ಅನ್ನ ಸಂತರ್ಪಣೆ, ಬಾಳೆ ಗೊನೆ, ಎಣ್ಣೆ ಹಾಗೂ ತುಪ್ಪ ಸಮರ್ಪಣೆ ಮಾಡುವ ಮೂಲಕ ಹರಕೆ ಸಲ್ಲಿಸುತ್ತಾರೆ. ದೇವಸ್ಥಾನದಲ್ಲೇ ಹಲವರು ಸರಳವಾಗಿ ವಿವಾಹ ಮಾಡಿಕೊಳ್ಳುತ್ತಾರೆ. ಶನಿವಾರಸಂತೆ ಸುತ್ತಮುತ್ತಲ ಹಾಗೂ ಕುಶಾಲನಗರ ಹಾಸನ, ಅರಕಲಗೂಡು, ಕೊಡ್ಲಿಪೇಟೆ, ಕೊಳ್ಳೆಗಾಲ, ಉಡುಪಿ, ಸೋಮವಾಪೇಟೆ, ಮಡಿಕೇರಿ ಸೇರಿದಂತೆ ಹಲವು ಭಾಗಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
ಮೈಸೂರಿನಿಂದ ಬರುವವರು ಕುಶಾಲನಗರ, ಬಾಣವಾರ, ಆಲೂರು, ಸಿದ್ದಾಪುರ, ಗೊಪಾಲಪುರ ಮಾರ್ಗವಾಗಿ 120 ಕಿ.ಮೀ. ಕ್ರಮಿಸಿದರೆ ಶನಿವಾರಸಂತೆ ತಲುಪಬಹುದು. ಮಡಿಕೇರಿಯಿಂದ ಸೋಮವಾರಪೇಟೆ, ಗೌಡಳ್ಳಿ ಮಾರ್ಗವಾಗಿ 60 ಕಿಮೀ ಸಾಗಿದರೆ ಶನಿವಾರಸಂತೆ ತಲುಪಬಹುದು. ಹಾಸನದಿಂದ ಅರಕಲಗೂಡು, ಮಲ್ಲಿಪಟ್ಟಣ ಮಾರ್ಗವಾಗಿ 45 ಕಿ.ಮೀ. ಸಾಗಿದರೆ ಶನಿವಾರಸಂತೆಯ ಗಣಪತಿ ದೇವಾಲಯ ತಲುಪಬಹುದು.
ಈ ದೇವಾಲಯದಲ್ಲಿ ನಡೆಯುವ ಎಲ್ಲ ವಿಶೇಷ ಪೂಜೆಗಳಿಗೆ ಸಕಲರಿಗೂ ಪ್ರವೇಶವಿದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಧರ್ಮದವರು ಯಾವುದೇ ತಾರತಮ್ಯವಿಲ್ಲದೆ ಬಂದು ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಭಕ್ತರ ಸಹಕಾರದಿಂದ ಪ್ರತಿವರ್ಷ ಲಕ್ಷ ದಿಪೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದೇವೆ. ಸಾವಿರಾರು ಸಂಖ್ಯೆಯ ಜನರು ಸನ್ನಿಧಿಗೆ ಭಕ್ತರಾಗಿದ್ದಾರೆ. ವಿಶೇಷ ಹಬ್ಬ, ಹರಿದಿನಗಳಲ್ಲಿ ಅನ್ನಸಂತರ್ಪಣೆ ನೆರವೇರಿಸುತ್ತಿದ್ದೇವೆ.
ಈ ಭಾಗದಲ್ಲಿ ನೆಲೆಸಿರುವ ಭಕ್ತರು ತಮಗೆ ಯಾವುದೇ ಕಷ್ಟ ಬಂದಾಗಲೂ ಅದರ ಪರಿಹಾರಕ್ಕಾಗಿ ಗಣಪತಿಯಲ್ಲಿ ಬೇಡಿಕೊಳ್ಳುತ್ತಾರೆ. ಅನೇಕರಿಗೆ ಸಂಕಷ್ಟಗಳು ಪರಿಹಾರವಾಗಿವೆ. ನಂತರದಲ್ಲಿ ಅವರೇ ಬಂದು ಹರಕೆ ಸಲ್ಲಿಸಿ, ವಿಶೇಷ ಪೂಜೆಗಳನ್ನು ಮಾಡಿಸುತ್ತಾರೆ. ನವವಿವಾಹಿತರು ತಪ್ಪದೇ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ. ದಿನವೂ ದ್ವಿಕಾಲ ಪೂಜೆ, ಪ್ರತಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. 43 ವರ್ಷಗಳಿಂದ ಈ ದೇವಾಲಯದಲ್ಲಿ ಸೇವೆ ಸಲ್ಲಿಸುವ ಭಾಗ್ಯ ನನ್ನದಾಗಿದೆ.
ನಾನು ಸುಮಾರು 22 ವರ್ಷಗಳಿಂದ ಈ ದೇವಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ದೇವಾಲಯಕ್ಕೆ ಬರುವ ಭಕ್ತರಿಗೆ ಸೂಕ್ತ ಮಾಹಿತಿ ನೀಡುವುದು ಮತ್ತು ಸ್ವಚ್ಛತಾ ಕಾರ್ಯದ ಸೇವಾ ಜವಾಬ್ದಾರಿ ನನ್ನ ಮೇಲಿದೆ. ನಂಬಿದ ಜನರನ್ನು ಶ್ರೀ ಗಣೇಶ ಎಂದಿಗೂ ಕೈ ಬಿಟ್ಟಿಲ್ಲ.