ತಾವೂರು ಮಹಿಷಾಸುರ ಮರ್ದಿನಿ ದೇವಿಯ ವಾರ್ಷಿಕ ಉತ್ಸವದಲ್ಲಿ ದೇವರ ನೃತ್ಯ ಬಲಿ ಗಮನ ಸೆಳೆಯಿತು. 
ಕೊಡಗು

ತಾವೂರು ಮಹಿಷಾಸುರ ಮರ್ದಿನಿ ಉತ್ಸವ

ಮಡಿಕೇರಿ:
ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಅವಭೃತ ಸ್ನಾನ, ಭಗಂಡೇಶ್ವರ ದೇವಸ್ಥಾನದಲ್ಲಿ ದೇವಿಯ ವಸಂತೋತ್ಸವದೂAದಿಗೆ ತಾವೂರು ಮಹಿಷಾಸುರ ಮರ್ದಿನಿ ದೇವಿಯ ವಾರ್ಷಿಕ ಉತ್ಸವ ನೆರವೇರಿತು.
ಬುಧವಾರ ತನಕ 8 ದಿನಗಳ ಕಾಲ ನಡೆದ ಉತ್ಸವದಲ್ಲಿ ಅಂದಿ ಬೆಳಕು, ಮನೆಯಿಂದ ಭಂಡಾರ ತರುವುದು, ದೇವಿ ಬಲಿ ಉತ್ಸವ, ದೇವರ ದರ್ಶನ, ನೃತ್ಯಬಲಿ, ವಸಂತೋತ್ಸವ, ನೆರಪಿನ ಉತ್ಸವ, ಭಂಡಾರ ಕಾಣಿಕೆ, ಪ್ರಸಾದ ವಿತರಣೆ, ದೇವರ ಹರಕೆ ಸೇವೆಗಳು, ಅಂಬುಕಾಯಿ, ಎತ್ತು ಆರಾಟ, ಬೇಡುಕೋಲ, ಹರಕೆ ಸೇವೆಗಳು, ಶಯನೋತ್ಸವ, ಶುದ್ಧ ಕಲಸ, ಕಲಶಾಭಿಷೇಕ, ಮಂತ್ರಾಕ್ಷತೆ, ನಡೆಯಿತು.
ಹಬ್ಬವನ್ನು ಈ ವ್ಯಾಪ್ತಿಯ 12 ಮನೆತನಗಳಾದ ಅಮೆ, ಬಾರಿಕೆ, ಕೂಡಕಂಡಿ, ಹೊಸಗದ್ದೆ, ಕುದುಕುಳಿ, ಕುರಂಜಿ, ಚೆದುಕಾರು, ಕೋಳಿಬೈಲು, ಕಾವೇರಿ ಮನೆ, ಐಯ್ಯಣೀರ, ಗೌಡುಧಾರೆ ಕುಟುಂಬಗಳು ಹಬ್ಬ ನಡೆಸಿಕೊಟ್ಟರು.
ಧಾರ್ಮಿಕ ಇತಿಹಾಸವುಳ್ಳ ಭಾಗಮಂಡಲ ತಾವೂರು ಗ್ರಾಮದ ಮಹಿಷಾಸುರಮರ್ದಿನಿ ದೇವಿಯ ವಾರ್ಷಿಕ ಪೂಜೆಯಲ್ಲಿ ಮದುವೆಯಾದ ಹೆಣ್ಣು ಮಕ್ಕಳು ತವರೂರಿನ ದೇವರ ಬಗ್ಗೆ ಅಪಾರ ಭಕ್ತಿಯನ್ನು ಹೊಂದಿ ಭಾಗವಹಿಸುತ್ತಾರೆ. ಗಂಡನ ಮನೆಯಲ್ಲಿ ಎದುರಾದ ಅನಾರೋಗ್ಯ ಇನ್ನಿತರ ಸಮಸ್ಯೆಗಳಿಗೆ ಹರಕೆ ಒಪ್ಪಿಸುವ ವಾಡಿಕೆ ಈ ಗ್ರಾಮ ದೇವರ ಮೇಲಿನ ಶಕ್ತಿಯನ್ನು ತಿಳಿಸುತ್ತದೆ. ಊರಿನಲ್ಲಿ ಮತ್ತು ಕೊಟ್ಟ ಹೆಣ್ಣು ಮಕ್ಕಳ ಮನೆಯಲ್ಲಿ ಹಬ್ಬದಂದು ಸಾತ್ವಿಕ ಆಹಾರ ಪದಾರ್ಥ ಕಡುಂಬುಟ್ಟು, ತರಕಾರಿ ಫಲಹಾರ ಸೇವಿಸುವ ವಾಡಿಕೆಯೂ ಇದೆ.
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕೋಳಿಬೈಲು ಸಿ. ವೆಂಕಟೇಶ್, ಉಪಾಧ್ಯಕ್ಷ ಅಯ್ಯಣೀರ ಎ. ದಿನೇಶ್, ಕಾರ್ಯದರ್ಶಿ ಬಾರಿಕೆ ಎ. ತೀರ್ಥಕುಮಾರ್, ತಕ್ಕ ಮುಖ್ಯಸ್ಥ ಕುರುಂಜಿ ಸಿ. ದೇವಯ್ಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕುದುಕುಳಿ ಸಿ. ಅಶ್ವತ್, ಖಜಾಂಚಿ ಹೊಸಗದ್ದೆ ಸಿ. ವೆಂಕಟರಮಣ, ತಾವೂರು ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ಅಮೆ ಬಾಲಕೃಷ್ಣ, ದೇವಸ್ಥಾನದ ಆಡಳಿತ ಮಂಡಳಿ ಜೀರ್ಣೋದ್ಧಾರ ಸಮಿತಿ ಹಾಗೂ ಗ್ರಾಮಸ್ಥರು, ಇದ್ದರು.
ಹಬ್ಬದದಲ್ಲಿ ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗವಹಿಸಿದ್ದರು.
ಗ್ರಾಮೀಣ ಭಾಗಗಳಲ್ಲಿ ದೇವಸ್ಥಾನಗಳಿರುವುದರಿಂದ ಅಲ್ಲಿನ ವಾತಾವರಣ ಶಾಂತಿಯುತವಾಗಿ ಇರಲು ಸಾಧ್ಯವಾಗುತ್ತದೆ. ಊರಿನವರು ಒಂದೆಡೆ ಸೇರಲು ಸಹ ಅನುಕೂಲವಾಗುತ್ತದೆ. ಧಾರ್ಮಿಕತೆಯನ್ನು ಎತ್ತಿ ಹಿಡಿಯಲು ದೇವಾಲಯಗಳ ನಿರ್ಮಾಣ ಉತ್ತಮ. ಮಹಿಷಾಸುರ ಮರ್ದಿನಿ ದೇವರ ಶಕ್ತಿ ಬಹಳ ವಿಶೇಷವಾಗಿದೆ. ಆ ಶಕ್ತಿ ಭಕ್ತಿಯಿಂದ ಮಾತ್ರ ಒಲಿಯುತ್ತದೆ. ಆ ನಿಟ್ಟಿನಲ್ಲಿ ದೇವಾಲಯದ ಪೂಜಾ ಕಾರ್ಯಗಳು ಭಕ್ತಿಯಿಂದ ಆರಾಧನೆ ಆಗಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಗುಜರಾತ್ ರಾಜ್ಯ ಸಭಾ ಸದಸ್ಯ ಕೇಸರಿ ದೇವ್ ಸಿನ್ಹ್ ಝಾಲಾ ಇದ್ದರು.