ಕೆ.ಬಾಡಗ ಗ್ರಾಮ ಪಂಚಾಯಿತಿಯ ಹೊಸಕೊಲ್ಲಿ ಹಾಡಿಗೆ ಶುಕ್ರವಾರ ಭೇಟಿ ನೀಡಿ, ಹಾಡಿ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಿತು. ಜಗದೀಶ್, ಸುಮತಿ, ಕೇಶಿನಿ, ಪ್ರಶಾಂತ್ ಇತರರಿದ್ದರು. 
ಕೊಡಗು

ಹೊಸಕೊಲ್ಲಿ ಹಾಡಿಗೆ ವಿವಿಧ ಇಲಾಖೆಯ ತಂಡ ಭೇಟಿ

ಪ್ರಮುಖ ಮುಖ್ಯಾಂಶಗಳು

  • ಹೊಸಕೊಲ್ಲಿ ಹಾಡಿಗೆ ವಿವಿಧ ಇಲಾಖೆಯ ತಂಡ ಭೇಟಿ

ಮಡಿಕೇರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಬುಡಕಟ್ಟು ಅಭಿವೃದ್ಧಿ ಇಲಾಖೆ, ವಿಶೇಷ ಮಕ್ಕಳ ಪೊಲೀಸ್ ಘಟಕ, ಅಕ್ಕಪಡೆ ಹಾಗೂ ಹಾಡಿ ಬುಡಕಟ್ಟು ಸಮುದಾಯದ ಮುಖಂಡರ ಸಹಯೋಗದಲ್ಲಿ ವಿವಿಧ ಇಲಾಖೆಗಳ ಸಿಬ್ಬಂದಿಗಳ ತಂಡವು ಕೆ.ಬಾಡಗ ಗ್ರಾಮ ಪಂಚಾಯಿತಿಯ ಹೊಸಕೊಲ್ಲಿ ಹಾಡಿಗೆ ಶುಕ್ರವಾರ ಭೇಟಿ ನೀಡಿ, ಹಾಡಿ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಿತು.

ಈ ಸಂದರ್ಭದಲ್ಲಿ ಪೊಕ್ಸೋ ಕಾಯ್ದೆ, ಬಾಲ್ಯ ವಿವಾಹದಿಂದ ಉಂಟಾಗುವ ಪರಿಣಾಮಗಳು, ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ಸೇರಿದಂತೆ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಲಭ್ಯವಿರುವ ವಿವಿಧ ಸಹಾಯವಾಣಿ ಹಾಗೂ ಸೇವೆಗಳ ಕುರಿತು ಮಾಹಿತಿ ನೀಡಲಾಯಿತು.
ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ೧೮೧ ಮಹಿಳಾ ಸಹಾಯವಾಣಿ, ಸಖಿ ಒನ್ ಸ್ಟಾಪ್ ಸೆಂಟರ್ ಹಾಗೂ ಮಹಿಳಾ ಸಾಂತ್ವನ ಕೇಂದ್ರದ ನೆರವು ಪಡೆಯಬಹುದಾಗಿದೆ. ಮಕ್ಕಳ ಸಮಸ್ಯೆಗಳಿಗೆ ೧೦೯೮ ಮಕ್ಕಳ ಸಹಾಯವಾಣಿ ಹಾಗೂ ತುರ್ತು ಸಂದರ್ಭಗಳಲ್ಲಿ ೧೧೨ ತುರ್ತು ಸಹಾಯವಾಣಿ ಸಂಪರ್ಕಿಸುವಂತೆ ತಿಳಿಸಲಾಯಿತು.
ಭೇಟಿಯ ಸಂದರ್ಭದಲ್ಲಿ ಹಾಡಿಯಲ್ಲಿ ಬಸ್ ವ್ಯವಸ್ಥೆಯ ಕೊರತೆಯಿಂದಾಗಿ ಕೆಲವು ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿತು. ಬಳಿಕ ಇಲಾಖೆಯ ಅಧಿಕಾರಿಗಳ ತಂಡವು ಸಮಗ್ರ ಬುಡಕಟ್ಟು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ಸಹಯೋಗದೊಂದಿಗೆ ಮಕ್ಕಳನ್ನು ಆಶ್ರಮ ಶಾಲೆಗೆ ದಾಖಲಿಸುವ ಕ್ರಮ ಕೈಗೊಂಡಿತು.
ಇದೇ ವೇಳೆ ಹಾಡಿಯ ಯುವತಿಯರು ಹಾಗೂ ಮಹಿಳೆಯರು ಕೌಶಲ್ಯಾಧಾರಿತ ತರಬೇತಿ ಪಡೆಯಲು ಆಸಕ್ತಿ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆಗಳೊಂದಿಗೆ ಚರ್ಚಿಸಿ, ಅವರಿಗೆ ಅಗತ್ಯವಿರುವ ಕೌಶಲ್ಯಾಧಾರಿತ ತರಬೇತಿ ನೀಡಲು ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇವಾ ಸಮಿತಿಯ ಕೊಡಗು ಜಿಲ್ಲಾ ಅಧ್ಯಕ್ಷ ಜಗದೀಶ್, ವಿಶೇಷ ಮಕ್ಕಳ ಪೊಲೀಸ್ ಘಟಕದ ಎಎಸ್‌ಐ ಸುಮತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ಸಬಲೀಕರಣ ಘಟಕದ ಜೆಂಡರ್ ಸ್ಪೆಷಲಿಸ್ಟ್ ಎಸ್.ಆರ್.ಕೇಶಿನಿ, ಆಶ್ರಮ ಶಾಲೆಯ ಶಿಕ್ಷಕ ಪ್ರಶಾಂತ್ ಹಾಗೂ ಅಕ್ಕಪಡೆ ತಂಡದ ಸಿಬ್ಬಂದಿಗಳಾದ ಕುಮಾರಿ ಮತ್ತು ಪವಿತ್ರ ಉಪಸ್ಥಿತರಿದ್ದರು.