ಮಾಲಂಬಿ ದಿನೇಶ್ ಶನಿವಾರಸಂತೆ
ಈ ವರ್ಷ ಕೊಡಗು ಜಿಲ್ಲೆಯಲ್ಲೂ ಮಳೆ ಪ್ರಮಾಣ ಕಡಿಮೆಯಾಗಿದೆ. ಬರ ಎದುರಾಗಿ ಫಸಲು ದೊರಕುವುದೇ ಕಷ್ಟವಾಗಿದೆ. ಹೊಳೆ, ಹಳ್ಳ, ಕೊಲ್ಲಿಗಳಲ್ಲಿ ನೀರು ಬತ್ತಿ ಹೋಗಿದೆ. ಶನಿವಾರಸಂತೆ ಭಾಗದಲ್ಲೂ ಸಾಕಷ್ಟು ಕೆರೆಗಳು ನೀರಿಲ್ಲದಂತಾಗಿವೆ.
ಆಗೊಮ್ಮೆ, ಈಗೊಮ್ಮೆ ಬಂದ ಮಳೆಯಿಂದ ಸಣ್ಣ ಪುಟ್ಟ ಕೆರೆಗಳು ತುಂಬಿದ್ದವಾದರೂ ನಂತರದ ಬಿಸಿಲ ತಾಪಕ್ಕೆ ಜಲಮೂಲಗಳು ತಳ ಕಂಡಿವೆ. ಸರ್ಕಾರ ಗುರುತಿಸಿದ ತಾಲೂಕುಗಳಲ್ಲಿ ಬರ ಘೋಷಣೆ ಆಗಿದೆ. ಏನೇ ಪರಿಹಾರ ನೀಡಿದರೂ, ಕೃಷಿಕರ ಬೆಂಬಲಕ್ಕೆ ಆಡಳಿತ ವ್ಯವಸ್ಥೆಗಳು ನಿಂತರೂ ಮಳೆ ಬಂದು ಫಸಲು ಬೆಳೆಯುವ ಪ್ರಕ್ರಿಯೆಗೆ ಇವುಗಳು ಯಾವುದೇ ಪರ್ಯಾಯ ಆಗಲಾರವು. ಪರಿಸ್ಥಿತಿ ಹೀಗಿರುವಾಗ ಶನಿವಾರಸಂತೆ ಹೋಬಳಿಗೆ ಸೇರಿದ ಮುಳ್ಳೂರು ಇಂಟಿನಾಯಕನ ಕೆರೆ ಕೃಷಿಕರ ಜೀವನಾಡಿಯಾಗಿದೆ. ನೂರಾರು ವರ್ಷಗಳಿಂದ ಋತುಮಾನ ಹೇಗೇ ಇರಲಿ, ಈ ಕೆರೆ ಮಾತ್ರ ಬತ್ತಿಲ್ಲ.
ಇದೀಗ ಮಳೆ ಬಂದು ಭರ್ತಿಯಾಗಿದೆ ಎನ್ನುವಂತೆಯೇ ಸದಾಕಾಲ ಜಲ ಸಮೃದ್ಧಿಯಿಂದ ಕೂಡಿರುವ ಈ ಕೆರೆಯು ಪ್ರಸ್ತುತ ಬರ ಪರಿಸ್ಥಿತಿಯಲ್ಲಿ ರೈತರ ಪಾಲಿನ ಸಂಜೀವಿನಿಯಂತೆ ಇರುವುದು ವಿಶೇಷವಾಗಿ ಗಮನ ಸೆಳೆದಿದೆ.
ಈ ಭಾಗದ ನೂರಾರು ಎಕರೆ ಕೃಷಿ ಭೂಮಿಗೆ ನೀರು ಒದಗಿಸುವ ಮೂಲಕ ಬರದ ನೋವನ್ನು ದೂರ ಮಾಡಿದೆ. ಕೆರೆ ಅಚ್ಚುಕಟ್ಟು ವ್ಯಾಪ್ತಿಯ ಅನ್ನದಾತರು ಈ ಬಾರಿಯೂ ಸಮೃದ್ಧವಾಗಿ ಬೆಳೆಗಳನ್ನು ಬೆಳೆಯಲು ಇಲ್ಲಿನ ಜಲವೇ ಪ್ರಧಾನವಾಗಿದೆ.
