ತಾಲೂಕು ಮಟ್ಟದ ಪ್ರೌಢಶಾಲಾ ಮುಖ್ಯ ಶಿಕ್ಷಕರ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿದರು.
- ಶಿಸ್ತುಬದ್ಧ ಶಿಕ್ಷಣದಿಂದ ದೇಶದ ಪ್ರಗತಿ ಸಾಧ್ಯ
- ಶಿಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ
ಗೋಣಿಕೊಪ್ಪ: ಶಿಸ್ತುಬದ್ಧ ಶಿಕ್ಷಣ ನೀಡಲು ಸಾಧ್ಯವಾದರೆ ಮಾತ್ರ ಸಮಾಜದ ಯಶಸ್ಸು ಹಾಗೂ ದೇಶದ ಪ್ರಗತಿ ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಅಭಿಪ್ರಾಯಪಟ್ಟರು.
ವಿರಾಜಪೇಟೆ ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ವತಿಯಿಂದ ಗೋಣಿಕೊಪ್ಪ ಅನುದಾನಿತ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರೌಢಶಾಲಾ ಮುಖ್ಯ ಶಿಕ್ಷಕರ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯಾಂಗ, ಶಾಸಕಾಂಗ ಹಾಗೂ ಕಾಯಾರ್ಂಗಗಳ ಪ್ರಮುಖ ಜವಾಬ್ದಾರಿಗಳಲ್ಲಿ ಶಿಕ್ಷಣ ನೀಡುವುದೂ ಒಂದು. ಆದರೆ, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮೂಲಕ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ನಾವು ವಿಫಲರಾಗಿದ್ದೇವೆ. ಹೀಗಾಗಿ ಖಾಸಗಿ ಶಾಲೆಗಳು ಗುಣಮಟ್ಟದ ಶಿಕ್ಷಣವನ್ನು ಎತ್ತಿಹಿಡಿದವು. ಆದರೆ ಕಾಲಕ್ರಮೇಣ ಶಿಕ್ಷಣ ವ್ಯಾಪಾರೀಕರಣವಾಗಿ ಬೆಳೆದಿದೆ ಎಂದು ಹೇಳಿದರು.
ದೆಹಲಿಯಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳ ಮಾದರಿಯಲ್ಲಿ ಕರ್ನಾಟಕದಲ್ಲೂ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಇನ್ನಷ್ಟು ಬಲಗೊಳ್ಳಬೇಕಿದ್ದು, ಜನರು, ಪೋಷಕರು ಹಾಗೂ ಮಕ್ಕಳ ಮನಸ್ಥಿತಿಯಲ್ಲೂ ಬದಲಾವಣೆ ಅಗತ್ಯವಿದೆ ಎಂದು ಹೇಳಿದರು.
ಜಗತ್ತು ಬದಲಾಗಿದೆ, ಶಿಕ್ಷಣ ವ್ಯವಸ್ಥೆಯೂ ಬದಲಾಗಿದೆ. ಇದರೊಂದಿಗೆ ಅವಕಾಶಗಳೂ ಹೆಚ್ಚಾಗಿವೆ. ಮಕ್ಕಳು ಶಿಸ್ತಿನಿಂದ ಬದುಕಿನ ಬಗ್ಗೆ ಚಿಂತನೆ ನಡೆಸುವ ಅಗತ್ಯವಿದೆ. ಗ್ರಾಮೀಣ ಪ್ರದೇಶದ ಮಕ್ಕಳು ಇಂದು ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುತ್ತಿದ್ದು, ಸಾಧನೆ ಮಾಡಬೇಕು, ಬಡತನದಿಂದ ಹೊರಬರಬೇಕು ಹಾಗೂ ಗುಣಮಟ್ಟದ ಮೌಲ್ಯಾಧಾರಿತ ಬದುಕು ನಡೆಸಬೇಕು ಎಂಬ ಹಂಬಲ ಮಕ್ಕಳಲ್ಲಿ ಮೂಡುತ್ತಿದೆ ಎಂದರು.
ಗ್ರಾಮೀಣ ಪ್ರದೇಶದ ಮಕ್ಕಳು ದೂರದೃಷ್ಟಿ ಹಾಗೂ ಛಲದಿಂದ ದೇಶದಲ್ಲಿರುವ ಅವಕಾಶಗಳನ್ನು ಗುರುತಿಸಿಕೊಂಡು ಭವಿಷ್ಯ ರೂಪಿಸಿಕೊಳ್ಳುವತ್ತ ಗಮನ ಹರಿಸಬೇಕು. ಶಿಕ್ಷಣವನ್ನೇ ಶಕ್ತಿಯಾಗಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಬದುಕಿನಲ್ಲಿ ಶಿಕ್ಷಕರು ಹಾಗೂ ಪೋಷಕರನ್ನು ದೂರುವ ಬದಲು ಸ್ವಯಂಶಕ್ತಿಯಿಂದ ಜೀವನ ರೂಪಿಸಿಕೊಳ್ಳಬೇಕು. ಅದನ್ನೇ ಗುರಿಯಾಗಿಸಿಕೊಳ್ಳಬೇಕು. ಸಾಧಿಸಲು ಸಾಕಷ್ಟು ಅವಕಾಶಗಳಿದ್ದು, ಶ್ರಮವಹಿಸಿ ಜೀವನದಲ್ಲಿ ಗೆಲುವು ಸಾಧಿಸಬೇಕು. ಸಾಧನೆಯಲ್ಲಿ ಸಿಗುವ ಸಂತೋಷ ಅಮೂಲ್ಯವಾದದ್ದು ಹಾಗೂ ಸ್ವತಂತ್ರವಾದದ್ದು. ಇದನ್ನು ಗಳಿಸಿಕೊಳ್ಳಲು ಪ್ರತಿಯೊಬ್ಬ ವಿದ್ಯಾರ್ಥಿಯೂ ಪಣತೊಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಹತ್ತನೇ ತರಗತಿಯಲ್ಲಿ ಶೇ.೧೦೦ರಷ್ಟು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಶೇ.೧೦೦ರಷ್ಟು ಫಲಿತಾಂಶ ಪಡೆದ ತಾಲೂಕಿನ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಸೇರಿದಂತೆ ಒಟ್ಟು ೨೮ ಶಾಲೆಗಳನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಪಿ.ಉತ್ತಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ತಾಲೂಕು ಕಾರ್ಯನಿರ್ವಹಣಾಧಿಕಾರಿ ಕೆ.ಆರ್.ರಾಜೇಶ್, ಗೋಣಿಕೊಪ್ಪ ಅನುದಾನಿತ ಪ್ರೌಢಶಾಲೆಯ ಅಧ್ಯಕ್ಷ ಚಿಣ್ಣಪ್ಪ, ಮುಖ್ಯ ಶಿಕ್ಷಕ ಡಿ.ಎಸ್.ಚೈತನ್ಯ, ಅನುದಾನಿತ ಪ್ರೌಢಶಾಲಾ ತಾಲೂಕು ಅಧ್ಯಕ್ಷ ಗಿಡ್ಡಯ್ಯ, ಸರ್ವದೇವತಾ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಪ್ರದೀಪ್ ಕುಮಾರ್, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಕಾರ್ಯದರ್ಶಿ ಎಚ್.ಡಿ.ಲೋಕೇಶ್, ಚೆಂಗಪ್ಪ, ಮೋಹನ್ ಕುಮಾರಿ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.