ಶತಮಾನದ ಇತಿಹಾಸ:
ಶನಿವಾರಸಂತೆ ಬಾಣವಾರ ಕುಶಾಲನಗರ ರಾಜ್ಯ ಹೆದ್ದಾರಿಯ ಮುಳ್ಳೂರು ಮಾರ್ಗದ ಬದಿಯಲ್ಲಿರುವ ಮುಳ್ಳೂರು ಇಂಟಿನಾಯಕನ ಕೆರೆಗೆ 8ನೇ ಶತಮಾನದ ಇತಿಹಾಸವಿದೆ. ಈಗಿನ ಮುಳ್ಳೂರು ಗ್ರಾಮವನ್ನು ಕೊಂಗಾಳ್ವರು ಆಳ್ವಿಕೆ ಮಾಡುತ್ತಿದ್ದರು. ಅವರ ರಾಜಧಾನಿಯಾಗಿದ್ದ ಮುಳ್ಳೂರಿನಲ್ಲಿ ಇಂಟಿನಾಯಕ ಎಂಬಾತ ರೈತರಿಗೆ ವ್ಯವಸಹಾಯ ಮಾಡಲು ಉಪಯೋಗ ಕಲ್ಪಿಸುವ ಮಹತ್ತರ ಉದ್ದೇಶದಿಂದ ದೊಡ್ಡ ಕೆರೆಯನ್ನು ನಿರ್ಮಿಸಿದ. ಹಾಗಾಗಿ ಆತನ ಹೆಸರಿನಿಂದಲೇ ಕೆರೆಯನ್ನು ಗುರುತಿಸುವಂತಾಯಿತು. ಅಂದಿನಿಂದ ಇಂದಿನವರೆಗೆ ಕೆರೆಯ ನೀರು ಇಂಗಿಲ್ಲ. ಜಿಲ್ಲೆಯ ಇತಿಹಾಸದಲ್ಲಿ ಇದು ಪ್ರಧಾನವಾಗಿ ಉಲ್ಲೇಖವಾಗಿರುವ ಸಂಗತಿಯೂ ಆಗಿದೆ.
ಇಂಟಿನಾಯಕನ ಕೆರೆ ವಿಸ್ತೀರ್ಣ ಸುಮಾರು ಮೂರೂವರೆ ಎಕರೆ. ಮಳೆಗಾಲದಲ್ಲಿ ಜಲ ಹರಿದು ಬಂದು ಈ ಕೆರೆಗೆ ಸೇರಿಕೊಳ್ಳುತ್ತದೆ. ಕೆರೆ ತುಂಬಿದ ನಂತರ ನೀರು ನಾಲೆಗಳ ಮೂಲಕ ಹರಿದು ಮುಳ್ಳೂರು ಗ್ರಾಮದೊಳಗೆ ಇರುವ ಮತ್ತೊಂದು ಕೆರೆಗೆ ಸೇರುತ್ತದೆ. ನೀರನ್ನು ಮುಳ್ಳೂರು, ನಿಡ್ತ ಗ್ರಾಮದ ರೈತರು ಪ್ರಧಾನವಾಗಿ ಕೃಷಿಕೆ ಬಳಸುತ್ತಾರೆ. ಮಳೆ ಪ್ರಮಾಣ ಹೆಚ್ಚಿರುವ ಸಂದರ್ಭದಲ್ಲಿ ಹೆಚ್ಚಾದ ನೀರು ಹೊನ್ನೆಕೊಪ್ಪಲು ಗ್ರಾಮದ ಮೂಲಕ ಪುಟ್ಟ ಕೊಲ್ಲಿಯಾಗಿ ಹರಿದು ನಂತರ ಗಾರೆಕಟ್ಟ ಗ್ರಾಮಕ್ಕೂ ಸಮೃದ್ಧ ಜಲ ಒದಗಿಸುತ್ತದೆ.
*
ಇಂಟಿನಾಯಕನ ಕೆರೆಯ ನೀರು ಮುಳ್ಳೂರು, ನಿಡ್ತ, ಗಾರೆಕಟ್ಟ ಗ್ರಾಮ ಸೇರಿದಂತೆ ನೂರಾರು ಗ್ರಾಮದ ಗದ್ದೆಗಳಿಗೆ ನೀರುಣಿಸುತ್ತದೆ. ಶತಮಾನಗಳಿಂದ ಈ ಭಾಗದ ಕೃಷಿಕರು ಈ ನೀರನ್ನೇ ಬಳಸಿಕೊಂಡು ಪ್ರಧಾನವಾಗಿ ಭತ್ತ ಬೆಳೆಯುತ್ತಿದ್ದರು. ಕಾಲ ಬದಲಾದಂತೆ ಭತ್ತದ ಗದ್ದೆಗಳು ಅಡಿಕೆ, ಕಾಫಿ ತೋಟಗಳಾಗಿವೆ. ಈ ಕಾರಣದಿಂದ ಈ ಕೆರೆಯ ನೀರಿನ ಬಳಕೆ ಕಡಿಮೆಯಾಗಿದೆ. ಆದರೂ ಗ್ರಾಮದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಸಾಂಪ್ರದಾಯಿಕ ನಾಟಿ ಪದ್ಧತಿಯಿಂದ ಭತ್ತ ಬೆಳೆಯುವವರು ಇದ್ದಾರೆ. ಅವರು ಈ ಕೆರೆಯ ನೀರನ್ನೇ ಬಹುವಾಗಿ ಉಪಯೋಗಿಸುತ್ತಾರೆ.
ಈ ವರ್ಷ ಮಳೆ ಪ್ರಮಾಣ ತೀರಾ ಕಡಿಮೆಯಾಗಿರುವ ಕಾರಣ ಎಲ್ಲ ಕೃಷಿಕರಿಗೂ ಈ ಕೆರೆಯ ನೀರೇ ಆಧಾರವಾಗಿ ಗಮನಸೆಳೆದಿದೆ. ಎಲ್ಲೆಡೆ ಬರ ಇದ್ದರೂ ಮುಳ್ಳೂರು ಇಂಟಿನಾಯಕನ ಕೆರೆಯು ಬರಿದಾಗದೇ ಅನ್ನದಾತರ ಭರವಸೆಯ ಆಶಾಕಿರಣವಾಗಿ ಸೇವೆ ನೀಡುತ್ತಿದೆ. ಇದರಿಂದ ಕೃಷಿಕರ ಮೊಗದಲ್ಲಿ ಸಂತಸ ಅರಳಿದೆ.
ನೂರಾರು ವರ್ಷಗಳ ಹಿಂದೆ ನಿರ್ಮಿಸಿರುವ ನಮ್ಮೂರಿನ ಇಂಟಿನಾಯಕನ ಕೆರೆ ನೀರು ಕೃಷಿಕರಿಗೆ ಸಂಜೀವಿನಿಯಂತಿದೆ. ಈ ಭಾಗದ ನೂರಾರು ಎಕರೆ ಕೃಷಿ ಜಮೀನಿಗೆ ಇಲ್ಲಿನ ಜಲವು ಅಮೃತ ಸಮಾನವಾಗಿದೆ. ಮಳೆ ಪ್ರಮಾಣ ಈ ವರ್ಷ ಅತಿ ಕಡಿಮೆಯಾಗಿದೆ. ಯಾವುದೇ ನದಿ, ಜಲಾಶಯಗಳ ನೀರೂ ದೊರಕದ ಭಾಗದಲ್ಲಿ ಕೆರೆಯು ಸಾವಿರಾರು ಕೃಷಿಕರ ವ್ಯವಸಾಯಕ್ಕೆ ಜೀವನಾಡಿ ಯಾಗಿದೆ.
ಎಂ.ಪಿ.ಮೋಹನ್ ರಾಜ್
ರೈತ, ಮುಳ್ಳೂರು ಗ್ರಾಮ
*
ನಮ್ಮ ಗದ್ದೆ ಬಯಲಿನ ರೈತರು ಸಾಮಾನ್ಯವಾಗಿ ಇಂಟಿನಾಯಕನ ಕೆರೆಯ ನೀರನ್ನು ಬಳಸಿಕೊಂಡು ವ್ಯವಸಾಯ ಮಾಡುತ್ತಾರೆ. ಈ ವರ್ಷ ಮಳೆ ತೀರಾ ಕಡಿಮೆ ಬಿದ್ದಿರುವುದರಿಂದ ಬೆಳೆಗಳಿಗೆ ನೈಸರ್ಗಿಕವಾಗಿ ಜಲ ದೊರಕಿಲ್ಲ. ಹಾಗಾಗಿ ಕೆರೆ ನೀರೇ ನಮಗೆಲ್ಲ ವರದಾನವಾಗಿದೆ. ಆಗಸ್ಟ್ ಸೆಪ್ಟೆಂಬರ್ ತಿಂಗಳಿನಲ್ಲಿ ಸುರಿದ ಅಲ್ಪ ಮಳೆಯೂ ಇಂಟಿನಾಯಕನ ಕೆರೆಯ ಜಲ ಸಂಗ್ರಹವನ್ನು ಹೆಚ್ಚಿಸಿರುವುದು ಖುಷಿ ನೀಡಿದೆ.
ಎಚ್.ಇ.ಭಾಸ್ಕರ್
ರೈತ ಮುಳ್ಳೂರು